ಸರ್ಕಾರಿ ನೌಕರರಿಗೆ ಖಾದಿ ಡ್ರೆಸ್ ಕೋಡ್?: ಸರ್ಕಾರದ ಚರ್ಚೆಗೆ ಸೋಷಿಯಲ್ ಮೀಡಿಯಾದಲ್ಲಿ ಪರ–ವಿರೋಧ
ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯದ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಖಾದಿ ಉಡುಪು ಧರಿಸುವ ಕುರಿತು ಮಹತ್ವದ ಆದೇಶ ಹೊರಡಿಸುವ ನಿಟ್ಟಿನಲ್ಲಿ ಚರ್ಚೆಗೆ ಮುಂದಾಗಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರು ಪ್ರತಿ ತಿಂಗಳ ಮೊದಲ ಶುಕ್ರವಾರ ಖಾದಿ ಉಡುಪು ಧರಿಸುವುದು, ಜೊತೆಗೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಅಧಿಕೃತ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಖಾದಿ ಉಡುಪು ಧರಿಸುವುದು ಎಂಬ ವಿಚಾರವನ್ನು ಚರ್ಚಿಸುವ ಸಲುವಾಗಿ ಸರ್ಕಾರ ಸಭೆ ಕರೆದಿದೆ.
ಈ ಕುರಿತಂತೆ 29.01.2026ರಂದು ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದ ಕೊಠಡಿ ಸಂಖ್ಯೆ–320ರಲ್ಲಿ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಹಾಜರಾಗುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಹಿರಿಯ ಆಪ್ತ ಕಾರ್ಯದರ್ಶಿ ಬಿ. ಸದಾನಂದ ಅವರು ಪತ್ರ ಬರೆದಿದ್ದಾರೆ.
ಇದರಿಂದಾಗಿ ಸರ್ಕಾರಿ ನೌಕರರಿಗೆ ಖಾದಿ ಉಡುಪು ಕಡ್ಡಾಯಗೊಳಿಸುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ.
ಸೋಷಿಯಲ್ ಮೀಡಿಯಾದಲ್ಲಿ ವಿರೋಧದ ಧ್ವನಿ
ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧವೂ ವ್ಯಕ್ತವಾಗಿದೆ. ಕೆಲವರು ಖಾದಿ ಉಡುಪುಗಳ ಬೆಲೆ ಹೆಚ್ಚಿದ್ದು, ಸಾಮಾನ್ಯ ನೌಕರರಿಗೆ ಇದು ಆರ್ಥಿಕ ಭಾರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಖಾದಿ ಅಗ್ಗದ ವಸ್ತುವಲ್ಲ, ಉತ್ತಮ ಗುಣಮಟ್ಟದ ಖಾದಿ ಇನ್ನಷ್ಟು ದುಬಾರಿ. ವರ್ಷಾನುಗಟ್ಟಲೆ ಬಳಕೆಗೂ ಬರುವುದಿಲ್ಲ, ಬಣ್ಣ ಬಿಡುತ್ತದೆ, ಫೇಡ್ ಆಗುತ್ತದೆ” ಎಂಬ ಅನುಭವಗಳನ್ನು ಕೆಲವರು ಹಂಚಿಕೊಂಡಿದ್ದಾರೆ.
ಇನ್ನು ಕೆಲವರು, “ಮೊದಲು ಮೂಲಭೂತ ಸೌಕರ್ಯಗಳತ್ತ ಗಮನ ಕೊಡಬೇಕು. ಸರ್ಕಾರಿ ಶಾಲಾ ಮಕ್ಕಳಿಗೆ ಸಮಯಕ್ಕೆ ಯೂನಿಫಾರ್ಮ್, ಶೂಗಳು ಸಿಗುತ್ತಿವೆಯೇ ಎಂಬುದನ್ನು ಪರಿಶೀಲಿಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಸೌಲಭ್ಯಗಳಿವೆಯೇ? ಉತ್ತರ ಕನ್ನಡ, ಕಾರವಾರ ಭಾಗಗಳಲ್ಲಿ ಉತ್ತಮ ಆಸ್ಪತ್ರೆಗಳ ನಿರ್ಮಾಣ, ಚಾಮರಾಜನಗರದಂತಹ ಪ್ರದೇಶಗಳಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ, ಬೆಂಗಳೂರಿನ ರಸ್ತೆಗುಂಡಿಗಳ ಸಮಸ್ಯೆ, ಆಂಬುಲೆನ್ಸ್ಗಳ ಸೇವೆ ಮತ್ತು ಲಭ್ಯತೆ—ಇವೆಲ್ಲವನ್ನೂ ಸರಿಪಡಿಸಿದ ನಂತರ ಇಂತಹ ಉಡುಪು ನಿಯಮಗಳ ಬಗ್ಗೆ ಯೋಚಿಸಲಿ” ಎಂದು ಟೀಕೆ ವ್ಯಕ್ತವಾಗಿದೆ.
ಬೆಂಬಲದ ಅಭಿಪ್ರಾಯವೂ
ಇನ್ನೊಂದೆಡೆ, ಖಾದಿ ಧರಿಸುವುದು ದೇಶೀಯ ಉತ್ಪನ್ನಗಳಿಗೆ ಉತ್ತೇಜನ ನೀಡುತ್ತದೆ, ಸ್ವದೇಶಿ ಚಳವಳಿಯ ಆತ್ಮವನ್ನು ಜೀವಂತವಾಗಿಡುತ್ತದೆ ಮತ್ತು ಸರ್ಕಾರಿ ನೌಕರರಲ್ಲಿ ಸರಳತೆ ಹಾಗೂ ಏಕತೆ ಮೂಡಿಸುತ್ತದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.
ಸರ್ಕಾರದ ಚರ್ಚೆಯ ಫಲಿತಾಂಶದ ಮೇಲೆ ಅಂತಿಮ ನಿರ್ಧಾರ ಹೊರಬೀಳಲಿದ್ದು, ಮುಂದಿನ ದಿನಗಳಲ್ಲಿ ಈ ವಿಷಯ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.
