ಶಿವಮೊಗ್ಗ, ಜೂನ್ 1: ಕರ್ನಾಟಕದ ಮೊದಲ ವಿಮಾನ ತರಬೇತಿ ಸಂಸ್ಥೆಯನ್ನು (FTO) ಶಿವಮೊಗ್ಗ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ (RKA) ಸ್ಥಾಪಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಘೋಷಣೆ ಮಾಡಿದ್ದಾರೆ.
ವಿಮಾನಯಾನ ಕ್ಷೇತ್ರದಲ್ಲಿ ರಾಜ್ಯದ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದೊಂದಿಗೆ ಈ ಸಂಸ್ಥೆಯನ್ನು ಆರಂಭಿಸಲಾಗುತ್ತದೆ. ರಾಜ್ಯ ಸರ್ಕಾರವು ನಿರ್ವಹಿಸುತ್ತಿರುವ ಮೊದಲ ಮತ್ತು ಏಕೈಕ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ತರಬೇತಿ ಸಂಸ್ಥೆಯ ಕಾರ್ಯಾಚರಣೆಗೆ ಬೇಕಾದ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಒದಗಿಸಿಕೊಡಲಿದೆ.
ವಿಮಾನ ತರಬೇತಿ ಸಂಸ್ಥೆಯಲ್ಲಿ ಆರಂಭಿಕ ಹಂತದಲ್ಲಿ 100 ಕೆಡೆಟ್ಗಳಿಗೆ ತರಬೇತಿ ನೀಡಲು ಯೋಜಿಸಿದ್ದು, ಮೊದಲ ವರ್ಷದಲ್ಲಿ 50 ವಿದ್ಯಾರ್ಥಿಗಳು ತರಬೇತಿಗೆ ಸೇರ್ಪಡೆಯಾಗಲಿದ್ದಾರೆ. ರಾಜ್ಯದ ಅಭ್ಯರ್ಥಿಗಳಿಗೆ ಉತ್ತೇಜನ ನೀಡುವುದಕ್ಕಾಗಿ ಶೇ 25 ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಮೀಸಲಿಡಲಾಗುವುದು. ಅವರಿಗೆ ರಿಯಾಯಿತಿ ದರದಲ್ಲಿ ಶುಲ್ಕ ವಿಧಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.
