ಕೆ.ಆರ್.ಪೇಟೆ- ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವಿಮಠದ ಶಬ್ದ ಭಕ್ತಿ ಕೇಂದ್ರವಾಗಿರುವ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ದೇವಾಲಯದಲ್ಲಿ ನಡೆದ ಕಾರ್ತಿಕ ಅಮಾವಾಸ್ಯೆ ಲಕ್ಷ ದೀಪೋತ್ಸವ ಮಠದ ಪೀಠಾಧ್ಯಕ್ಷರಾದ ಚನ್ನವೀರ ಮಹಾಸ್ವಾಮಿಗಳ ದಿವ್ಯ ನೇತೃತ್ವ ಸಡಗರ ಸಂಭ್ರಮದಿಂದ ಸಾವಿರಾರು ಭಕ್ತ ಸಾಗರದಲ್ಲಿ ಯಶಸ್ವಿಯಾಗಿ ಜರಗಿತು.
ದೀಪೋತ್ಸವ ನೇತೃತ್ವ ವಹಿಸಿದ ಪೀಠಾಧ್ಯಕ್ಷ ಸ್ವತಂತ್ರ ಚನ್ನವೀರ ಮಹಾಸ್ವಾಮಿ ಭಕ್ತರಿಗೆ ಆಶೀರ್ವದಿಸಿ ಮಾತನಾಡಿದರು ಕಾರ್ತಿಕ ಮಾಸದ ಅಮಾವಾಸ್ಯೆಯ ಕತ್ತಲಿನಲ್ಲಿ ಹಚ್ಚುವ ದೀಪಗಳಿಂದ ಬೆಳಕು ಪ್ರಜ್ವಲಿಸುವಂತೆ ನಿಮ್ಮ ಬದುಕಿನಲ್ಲೂ ಬೆಳಕಾಗಲಿ.ಜೀವನ ಸುಖಮಯವಾಗಿರಲಿ,ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಮಠಗಳ ಮತ್ತು ಭಕ್ತರ ನಡುವೆ ಅವಿನಾಭಾವ ಸಂಬಂಧವಿದೆ. ಮಠವಿಲ್ಲದೆ ಭಕ್ತರಿಲ್ಲ ಭಕ್ತರಿಲ್ಲದೆ ಮಠವಿಲ್ಲ ದೇವರು ಪೂಜೆ ಪುನಸ್ಕಾರಗಳಲ್ಲಿ ಹಲವು ವರ್ಷಗಳಿಂದಲೂ ಭಕ್ತರು ಮುಂದೆ ನಿಂತು ಧಾರ್ಮಿಕ ಆಚರಣೆಗಳು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಾರೆ.ಹಿಂದೂಗಳಿಗೆ ಕಾರ್ತಿಕ ಮಾಸ ಬಹಳ ಮಹತ್ವದ್ದು ಕಾರ್ತಿಕ ಮಾಸದ ಆಚರಣೆ, ಪೂಜೆಗೆ ಬಹಳ ಪ್ರಾಮುಖ್ಯತೆ ಇದೆ. ಅದರಲ್ಲೂ ಈ ಮಾಸದಲ್ಲಿ ಆಚರಿಸುವ ಕಾರ್ತಿಕ ಅಮಾವಾಸ್ಯೆ ದೀಪೋತ್ಸವ ಬಹಳ ಪವಿತ್ರವಾಗಿ ಆಚರಿಸಲಾಗುತ್ತದೆ. ದೇಶದ ನಾನಾ ಭಾಗಗಳಲ್ಲಿ ದೀಪೋತ್ಸವವನ್ನು ವಿಭಿನ್ನ ಹೆಸರುಗಳಿಂದ ಆಚರಿಸಲಾಗುತ್ತದೆ ಎಂದು ಅಮಾವಾಸ್ಯೆ ದೀಪೋತ್ಸವದ ಇತಿಹಾಸದ ಬಗ್ಗೆ ಭಕ್ತರಿಗೆ ಆಶೀರ್ವಚನ ನೀಡಿದರು.

ಮಠದ ಮೂಲ ಗದ್ದುಗೆ ಬಲಭಾಗದಲ್ಲಿ ದೀಪಗಳನ್ನು ಹಚ್ಚಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಮಠದ ಆವರಣದಿಂದ ಮೂಲ ಗದ್ದುಗೆ ಮಠದವರೆಗೂ ವಿಶೇಷ ಹೂ,ಫಲ ಪುಷ್ಪ ಅಲಂಕಾರ ಮಾಡಲಾಗಿತ್ತು.
