ಕೊರಟಗೆರೆ :- ಪ್ರತಿ ವರ್ಷದಂತೆ ಈ ವರ್ಷವೂ ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ವತಿಯಿಂದ 10 ದಿನಗಳ ಉಚಿತ ಬೇಸಿಗೆ ಸಂಸ್ಕಾರ ಶಿಬಿರವನ್ನು ಮಕ್ಕಳಿಗಾಗಿ ಆಯೋಜಿಸಲಾಗಿದೆ ಎಂದು ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಎಲೆರಾಂಪುರದ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ಸೋಮವಾರ ಶಿಬಿರದ ಸಿದ್ಧತೆಗಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ನೈತಿಕ ಮೌಲ್ಯಗಳು ಮತ್ತು ಸಂಸ್ಕಾರಗಳ ಅರಿವು ಹೆಚ್ಚಿಸುವುದು ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಠವು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಉಚಿತ ಸಂಸ್ಕಾರ ಶಿಬಿರವನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಹೇಳಿದರು.
5ನೇ ತರಗತಿಯಿಂದ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿ ಸುಮಾರು 800ಕ್ಕೂ ಅಧಿಕ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಏಪ್ರಿಲ್ 15ರಿಂದ 26ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ಯೋಗಾಭ್ಯಾಸ, ಸಂಗೀತ, ಸಂಸ್ಕೃತ ಭಾಷಾ ಕಲಿಕೆ, ದೇಸಿ ಆಟಗಳು, ಭಗವದ್ಗೀತೆ ಪಾಠ, ಸಂಸ್ಕಾರ ಬೋಧನೆ ಸೇರಿದಂತೆ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ,ಜೊತೆಗೆ ಸಹಜ ಜೀವನ ಮೌಲ್ಯಗಳು, ಶಿಸ್ತು, ಸಹಭಾಗಿತ್ವದ ಬದುಕಿನ ಮಹತ್ವವನ್ನು ಮಕ್ಕಳಿಗೆ ಬೋಧಿಸಲಾಗುವುದು ಎಂದು ವಿವರಿಸಿದರು.
ಭಕ್ತರ ಸಹಕಾರದೊಂದಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ವಿವಿಧ ಕ್ಷೇತ್ರಗಳ ತಜ್ಞ ಉಪನ್ಯಾಸಕರು, ನುರಿತ ಶಿಕ್ಷಕರು ಹಾಗೂ ಹಲವು ಮಠಗಳ ಶ್ರೀಗಳು ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.
ಶಿಬಿರದ ಆಯೋಜನಾಧಿಕಾರಿಯೂ ಆಗಿರುವ ನಿವೃತ್ತ ಪ್ರಾಂಶುಪಾಲ ಡಾ. ನಂಜುಂಡಯ್ಯ ಮಾತನಾಡಿ, ಈಗಾಗಲೇ ಶಿಬಿರಕ್ಕೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ರಾಜ್ಯದಲ್ಲಿಯೇ ಉಚಿತವಾಗಿ ಇಂತಹ ಸಂಸ್ಕಾರ ಶಿಬಿರವನ್ನು ಆಯೋಜಿಸುವುದು ವಿಶಿಷ್ಟ. ಪೋಷಕರು ತಮ್ಮ ಮಕ್ಕಳನ್ನು ಈ ಶಿಬಿರಕ್ಕೆ ಕಳುಹಿಸುವ ಮೂಲಕ ಪಾಠಪುಸ್ತಕಗಳಿಗಷ್ಟೇ ಸೀಮಿತವಾಗಿರುವ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳ ಅರಿವನ್ನೂ ಕಲ್ಪಿಸಬೇಕು” ಎಂದು ಮನವಿ ಮಾಡಿದರು.
ಸಭೆಯಲ್ಲಿ ಉಪನ್ಯಾಸಕರಾದ ಡಾ. ಕುಮಾರಸ್ವಾಮಿ, ಶಿಕ್ಷಕರಾದ ರಘು, ಭ್ರಮರಾಂಬ, ಗಿರೀಶ್, ರಂಗನಾಥ್, ಶಾಂತಕುಮಾರಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಮತ್ತು ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ.
