ಕಲಬುರಗಿ: ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಶಿಕ್ಷಕಿಯನ್ನು ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ರಸ್ತೆಬದಿಯಲ್ಲೇ ಸುಟ್ಟು ಹಾಕಿದ್ದಾರೆ. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಈ ಭಯಾನಕ ಘಟನೆ ನಡೆದಿದೆ.
ಕಲ್ಮೂಡ ಗ್ರಾಮದ ರಸ್ತೆಯ ಪಕ್ಕದಲ್ಲಿ ಕೊಲೆ ಮಾಡಿದ ದುಷ್ಕರ್ಮಿಗಳು ಶವವನ್ನು ಅಲ್ಲೇ ರಸ್ತೆ ಬದಿ ಸುಟ್ಟು ಹಾಕಿದ್ದಾರೆ.
ಕೊಲೆಯಾದ ಶಿಕ್ಷಕಿಯನ್ನು 57 ವರ್ಷದ ಜ್ಯೋತಿ ಕಪಾಳೆ (57) ಎಂದು ಗುರುತಿಸಲಾಗಿದೆ. ಮೃತ ಜ್ಯೋತಿ ಕಪಾಳೆ ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂಜರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಿದ್ದರು. ಹೀಗಾಗಿ ಬೀದರ್ನಲ್ಲೇ ಮನೆ ಮಾಡಿದ್ದ ಜ್ಯೋತಿ ಅಲ್ಲಿಂದಲೇ ಶಾಲೆಗೆ ಹೋಗಿ ಬರ್ತಿದ್ದರು. ವಾರಕ್ಕೊಮ್ಮೆ ಕಲಬುರಗಿಯಲ್ಲಿರುವ ಮನೆಗೆ ಬರುತ್ತಿದ್ದರು.
ಆದರೆ ಈಗ ಕಲಬುರಗಿಯಿಂದ ಬೀದರ್ಗೆ ತೇರಳುವಾಗ ಮಾರ್ಗ ಮಧ್ಯದ ಕಮಲಾಪುರದ ಕಲ್ಮೂಡ ಎಂಬಲ್ಲಿ ಜ್ಯೋತಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿಕ್ಷಕಿ ಜ್ಯೋತಿಯನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ, ಪೊಲೀಸರ ತನಿಖೆಯ ನಂತರವೇ ಶಿಕ್ಷಕಿಯ ಕೊಲೆಗೆ ಕಾರಣ ತಿಳಿಯಲಿದೆ.