ರಾತ್ರಿಯಾಗಿದ್ದರೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ನಡೆದು ದೀಪ ಹಚ್ಚುವ ಸ್ಥಳಕ್ಕೆ ಬಂದರು.ಸಂಜೆ ನಾಲ್ಕು ಗಂಟೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನೆದೇವರಾದ ಸ್ವತಂತ್ರ ಸಿದ್ಧಲಿಂಗೇಶ್ವರ ದೇವರ ದರ್ಶನ ಪಡೆದು ದೀಪೋತ್ಸವಕ್ಕೆ ಸ್ಥಳೀಯ ಶಾಸಕ ಹೆಚ್.ಟಿ ಮಂಜು ಜೊತೆಗೂಡಿ ಚಾಲನೆ ನೀಡಿ ನಿರ್ಗಮಿಸಿದರು. ಸಾಂಕೇತಿಕವಾಗಿ ದೀಪೋತ್ಸವಕ್ಕೆ ರಾತ್ರಿ 8 ಗಂಟೆಗೆ ಮೂಲ ಗದ್ದುಗೆ ಮಠಕ್ಕೆ ಸಾವಿರಾರು ಭಕ್ತರು ಬಂದು ಲಕ್ಷ ದೀಪ ಹಚ್ಚುವ ಮೂಲಕ ನೆರವು ತುಂಬಿದರು.ಮಹಿಳೆಯರು, ಮಕ್ಕಳು, ತಾಯಂದಿರು ಸಾಲು ಸಾಲಾಗಿ ದೀಪಗಳನ್ನು ಹಚ್ಚಿ ದೇವರಲ್ಲಿ ಪ್ರಾರ್ಥಿಸಿ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಪೂಜೆಗೆ ಸಾವಿರಾರು ಭಕ್ತರು ದೂರದ ಹಳ್ಳಿಗಳಿಂದ ಬಂದು ಪೂಜಾ ಕಾರ್ಯ ನೆರವೇರಿಸಿಕೊಟ್ಟರು. ಭಗವಂತನ ಕಣ್ತುಂಬಿಕೊಂಡು ಕಷ್ಟ ನಿವಾರಣೆಗೆ ಬಂದ ಭಕ್ತರಿಗೆ ಸಮಾಜ ಸೇವಕ ಆರ್ಟಿಓ ಮಲ್ಲಿಕಾರ್ಜುನ್ ಅವರ ಸಹಕಾರದಿಂದ ಏರ್ಪಡಿಸಿದ ದಾಸೋಹ ಸೇವಾ ಸ್ವೀಕರಿಸಿದರು.ಆವರಣದಲ್ಲಿ ಸಹಪಂಕ್ತಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇವಾಲಯದ ಸುತ್ತ ಆಕರ್ಷಕ ದೀಪಲಂಕಾರಗಳನ್ನು ಭಕ್ತರು ಕಣ್ತುಂಬಿಕೊಂಡರು.

ಈ ಸಂದರ್ಭದಲ್ಲಿ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ರಾಜಶ್ವನಿರೀಕ್ಷಿಕಿ ಚಂದ್ರಕಲಾ,ಗ್ರಾ.ಪಂ ಅಧ್ಯಕ್ಷ ಕುಮಾರ್, ಹಿರಿಯ ಮುಖಂಡ ತೊಟ್ಟಪ್ಪಶೆಟ್ಟಿ,ವಿ.ಡಿ ಮೋಹನ್, ನಾಟನಹಳ್ಳಿ ಮುರುಳಿ,ನಾಗೇಶ್,ಪಟೇಲ್ ಶಂಕರ್, ಎಲ್.ಐ.ಸಿ ಶಿವಪ್ಪ,ವಿಜಯ ಕುಮಾರ್, ನಂದಿ ಮೆಡಿಕಲ್ ಪುನೀತ್,ಪ್ರಧಾನ ಅರ್ಚಕ ಹೇಮಂತ್,ಆರ್ ಟಿ ಓ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ ಸೇರಿದಂತೆ ಸಾವಿರಾರು ಭಕ್ತ ಸಮೂಹ ಪಾಲ್ಗೊಂಡಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
