ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಮಾಧ್ಯಮಿಕ ವಿಭಾಗದ ಕರ್ನಾಟಕ ಪಬ್ಲಿಕ್ ಶಾಲೆಗೆ ಸಿದ್ಧರಬೆಟ್ಟ ರೋಟರಿ ಸಂಸ್ಥೆ ಹಾಗೂ Youth for Seva ಸಹಯೋಗದಲ್ಲಿ ಕಂಪ್ಯೂಟರ್ಗಳು ಮತ್ತು ವಿವಿಧ ಶಿಕ್ಷಣೋಪಕರಣಗಳನ್ನು ಉಚಿತವಾಗಿ ವಿತರಿಸಲಾಯಿತು.
ಬಾಳೆಹೊನ್ನೂರು ಸುಕ್ಷೇತ್ರ ಸಿದ್ದರಬೆಟ್ಟ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಕೊರಟಗೆರೆಯ ಬಾಲಾಜಿ ಟೆಕ್ ಟೈಲ್ಸ್ ಮಾಲೀಕರಾದ ಹಾಗೂ ರೋಟರಿ ಸಿದ್ಧರಬೆಟ್ಟ ಸಂಸ್ಥೆಯ ಅಧ್ಯಕ್ಷರಾದ ದರ್ಶನ್ ಬಾಲಾಜಿ ಮತ್ತು ಅವರ ಧರ್ಮಪತ್ನಿ ರೀತು ಅವರು ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರು.

ಕಾರ್ಯಕ್ರಮದಲ್ಲಿ Rotary International ಸಂಘಟನೆಗಳು ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ತಂತ್ರಜ್ಞಾನಾಧಾರಿತ ಶಿಕ್ಷಣವನ್ನು ಸುಲಭಗೊಳಿಸುವ ಉದ್ದೇಶದಿಂದ ಕಂಪ್ಯೂಟರ್ ಪ್ರಯೋಗಾಲಯ ಸ್ಥಾಪನೆ, ಆನ್ಲೈನ್ ತರಗತಿಗಳು ಮತ್ತು ಸ್ಮಾರ್ಟ್ ಬೋರ್ಡ್ ಮೂಲಕ ಬೋಧನೆಗೆ ಸಹಾಯ ಮಾಡುತ್ತಿವೆ ಎಂದು ತಿಳಿಸಲಾಯಿತು.
ಯೂತ್ ಫಾರ್ ಸೇವಾ ಸಂಸ್ಥೆಯ ವತಿಯಿಂದ ಶಾಲೆಗೆ ಉಚಿತವಾಗಿ 12 ಕಂಪ್ಯೂಟರ್ಗಳು, 1 ಸ್ಮಾರ್ಟ್ ಟಿವಿ, ಶುದ್ಧ ಕುಡಿಯುವ ನೀರಿನ ಟ್ಯಾಂಕ್, ಕ್ರೀಡಾ ಸಾಮಗ್ರಿಗಳು, ಗ್ರಂಥಾಲಯ ಪುಸ್ತಕಗಳು, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು, ಪರೀಕ್ಷೆಗೆ ಬಳಸುವ ರೈಟಿಂಗ್ ಪ್ಲೈವುಡ್ ಹಾಗೂ ಕಂಪ್ಯೂಟರ್ ಶಿಕ್ಷಕರನ್ನು ಒದಗಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳ ಉದ್ಘಾಟನೆಯನ್ನು ಕಾರ್ಯಕ್ರಮದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಸೀತಾಲಕ್ಷ್ಮಿ, ಉಪಪ್ರಾಂಶುಪಾಲರಾದ ಲಾಲಾ ನಾಯಕ್, ಮಾಧ್ಯಮಿಕ ವಿಭಾಗದ ನೂತನ ಮುಖ್ಯ ಶಿಕ್ಷಕರಾದ ರಾಜಣ್ಣ, ಶಿಕ್ಷಕರಾದ ಪ್ರಶಾಂತ್ ಕುಮಾರ್, ಆಶಾರಾಣಿ, ದಾಸಪ್ಪ, ಶಶಿಕುಮಾರ್, ಅನಿತಲಕ್ಷ್ಮಿ ಹಾಗೂ ಕೆಪಿಎಸ್ ಶಾಲೆಯ ಪದಾಧಿಕಾರಿಗಳು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ನರಸಿಂಹಯ್ಯ ಹೊಸಕೋಟೆ
