ಸುಗಂಧ ಸೂಸುವ ಸೌಗಂಧಿಕೆಯಿವಳು
ಪ್ರಾಣವಾಯುವಾಗಿ ಜೀವನದಿಯಂತೆ
ತಂಗಾಳಿಯಲ್ಲಿ ತೇಲಿ ಬಂದಳು..//
ಹರುಷದ ಹೊನಲನ್ನು ಹೊತ್ತು ತಂದವಳು
ಬಾಳ ನೌಕೆಯಲಿ ಒಂಟಿ ಪಯಣಕೆ
ಜೊತೆಯಾದವಳು //
ಕರುಣೆಯ ಕಡಲಾದವಳು , ಜೀವ ಸೆಲೆಯಾದಳು
ಸುಂದರ ಸ್ನಿಗ್ಧ ಸೌಂದರ್ಯವಿರದವಳು
ಮನದ ಮೌನ ಮಾತಿಗೆ ಪಿಸುಗುಟ್ಟುವಳು
ಮನಕೆ ಕಲಶ ಪ್ರಾಯವಾದವಳು ..//
ಎನ್ನಂತರಂಗದ ತುಡಿತ ಅವಳೆದೆಯ
ಲಬ್ ಡಬ್ ತಾಳಕೆ ರಾಗ ಪಾಡುತಿಹುದು
ತರುಣಿಯ ತಾರುಣ್ಯದಿ ಎಲ್ಲೆ ಮೀರದೆ
ತಂಪಾದ ವಾಯುವಿನಂತೆ ವಿಹರಿಸುವಳು //
ಮಂದಹಾಸದಿ ಮನದಣಿಸುವಳು
ಇವಳೇ.. ಅವಳು… ನನ್ನಂತರಂಗದ
ಕಾವ್ಯಕನ್ನಿಕೆ //
ಕನಸಿನ ತಳಮಳವ ಹುಟ್ಟು ಹಾಕಿ
ಕಾಣದಂತೆ ಮಾಯವಾದಳು..//
ನಭದ ಯಾವ ಮೂಲೆಗೋ ಸರಿದು
ಹೋದವಳು
ಕನವರಿಸುತ ಮತ್ತೆ ಒಮ್ಮೆ ಬಂದು
ಸೇರೆಂಬುವ ಮೌನ ಕೋರಿಕೆಗೆ ಕಿವುಡಾಗಿಹಳು //

– ವಾಣಿ ಮಹೇಶ್
ಹಾಸನ.
