ಕೊರಟಗೆರೆ: ರೈತರ ಅಭಿವೃದ್ಧಿಗಾಗಿ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗುತ್ತಿದ್ದರೂ, ಅಧಿಕಾರಿಗಳ ಹಣದಾಹದಿಂದ ಹಲವು ಯೋಜನೆಗಳು ಲೋಪವಾಗುತ್ತಿರುವುದಕ್ಕೆ ತಾಜಾ ಉದಾಹರಣೆಯಾಗಿ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಕೃಷಿ ಇಲಾಖೆಯಲ್ಲಿ ಗಂಭೀರ ಆರೋಪಗಳು ಕೇಳಿಬರುತ್ತಿವೆ.
ಕೃಷಿ ಇಲಾಖೆಯ ಗೋಡನ್ನಲ್ಲಿ ಶೇಖರಿಸಬೇಕಾದ ಕೃಷಿ ಉಪಕರಣಗಳನ್ನು ಖಾಸಗಿ ಗೋಡನ್ನಲ್ಲಿ ಸಂಗ್ರಹಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಇದು ಅಧಿಕಾರಿಗಳ ಹಣದಾಹಕ್ಕೆ ಹಿಡಿದ ಕೈಗನ್ನಡಿ ಎಂದು ಕೆಲವು ರೈತರು ಆರೋಪಿಸಿದ್ದಾರೆ.
ರೈತರ ಬಳಕೆಗೆ ಸರ್ಕಾರದಿಂದ ಒದಗಿಸಲಾದ ಸ್ಪಿಂಕ್ಲರ್ಗಳು ಸೇರಿದಂತೆ ಹಲವು ಕೃಷಿ ಉಪಕರಣಗಳು ಹೊಳವನಹಳ್ಳಿ ಕೃಷಿ ಇಲಾಖೆಯ ಉಪಕೇಂದ್ರದಲ್ಲಿದ್ದರೂ ಸಹ, ಅವುಗಳನ್ನು ಖಾಸಗಿ ಗೋಡನ್ನಲ್ಲಿ ಶೇಖರಿಸಲಾಗಿದೆ ಎನ್ನಲಾಗಿದೆ. ಈ ಬೆಳವಣಿಗೆ ರೈತ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಹೊಳವನಹಳ್ಳಿ ಹೋಬಳಿ ಕೃಷಿ ಚಟುವಟಿಕೆಗಳಿಗೆ ಪ್ರಮುಖ ಹಾಗೂ ಪ್ರಶಸ್ತಿ ಪಡೆದ ಪ್ರದೇಶವಾಗಿದ್ದು, ಇತರೆ ಹೋಬಳಿಗಳಿಗಿಂತ ಇಲ್ಲಿ ಕೃಷಿ ಉಪಕರಣಗಳ ಬಳಕೆ ಹೆಚ್ಚಾಗಿದೆ. ಇದೇ ಅವಕಾಶವನ್ನು ಬಂಡವಾಳ ಮಾಡಿಕೊಂಡ ಅಧಿಕಾರಿವರ್ಗ, ಖಾಸಗಿ ಗೋಡನ್ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಸೌಲಭ್ಯಗಳ ವಿತರಣೆಯಲ್ಲಿ ಗಂಭೀರ ಲೋಪವೆಸಗುತ್ತಿದೆ. ರೈತರಿಗೆ ಉಚಿತವಾಗಿ ಅಥವಾ ಸಹಾಯಧನದ ಮೂಲಕ ನೀಡಬೇಕಾದ ಸೌಲಭ್ಯಗಳನ್ನು ಹೆಚ್ಚುವರಿ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ರೈತರಿಂದ ಕೇಳಿಬರುತ್ತಿವೆ.
ಇದೇ ಸಂದರ್ಭದಲ್ಲಿ, ಹೊಳವನಹಳ್ಳಿ ಕೃಷಿ ಇಲಾಖೆಗೆ ಬರುವ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸುವಲ್ಲಿ ಮೀನಾಮೇಷ ಹೇಳಿ ವಿಳಂಬ ಮಾಡಲಾಗುತ್ತಿದೆ. ಅನಾವಶ್ಯಕ ದಾಖಲಾತಿ ಹಾಗೂ ಇತರ ಕಾರಣಗಳನ್ನು ಮುಂದಿಟ್ಟು ರೈತರನ್ನು ಮರುಮರು ಕಚೇರಿಗೆ ಅಲೆಯುವಂತೆ ಮಾಡಲಾಗುತ್ತಿದೆ. ಬಿತ್ತನೆ ಬೀಜಗಳು ಹಾಗೂ ಇತರ ಸರ್ಕಾರಿ ಸೌಲಭ್ಯಗಳಿಗಾಗಿ ರೈತರು ಅನಗತ್ಯವಾಗಿ ಕಚೇರಿ ಸುತ್ತುವಂತಾಗಿದ್ದು, ಕೃಷಿ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರೈತರು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
-ಶ್ರೀನಿವಾಸ್, ಕೊರಟಗೆರೆ.
