ಕೊರಟಗೆರೆ: ಭಾರತ ದೇಶವನ್ನು ಅನೇಕ ರಾಜ ಮನೆತನಗಳು ಆಳಿದ ಇತಿಹಾಸವಿದೆ ಶೋಷಿತ ಸಮುದಾಯದ ರಾಜನೊಬ್ಬ ಮೇಲ್ಜಾತಿಗಳ ನಾಯಕತ್ವ ವಹಿಸಿ ದಕ್ಷಿಣ ಭಾಗದ ಸಂಜೀವಿನಿ ಕ್ಷೇತ್ರ, ಎಂದೇ ಪ್ರಖ್ಯಾತಿ ಹೊಂದಿರುವ ಸಿದ್ದರಬೆಟ್ಟ ಸಂಸ್ಥಾನದ ಮಹಾರಾಜರಾಗಿ ಆಳ್ವಿಕೆ ಮಾಡಿರುವ ಮಾದಿಗ ಸಮುದಾಯದ ಮೊದಲ ರಾಜ ಅರಸು ಕುರಂಗರಾಜನ 278 ನೇ ಪಟ್ಟಾಭಿಷೇಕ ಮಹೋತ್ಸವವನ್ನು ದಲಿತ ಮುಖಂಡರು ಹಾಗೂ ಚಿಂತಕರು ಅದ್ದೂರಿಯಾಗಿ ಆಚರಣೆ ಮಾಡಿದರು.
ಪಟ್ಟಣದ ಎಸ್ಎಸ್ಆರ್ ಸರ್ಕಲ್ನಲ್ಲಿ ಮಾದಿಗರ ಮೊದಲ ಅರಸು ಕುರಂಗರಾಜನ ಪ್ರತಿಮೆಗೆ ಮಾದಿಗ ಸಮುದಾಯದ ಮುಖಂಡರುಗಳ ನೇತೃತ್ವದಲ್ಲಿ ಮಹಾರಾಜನಿಗೆ ಪುಷ್ಪಾರ್ಚನೆಯನ್ನು ಮಾಡಿ 278 ನೇ ಪಟ್ಟಾಭಿಷೇಕವನ್ನು ನೆನಪಿಸಿ ಗೌರವವನ್ನು ಸಲ್ಲಿಸಿದರು.
ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಓ ನಾಗರಾಜ್ ಮಾತನಾಡಿ ಕುರಂಗರಾಜ ತಳ ಸಮುದಾಯದ ಅಸ್ಮಿತೆಯಾಗಿದ್ದು ಇವರ ಈ ಪಟ್ಟಾಭಿಷೇಕದ ಮಹೋತ್ಸವ ಇತಿಹಾಸದಲ್ಲಿ ದಾಖಲಿಸಲಿದ್ದು, ಕೊರಟಗೆರೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ಸಿದ್ದರಬೆಟ್ಟಕ್ಕೆ ಚಾರಣ ಕೈಗೊಂಡ ಸಂದರ್ಭದಲ್ಲಿ ಕುರಂಗರಾಜನ ಬಗ್ಗೆ ಕೆಲವು ಮಾಹಿತಿಗಳನ್ನ ತಿಳಿದು ಅಲ್ಲಿನ ಸ್ಥಳೀಯರನ್ನ ಸಂದರ್ಶಿಸಿ ಸುಮಾರು ಒಂದು ವರ್ಷಗಳ ಕಾಲ ಸಂಶೋಧನೆ ನಡೆಸಿ ಕುರಂಗರಾಜ ವೈಭವ ಎಂಬ ಕಾದಂಬರಿಯನ್ನು ಹೊರ ತರಲಾಯಿತು ಎಂದರು.
