ಕೊರಟಗೆರೆ: ಯುವಜನತೆಯಲ್ಲಿ ನೈತಿಕತೆ, ಸೇವಾಭಾವ ಮತ್ತು ಸಮಾಜಮುಖಿ ಚೇತನವನ್ನು ಬೆಳೆಸುವ ಉದ್ದೇಶದಿಂದ ಜನತಾ ಶಿಕ್ಷಣ ಸಂಸ್ಥೆಯ ವಿವೇಕಾನಂದ ಮಹಿಳಾ ಪದವಿಪೂರ್ವ ಕಾಲೇಜು, ಬೆಂಗಳೂರು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ಏಳು ದಿನಗಳ ವಿಶೇಷ ಶಿಬಿರವು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಭಾನುವಾರ ಮುಕ್ತಾಯಗೊಂಡಿತು.

ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, “ಆತ್ಮಶುದ್ಧತೆ, ಸಂಸ್ಕಾರ ಹಾಗೂ ಸೇವಾಭಾವವು ಯುವಜನರ ಜೀವನದ ಕೇಂದ್ರೀಯ ಮೌಲ್ಯಗಳಾಗಬೇಕು. ಆಧುನಿಕತೆಯ ಅತಿಯಾದ ಅನುಕರಣೆಯಿಂದ ದಾರಿ ತಪ್ಪದೆ, ಸಮಾಜ ಮತ್ತು ಕುಟುಂಬದ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಳ್ಳುವುದು ಕಾಲದ ಅಗತ್ಯ,” ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಅವರು, “ಎನ್ಎಸ್ಎಸ್ ಶಿಬಿರಗಳು ಯುವಜನತೆಗೆ ಶಿಸ್ತು, ಶ್ರಮ ಮತ್ತು ಜವಾಬ್ದಾರಿಯ ಪಾಠಶಾಲೆಗಳಾಗಬೇಕು. ಸರ್ಕಾರದ ಯೋಜನೆಗಳ ಯಶಸ್ಸು ಯುವಕರ ಹಸ್ತದಲ್ಲಿದೆ,” ಎಂದು ಹೇಳಿದರು.
ಶಿಬಿರದ ಅವಧಿಯಲ್ಲಿ ವಿದ್ಯಾರ್ಥಿನಿಯರು ಎಲೆರಾಂಪುರ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಸಾರ್ವಜನಿಕ ಆಸ್ಪತ್ರೆ, ಶಾಲೆ, ದೇವಸ್ಥಾನ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು. ಬೆಳಿಗ್ಗೆ ಮತ್ತು ಸಾಯಂಕಾಲ ನಡೆದ ಸಾಂಸ್ಕೃತಿಕ ಹಾಗೂ ಚಿಂತನಾ ಚಟುವಟಿಕೆಗಳ ಮೂಲಕ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡರು.

ವಿಶೇಷ ಆಹ್ವಾನಿತ ನಿವೃತ್ತ ಪ್ರಾಂಶುಪಾಲ ಡಾ. ನಂಜುಂಡಯ್ಯ ಅವರು “ಶಿಕ್ಷಣವು ಅಂಕಗಳಿಗೆ ಸೀಮಿತವಾಗದೆ ಜೀವನದ ದಾರಿ ತೋರಿಸಬೇಕು. ನಶೆಗಳಿಂದ ದೂರವಿದ್ದು ಸೇವಾಭಾವದಿಂದ ಬದುಕಿದರೆ ಜೀವನ ಸಂತೋಷಕರವಾಗುತ್ತದೆ,” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಇಇಓ ಅಪೂರ್ವ ಅನಂತರಾಜು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ನರಸಿಂಹರಾಜು, ಪಿಡಿಓ ರಮೇಶ್, ಪ್ರಾಂಶುಪಾಲೆ ತ್ರಿವೇಣಿ, ಶಿಬಿರಾಧಿಕಾರಿ ಎಂ. ಸವಿತ, ಸಹ ಶಿಬಿರಾಧಿಕಾರಿಗಳು ಪೂರ್ಣಿಮಾ ಎಂ. ತಳವಗೇರಿ, ಜ್ಞಾನೇಶ್ವರಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
— ವರದಿ: ನರಸಿಂಹಯ್ಯ, ಹೊಸಕೋಟೆ
