ಕೊರಟಗೆರೆ:- ಧಾರ್ಮಿಕ ಕ್ಷೇತ್ರಗಳಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆ ಹೆಚ್ಚುತ್ತಿದ್ದು, ಗುರುಗಳ ಆಶೀರ್ವಚನ ಪಡೆಯುವ ಮನೋಭಾವ ಸಮಾಜದಲ್ಲಿ ಬೆಳೆಯುತ್ತಿರುವುದು ಅತ್ಯಂತ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ. ಹನುಮಂತನಾಥ ಸ್ವಾಮೀಜಿ ಅವರು ತಿಳಿಸಿದರು.
ತಾಲೂಕಿನ ಎಲೆರಾಂಪುರದಲ್ಲಿರುವ ಕುಂಚಿಟಿಗ ಮಹಾ ಸಂಸ್ಥಾನ ಮಠದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ದೇವರ ದರ್ಶನ ಪಡೆದು, ನಂತರ ನಡೆದ ಶ್ರೀಗಳ ದರ್ಶನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಎಲೇರಾಂಪುರ ಮಹಾ ಸಂಸ್ಥಾನ ಮಠವು ರಾಜ್ಯ ಮಾತ್ರವಲ್ಲದೆ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಿಂದ ಕೂಡ ಭಕ್ತರನ್ನು ಆಕರ್ಷಿಸುತ್ತಿದ್ದು, ಪ್ರತಿವರ್ಷ ಕುಂಚಿಟಿಗ ಸಮಾಜದ ಸಾವಿರಾರು ಭಕ್ತರು ಮಠಕ್ಕೆ ಆಗಮಿಸಿ ದರ್ಶನ ಪಡೆಯುತ್ತಿರುವುದು ಸಂತಸದ ವಿಷಯ ಎಂದರು.
ಮಠವನ್ನು “ಕುಂಚಿಟಿಗರ ಕಾಶಿ”ಯನ್ನಾಗಿ ರೂಪಿಸಬೇಕು ಎಂಬುದು ಭಕ್ತರ ಬಹುಕಾಲದ ಆಶಯವಾಗಿದ್ದು, ಎಲ್ಲ ಭಕ್ತರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಸಮುದಾಯದ 48 ಕುಲಗಳ ದೇವರುಗಳನ್ನು ಮಠದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಶ್ರೀಗಳು ಈ ಸಂದರ್ಭದಲ್ಲಿ ಘೋಷಿಸಿದರು.
ಕುಂಚಿಟಿಗ ಮಹಾ ಸಂಸ್ಥಾನ ಮಠವು ಸರ್ವಧರ್ಮ ಹಾಗೂ ಸರ್ವಸಮುದಾಯಗಳ ಪ್ರತೀಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಧಾರ್ಮಿಕ ಕಾರ್ಯಗಳಿಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಈ ಎಲ್ಲಾ ಕಾರ್ಯಗಳಿಗೆ ನಿರಂತರವಾಗಿ ಸಹಕಾರ ನೀಡುತ್ತಿರುವ ಭಕ್ತರನ್ನು ಶ್ರೀಗಳು ಕೃತಜ್ಞತೆಯಿಂದ ಸ್ಮರಿಸಿದರು.
ಈ ಸಂದರ್ಭದಲ್ಲಿ ತಮಿಳುನಾಡಿನ ಮುಖಂಡರಾದ ಅಳಗೇಶನ್, ರಂಗಸ್ವಾಮಿ, ಪಳಿನಿಸ್ವಾಮಿ, ಪುಷ್ಪವತಿ, ನಳಿನಿ, ಶಿವದಾಸ್ ಸೇರಿದಂತೆ 300ಕ್ಕೂ ಅಧಿಕ ಭಕ್ತರು ಶ್ರೀಗಳ ಆಶೀರ್ವಾದ ಪಡೆದರು.
– ಶ್ರೀನಿವಾಸ್ ಕೊರಟಗೆರೆ.
