ಕೊರಟಗೆರೆ :- ಕೇಂದ್ರ ಸರ್ಕಾರ ಮುಂಬರುವ ಅಧಿವೇಶನದಲ್ಲಿ ಜಾರಿಗೆ ತರಲು ಮುಂದಾಗಿರುವ ವಿದ್ಯುತ್ ಸುಧಾರಣಾ ಕಾಯ್ದೆ–2026 ಮೂಲಕ ವಿದ್ಯುತ್ ಸರಬರಾಜು ಸಂಸ್ಥೆಗಳ ಖಾಸಗೀಕರಣಕ್ಕೆ ದಾರಿ ಮಾಡಿಕೊಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿ ಅಖಿಲ ಭಾರತ ವಿದ್ಯುತ್ ಇಂಜಿನಿಯರ್ಗಳು ಹಾಗೂ ನೌಕರರ ಒಕ್ಕೂಟದ ಕರೆ ಮೇರೆಗೆ ಬುಧವಾರ ರಾಷ್ಟ್ರಾದ್ಯಂತ ಒಂದು ದಿನದ ಮುಷ್ಕರಕ್ಕೆ ಕರೆ ನೀಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಬೆಸ್ಕಾಂ ಕೊರಟಗೆರೆ ಉಪವಿಭಾಗದ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಕಚೇರಿ ಆವರಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿ. ಪ್ರಸನ್ನ ಕುಮಾರ್ ಮಾತನಾಡಿ
ಖಾಸಗೀಕರಣದಿಂದಾಗಿ ಸಾಮಾನ್ಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ, ಗ್ರಾಮೀಣ ಪ್ರದೇಶಗಳಲ್ಲಿ ಸೇವಾ ಕೊರತೆ ಹಾಗೂ ನೌಕರರ ಉದ್ಯೋಗ ಭದ್ರತೆ ಕುಂಠಿತಗೊಳ್ಳುವ ಆತಂಕವಿದೆ ಎಂದು ಪ್ರತಿಭಟನೆಯಲ್ಲಿ ಮಾತನಾಡಿದರು.
ವಿದ್ಯುತ್ ವಿತರಣೆ ಮತ್ತು ಸರಬರಾಜು ಸಾರ್ವಜನಿಕ ಸೇವೆಯಾಗಿ ಉಳಿಯಬೇಕು ಎಂಬುದು ಒಕ್ಕೂಟದ ಸ್ಪಷ್ಟ ನಿಲುವು ಎಂದು ತಿಳಿಸಿದರು.
ತಾಲೂಕು ಬೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಹೆಚ್. ಕೃಷ್ಣಮೂರ್ತಿ, ಕಾರ್ಯದರ್ಶಿ ನಟರಾಜು ಕೆ.ವಿ ಸೇರಿದಂತೆ ಸದಸ್ಯರಾದ ವೇಣುಗೋಪಾಲ್, ರಾಜಣ್ಣ, ರಮೇಶ್ ಸೇರಿದಂತೆ ಈ ಸಂದರ್ಭದಲ್ಲಿ ವಿವಿಧ ಶಾಖೆಗಳ ಶಾಖಾಧಿಕಾರಿಗಳು ಸಿಬ್ಬಂದಿಗಳು ಹಾಜರಿದ್ದರು.
– ಶ್ರೀನಿವಾಸ್ ಕೊರಟಗೆರೆ.
