ಬೆಂಗಳೂರು, ಮಾರ್ಚ್ 17, 2026: ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಉಪಕ್ರಮವಾದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ), ಇಂದು ಬೆಂಗಳೂರಿನ ರಾಡಿಸನ್ ಬ್ಲೂ ಹೋಟೆಲ್ ನಲ್ಲಿ ‘ಕೆಡಿಇಎಂ ವಾರ್ಷಿಕ ಸಭೆ 2026’ ಅನ್ನು ಆಯೋಜಿಸಿತ್ತು. ಕರ್ನಾಟಕದ ಡಿಜಿಟಲ್ ಆರ್ಥಿಕತೆಯನ್ನು 2030ರ ಗುರಿಯತ್ತ ಕೊಂಡೊಯ್ಯಲು ಕೈಗೊಂಡಿರುವ ಪ್ರಗತಿಯನ್ನು ಪರಾಮರ್ಶಿಸಲು ಮತ್ತು ಮುಂದಿನ ಮಾರ್ಗಸೂಚಿಯನ್ನು ರೂಪಿಸಲು ಸರ್ಕಾರದ ಹಿರಿಯ ನಾಯಕರು, ಉದ್ಯಮ ಕ್ಷೇತ್ರದ ಗಣ್ಯರು ಹಾಗೂ ವಿವಿಧ ಕ್ಲಸ್ಟರ್ ಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಸೇರಿದ್ದರು.
ಈ ಕಾರ್ಯಕ್ರಮವು ಭಾರತ ಸರ್ಕಾರದ ಎಸ್ಟಿಪಿಐ ಮಹಾನಿರ್ದೇಶಕರಾದ ಶ್ರೀ ಅರವಿಂದ್ ಕುಮಾರ್ ಅವರ ಗೌರವ ಉಪಸ್ಥಿತಿಯಲ್ಲಿ ನಡೆಯಿತು. ಇವರೊಂದಿಗೆ ಕೆಡಿಇಎಂಅಧ್ಯಕ್ಷರಾದ ಬಿ.ವಿ. ನಾಯ್ಡು, ಕರ್ನಾಟಕ ಸರ್ಕಾರದ ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕರಾದ ರಾಹುಲ್ ಶರಣಪ್ಪ ಸಂಕನೂರು (ಐಎಎಸ್), ಕೆಡಿಇಎಂ ಮಂಡಳಿ ಸದಸ್ಯರು, ವಿವಿಧ ಕಂಪನಿಗಳ ಸಿಇಓಗಳು, ಸ್ಟಾರ್ಟ್ ಅಪ್ ಸಂಸ್ಥಾಪಕರು, ಜಿಸಿಸಿ ನಾಯಕರು ಹಾಗೂ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದ್ದರು.
ಡಿಜಿಟಲ್ ಕ್ರಾಂತಿಯ ಸಾರಥಿ ‘ಕೆಡಿಇಎಂ’
ವಾರ್ಷಿಕ ಸಭೆಯಲ್ಲಿ ಮಾತನಾಡಿದ ಗಣ್ಯರು, ಕರ್ನಾಟಕದ ಡಿಜಿಟಲ್ ಆರ್ಥಿಕತೆಯಲ್ಲಿ ಸರ್ಕಾರ ಮತ್ತು ಉದ್ಯಮ ರಂಗದ ನಡುವೆ ‘ಸೇತುವೆ’ಯಾಗಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಶ್ಲಾಘಿಸಿದರು. ಕ್ಲಸ್ಟರ್ ಕಾರ್ಯಕ್ರಮಗಳು, ಉದ್ಯಮ ಕಾರ್ಯಪಡೆಗಳು, ‘ಲೀಪ್’ ಯೋಜನೆ ಮತ್ತು ಉದ್ಯಮ ಪಾಲುದಾರರ ನಿರಂತರ ಸಲಹೆಗಳ ಮೂಲಕ ಕೆಡಿಇಎಂ ರಾಜ್ಯದ ಅಭಿವೃದ್ಧಿಗೆ ವೇಗ ನೀಡುತ್ತಿದೆ. ಬೆಂಗಳೂರನ್ನು ರಾಜ್ಯದ ಪ್ರಮುಖ ಆವಿಷ್ಕಾರ ಕೇಂದ್ರವಾಗಿ ಉಳಿಸಿಕೊಳ್ಳುತ್ತಲೇ, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ, ಕಲಬುರಗಿ, ಶಿವಮೊಗ್ಗ, ತುಮಕೂರು ಮತ್ತು ದಾವಣಗೆರೆಯಂತಹ ನಗರಗಳಲ್ಲಿ ಹೊಸ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಗೆ ವಿಶೇಷ ಒತ್ತು ನೀಡಲಾಯಿತು. ಈ ಕ್ಲಸ್ಟರ್ ಗಳಲ್ಲಿ ಜಾಗತಿಕ ನಾವೀನ್ಯತಾ ಮೈತ್ರಿಕೂಟಗಳು (ಜಿಐಎ), ರಾಯಭಾರ ಕಚೇರಿಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರ ನಿಯೋಗಗಳು ಬೆಂಬಲ ನೀಡುತ್ತಿರುವ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.
‘ವುಮೆನ್ ಅಟ್ ವರ್ಕ್’ ಮತ್ತು ಇತ್ತೀಚೆಗೆ ನಡೆದ ಮುಸಿಗ್ಮಾ ನೇಮಕಾತಿ ಅಭಿಯಾನದಂತಹ ಯಶಸ್ವಿ ಉದಾಹರಣೆಗಳನ್ನು ಸಭೆಯಲ್ಲಿ ಹಂಚಿಕೊಳ್ಳಲಾಯಿತು. ಮುಸಿಗ್ಮಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ 83 ಅಭ್ಯರ್ಥಿಗಳಲ್ಲಿ 31 ಮಂದಿಗೆ ಸ್ಥಳದಲ್ಲೇ ಉದ್ಯೋಗದ ಆಫರ್ ನೀಡಲಾಗಿದ್ದು, ಇಂತಹ ಪ್ರಯತ್ನಗಳು ರಾಜ್ಯಾದ್ಯಂತ ನೈಜ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ತಿಳಿಸಲಾಯಿತು.
*ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು*, “ಉದ್ಯಮ ಮತ್ತು ಸರ್ಕಾರದ ನಡುವೆ ಸೇತುವೆಯಾಗುವ ಕೆಡಿಇಎಂ ಧ್ಯೇಯ ಸಾಕಾರದ ವಿಚಾರದಲ್ಲಿ ಇದು ಅದ್ಭುತವಾದ ವರ್ಷವಾಗಿದೆ. ಇಂದು ಕೆಡಿಇಎಂ 200ಕ್ಕೂ ಹೆಚ್ಚು ಕಂಪನಿಗಳೊಂದಿಗೆ ಕೆಲಸ ಮಾಡುತ್ತಿರುವ ರಾಜ್ಯಮಟ್ಟದ ಬೃಹತ್ ವೇದಿಕೆಯಾಗಿ ಬೆಳೆದಿದೆ. ಮೈಸೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿಯಿಂದ ಹಿಡಿದು ಮಂಗಳೂರಿನವರೆಗೆ ನಮ್ಮ ವಿವಿಧ ಕ್ಲಸ್ಟರ್ಗಳಲ್ಲಿ 10,000ಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಈ ಪ್ರದೇಶಗಳನ್ನು ಹೆಚ್ಚುತ್ತಿರುವ ರಫ್ತು, ಹೊಸ ಜಿಸಿಸಿಗಳು ಮತ್ತು ನೂರಾರು ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ಬೆಳವಣಿಗೆಯ ಕೇಂದ್ರಗಳಾಗಿ ಕೆಡಿಇಎಂ ಪರಿವರ್ತಿಸುತ್ತಿದೆ. ನಮ್ಮ ಈ ಸರ್ಕಾರಿ ಬೆಂಬಲಿತ, ಉದ್ಯಮದ ನೇತೃತ್ವದ ಮತ್ತು ಫಲಿತಾಂಶ-ಕೇಂದ್ರಿತ ಮಾದರಿಯನ್ನು ಇಂದು ಭಾರತದಾದ್ಯಂತ ಇತರ ರಾಜ್ಯಗಳು ಕುತೂಹಲದಿಂದ ಗಮನಿಸುತ್ತಿವೆ. ‘ಬಿಯಾಂಡ್ ಬೆಂಗಳೂರು’ (ಬೆಂಗಳೂರು ಆಚೆಗಿನ ಪ್ರದೇಶಗಳು) ಇಂದು ಕರ್ನಾಟಕದ ಡಿಜಿಟಲ್ ಆರ್ಥಿಕತೆಗೆ ಸುಮಾರು ಶೇ. 3 ರಷ್ಟು ಕೊಡುಗೆ ನೀಡುತ್ತಿವೆ. 2030ರ ವೇಳೆಗೆ ನಾವು ಇದನ್ನು ಶೇ. 10 ಕ್ಕೆ ಏರಿಸುವ ಗುರಿ ಹೊಂದಿದ್ದೇವೆ. ಈ ಪರಿವರ್ತನೆಯನ್ನು ಸಾಧಿಸಲು ನಮ್ಮಲ್ಲಿ ಸರಿಯಾದ ನೀತಿಗಳು, ಪೂರಕವಾದ ಪರಿಸರ ವ್ಯವಸ್ಥೆ ಇದೆ ಮತ್ತು ಇದನ್ನು ಕಾರ್ಯಗತಗೊಳಿಸುವ ಎಂಜಿನ್ ಆಗಿ ಕೆಡಿಇಎಂ ನಮ್ಮೊಂದಿಗಿದೆ” ಎಂದು ಹೇಳಿದರು.

*ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. (ಐಎಎಸ್) ಅವರು*, “ಕರ್ನಾಟಕದ ಜಿಸಿಸಿ ನೀತಿ, ಐಟಿ ನೀತಿ, ಸ್ಟಾರ್ಟ್ ಅಪ್ ನೀತಿ ಮತ್ತು ಇಎಸ್ಡಿಎಂ ನೀತಿಗಳು ರಾಜ್ಯವು ಜಾರಿಗೆ ತಂದಿರುವ ಅತ್ಯಂತ ಸಮಗ್ರವಾದ ಡಿಜಿಟಲ್ ಆರ್ಥಿಕ ಕಾರ್ಯಸೂಚಿಯನ್ನು ಪ್ರತಿನಿಧಿಸುತ್ತವೆ. ನಮ್ಮ ಗುರಿಗಳು ಸ್ಪಷ್ಟವಾಗಿವೆ ಮತ್ತು ಪ್ರತಿ ಜಿಲ್ಲೆಯಲ್ಲೂ ಕಾರ್ಯಗತಗೊಳಿಸುವ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಕ್ವಾಂಟಮ್ ತಂತ್ರಜ್ಞಾನದತ್ತ ನಾವು ದಾಪುಗಾಲು ಹಾಕುತ್ತಿರುವ ಈ ಸಂದರ್ಭದಲ್ಲಿ, ಸರ್ಕಾರದ ಆಶಯಗಳನ್ನು ಪ್ರತಿ ಕ್ಲಸ್ಟರ್ ನ ತಳಮಟ್ಟಕ್ಕೆ ತಲುಪಿಸಲು ಇಲಾಖೆಯು ‘ಕೆಡಿಇಎಂ’ ಸಂಸ್ಥೆಯನ್ನು ಸಂಪೂರ್ಣವಾಗಿ ನಂಬಿದೆ” ಎಂದು ಹೇಳಿದರು.
