ಕೊರಟಗೆರೆ:- ಪ್ರತಿಯೊಂದು ಧಾರ್ಮಿಕ ಆಚರಣೆಯೂ ನಮ್ಮ ಸಂಸ್ಕೃತಿಯ ಅಡಿಪಾಯವಾಗಿದ್ದು,ಪೂರ್ವಿಕರು ನೀಡಿದ ಮೌಲ್ಯಗಳನ್ನು ಅರಿತು ನಮ್ಮತನವನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಕೋಳಾಲ ಹೋಬಳಿಯ ವಜ್ಜನ ಕುರಿಕೆ ಗ್ರಾಮದಲ್ಲಿ ಅರೇ ರಂಗನಾಥ ಸ್ವಾಮಿ ದೇವಾಲಯದ 15ನೇ ವರ್ಷದ ವಿಷ್ಣು ದೀಪೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಕೇವಲ ಆಚರಣೆಗಾಗಿ ಆಚರಣೆಗಳನ್ನು ಮಾಡುವುದಕ್ಕಿಂತ, ಅದರೊಳಗಿನ ಸಾರ, ಆಧ್ಯಾತ್ಮಿಕತೆ ಮತ್ತು ವೈಜ್ಞಾನಿಕ ಅಂಶಗಳನ್ನು ಅರಿತು ಆಚರಿಸಿದಾಗ ಮಾತ್ರ ಪ್ರತಿಯೊಂದು ಹಬ್ಬ–ಉತ್ಸವಗಳ ಮೌಲ್ಯ ಹೆಚ್ಚುತ್ತದೆ, ಯಾವ ಮಾಸದಲ್ಲಿ ಯಾವ ರೀತಿಯ ಧಾರ್ಮಿಕ ಆಚರಣೆಗಳನ್ನು ಮಾಡಬೇಕು, ಆ ಸಮಯದಲ್ಲಿ ನಮ್ಮ ಆಹಾರ ಪದ್ಧತಿ ಹೇಗಿರಬೇಕು ಎಂಬುದರಲ್ಲಿಯೂ ಪೂರ್ವಿಕರು ಆಳವಾದ ವೈಜ್ಞಾನಿಕ ಚಿಂತನೆ ಅಡಗಿಸಿದ್ದಾರೆ ಎಂದರು.
ಹಬ್ಬಗಳ ಸಂದರ್ಭದಲ್ಲಿ ತಯಾರಿಸುವ ಖಾದ್ಯಗಳಲ್ಲಿಯೂ ಸಾತ್ವಿಕತೆ ಮತ್ತು ಆರೋಗ್ಯಪರ ದೃಷ್ಟಿಕೋನ ಅಡಗಿದ್ದು, ಇಂತಹ ಆಹಾರಗಳನ್ನು ಸೇವಿಸುವುದರಿಂದ ದೈಹಿಕ–ಮಾನಸಿಕ ಆರೋಗ್ಯದೊಂದಿಗೆ ಸಂಸ್ಕೃತಿಯ ಸಂರಕ್ಷಣೆಯೂ ಸಾಧ್ಯವಾಗುತ್ತದೆ. ಇಂತಹ ಆಚರಣೆಗಳನ್ನು ಪಾಲಿಸುವ ಮೂಲಕ ನಾವು ಭಾರತೀಯರು ಎಂಬ ಹೆಮ್ಮೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ದೇವಾಲಯ ಟ್ರಸ್ಟ್ ನ ಅಧ್ಯಕ್ಷ ದಿನೇಶ್, ಮಾಜಿ ಜಿ.ಪಂ ಸದಸ್ಯ ಕೊಡಗನಹಳ್ಳಿ ವೆಂಕಟೇಶ್,ಓಂಕಾರೇಶ್ವರ ಸೊಸೈಟಿಯ ಅಧ್ಯಕ್ಷ ಶೇಷಾಚಲಮೂರ್ತಿ ,ಚಲನ ಚಿತ್ರ ನಿರ್ದೇಶಕ ಸತ್ಯ ಪ್ರಕಾಶ್, ನಿವೃತ್ತ ಡಿ ಡಿ ಡಿ ಪಿ ಐಗಳಾದ ಅರೆ ರಂಗಯ್ಯ, ಅಂಜನಪ್ಪ, ಮುಖಂಡರಾದ ನಾಗರಾಜು, ಸುದರ್ಶನ್, ರಂಗರಾಜು, ವಿನೋದ್ ಇತರರು ಇದ್ದರು.
– ಶ್ರೀನಿವಾಸ್,ಕೊರಟಗೆರೆ.
