ಕೊರಟಗೆರೆ :- ಉರಿಯುವ ದೀಪವು ನಮ್ಮೊಳಗಿನ ಅಜ್ಞಾನವನ್ನು ದೂರ ಮಾಡುವ ಸಂಕೇತ ಇದು ಸುಜ್ಞಾನ, ಸತ್ಪ್ರಜ್ಞೆ, ಸದಾಚರಣೆಯ ಮಾರ್ಗದಲ್ಲಿ ನಮ್ಮ ಬದುಕು ಬೆಳಕಾಗುತ್ತದೆ ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಅಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಮಗಲಯ್ಯನಪಾಳ್ಯ ಗ್ರಾಮದಲ್ಲಿ ಕಾರ್ತಿಕ ಅಮಾವಾಸ್ಯೆಯ ಪ್ರಯುಕ್ತ ಮುತ್ತುರಾಯಸ್ವಾಮಿಯ ಸ್ವಾಮಿ ಲಕ್ಷ ದೀಪೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ದಮಗಲಯ್ಯನಪಾಳ್ಯವು ಒಂದು ಸಣ್ಣ ಗ್ರಾಮ ಆದರೆ ಇಲ್ಲಿ ಭಕ್ತಿ ಪರಂಪರೆ ಇದೆ ಇಲ್ಲಿ ಭಕ್ತರ ನೆರವಿನಿಂದ 16 ವರ್ಷಗಳಿಂದ ಲಕ್ಷ ದೀಪೋತ್ಸವವನ್ನು ಅರ್ಥಪೂರ್ಣ ವಾಗಿ ನಡೆಸಲಾಗುತ್ತಿರುವುದು ಅತ್ಯಂತ ಶ್ಲಾಘನೀಯ. ಭಕ್ತಾದಿಗಳಿಗಾಗಿ ದಾಸೋಹ ವ್ಯವಸ್ಥೆ ಮಾಡಿರುವುದು ಸಂತಸದ ವಿಚಾರ,ಶ್ರೀ ಮುತ್ತುರಾಯಸ್ವಾಮಿಯ ಕೃಪೆಯಿಂದ ಎಲ್ಲರ ಇಷ್ಟಾರ್ಥಗಳು ಈಡೇರಲಿ ಎಂದು ಆಶೀರ್ವದಿಸಿದರು.

ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳಿಗೆ ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ ಇದೆ ಇದರ ಫಲವಾಗಿ ಗ್ರಾಮದ ಭಕ್ತರ ಒಗ್ಗಟ್ಟು ಮತ್ತು ಸಂಕಲ್ಪದಿಂದ ದಮಗಲಯ್ಯನಪಾಳ್ಯದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಮನಸ್ಸು ಮಾಡಿದರೆ ಗ್ರಾಮಸ್ಥರು ಏನನ್ನೂ ಸಾಧಿಸಬಲ್ಲರು ಎಂಬುದಕ್ಕೆ ಇದು ಒಳ್ಳೆಯ ಉದಾಹರಣೆಯಾಗಿದೆ,ಈ ಸೇವಾ ಕಾರ್ಯಗಳಿಗೆ ದಾನ ನೀಡಿದ ಎಲ್ಲರ ಮೇಲೂ ಮುತ್ತುರಾಯಸ್ವಾಮಿಯ ಅನುಗ್ರಹ ಇರಲಿ. ಈ ಭಾಗಗಳಲ್ಲಿ ಉತ್ತಮ ಮಳೆ ಬಂದು ಬೆಳೆಯು ಚೆನ್ನಾಗಿ ಫಲಿಸಲಿ ಎಂದು ಆಶಿಸಿದರು.
ದೂರದೂರಿನಿಂದ ಆಗಮಿಸಿದ್ದ ಭಕ್ತರು ದೀಪಕ್ಕೆ ಎಣ್ಣೆ, ಬತ್ತಿ ಹಾಕಿ ದೀಪ ಬೆಳಗಿಸುವ ಮೂಲಕ ಧನ್ಯತೆ ವ್ಯಕ್ತಪಡಿಸಿದರು. ಇಷ್ಟಾರ್ಥ ಸಿದ್ಧಿಗಾಗಿ ದೇವರ ಸನ್ನಿಧಿಯಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದಲ್ಲಿನ ಯಜಮಾನ ವೆಂಕಟೇಶ, ಪಣಗಾರ ಮುತ್ತುರಾಜು,ಪಟೇಲ್ ವೆಂಕಟಾಗಿಯಪ್ಪ, ಗಂಕರ್ ಗಿರೀಶ್ ಬಾಬು, ಸೇವಾ ಸಮಿತಿಯ ಅಧ್ಯಕ್ಷ ಜಿ. ಸಾಕ ಸಿದ್ದಯ್ಯ, ಕಾರ್ಯದರ್ಶಿ ಆರ್. ತಿಮ್ಮರಾಜು, ಗ್ರಾ.ಪಂ ಮಾಜಿ ಅಧ್ಯಕ್ಷೆ ಗೀತಾ ಮಂಜುನಾಥ್, ತಾಲ್ಲೂಕಿನ ಯೂತ್ ಜೆಡಿಎಸ್ ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಗ್ರಾಮದ ಮುಖಂಡರು, ಸೇವಾ ಸಮಿತಿ ಸದಸ್ಯರು ಮತ್ತು ಅಪಾರ ಭಕ್ತಾದಿಗಳು ಇದ್ದರು.
– ಶ್ರೀನಿವಾಸ್, ಕೊರಟಗೆರೆ.

[…] […]