ನವದೆಹಲಿ: ಮಾನವ-ಆನೆ ಸಂಘರ್ಷ ತಡೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು, ಸ್ವಯಂಪ್ರೇರಿತವಾಗಿ ಅರಣ್ಯವಾಸಿಗಳ ಸ್ಥಳಾಂತರಕ್ಕೆ ಕಾಂಪಾ ನಿಧಿಯಿಂದ ₹800 ಕೋಟಿ ಮಂಜೂರು ಮಾಡುವಂತೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಕೇಂದ್ರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಖಂಡ್ರೆ, ‘ಪರಿಹಾರಾತ್ಮಕ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದಡಿ ರಾಜ್ಯಕ್ಕೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.
‘ರಾಜ್ಯದಲ್ಲಿ 6395 ಆನೆಗಳಿದ್ದು, ಕೊಡಗು, ಚಿಕ್ಕಮಗಳೂರು, ಹಾಸನ ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ನೂರಾರು ಆನೆಗಳಿವೆ. ಇವುಗಳ ದಾಳಿಯಿಂದ ಸಾವು ನೋವು ಸಂಭವಿಸುತ್ತಿದೆ. ಹೀಗಾಗಿ ಕಾಡಿನಿಂದ ನಾಡಿಗೆ ಆನೆಗಳು ಬಾರದಂತೆ ನಿಯಂತ್ರಿಸಲು ಈಗಾಗಲೇ 393 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ₹200 ಕೋಟಿ ವೆಚ್ಚದಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನೂ 300 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಮಾಡಿದಲ್ಲಿ ಆನೆ ಹಾವಳಿ ನಿಯಂತ್ರಿಸಬಹುದು. ಹೀಗಾಗಿ, ಕಾಂಪಾ ನಿಧಿಯಲ್ಲಿರುವ ರಾಜ್ಯದ ಹಣದಲ್ಲಿ ₹500 ಕೋಟಿಯನ್ನು ಮಂಜೂರು ಮಾಡುವಂತೆ ಕೋರಲಾಗಿದೆ ಎಂದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 2005ರಿಂದ ಇಲ್ಲಿವರೆಗೆ 356 ಕುಟುಂಬಗಳು ಸ್ಥಳಾಂತರಗೊಂಡಿವೆ. ರಾಜ್ಯ ಸರ್ಕಾರ ಇವರಿಗೆ ವಿಶೇಷ ಪ್ಯಾಕೇಜ್ ನೀಡಿ ₹142 ಕೋಟಿ ಪರಿಹಾರ ನೀಡಿದೆ. 688 ಎಕರೆಯು ಅರಣ್ಯ ಇಲಾಖೆಗೆ ಲಭಿಸಿದೆ ಎಂದರು.
ಇನ್ನೂ 42 ಗ್ರಾಮಗಳು, 108 ಜನವಸತಿಗಳು, 1382 ಕುಟುಂಬಗಳಿದ್ದು ಇಲ್ಲಿ ಒಟ್ಟಾರೆ 5177 ಜನರು ವಾಸಿಸುತ್ತಿದ್ದಾರೆ. ಇವರಲ್ಲಿ ಹಲವರು ಸ್ವಯಂಪ್ರೇರಿತವಾಗಿ ಸ್ಥಳಾಂತರಕ್ಕೆ ಸಮ್ಮತಿಸಿದ್ದಾರೆ. 300 ಕುಟುಂಬಗಳನ್ನು ಸ್ಥಳಾಂತರಿಸಿದರೆ 597 ಎಕರೆ ಅರಣ್ಯ ಇಲಾಖೆಗೆ ಹೆಚ್ಚುವರಿಯಾಗಿ ಲಭಿಸುತ್ತಿದೆ. ಇದಕ್ಕೆ ಕ್ಯಾಂಪಾದಿಂದ ₹300 ಕೋಟಿ ನೀಡಿದರೆ ಸ್ಥಳಾಂತರ ಕಾರ್ಯ ಸುಗಮವಾಗುತ್ತದೆ ಎಂದರು.