ಸಭೆಯ ಆರಂಭದಲ್ಲಿ ನಡೆದ ‘ಬಿಯಾಂಡ್ ಬೆಂಗಳೂರು’ ವಿಶೇಷ ಗೋಷ್ಠಿಯಲ್ಲಿ ರಾಜ್ಯದ ವಿವಿಧ ಭಾಗಗಳ ಕ್ಲಸ್ಟರ್ ನಾಯಕರು ಭಾಗವಹಿಸಿದ್ದರು. ಅವರು ತಮ್ಮ ಪ್ರಾದೇಶಿಕ ತಂತ್ರಜ್ಞಾನ ಕೇಂದ್ರಗಳ ಅಪ್ ಡೇಟ್ ಗಳನ್ನು ಪ್ರಸ್ತುತಪಡಿಸಿದರು. ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು, ಉದ್ಯಮಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು ಮತ್ತು ಬೆಂಗಳೂರಿನ ಹೊರಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಆಗಿರುವ ಪ್ರಗತಿಯನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಯಿತು.
ಇದರ ನಂತರ, ಕೆಡಿಇಎಂ ನಾಯಕರು ಇಎಸ್ಡಿಎಂ, ಜಿಸಿಸಿ, ಸ್ಟಾರ್ಟ್ ಅಪ್ ಮತ್ತು ಹೊಸ ಆವಿಷ್ಕಾರ, ಟ್ಯಾಲೆಂಟ್ ಆಕ್ಸಿಲರೇಟರ್ ಮತ್ತು ಬಿಯಾಂಡ್ ಬೆಂಗಳೂರು ವಿಭಾಗಗಳ ಪ್ರಗತಿ ವರದಿಯನ್ನು ಮಂಡಿಸಿದರು. ಉದ್ಯಮ ಪಾಲುದಾರರು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ಸಹಯೋಗದೊಂದಿಗೆ ಸಾಧಿಸಿದ ಫಲಿತಾಂಶಗಳನ್ನು ಇಲ್ಲಿ ಪ್ರದರ್ಶಿಸಲಾಯಿತು.
ಇದೇ ಸಂದರ್ಭದಲ್ಲಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಭಾರತೀಯ ಸಾಫ್ಟ್ವೇರ್ ತಂತ್ರಜ್ಞಾನ ಪಾರ್ಕ್ಗಳ ಸಂಸ್ಥೆ (ಎಸ್ ಟಿ ಪಿ ಐ) ನಡುವೆ ಒಪ್ಪಂದ ಪತ್ರ (ಎಂಓಯು) ವಿನಿಮಯವಾಯಿತು. ಈ ಒಪ್ಪಂದವು ರಾಜ್ಯಾದ್ಯಂತ ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡುವುದು, ಡಿಜಿಟಲ್ ಮೂಲಸೌಕರ್ಯದ ವಿಸ್ತರಣೆ ಮತ್ತು ನಾವೀನ್ಯತೆ ಆಧಾರಿತ ಬೆಳವಣಿಗೆಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ.
*ಈ ಸಂದರ್ಭದಲ್ಲಿ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್ ಟಿ ಪಿ ಐ) ಮಹಾನಿರ್ದೇಶಕರಾದ ಶ್ರೀ ಅರವಿಂದ್ ಕುಮಾರ್ ಅವರು ಮಾತನಾಡಿ*, “ಎಸ್ಟಿಪಿಐ ನೆಕ್ಸ್ಟ್ ಜೊತೆಗಿನ ಈ ಒಪ್ಪಂದವು ಕರ್ನಾಟಕದ ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಕೃತಕ ಬುದ್ಧಿಮತ್ತೆ, ಮೆಡ್ ಟೆಕ್, ಐಒಟಿ ಮತ್ತು ಸುಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರವನ್ನು ಉತ್ತೇಜಿಸುವ ಮೂಲಕ ನಾವು ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ಬಲಿಷ್ಠ ವೇದಿಕೆಯನ್ನು ಸೃಷ್ಟಿಸುತ್ತಿದ್ದೇವೆ. ‘ನಿಪುಣ’ ಯೋಜನೆ ಅಡಿಯಲ್ಲಿ ಕೌಶಲ್ಯ ಅಭಿವೃದ್ಧಿಗೆ ನಾವು ನೀಡುತ್ತಿರುವ ಒತ್ತು, ಜಾಗತಿಕ ಡಿಜಿಟಲ್ ಬೇಡಿಕೆಗಳಿಗೆ ತಕ್ಕಂತೆ ಪ್ರತಿಭಾವಂತರನ್ನು ಸಿದ್ಧಪಡಿಸಲಿದೆ. ಕರ್ನಾಟಕವನ್ನು ಜಾಗತಿಕ ಆವಿಷ್ಕಾರ ಮತ್ತು ತಂತ್ರಜ್ಞಾನ ಕೇಂದ್ರವಾಗಿ ರೂಪಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
*ಕಳೆದ ಐದು ವರ್ಷಗಳ ಸಂಸ್ಥೆಯ ಬೆಳವಣಿಗೆಯನ್ನು ಸ್ಮರಿಸಿದ ಕೆಡಿಇಎಂ ಅಧ್ಯಕ್ಷರಾದ ಬಿ.ವಿ. ನಾಯ್ಡು ಅವರು*, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಡಿಇಎಂ ಇಂದು ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಳ್ಳಲು ತಂಡದ ಪರಿಶ್ರಮವೇ ಕಾರಣ ಎಂದರು. ಅವರು ಮಾತನಾಡುತ್ತಾ, “ಐದು ವರ್ಷಗಳ ಹಿಂದೆ ನಾವು ಉದ್ಯಮ ರಂಗಕ್ಕೆ ಈ ನಮ್ಮ ಹೊಸ ಸಂಸ್ಥೆಯನ್ನು ನಂಬುವಂತೆ ಕೇಳಿಕೊಂಡಿದ್ದೆವು. ಇಂದು ಆ ನಂಬಿಕೆಯನ್ನು ನಾವು ಗಳಿಸಿದ್ದೇವೆ. ಉದ್ಯಮ ರಂಗವು ಕೆಡಿಇಎಂನಲ್ಲಿ ಕೇವಲ ಭಾಗವಹಿಸಲಿಲ್ಲ, ಬದಲಾಗಿ ಅದನ್ನು ಕಟ್ಟಲು ನೆರವಾಯಿತು. ಮೈಸೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಮತ್ತು ಮಂಗಳೂರಿನಂತಹ ನಗರಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಕಂಪನಿಗಳನ್ನು ಸ್ಥಾಪಿಸಿದ ಸಂಸ್ಥೆಗಳ ಬದ್ಧತೆಯಿಂದಾಗಿ ಇಂದು ಬೆಂಗಳೂರಿನ ಹೊರಗೆ ಸುಮಾರು 10,000 ಉದ್ಯೋಗಗಳು ಸೃಷ್ಟಿಯಾಗಿವೆ. ರಾಜ್ಯದಲ್ಲಿ ಪ್ರಸ್ತುತ 870 ಜಿಸಿಸಿ ಕೇಂದ್ರಗಳಿವೆ ಮತ್ತು ಬೆಂಗಳೂರಿನ ಆಚೆಗೆ 158 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ಐದು ವರ್ಷಗಳಲ್ಲಿ ಈ ಮಾದರಿಯನ್ನು ನಾವು ಇನ್ನಷ್ಟು ವಿಸ್ತರಿಸಲಿದ್ದೇವೆ” ಎಂದು ಹೇಳಿದರು.
