ಹರಪನಹಳ್ಳಿ, ಏ.5: ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ನೌಕರ ಭವನದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಮಹಿಳಾ ಘಟಕದ ಉದ್ಘಾಟನೆ, ರಾಜ್ಯಮಟ್ಟದ ಮಹಿಳಾ ಕವಿಗೋಷ್ಠಿ ಹಾಗೂ ಕರೋಕೆ ಗಾಯನ ಕಾರ್ಯಕ್ರಮವನ್ನು ಭಾನುವಾರ, ಏಪ್ರಿಲ್ 5, 2026ರಂದು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಮಧುನಾಯ್ಕ್ ಲಂಬಾಣಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಬರಹಗಾರರ ಸಂಘವು ಹೂವಿನ ಹಡಗಲಿಯಲ್ಲಿ ಸ್ಥಾಪನೆಯಾಗಿ ಆರು ವರ್ಷಗಳನ್ನು ಪೂರೈಸಿದ್ದು, ಈ ಅವಧಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳು, ಸಾಹಿತ್ಯ-ಸಂಗೀತ-ಕಲಾ ಚಟುವಟಿಕೆಗಳು ಹಾಗೂ ಕಲಾವಿದರು ಮತ್ತು ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ.
ಸಂಘವು ಈಗಾಗಲೇ ರಾಜ್ಯದ 30 ಜಿಲ್ಲೆಗಳಲ್ಲಿ ಜಿಲ್ಲಾ ಘಟಕಗಳನ್ನು ರಚಿಸಿದ್ದು, ಹೊರ ರಾಜ್ಯಗಳಲ್ಲಿಯೂ ಶಾಖೆಗಳನ್ನು ಸ್ಥಾಪಿಸಿ ತನ್ನದೇ ಆದ ಛಾಪು ಮೂಡಿಸಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ರಾಜ್ಯ ಮಹಿಳಾ ಘಟಕ ರಚನೆ ಮೂಲಕ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಚಿಂತನೆ ಕೈಗೊಂಡಿರುವುದು ಶ್ಲಾಘನೀಯವಾಗಿದೆ ಎಂದು ನಾಡಿನ ಹಿರಿಯ ಸಾಹಿತಿ ಗೊರೂರು ಅನಂತರಾಜು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಆಸಕ್ತ ಮಹಿಳೆಯರ ಸಮ್ಮುಖದಲ್ಲಿ ರಾಜ್ಯ ಮಹಿಳಾ ಘಟಕವನ್ನು ಅಧಿಕೃತವಾಗಿ ರಚಿಸಲಾಗುವುದು. ಇದೇ ವೇದಿಕೆಯಲ್ಲಿ ಮಹಿಳಾ ಕವಿಗೋಷ್ಠಿ ಹಾಗೂ ಕರೋಕೆ ಗಾಯನ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ.
