ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆಎಂಎಫ್ (Karnataka Milk Federation) ನ ನಂದಿನಿ ಬ್ರ್ಯಾಂಡ್ ಈ ವರ್ಷದ ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದಾಖಲೆ ಬರೆದಿದೆ.
ಒಟ್ಟು 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟದ ಮೂಲಕ ನಂದಿನಿ ಹೊಸ ಇತಿಹಾಸ ನಿರ್ಮಿಸಿದ್ದು, ರೂ. 46 ಕೋಟಿ ರೂ.ಗಳ ದಾಖಲೆಯ ವಹಿವಾಟು ನಡೆಸಿದೆ.
ನಂದಿನಿ ಬ್ರ್ಯಾಂಡ್ನಡಿಯಲ್ಲಿ ಲಭ್ಯವಿರುವ 40ಕ್ಕೂ ಹೆಚ್ಚು ವಿಭಿನ್ನ ಸಿಹಿ ಉತ್ಪನ್ನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಳೆದ ವರ್ಷದ ಹೋಲಿಕೆಗೆ ಹೋಲಿಸಿದರೆ 38 ಶೇಕಡಾ ವಹಿವಾಟಿನ ಪ್ರಗತಿ ದಾಖಲಿಸಲಾಗಿದೆ.
ಇದು ಕೆಎಂಎಫ್ನ ಇತಿಹಾಸದಲ್ಲಿಯೇ ಅತ್ಯುನ್ನತ ಸಾಧನೆಯಾಗಿದ್ದು, ಸಂಸ್ಥೆಯ ಉತ್ಪಾದನೆ, ಪ್ಯಾಕೇಜಿಂಗ್ ಹಾಗೂ ವಿತರಣಾ ವ್ಯವಸ್ಥೆಯ ದಕ್ಷತೆಯ ಪ್ರತಿಫಲನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಂದಿನಿ ಉತ್ಪನ್ನಗಳು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಹಾಗೂ ಪಕ್ಕದ ರಾಜ್ಯಗಳಲ್ಲಿಯೂ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಈ ವಹಿವಾಟು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