*ಕರ್ನಾಟಕದ ಜಿಸಿಸಿ ನಾಯಕತ್ವ ಮತ್ತು ಮುಂದಿನ ಹಾದಿಯ ಬಗ್ಗೆ ಮಾತನಾಡಿದ ನಾಸ್ಕಾಂ ಪ್ರಾದೇಶಿಕ ನಿರ್ದೇಶಕರು ಹಾಗೂ ಕೆಡಿಇಎಂ ಮಂಡಳಿ ಸದಸ್ಯರಾದ ಭಾಸ್ಕರ್ ವರ್ಮಾ ಅವರು*, “ಭಾರತದ ಜಿಸಿಸಿ ಪರಿಸರ ವ್ಯವಸ್ಥೆಯು 1.9 ಮಿಲಿಯನ್ ಗಿಂತಲೂ ಹೆಚ್ಚು ವೃತ್ತಿಪರರನ್ನು ಹೊಂದಿದ್ದು, ಅದರಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಪ್ರತಿಭೆಗಳು ಕರ್ನಾಟಕದಲ್ಲೇ ಇರುವುದು ಹೆಮ್ಮೆಯ ವಿಷಯ. ದೇಶದ ಒಟ್ಟು ಜಿಸಿಸಿ ಪಾಲಿನಲ್ಲಿ ಕರ್ನಾಟಕವು ಶೇ. 32 ರಷ್ಟು ಪಾಲು ಹೊಂದುವ ಮೂಲಕ ಬಲಿಷ್ಠ ಅಡಿಪಾಯ ಹಾಕಿದೆ. ನಾವು ಕೇವಲ ಕಡಿಮೆ ವೆಚ್ಚದ ಸೇವೆ ನೀಡುವುದರಿಂದ ಈಗ ಮೌಲ್ಯವರ್ಧಿತ ಸೇವೆಗಳನ್ನು ನೀಡುವತ್ತ ಮುನ್ನಡೆಯುತ್ತಿದ್ದೇವೆ. ನಮ್ಮ ಮುಂದಿನ ಗುರಿ ಕೃತಕ ಬುದ್ಧಿಮತ್ತೆ (ಎಐ) ಮತ್ತು ಸೈಬರ್ ಸೆಕ್ಯುರಿಟಿಯಂತಹ ಸುಧಾರಿತ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸಿದ 25ಕ್ಕೂ ಹೆಚ್ಚು ಹೊಸ ಜಿಸಿಸಿಗಳನ್ನು ಸ್ಥಾಪಿಸುವುದಾಗಿದೆ. ಇದರಿಂದ 3,000ಕ್ಕೂ ಹೆಚ್ಚು ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ” ಎಂದು ಹೇಳಿದರು.
*ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಐಇಎಸ್ಎ (ಐಇಎಸ್ಎ – ಇಂಡಿಯಾ ಎಲೆಕ್ಟ್ರಾನಿಕ್ಸ್ ಅಂಡ್ ಸೆಮಿಕಂಡಕ್ಟರ್ ಅಸೋಸಿಯೇಷನ್) ಅಧ್ಯಕ್ಷರಾದ ಅಶೋಕ್ ಚಂದಕ್ ಅವರು* ಕೆಡಿಇಎಂ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಈ ವೇಳೆ ಮಾತನಾಡುತ್ತಾ, “ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆಯ ಪವರ್ ಹೌಸ್ ಆಗಿ ರೂಪಿಸುವಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ನಿಜವಾದ ವೇಗವರ್ಧಕವಾಗಿ ಹೊರಹೊಮ್ಮಿದೆ. ‘ಬಿಯಾಂಡ್ ಬೆಂಗಳೂರು’, ಉದ್ಯಮ-ಶೈಕ್ಷಣಿಕ ಸಹಯೋಗ ಮತ್ತು ನೀತಿ ಪ್ರತಿಪಾದನೆಯಂತಹ ದೂರದೃಷ್ಟಿಯ ಯೋಜನೆಗಳ ಮೂಲಕ ಕೆಡಿಇಎಂ ರಾಜ್ಯದ ತಂತ್ರಜ್ಞಾನದ ಹೆಜ್ಜೆಗುರುತನ್ನು ಹಲವು ನಗರಗಳಿಗೆ ಯಶಸ್ವಿಯಾಗಿ ವಿಸ್ತರಿಸುತ್ತಿದೆ. ಇಂತಹ ವಿಶಿಷ್ಟವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (ಪಿಪಿಪಿ) ವೇದಿಕೆಯನ್ನು ಸ್ಥಾಪಿಸಿದ್ದಕ್ಕಾಗಿ ನಾವು ಕರ್ನಾಟಕ ಸರ್ಕಾರಕ್ಕೆ ಕೃತಜ್ಞರಾಗಿದ್ದೇವೆ. ಮಾನ್ಯ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರ ನಾಯಕತ್ವ ಹಾಗೂ ಬೆಂಬಲ ಮತ್ತು ಬಿ.ವಿ. ನಾಯ್ಡು ಅವರ ಮಾರ್ಗದರ್ಶನವು ಈ ಮಿಷನ್ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ” ಎಂದು ಹೇಳಿದರು.
