ಕೆ.ಆರ್.ಪೇಟೆ,ಮಾ.11: ತಾಲೂಕು ರೈತ ಸಂಘದ ವತಿಯಿಂದ ಕೆಆರ್ ಪೇಟೆ ತಾಲೂಕಿನ ಮೂಲಕ ಹಾದು ಹೋಗಿರುವ ಹೇಮಾವತಿ ಎಡದಂಡೆಯ ಸಾಹುಕಾರ್ ಚನ್ನಯ್ಯ ನಾಲೆಯ ಆಧುನಿಕರಣ ಕಾಮಗಾರಿಯಲ್ಲಿ ಸುಮಾರು 500 ಕೋಟಿಗೆ ಹೆಚ್ಚು ಅವ್ಯವಹಾರ ನಡೆದಿದೆ. ಅದರೂ ತನಿಖಾಧಿಕಾರಿ ನೀರಾವರಿ ತಜ್ಞ ಎನ್ನಲಾದ ಎಂ.ಕೆ.ವೆಂಕಟರಾಮ್ ಎಂಬುವರು ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸರಕಾರಕ್ಕೆ ತನಿಖಾ ವರದಿ ನೀಡಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎಂದು ಆರೋಪಿಸಿ ನೂರಾರು ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಬೈಕ್ ರ್ಯಾಲಿ ಮೂಲಕ ಜನ ಜಾಗೃತಿ ಮೂಡಿಸಿದರು.
ಮಂಡ್ಯ ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷರು ಹಾಗೂ ರೈತ ಸಂಘದ ಹಿರಿಯ ನಾಯಕರಾದ ಮುದುಗೆರೆ ರಾಜೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕಾರ್ಯದರ್ಶಿ ಬೂಕನಕೆರೆ ನಾಗರಾಜು, ಕರೋಟಿ ತಮ್ಮಯ್ಯ, ಸಾಮಾಜಿಕ ಕಾರ್ಯಕರ್ತ ಜಯಣ್ಣ ಸೇರಿದಂತೆ ಹಲವಾರು ರೈತ ಮುಖಂಡರ ನೇತೃತ್ವದಲ್ಲಿ ಕೆ ಆರ್ ಪೇಟೆ ಪಟ್ಟಣದ ಪ್ರವಾಸಿ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿ ನಂತರ ಹೇಮಾವತಿ ಕಚೇರಿಯ ಎದುರು ಧರಣಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ರೈತ ನಾಯಕ ಮುದುಗೆರೆ ರಾಜೇಗೌಡ ಅವರು ಹೇಮಾವತಿ ನಾಲೆಯ ಆಧುನೀಕರಣ ಕಾಮಗಾರಿಗೆ ಸುಮಾರು 1000ಕೋಟಿ ರೂಪಾಯಿಗಳು 2017ರಲ್ಲಿ ಬಿಡುಗಡೆಯಾಗಿತ್ತು. ಆಧುನೀಕರಣ ಹೆಸರಿನಲ್ಲಿ ಕಾಮಗಾರಿಯನ್ನೇ ನಡೆಸದೆ ಅಧಿಕಾರಿಗಳು, ಗುತ್ತಿಗೆದಾರರು ಪರಸ್ಪರ ಶಾಮೀಲಾಗಿ ಸುಮಾರು 500 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆಸಲಾಗಿದೆ ರಕ್ಷಣಾ ಕಲ್ಲುಗಳು, ಗಡಿ ಕಲ್ಲುಗಳನ್ನು ಅಳವಡಿಸದೇ ಭಾರೀ ಭ್ರಷ್ಟಾಚಾರ ನಡೆಸಲಾಗಿದೆ. ಈ ಬಗ್ಗೆ ದಾಖಲೆ ಸಮೇತ ಸುಮಾರು 500ಪುಟಗಳ ದೂರನ್ನು ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ ಹಾಗಾಗಿ ಈ ಬೈಕ್ ರ್ಯಾಲಿ ಮೂಲಕ ಅವ್ಯವಹಾರ ನಡೆಸಿರುವ ಹೇಮಾವತಿ ನಾಲೆಗಳ ಮೂಲಕ ಜಾಥಾ ನಡೆಸಿ ನಾಗಮಂಗಲ ಪಟ್ಟಣದಲ್ಲಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ನಾಯಕ ಮುದಗೆರೆ ರಾಜೇಗೌಡ ತಿಳಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಲಕ್ಷ್ಮಿಪುರ ಜಗದೀಶ್, ಮಿಲ್ ರಾಜಣ್ಣ,ಮರುವನಹಳ್ಳಿ ಶಂಕರ್, ಕರೋಟಿ ತಮ್ಮಯ್ಯ, ಪಿ.ಬಿ.ಮಂಚನಹಳ್ಳಿ ನಾಗೇಗೌಡ, ಮಾಕವಳ್ಳಿ ರವಿ, ಯೋಗೇಶ್, ಹೊನ್ನೇಗೌಡ, ಹಿರೀಕಳಲೆ ಬಸವರಾಜು, ಚೌಡೇನಹಳ್ಳಿ ಶಂಕರ್, ಮಹಿಳಾ ಘಟಕದ ಅಧ್ಯಕ್ಷೆ ಲತಾ ಕೇಶವ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
– ಶ್ರೀನಿವಾಸ್ ಆರ್.
