ಕೊರಟಗೆರೆ ;- ರಾಜ್ಯದಲ್ಲಿ ಪ್ರಸಿದ್ದಿಯಾಗಿರುವ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ತಾಲೂಕಿನ ಗೊರವನಹಳ್ಳಿ ಶ್ರಿ ಮಹಾಲಕ್ಷ್ಮೀ ದೇವಾಲಯದಲ್ಲಿ ಕಾರ್ತಿಕ ಮಾಸದ ಕೊನೆ ಶುಕ್ರವಾರ ನಡೆದ ಬ್ರಹ್ಮ ರಥೋತ್ಸವಕ್ಕೆ ಏಲೆರಾಂಪುರ ನರಸಿಂಹಗಿರಿಯ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀಹನುಮಂತನಾಥ ಸ್ವಾಮೀಜಿ ಸಾವಿರಾರು ಮಂದಿ ಭಕ್ತಾದಿಗಳ ಸಮ್ಮುಖದಲ್ಲಿ ಚಾಲನೆ ನೀಡಿದರು.
ಬ್ರಹ್ಮರಥೋತ್ಸವಕ್ಕೂ ಮುನ್ನ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಶ್ರೀ ಗಣಪತಿ ಹೋಮ, ನವಗ್ರಹ ಹೋಮ, ಶ್ರೀ ಮಹಾಲಕ್ಷ್ಮಿ ಹೋಮ, ಗ್ರಾಮ ದೇವತೆ ದುರ್ಗಾ ಹೋಮ ಸೇರಿದಂತೆ ಕ್ಷೇತ್ರ ದೇವತೆ ಶ್ರೀಮಹಾಲಕ್ಷ್ಮಿಗೆ ವಿಶೇಷ ಪೂಜೆಸಲ್ಲಿಸಿ ನಂತರ ಮಾತನಾಡಿದ ಶ್ರೀಗಳು ಶ್ರೀ ಮಹಾಲಕ್ಷ್ಮಿದೇವಾಲಯದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಸ್ತ ಜನತೆಗೆ ಶ್ರೀ ಮಹಾಲಕ್ಷ್ಮೀದೇವಿ ಸಕಲ ಐಶ್ವರ್ಯ, ಅರೋಗ್ಯ ಕೊಟ್ಟು ಕಾಪಾಡಲಿ, ರಾಜ್ಯದಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರು ಸಮೃದ್ದಿಯಾಗಲಿ, ಈ ಧಾರ್ಮಿಕ ಕಾರ್ಯಕ್ರಮದಿಂದಾಗಿ ಜನರಲ್ಲಿ ನಿರ್ಮಲ ಭಾವ ಬೆಳೆದು ಸಹೋದರಂತೆ ಹಾಗೂ ಭಾತೃತ್ವ ಬೆಳೆಯಲ್ಲಿ ಎಂದರು.
ಸಿದ್ದರಬೆಟ್ಟದ ರಂಭಾಪುರಿ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಒಂದಾದ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಸನ್ನಿಧಿಯಲ್ಲಿ ಸಮಾಜಕ್ಕೆ ಧಾರ್ಮಿಕತೆಯ ಜೊತೆ ಜೊತೆಯಲ್ಲಿ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡುತ್ತಿದ್ದು, ಬಡಜನತೆಗೆ ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಲಿದೆ , ಧಾರ್ಮಿಕ ಹಾಗೂ ಶೈಕ್ಷಣಿಕ ಎರಡನ್ನು ಒಟ್ಟೊಟ್ಟಿಗೆ ತೆಗೆದುಕೊಂಡು ಹೋಗುವಂತಹ ಕೆಲಸ ಟ್ರಸ್ಟ್ ನಿಂದ ಆಗಬೇಕಿದೆ ಎಂದರು.