ಮಾತು ಮುಂದುವರಿಸಿದ ಅವರು, “ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯ ರಾಷ್ಟ್ರೀಯ ಉದ್ಯಮ ಸಂಸ್ಥೆಯಾಗಿ, ಭವಿಷ್ಯದ ಸನ್ನದ್ಧ ಎಲೆಕ್ಟ್ರಾನಿಕ್ಸ್ ಮತ್ತು ಡಿಜಿಟಲ್ ಆರ್ಥಿಕತೆಯನ್ನು ರೂಪಿಸುವಲ್ಲಿ ಕೆಡಿಇಎಂ ನೊಂದಿಗೆ ಕೈಜೋಡಿಸಲು ಐಇಎಸ್ಎ ಹೆಮ್ಮೆಪಡುತ್ತದೆ. ಬಲಿಷ್ಠ ವಿನ್ಯಾಸ-ಆಧಾರಿತ ಉತ್ಪಾದನೆಯನ್ನು ನಿರ್ಮಿಸಲು, ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಆಕರ್ಷಿಸಲು, ಡೀಪ್-ಟೆಕ್ ಸ್ಟಾರ್ಟ್ ಅಪ್ ಗಳನ್ನು ಉತ್ತೇಜಿಸಲು ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಮೂಲಸೌಕರ್ಯಗಳನ್ನು ಸಾಧ್ಯವಾಗಿಸಲು ಮಾಡಿದ ಕೆಡಿಇಎಂ ಶ್ರಮ ಶ್ಲಾಘನೀಯವಾಗಿದೆ. ಈ ಕಾರ್ಯಗಳು ಕರ್ನಾಟಕವನ್ನು ಸೆಮಿಕಂಡಕ್ಟರ್ ಗಳು, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಗಳು ಮತ್ತು ಡಿಜಿಟಲ್ ಆವಿಷ್ಕಾರಗಳ ಜಾಗತಿಕ ಕೇಂದ್ರವನ್ನಾಗಿ ಮಾಡಲಿದೆ. ಸಹಯೋಗದ ವೇದಿಕೆಗಳನ್ನು ಮುನ್ನಡೆಸುವಲ್ಲಿ, ಹೂಡಿಕೆಗಳನ್ನು ಉತ್ತೇಜಿಸುವಲ್ಲಿ, ಪ್ರತಿಭೆಗಳನ್ನು ಪೋಷಿಸುವಲ್ಲಿ ಮತ್ತು ಕರ್ನಾಟಕದ ಇ ಎಸ್ ಡಿ ಎಂ ಹಾಗೂ ಡಿಜಿಟಲ್ ತಂತ್ರಜ್ಞಾನಗಳ ಬೆಳವಣಿಗೆಯ ಕಥೆಯು ಜಾಗತಿಕ ಮಟ್ಟದಲ್ಲಿ ಪ್ರಭಾವಶಾಲಿಯಾಗುವಂತೆ ಮಾಡುವಲ್ಲಿ ಕೆಡಿಇಎಂ ವಹಿಸುತ್ತಿರುವ ಸಕ್ರಿಯ ಪಾತ್ರವನ್ನು ನಾವು ಶ್ಲಾಘಿಸುತ್ತೇವೆ. ಕರ್ನಾಟಕದ ಇ ಎಸ್ ಡಿ ಎಂ ವಲಯವು 2032 ರ ವೇಳೆಗೆ $95 ಬಿಲಿಯನ್ ತಲುಪುವ ಸಿದ್ಧತೆಯಲ್ಲಿದ್ದು, ನಮ್ಮ ಮುಂದಿರುವ ಅವಕಾಶವು ಅದ್ಭುತವಾಗಿದೆ. ಈ ನಿಟ್ಟಿನಲ್ಲಿ ಐಇಎಸ್ಎ ಸಂಸ್ಥೆಯು ಕೆಡಿಇಎಂ ನೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲಲು ಹೆಮ್ಮೆಪಡುತ್ತದೆ. ಜಾಗತಿಕ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯ ಉತ್ತುಂಗದಲ್ಲಿ ಭಾರತ ಮತ್ತು ಕರ್ನಾಟಕದ ಅರ್ಹ ಸ್ಥಾನವನ್ನು ಭದ್ರಪಡಿಸಲು ಈ ಪಾಲುದಾರಿಕೆಯನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ” ಎಂದು ಹೇಳಿದರು.
