ಕೊರಟಗೆರೆ:- ಜ್ಞಾನಜ್ಯೋತಿಯಿಂದ ಲೋಕವನ್ನ ಬೆಳಗಿಸಿದ ಮಾಚಯ್ಯ ನುಡಿದಂತೆ ನಡೆದ, ನಡೆದಂತೆ ನುಡಿದ ಶರಣರಲ್ಲಿ ಒಬ್ಬರು. ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಅಧಿಕಾರವಿದೆ ಎಂದು ಸಾರಿದ ಮಹಾನೀಯರನ್ನ ಸ್ಮರಿಸಬೇಕಿದೆ ಎಂದು ಗ್ರೇಟ್ 2 ತಹಸೀಲ್ದಾರ್ ರಾಮ್ ಪ್ರಸಾದ್ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಮಡಿವಾಳ ಮಾಚಿದೇವರ ಅವರ 926 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಡಿವಾಳ ಕುಲದಲ್ಲಿ ಹುಟ್ಟಿದ್ದರೂ ಮಾಚಯ್ಯ ಉತ್ತಮ ಶಿಕ್ಷಣ ಮತ್ತು ಶರಣರ ಸಂಪರ್ಕದಿಂದ ಮಹಾಪುರುಷರಾದರು. ಎಲ್ಲ ಶರಣರು ಮಾಚಯ್ಯನನ್ನು ‘ಮಾಚಿ ತಂದೆ’ ಎಂದು ಕರೆದಿದ್ದಾರೆ. ಅನುಭವ ಮಂಟಪ ನಿರ್ಮಾಣದ ಕಾರ್ಯದಲ್ಲಿ ಮಾಚಯ್ಯನವರ ಪಾತ್ರ ದೊಡ್ಡದು. ವಚನಗಳನ್ನು ರಚಿಸಿ ಮಾನವ ಕುಲಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ತಾಲೂಕಿನ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ರುದ್ರೇಶ್ ಮಾತನಾಡಿ ನಮ್ಮ ಕುಲ ಗುರುಗಳಾದ ಶ್ರೀ ಮಾಚಯ್ಯ ನವರು ಕ್ರಿ.ಶ. 1120ರಿಂದ 1130ರ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದರು. ಪರ್ವತಯ್ಯ ಹಾಗೂ ಸುಜ್ಞಾನಾಂಬೆ ದಂಪತಿಗೆ ಜನಿಸಿದರು. ಕುಲದೈವ ಕಲಿದೇವರನ್ನು ಆರಾಧಿಸಿ ಸ್ಪೂರ್ತಿಯಾದರು ಎಂದರು.
ಬಸವಣ್ಣ ನೇತೃತ್ವದಲ್ಲಿ ಶರಣರ ಆಂದೋಲನ ಪ್ರಾರಂಭವಾಗಿತ್ತು. ಬಸವಣ್ಣನವರ ಭಕ್ತಿ, ಕಾಯಕ ತತ್ವ, ದಾಸೋಹ, ಗುರುಲಿಂಗ ಮತ್ತು ಜಂಗಮ ಸೇವೆಗಳು ಎಲ್ಲ ಕಡೆಗೂ ಪ್ರಖ್ಯಾತವಾಗಿದ್ದವು. ಈ ವಿಚಾರ ತಿಳಿದು ಮಾಚಯ್ಯ, ಕಲಿದೇವರ ಗುರುಗಳ ಅಪ್ಪಣೆ ಪಡೆದು ಕಲ್ಯಾಣದೆಡೆಗೆ ಸಾಗಿದರು. ಕಲ್ಯಾಣಕ್ಕೆ ಬಂದ ಮೇಲೆ ಮಾಚಿದೇವ ಕಾಯಕವನ್ನು ಮುಂದುವರಿಸಿದರು. ಮೊದಲಿನಿಂದಲೂ ಸೂರ್ಯ ಹುಟ್ಟುವ ಮುನ್ನ ಎದ್ದು ತಮ್ಮ ಕಾರ್ಯ ಆರಂಭಿಸುತ್ತಿದ್ದರು. ಶುದ್ಧ ಶಿವಭಕ್ತರ ಕಾಯಕದಲ್ಲಿ ನಿಷ್ಠೆ ಉಳ್ಳವರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತಿದ್ದರು ಎಂದು ತಿಳಿಸಿದರು.
ಇದನ್ನು ಓದು: ಕೊರಟಗೆರೆ: ಮಾದಿಗರ ಕೆಚ್ಚೆದೆಯ ರಾಜ ಅರಸು ಕುರಂಗರಾಯನ 278 ನೇ ಪಟ್ಟಾಭಿಷೇಕೋತ್ಸವ
ಗ್ರಾ.ಪಂ ಉಪಾಧ್ಯಕ್ಷೆ ವೇದವತಿ ಮಾತನಾಡಿ ನಮ್ಮ ಸಮುದಾಯವು ಬಹಳ ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯ. ಈ ಬಾರಿ ತಾಲೂಕಿನ ಎಲ್ಲ ಗ್ರಾಪಂ ಯಲ್ಲಿ ಮಾಚಿದೇವ ಜಯಂತಿ ಆಚಾರಣೆ ಮಾಡುತ್ತಿರುವುದು ಸಂತಸದ ವಿಚಾರ. ಪ್ರತಿ ವರ್ಷವೂ ನಾವು ಹಿಂದುಳಿದ ವರ್ಗದವರು ನಮ್ಮ ಜನಾಂಗದವರನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಬೇಕೆಂದು ಸಾಕಷ್ಟು ಹೋರಾಟ ಮಾಡಿದ್ದೇವೆ. ಸರ್ಕಾರವು ಆಶ್ವಾಸನೆ ನೀಡಿಕೊಂಡು ಬರುತ್ತಿದೆ. ಈಗಾಗಲೇ ಸಾಕಷ್ಟು ರಾಜ್ಯಗಳಲ್ಲಿ ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಸಂಘದ ಗೌರವಾಧ್ಯಕ್ಷ ವೆಂಕಟ ಚಲಪತಿ ಉಪಾಧ್ಯಕ್ಷ ಹನುಮಂತ್ರಾಯಪ್ಪ ಕಾರ್ಯದರ್ಶಿ ಆನಂದ ಮತ್ತು ನರೇಂದ್ರಬಾಬು ಕಾರ್ಯ ಅಧ್ಯಕ್ಷ ನರಸಿಂಹಮೂರ್ತಿ ಖಜಾಂಚಿ ಲಕ್ಷ್ಮಿಕಾಂತ ಗೋವಿಂದರಾಜು ಪುಟ್ಟರಾಜು ನರಸಿಂಹಮೂರ್ತಿ ದೊಡ್ಡಯ್ಯ ಪತ್ರಕರ್ತ ಸತೀಶ್ ಹಾಗೂ ಯುವ ಮಡಿವಾಳ ಸಂಘದ ಪದಾಧಿಕಾರಿಗಳಾದ ಶರತ್ ಹಾಗೂ ಪಾಂಡುವರ್ಧನ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
– ಶ್ರೀನಿವಾಸ್ ಕೊರಟಗೆರೆ.