ಶ್ರೀ ಮಹಾಲಕ್ಷ್ಮೀ ದೇವಾಲಯದ ಛಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಬಿ.ಜಿ.ವಾಸುದೇವ ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯು 38ನೇ ವರ್ಷದ ಕಾರ್ತೀಕ ಮಾಸದ ಕಡೇ ಶುಕ್ರವಾರ ವಿಜೃಂಭಣೆಯಿಂದಸಾವಿರಾರು ಭಕ್ತರ ಸಮುಖದಲ್ಲಿ ಬ್ರಹ್ಮರಥೋತ್ಸವ ನಡೆದು ಈ ಧಾರ್ಮಿಕ ಕಾರ್ಯಕ್ರಮದ ಹಿನ್ನಲೆಯಲ್ಲಿ ಮುಂಜಾನೆಯಿಂದಲೇ ದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಪೂಜಾಗಳು, ಹೋಮಹವನ ನಡೆದವು ಸಂಜೆ ನಡೆಯುವ ದಿಪೋತ್ಸವ ಮತ್ತು ಮುತ್ತಿನ ಪಲ್ಲಕ್ಕಿ ಉತ್ಸವಕ್ಕೆ ಗೊರವನಹಳ್ಳಿ, ನರಸಯ್ಯನ ಪಾಳ್ಯ ಮತ್ತು ಗೊಲ್ಲರಹಟ್ಟಿ ಗ್ರಾಮಗಳಿಂದ ಆರತಿ ಸೇವೆ ನಡೆಯಲಿದೆ, ದೇವಿಯ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಬೆಳಿಗ್ಗೆ ಯಿಂದ ರಾತ್ರಿ 11 ಗಂಟೆಯವೆರಗೂ ದೇವಿಯ ದರ್ಶನದೊಂದಿಗೆ ಪ್ರಸಾದ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದ ಅವರು ಬ್ರಹ್ಮರಥೋತ್ಸವ ಹಾಗೂ ದೀಪೋತ್ಸವ ಕಾರ್ಯಕ್ರಮಕ್ಕೆ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯಸ್ವಾಮೀಜಿಗಳು ಹಾಗೂ ಏಲೆರಾಂಪುರ ಶ್ರೀ ನರಸಿಂಹಗಿರಿಯ ಕುಂಚಿಟಿಗರ ಮಹಾಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥಸ್ವಾಮೀಜಿ ಸೇರಿದಂತೆ ತಾಲೂಕಿನ ಮತ್ತು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು, ಗಣ್ಯರನ್ನು ಹಾಗೂ ಮುಖಂಡರುಗಳನ್ನು ಆಹ್ವನಿಸಲಾಗಿದ್ದು ಎಲ್ಲರೂ ಶ್ರೀ ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ ಪಡೆಯುತ್ತಿದ್ದಾರೆ ಎಂದ ಅವರು ಗೊರವನಹಳ್ಳಿ ಶ್ರೀ ಕ್ಷೇತ್ರದ ಸುತ್ತಮುತ್ತಲ ಗ್ರಾಮಗಳ ಸಾರ್ವಜನಿಕರಿಗಾಗಿ ಹಾಗೂ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ದೇವಾಲಯದ ಆವರಣದಲ್ಲಿ ಉಚಿತ ಚಿಕಿತ್ಸಾಲಯವನ್ನು ಪ್ರಾರಂಬಿಸಲಾಗಿದ್ದು ಈ ಚಿಕಿತ್ಸಾಲಯದಲ್ಲಿ ಸಾವಿರಾರು ಸಾರ್ವಜನಿಕರು ಅನುಕೂಲ ಪಡೆಯುತ್ತಿರುವುದಾಗಿ ತಿಳಿಸಿದ ಅವರು ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಉಚಿತ ದಾಸೋಹ ಸೇರಿದಂತೆ ದೇವಾಲಯದ ಸುತ್ತಮುತ್ತಲ ಆವರಣದಲ್ಲಿ ವಿವಿಧ ಅನುಕೂಲಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಮಹಾ ಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಆರ್,ಮುರಳಿಕೃಷ್ಣ, ಖಜಾಂಚಿ ಆರ್.ಜಗದೀಶ್, ಧರ್ಮದರ್ಶಿಗಳಾದ ಡಾ.ಟಿ.ಎಸ್. ಲಕ್ಷ್ಮಿಕಾಂತ. ಟಿ.ಆರ್.ನಟರಾಜು, ಎಸ್.ಶ್ರೀಪ್ರಸಾದ್ ರವಿರಾಜೇಅರಸ್, ಮಂಜುನಾಥ್, ಓಂಕಾರೇಶ್, ಚಿಕ್ಕನರಸಯ್ಯ, ವಿ.ಬಾಲಕೃಷ್ಣ, ಲಕ್ಷ್ಮಿನರಸಯ್ಯ, ಎನ್.ಜಿ.ನಾಗರಾಜು, ಚಿಕ್ಕನರಸಯ್ಯ, ನರಸರಾಜು, ಅರ್ಚಕರಾದ ಸುಬ್ರಹ್ಮಣ್ಯ, ಗಿರೀಶ್ ರಾವ್, ದೇವಾಲಯದ ವಿಶೇಷ ಅಧಿಕಾರಿ ಕೇಶಮಮೂರ್ತಿ, ಲಕ್ಷ್ಮಣ್, ಕಾರ್ಯನಿರ್ವಹಣಾಧಿಕಾರಿ ರಂಗಸ್ವಾಮಿ ಮಂಜುನಾಥ್, ಶ್ರೀ ಲಕ್ಷ್ಮಿಪ್ರಸಾದ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ವರದಿ : ಶ್ರೀನಿವಾಸ್ ಕೊರಟಗೆರೆ