*ವಾರ್ಷಿಕ ಸಭೆಯಲ್ಲಿ ಮಂಡಿಸಲಾದ ಪ್ರಮುಖ ಪ್ರಗತಿಯ ಮುಖ್ಯಾಂಶಗಳು*
ವಾರ್ಷಿಕ ಸಭೆಯಲ್ಲಿ ಕೆಡಿಇಎಂನ ಕಾರ್ಯತಂತ್ರದ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದ ಕೆಡಿಇಎಂ ಸಿಇಒ ಸಂಜೀವ್ ಗುಪ್ತಾ ಅವರು, ಈ ಸಾಧನೆಗಳನ್ನು ವಿವರಿಸಿದರು. ಭಾರತದ ಡಿಜಿಟಲ್ ಆರ್ಥಿಕತೆಯು ಹಣಕಾಸು ವರ್ಷ 2024-25 ರಲ್ಲಿ $529 ಬಿಲಿಯನ್ ಎಂದು ಅಂದಾಜಿಸಲಾಗಿದ್ದು, 2029-30 ರ ವೇಳೆಗೆ ಅಂದಾಜು $1.2 ಟ್ರಿಲಿಯನ್ ತಲುಪುವ ನಿರೀಕ್ಷೆಯಿದೆ. ಈ ಬೆಳವಣಿಗೆಯ ಅವಕಾಶವನ್ನು ತಮ್ಮದಾಗಿಸಿಕೊಳ್ಳಲು ಕರ್ನಾಟಕವು ವಿಶಿಷ್ಟ ಸ್ಥಾನದಲ್ಲಿದೆ. ಕರ್ನಾಟಕದ ಡಿಜಿಟಲ್ ಆರ್ಥಿಕತೆಯು ಪ್ರಸ್ತುತ $159 ಬಿಲಿಯನ್ ಎಂದು ಅಂದಾಜಿಸಲಾಗಿದ್ದು, 2031-32 ರ ವೇಳೆಗೆ ಸಾಧಾರಣ ಸನ್ನಿವೇಶದಲ್ಲಿ $329 ಬಿಲಿಯನ್ ಮತ್ತು ಆಶಾದಾಯಕ ಸನ್ನಿವೇಶದಲ್ಲಿ $400 ಬಿಲಿಯನ್ ಪ್ಲಸ್ ತಲುಪುವ ಮುನ್ಸೂಚನೆ ಇದೆ. ಕೆಡಿಇಎಂನ ಡಿಜಿಟಲ್ ಎಕಾನಮಿ ಡ್ಯಾಶ್ ಬೋರ್ಡ್ ಪ್ರಕಾರ, ಪ್ರಸ್ತುತ ರಾಜ್ಯದ ಆರ್ಥಿಕ ಚಟುವಟಿಕೆಯ ಅಂದಾಜು 85% ಅನ್ನು ಬೆಂಗಳೂರು ತನ್ನದಾಗಿಸಿಕೊಂಡಿದ್ದರೆ, ‘ಬಿಯಾಂಡ್ ಬೆಂಗಳೂರು’ (ಬೆಂಗಳೂರು ಆಚೆಗಿನ ಪ್ರದೇಶಗಳು) 15% ರಷ್ಟು ಕೊಡುಗೆ ನೀಡುತ್ತಿವೆ.
ಈ ಹಿನ್ನೆಲೆಯಲ್ಲಿ, ಕೆಡಿಇಎಂ ತನ್ನ ಪ್ರಮುಖ ವಿಭಾಗಗಳಲ್ಲಿ ಸಾಧಿಸಿದ ಕಾರ್ಯಾಚರಣೆಯ ಸ್ಕೋರ್ ಬೋರ್ಡ್ ಅನ್ನು ಪ್ರಸ್ತುತಪಡಿಸಿತು:
–ಜಿಸಿಸಿಗಳು (ಜಾಗತಿಕ ಸಾಮರ್ಥ್ಯ ಕೇಂದ್ರಗಳು): ಕರ್ನಾಟಕವು 870ಕ್ಕೂ ಹೆಚ್ಚು ಜಿಸಿಸಿ ಯುನಿಟ್ಗಳೊಂದಿಗೆ (ಭಾರತದ ಒಟ್ಟು ಸಂಖ್ಯೆಯ ಸುಮಾರು 40%) ಭಾರತದ ‘ಜಿಸಿಸಿ ರಾಜಧಾನಿ’ ಎಂಬ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈ ಕೇಂದ್ರಗಳು ಈಗ ಕೇವಲ ಬ್ಯಾಕ್-ಆಫೀಸ್ ಕೆಲಸಗಳಿಗಷ್ಟೇ ಸೀಮಿತವಾಗದೆ ಸುಧಾರಿತ ಎಂಜಿನಿಯರಿಂಗ್, ಎಐ (ಕೃತಕ ಬುದ್ಧಿಮತ್ತೆ), ಉತ್ಪನ್ನ ಆವಿಷ್ಕಾರ ಮತ್ತು ಸೈಬರ್ ಸೆಕ್ಯುರಿಟಿ ಕ್ಷೇತ್ರಗಳನ್ನು ಮುನ್ನಡೆಸುತ್ತಿವೆ.
-ಬಿಯಾಂಡ್ ಬೆಂಗಳೂರು (ಬೆಂಗಳೂರು ಆಚೆಗೆ): ಕಳೆದ ಐದು ವರ್ಷಗಳಲ್ಲಿ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ (ಹೆಚ್ ಡಿ ಬಿ) ಮತ್ತು ಇತರ ಕ್ಲಸ್ಟರ್ ಗಳಲ್ಲಿ 150-165 ಹೊಸ ಕಂಪನಿಗಳು ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ. ಇದರಿಂದಾಗಿ 9,000 ರಿಂದ 11,500 ಉದ್ಯೋಗಗಳು ಸೃಷ್ಟಿಯಾಗಿವೆ. ಇದಕ್ಕೆ ಪೂರಕವಾಗಿ ಹೊಸ ಜಿಸಿಸಿಗಳು, ಸುಮಾರು 500 ಎಕರೆಗಳಷ್ಟು ಉತ್ಪಾದನಾ ವಲಯಗಳು ಮತ್ತು 22 ಲಕ್ಷ ಚದರ ಅಡಿಗಿಂತಲೂ ಅಧಿಕ ಐಟಿ ಮೂಲಸೌಕರ್ಯಗಳು ಸಿದ್ಧಗೊಳ್ಳುತ್ತಿವೆ.
-ಇ ಎಸ್ ಡಿ ಎಂ (ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ): ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಧಾರವಾಡದ ಇಎಂಎಸ್ (ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳು), ಮಲ್ಟಿಲೇಯರ್ ಪಿಸಿಬಿಗಳು, ಲ್ಯಾಮಿನೇಟ್ ಗಳು ಮತ್ತು ಸಂಬಂಧಿತ ವಿಭಾಗಗಳಲ್ಲಿ ಸುಮಾರು ₹4,500-4,600 ಕೋಟಿ ಹೂಡಿಕೆ ಮತ್ತು 4,000ಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇ ಎಸ್ ಡಿ ಎಂ ಕಾರ್ಯಪಡೆ ವರದಿ ಮಾಡಿದೆ.
