ಕೊರಟಗೆರೆ:- ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಒಗ್ಗೂಡಿಸುವ ಶಕ್ತಿಕೇಂದ್ರಗಳಾಗಿದ್ದು, ಜನಮನದಲ್ಲಿ ಏಕತೆ, ಶಾಂತಿ ಹಾಗೂ ಸತ್ಸಂಸ್ಕಾರಗಳನ್ನು ಬೆಳೆಸುತ್ತವೆ ಎಂದು ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಎಂಜಿ ಪ್ಯಾಲೇಸ್ ಆವರಣದಲ್ಲಿ ಆರ್ಯವೈಶ್ಯ ಮಂಡಳಿ, ಕನ್ನಿಕಾ ವಿದ್ಯಾಪೀಠ ಸೇರಿದಂತೆ ಹಲವು ಅಂಗ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಭವ್ಯವಾಗಿ ಹಮ್ಮಿಕೊಂಡಿದ್ದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಸಾರ್ವಜನಿಕವಾಗಿ ಇಂತಹ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಸಮಾಜ ಜಾಗೃತಗೊಳ್ಳುತ್ತದೆ. ಅದರಲ್ಲೂ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವು ವೈಕುಂಠವನ್ನೇ ಭೂಮಿಗೆ ಇಳಿಸಿದಂತೆ ಭಾಸವಾಗುತ್ತಿದೆ ಎಂದು ಭಕ್ತಿಭಾವದಿಂದ ಹೇಳಿದರು.
ಹನುಮಂತಪುರದ ನವಗ್ರಹ ಲಕ್ಷ್ಮೀಶ್ವರಿ ಮಠದ ಪೀಠಾಧ್ಯಕ್ಷ ಡಾ.ನಾಗೇಂದ್ರ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜವು ಯಾವುದೇ ಜಾತಿ–ಪಂಥಗಳ ಭೇದವಿಲ್ಲದೆ ಒಂದಾಗಿ ನಿಲ್ಲಬೇಕಿದೆ.ನಾವೆಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ಜಾತ್ಯಾತೀತ ಮನೋಭಾವದಿಂದ ಬದುಕುವ ಸಂಸ್ಕಾರ ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನು ಓದಿ: ಕೊರಟಗೆರೆ: ಅಂಗವಿಕಲತೆಯನ್ನು ತಡೆಗಟ್ಟಲು ಐದು ವರ್ಷದ ಒಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ- ಟಿಎಚ್ಒ ವಿಜಯ್ಕುಮಾರ್
ಮುಖಂಡ ಎಂ.ಜಿ. ಬದ್ರಿ ಪ್ರಸಾದ್ ಮಾತನಾಡಿ, ಪಟ್ಟಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಷ್ಟು ಭವ್ಯ ಹಾಗೂ ವಿಶಾಲ ಪ್ರಮಾಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಬಹು ದೊಡ್ಡ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಎಲ್ಲಾ ಆರ್ಯವೈಶ್ಯ ಅಂಗ ಸಂಸ್ಥೆಗಳು ಒಗ್ಗಟ್ಟಾಗಿ ಕಾರ್ಯನಿರ್ವಹಿಸಲಿವೆ ಪಟ್ಟಣದ ಇತಿಹಾಸದಲ್ಲಿ ಸುವರ್ಣ ಅಧ್ಯಾಯ ಎಂದು ಹೇಳಿದರು.
ತಿರುಪತಿ ಮಾದರಿಯ ಶಾಸ್ತ್ರೋಕ್ತ ಕಲ್ಯಾಣ ಪ್ರಥಮ ಬಾರಿಗೆ ಸಾರ್ವಜನಿಕವಾಗಿ ಆಯೋಜಿಸಲಾದ ಈ ಶ್ರೀನಿವಾಸ ಕಲ್ಯಾಣೋತ್ಸವವು ತಿರುಪತಿಯಿಂದ ಆಗಮಿಸಿದ ವೇದ ಆಗಮಿಕರು ಮತ್ತು ಬೆಂಗಳೂರಿನ ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ, ತಿರುಪತಿಯಲ್ಲಿ ನಡೆಯುವಂತೆಯೇ ಸಂಪೂರ್ಣ ಶಾಸ್ತ್ರೋಕ್ತ ವಿಧಾನದಲ್ಲಿ ವೈಭವಯುತವಾಗಿ ನೆರವೇರಲಿದೆ.
ಜಾತಿ–ಮತ–ಪಂಥಗಳ ಭೇದವಿಲ್ಲದೆ ಸಾರ್ವಜನಿಕವಾಗಿ ನಡೆಯುತ್ತಿರುವ ಈ ಅಪರೂಪದ ಧಾರ್ಮಿಕ ಮಹೋತ್ಸವದಲ್ಲಿ ಪಟ್ಟಣ ಮತ್ತು ಸುತ್ತಮುತ್ತಲ ಭಕ್ತರು ತಮ್ಮ ಕುಟುಂಬ ಸಮೇತರಾಗಿ ಭಾಗವಹಿಸಿ ಕಲ್ಯಾಣೋತ್ಸವದ ದಿವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಕೃಷ್ಣಯ್ಯ ಶಟ್ಟಿ ಕನ್ನಿಕಾ ವಿದ್ಯಾಪೀಠ ಅಧ್ಯಕ್ಷ ಎಂ.ಜಿ ಸುಧೀರ್,ವಾಸವಿ ಮಾತೃ ಮಂಡಳಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ, ವಾಸವಿ ಯುವಜನ ಸಂಘದ ಅಧ್ಯಕ್ಷ ದರ್ಶನ್, ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ವಿದ್ಯಾಪ್ರಸಾದ್ ಸೇರಿದಂತೆ ಇತರರು ಇದ್ದರು.
– ಶ್ರೀನಿವಾಸ್, ಕೊರಟಗೆರೆ.