ಸಿದ್ದರಬೆಟ್ಟದ ಸುತ್ತಮುತ್ತಲಿನ ಗಲ್ಲೆಬಾನಿ, ದೊಡ್ಡಕಾಯಪ್ಪ ದೇವಸ್ಥಾನ ನಿರ್ಮಾಣ, ಚರ್ಮದ ನಾಣ್ಯಗಳ ಚಲಾವಣೆ ಸೇರಿದಂತೆ ಅನೇಕ ಐತಿಹಾಸಿಕ ಸಾಕ್ಷಿಗಳನ್ನು ಇಟ್ಟುಕೊಂಡು ಮಾದಿಗ ಸಮುದಾಯದ ಈ ರಾಜನನ್ನ ನಾಡಿಗೆ ಪರಿಚಯ ಮಾಡಬೇಕು ಎಂಬ ನಿಟ್ಟಿನಲ್ಲಿ ಪುಸ್ತಕದ ರೂಪದಲ್ಲಿ ಹೊರ ತಂದಿದ್ದೇನೆ. ಮೇಲ್ಜಾತಿಗಳನ್ನು ಒಲೈಸಿಕೊಂಡು ತಳ ಸಮುದಾಯದ ಸೈನಿಕ ರಾಜನಾಗಿ ಅಂದಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತನ್ನ ಆಡಳಿತದಲ್ಲಿ ತಂದು ಬರಗಾಲ, ಆರ್ಥಿಕ ದುಸ್ಥಿತಿ, ಪ್ರಜಾ ರಕ್ಷಣಾ ಪಾಲನೆ, ಚರ್ಮ ನಾಣ್ಯ ಚಲಾವಣೆ ಸೇರಿದಂತೆ ಅನೇಕ ಪ್ರಾಂತ್ಯಗಳನ್ನ ಅಳಿದ ಈ ರಾಜನ ಇತಿಹಾಸವನ್ನು ಯಾವ ಇತಿಹಾಸಕಾರರು ದಾಖಲಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ, ಸಂಶೋಧಕ ವಿಮರ್ಶಕ, ಲೇಖಕ ಪ್ರಾಧ್ಯಾಪಕರಾದ ಡಾ.ರವಿಕುಮಾರ್ ನೀಹ ಮಾತನಾಡಿ, ಶೋಷಿತ ಸಮುದಾಯಕ್ಕೆ ರಾಜನೊಬ್ಬ ಇದ್ದ ಪ್ರತಿದಿನ ದೌರ್ಜನ್ಯಕ್ಕೆ ಒಳಗಾಗುವ ಸಮುದಾಯಕ್ಕೆ ಇತಿಹಾಸವಿದೆ ಎನ್ನುವುದಕ್ಕೆ ಕೊರಟಗೆರೆಯಲ್ಲಿ ಆಚರಿಸಲಾದ ಅರಸು ಕುರಂಗರಾಯನ 278 ನೇ ಪಟ್ಟಾಭಿಷೇಕ ಮಹೋತ್ಸವವೇ ಸಾಕ್ಷಿ ಇದನ್ನ ಆಚರಣೆ ಮಾಡಲು ಸಿದ್ದರಬೆಟ್ಟದ ಪ್ರಾಂತ್ಯದಲ್ಲಿ ಸಿಕ್ಕ ಖಡ್ಗದ ಸಹಾಯದಿಂದ ದಿನಾಂಕ ಹೆಸರುಗಳನ್ನು ಸಂಶೋಧಿಸಿ ಅನೇಕ ಬ್ರಾಹ್ಮಣರ ಸಂಖ್ಯಾಶಾಸ್ತ್ರದ ಪ್ರಕಾರ ಮಾಗ ಮಾಸದ 12 ನೇ ದಿನ ಶನಿವಾರದಂದು ಕುರಂಗರಾಜ ಪಟ್ಟಕ್ಜೆ ಏರಿದ ಎಂಬ ಅಂಶವನ್ನು ಅರಿತು ಕೊರಟಗೆರೆಯಲ್ಲಿ 278 ನೇ ಪಟ್ಟಾಭಿಷೇಕದ ಮಹೋತ್ಸವವನ್ನು ಆಚರಣೆ ಮಾಡುತ್ತಿರುವುದು ಸಮುದಾಯಕ್ಕೆ ಕೀರ್ತಿ ತಂದಂತಿದೆ ಎಂದು ತಿಳಿಸಿದರು.