-ಸ್ಟಾರ್ಟ್ ಅಪ್ಗಳು ಮತ್ತು ಆವಿಷ್ಕಾರ: ಕರ್ನಾಟಕವು 2010 ರಿಂದ 19,700ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಿಗೆ ಬೆಂಬಲ ನೀಡಿದೆ. ರಾಜ್ಯದಲ್ಲಿ 13,000ಕ್ಕೂ ಹೆಚ್ಚು ಸಕ್ರಿಯ ಸ್ಟಾರ್ಟ್ ಅಪ್ ಗಳಿದ್ದು, 3,300ಕ್ಕೂ ಹೆಚ್ಚು ಸಂಸ್ಥೆಗಳು ಹೂಡಿಕೆ ಪಡೆದಿವೆ. ರಾಜ್ಯವು 53 ಯುನಿಕಾರ್ನ್ ಗಳು ಮತ್ತು 150ಕ್ಕೂ ಹೆಚ್ಚು ಸೂನಿಕಾರ್ನ್ ಗಳನ್ನು (ಶೀಘ್ರದಲ್ಲೇ ಯುನಿಕಾರ್ನ್ ಆಗುವ ಸಂಸ್ಥೆಗಳು) ಹೊಂದಿದೆ. ಅಲ್ಲದೆ, ‘ಬಿಯಾಂಡ್ ಬೆಂಗಳೂರು’ ವ್ಯಾಪ್ತಿಯಲ್ಲಿ 3,500-4,500 ಡಿಪಿಐಐಟಿ ನೋಂದಾಯಿತ ಸ್ಟಾರ್ಟ್ ಅಪ್ ಗಳಿವೆ.
-ಪ್ರತಿಭೆ ಮತ್ತು ಕೌಶಲ್ಯಾಭಿವೃದ್ಧಿ: ‘ನಿಪುಣ’ ಮತ್ತು ಸಂಬಂಧಿತ ಟ್ಯಾಲೆಂಟ್ ಆಕ್ಸಿಲರೇಟರ್ ಯೋಜನೆಗಳ ಅಡಿಯಲ್ಲಿ, ಕೆಡಿಇಎಂ ಫಲಿತಾಂಶ ಆಧಾರಿತ ಕೌಶಲ್ಯ ಮಾದರಿಗಳು, ‘ವುಮೆನ್ ಅಟ್ ವರ್ಕ್’ ಪ್ರಾಯೋಗಿಕ ಯೋಜನೆಗಳು ಮತ್ತು ‘ನೇಮಕಾತಿಯ ನಂತರ ಪಾವತಿಸುವ’ ವ್ಯವಸ್ಥೆಗಳನ್ನು ಪ್ರದರ್ಶಿಸಿತು. ಪ್ರಸ್ತುತ 20ಕ್ಕೂ ಹೆಚ್ಚು ಪ್ರಸ್ತಾವನೆಗಳು ಚಾಲ್ತಿಯಲ್ಲಿದ್ದು, ಸುಮಾರು 10,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ.
2030ರ ಮಾರ್ಗಸೂಚಿ: ಎಐ, ಕ್ವಾಂಟಮ್ ಮತ್ತು “ಬೆಂಗಳೂರು ಹಾಗೂ ಬೆಂಗಳೂರಿನಾಚೆ”
ಮುಂದಿನ ಹಾದಿಯ ಬಗ್ಗೆ ಮಾತನಾಡುತ್ತಾ, ಅಧ್ಯಕ್ಷರು ಐದು ವರ್ಷಗಳ ದೃಷ್ಟಿಕೋನವನ್ನು ಹಂಚಿಕೊಂಡರು. ಇದು ಕರ್ನಾಟಕವನ್ನು ಕೇವಲ ಪ್ರಮಾಣದಲ್ಲಿ ಮಾತ್ರವಲ್ಲದೆ ಗುಣಮಟ್ಟ, ಬೌದ್ಧಿಕ ಆಸ್ತಿ (ಐಪಿ) ಸೃಷ್ಟಿ, ಜಾಗತಿಕ ಪಾಲುದಾರಿಕೆ ಮತ್ತು ಉನ್ನತ ಮೌಲ್ಯದ ಉದ್ಯೋಗಗಳಲ್ಲಿ ಭಾರತದ ಮುಂಚೂಣಿ ಡಿಜಿಟಲ್ ಆರ್ಥಿಕತೆಯನ್ನಾಗಿ ರೂಪಿಸುವ ಗುರಿ ಹೊಂದಿದೆ. ಮೂರು ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ:
-ಕೃತಕ ಬುದ್ಧಿಮತ್ತೆ (ಎಐ): ಕೇವಲ ಭಾಗವಹಿಸುವುದಷ್ಟೇ ಅಲ್ಲದೆ, ಎಐ-ಚಾಲಿತ ರೂಪಾಂತರದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳುವುದು.
-ಕ್ವಾಂಟಮ್ ತಂತ್ರಜ್ಞಾನ: ದೀರ್ಘಕಾಲೀನ ಸ್ಪರ್ಧಾತ್ಮಕತೆಗಾಗಿ ಕಂಪ್ಯೂಟಿಂಗ್, ಸೆನ್ಸಿಂಗ್ ಮತ್ತು ಸಂವಹನ ಕ್ಷೇತ್ರಗಳಲ್ಲಿ ಆರಂಭಿಕ ಸಾಮರ್ಥ್ಯಗಳನ್ನು ನಿರ್ಮಿಸುವುದು.
-ಬೆಂಗಳೂರು ಮತ್ತು ಆಚೆ: ಕ್ಲಸ್ಟರ್ ಗಳು, ಕೌಶಲ್ಯ ಮತ್ತು ಮೂಲಸೌಕರ್ಯಗಳ ಮೂಲಕ ಪ್ರತಿಯೊಂದು ಜಿಲ್ಲೆಯನ್ನು ಡಿಜಿಟಲ್ ಆರ್ಥಿಕತೆಯೊಂದಿಗೆ ಸಂಯೋಜಿಸುವ ಸಮಗ್ರ ರಾಜ್ಯಾದ್ಯಂತದ ಬೆಳವಣಿಗೆಯ ಸಿದ್ಧಾಂತ.
ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನೆಯನ್ನು ಉತ್ತೇಜಿಸುವುದು, ಜಿಸಿಸಿ ನೆಲೆಯನ್ನು ಹೊಸ ವಿಭಾಗಗಳಿಗೆ ವಿಸ್ತರಿಸುವುದು ಮತ್ತು ಲೀಪ್, ಎಲಿವೇಟ್, ಕರ್ನಾಟಕ ಆಕ್ಸಿಲರೇಶನ್ ನೆಟ್ ವರ್ಕ್ ಹಾಗೂ ಇನ್ಕ್ಯುಬೇಟರ್ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಜಾಲದ ಮೂಲಕ ಪ್ರತಿ ಜಿಲ್ಲೆಯಲ್ಲೂ ಸ್ಟಾರ್ಟ್ ಅಪ್ ಮತ್ತು ಉದ್ಯಮಶೀಲತೆಗೆ ಬೆಂಬಲ ನೀಡುವುದು ಈ ಯೋಜನೆಯ ಗುರಿಯಾಗಿದೆ.
ವಾರ್ಷಿಕ ಸಭೆಯಲ್ಲಿ ಕೆಡಿಇಎಂ ಗಾಗಿ ಬಲಿಷ್ಠವಾದ ಸಲಹಾ ಮಂಡಳಿಯ ರಚನೆಯನ್ನು ಘೋಷಿಸಲಾಯಿತು. ಇದು ಹಿರಿಯ ಅಧಿಕಾರಿಗಳು ಮತ್ತು ಉದ್ಯಮದ ನಾಯಕರನ್ನು ಒಳಗೊಂಡಿದ್ದು, ನಿರ್ದೇಶಕರ ಮಂಡಳಿಯೊಂದಿಗೆ ಕಾರ್ಯತಂತ್ರದ ಮಾರ್ಗದರ್ಶನ ನೀಡಲಿದೆ. ಇದು ಪಾರದರ್ಶಕತೆ, ಹೊಣೆಗಾರಿಕೆ ಮತ್ತು ರಾಜ್ಯದ ಆದ್ಯತೆಗಳೊಂದಿಗೆ ದೀರ್ಘಕಾಲೀನ ಸಮನ್ವಯತೆಯನ್ನು ಹೆಚ್ಚಿಸಲಿದೆ. ಕಾರ್ಯಕ್ರಮದ ಸಮಾರೋಪದಲ್ಲಿ, “ಕರ್ನಾಟಕವು ಅಭಿವೃದ್ಧಿಯ ವಿನ್ಯಾಸವನ್ನು ರೂಪಿಸಿದೆ, ಕೆಡಿಇಎಂ ಅದರ ಇಂಜಿನ್ ಅನ್ನು ನಡೆಸುತ್ತಿದೆ ಮತ್ತು ಉದ್ಯಮವೇ ಈ ಯಶಸ್ಸಿನ ಕೇಂದ್ರಬಿಂದು” ಎಂದು ನಾಯಕತ್ವವು ಪುನರುಚ್ಚರಿಸಿತು. ಕರ್ನಾಟಕದ ಡಿಜಿಟಲ್ ನಾಯಕತ್ವದ ಮುಂದಿನ ದಶಕವನ್ನು ಒಟ್ಟಾಗಿ ರೂಪಿಸಲು ಎಲ್ಲಾ ಪಾಲುದಾರರಿಗೆ ಈ ಸಂದರ್ಭದಲ್ಲಿ ಆಹ್ವಾನ ನೀಡಲಾಯಿತು.
*ಕೆಡಿಇಎಂ ಕುರಿತು*:
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಎಂಬುದು ಕರ್ನಾಟಕ ಸರ್ಕಾರವು ಸ್ಥಾಪಿಸಿದ ಲಾಭೋದ್ದೇಶವಿಲ್ಲದ (ಸೆಕ್ಷನ್ 8) ಸಂಸ್ಥೆಯಾಗಿದೆ. ಇದು ರಾಜ್ಯದ ಡಿಜಿಟಲ್ ಆರ್ಥಿಕತೆಯಲ್ಲಿ ಬೆಳವಣಿಗೆ ಮತ್ತು ಹೂಡಿಕೆಗಳನ್ನು ವೇಗಗೊಳಿಸಲು ಸರ್ಕಾರ ಮತ್ತು ಉದ್ಯಮದ ನಡುವೆ ಕಾರ್ಯತಂತ್ರದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೆಡಿಇಎಂ, ಐಟಿ ಉತ್ಪನ್ನಗಳು ಮತ್ತು ಸೇವೆಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿಗಳು), ಸ್ಟಾರ್ಟ್ ಅಪ್ಗಳು ಮತ್ತು ಆವಿಷ್ಕಾರ, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (ಇ ಎಸ್ ಡಿ ಎಂ), ಪ್ರತಿಭಾ ಅಭಿವೃದ್ಧಿ ಮತ್ತು ‘ಬಿಯಾಂಡ್ ಬೆಂಗಳೂರು’ ಯೋಜನೆ ಸೇರಿದಂತೆ ಪ್ರಮುಖ ವಲಯಗಳಲ್ಲಿ ಕರ್ನಾಟಕದ ನಾಯಕತ್ವವನ್ನು ಬಲಪಡಿಸಲು ಗಮನಹರಿಸುತ್ತದೆ. ಪರಿಸರ ವ್ಯವಸ್ಥೆಯ ಪಾಲುದಾರಿಕೆ, ನೀತಿ ಪ್ರತಿಪಾದನೆ, ಕ್ಲಸ್ಟರ್ ಅಭಿವೃದ್ಧಿ ಮತ್ತು ಹೂಡಿಕೆ ಉತ್ತೇಜನದ ಮೂಲಕ, ಬೆಂಗಳೂರಿನ ಆಚೆಗಿನ ಉದಯೋನ್ಮುಖ ತಂತ್ರಜ್ಞಾನ ಕೇಂದ್ರಗಳಲ್ಲಿ ಹೊಸತನ, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಜೊತೆಗೆ ರಾಜ್ಯಾದ್ಯಂತ ತಂತ್ರಜ್ಞಾನ ಆಧಾರಿತ ಬೆಳವಣಿಗೆಯನ್ನು ವಿಸ್ತರಿಸಲು ಕೆಡಿಇಎಂ ಕೆಲಸ ಮಾಡುತ್ತದೆ.
