ಕೆ.ಆರ್. ಪೇಟೆ – ಮಕ್ಕಳಿಲ್ಲವೆಂಬುದು ಕೊರತೆಯ ಕಾರಣವಾಗದೆ, ರಸ್ತೆಯ ಬದಿಯಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ನಮಗೆಲ್ಲಾ ಸ್ಪೂರ್ತಿದಾಯಕ ಎಂದು ರೈತ ಸಂಘದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ತಿಳಿಸಿದರು.
ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕಿನ ಪ್ರಗತಿಪರ ಸಂಘಟನೆಗಳು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ರವರಿಗೆ ಗೌರವದ ನಮನ ಸಲ್ಲಿಸಿ ಮಾತನಾಡಿದರು.ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ಸಲಹಿದ ತಿಮ್ಮಕ್ಕನವರು ತಮ್ಮ ಬಹುಪಾಲು ಜೀವಿತ ಕಾಲವನ್ನು ಪರಿಸರ ಸಂರಕ್ಷಣೆಗಾಗಿ ಮುಡಿಪಾಗಿಟ್ಟವರು.

ಇಂದು ತಿಮ್ಮಕ್ಕನವರು ನಮ್ಮನ್ನು ಅಗಲಿದರೂ ಅವರ ಪರಿಸರ ಪ್ರೇಮ ಅವರನ್ನು ಚಿರಸ್ಥಾಯಿಯಾಗಿಸಿದೆ. ಮಹಾಚೇತರ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ನಾವುಗಳು ಕೂಡ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವಿಸಬೇಕು ಎಂದರು.
ಬಳಿಕ ಮಾತನಾಡಿದ ಕಸಾಪ ಅಧ್ಯಕ್ಷ ಪೂರ್ಣಚಂದ್ರ ತೇಜಶ್ವಿ, ತಿಮ್ಮಕ್ಕನವರು ಎಷ್ಟು ಮುಗ್ಧರಾಗಿದ್ದರೆಂದರೆ, ತಮಗೆ ಪ್ರಶಸ್ತಿ ನೀಡಿದ ರಾಷ್ಟ್ರಪತಿಗಳ ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡಿದ್ದರು. ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕೂಡ ಅಷ್ಟೇ ಮುಗ್ದತೆಯಿಂದ ಅವರ ಆಶೀರ್ವಾದ ಸ್ವೀಕರಿಸಿದ್ದರು ಎಂದು ಸ್ಮರಿಸಿ ವೃಕ್ಷಮಾತೆಯ ಸಾಧನೆ ಬಗ್ಗೆ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ಗ್ಯಾಸ್ ರಾಜಶೇಖರ್,ಕಸಾಪ ಕಾರ್ಯದರ್ಶಿ ಕಟ್ಟೆ ಮಹೇಶ್, ಪುರಸಭಾ ಮಾಜಿ ಸದಸ್ಯ ಕೆ ಆರ್ ನೀಲಕಂಠ, ಚಾ.ಶಿ ಜಯಕುಮಾರ್,ಉಪನ್ಯಾಸಕ ಕತ್ತರಘಟ್ಟ ವಾಸು, ಕೆ.ಎಸ್.ಆರ್.ಟಿ ಸಿ ನಿವೃತ್ತ ಚಾಲಕ ಪುಟ್ಟಣ್ಣ,ಶಿಕ್ಷಕ ಕಾಡುಮೇಣುಸ ಚಂದ್ರು,ಜಯ ಕರ್ನಾಟಕ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಕರವೇ ಕಸಬಾ ಅಧ್ಯಕ್ಷ ಕೊಮ್ಮೆನಹಳ್ಳಿ ಅನಿಲ್,ಹೊನ್ನೇನಹಳ್ಳಿ ಸ್ವಾಮಿ, ವೆಂಕಟೇಶ್, ಐ ಬಿ ತಮ್ಮಣ್ಣ, ಕಟ್ಟಹಳ್ಳಿ ಸುರೇಶ,ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜೀಗೆರೆ ಮಹೇಶ್ ಸೇರಿದಂತೆ ಉಪಸ್ಥಿತರಿದ್ದರು.
*ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