ಮಾದರ್ ಮಹಾಸಭಾ ತಾಲೂಕು ಅಧ್ಯಕ್ಷ ವಿಭೂತಿ ಸಿದ್ದಪ್ಪ ಅವರು ಮಾತನಾಡಿ ದನ ಕಾಯುವ, ಚಾಕರಿ ಕೆಲಸ ಮಾಡುವ ನಮ್ಮ ಸಮುದಾಯಕ್ಕೆ ಒಬ್ಬ ರಾಜನಿದ್ದ ಎಂಬುದೇ ಹೆಮ್ಮೆಯ ವಿಚಾರ ಇಂದಿಗೂ ಈ ಸಮುದಾಯ ಗಟ್ಟಿಮುಟ್ಟಾಗಿ ರಾಜರಂತೆಯೇ ಬದುಕುತ್ತಿದ್ದೇವೆ ಸವರ್ಣಿಯರಂತೆ ನಾವು ಯಾರನ್ನು ದೌರ್ಜನ್ಯ ಮಾಡುತ್ತಿಲ್ಲ ಆದರೆ ನಮ್ಮ ಸಮುದಾಯ ದುಡಿದ ಶ್ರಮವನ್ನ ಮೇಲ್ಜಾತಿಯವರು ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಆಯೋಜಕ ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ, ಇತಿಹಾಸವನ್ನು ಅರಿತವನು ಇತಿಹಾಸವನ್ನು ಸೃಷ್ಟಿಸುತ್ತಾನೆ ಹಾಗೆಯೇ ಮಾದಿಗ ಸಮುದಾಯ ದೇವ ದಾನವರಿಂದಲೂ ಸೃಷ್ಟಿಯೊಂದಿಗೆ ಸಮ್ಮೆಳಿತವಾಗಿ ಬಂದಿದೆ ನಮ್ಮಗಳ ಇತಿಹಾಸ ಅಗಣಿತವಾಗಿದ್ದು ಕುರಂಗರಾಜನ ಪಟ್ಟಾಭಿಷೇಕದ ಸವಿನೆನಪಿಗಾಗಿ ರಾಜಅರಸು ಕುರಂಗರಾಯನ ಪ್ರತಿಷ್ಠಾನ ಮತ್ತು ಸಹಕಾರ ಸಂಘವನ್ನ ರಚನೆ ಮಾಡಿ ಸಮುದಾಯದ ಶ್ರೇಯೋಭಿವೃದ್ಧಿಗೆ ಪಣತೊಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಮುಂದಿನ 279 ನೇ ಕುರಂಗರಾಜನ ಪಟ್ಟಾಭಿಷೇಕ ಮಹೋತ್ಸವವನ್ನು ರಾಜನಾಳಿದ ತಾಣ ಕುರಂಕೋಟೆ ತಪ್ಪಲಿನಲ್ಲಿ ಆಚರಣೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ತುಂಬಾಡಿ ರಾಮಣ್ಣ ಮಾದರ್ ಮಹಾಸಭಾದ ಮುಖಂಡರಾದ ದಾಡಿ ವೆಂಕಟೇಶ್ ವಿಭೂತಿ ಸಿದ್ದಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಚಿಕ್ಕರಂಗಯ್ಯ, ಶಿವರಾಮಯ್ಯ, ಮಂಜುನಾಥ್, ಕುರಂಗರಾಜ ಸೊಸೈಟಿಯ ವೀರಕ್ಯಾತರಾಯ, ಮಾರುತಿ, ಪತ್ರಕರ್ತರಾದ ರವಿಕುಮಾರ್, ನೇಗಲಾಲ ಸಿದ್ದೇಶ್, ಗಂಗಣ್ಣ, ಚಿಕ್ಕಣ್ಣ, ದೊಡ್ಡಯ್ಯ, ನಾಗರಾಜ್, ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್ ಕೊರಟಗೆರೆ.
