ಕೆ.ಆರ್.ಪೇಟೆ: ಎಲ್ಲಾ ಶಿಕ್ಷಕರು ಅರ್ಹತಾ ಪರೀಕ್ಷೆ ಎದುರಿಸಿ ಉತ್ತೀರ್ಣ ಹೊಂದಿ ಸೇವೆಯಲ್ಲಿ ಮುಂದುವರೆಯಬೇಕು ಎಂದು ತೀರ್ಪು ನೀಡಿ ಆದೇಶ ನೀಡಿರುವ ಸುಪ್ರಿಂ ಕೋರ್ಟಿನ ತೀರ್ಪು ವಿರೋಧಿಸಿ ಇದೇ ಜ.8ರಂದು ದೇಶಾದ್ಯಂತ ಶಿಕ್ಷಕರ ಫೆಡರೇಷನ್ ವತಿಯಿಂದ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ ಮಾಡಲು ಕರೆನೀಡಿದ್ದು, ಈ ಕರೆ ಬೆಂಬಲಿಸಿ ತಾಲ್ಲೂಕಿನ ಎಲ್ಲಾ ಶಿಕ್ಷಕರು ಜ.08ರಂದು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವಂತೆ ತಾಲ್ಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಎಲ್ಲಾ ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಷ್ಟ್ರದ ಸೇವಾನಿರತ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯನ್ನು ಕಡ್ಡಾಯಗೊಳಿಸಿರುವ ತೀರ್ಪನ್ನು ಮರು ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿ ದೇಶಾದ್ಯಂತ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಗಾಗಿ ತಾಲ್ಲೂಕಿನ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಕಪ್ಪುಪಟ್ಟಿ ಧರಸಿ ಕರ್ತವ್ಯ ನಿರ್ವಹಣೆ ಚಳುವಳಿಯಲ್ಲಿ ಭಾಗವಹಿಸಬೇಕು ಎಂದು ಹೆಚ್.ಆರ್.ಪೂರ್ಣಚಂದ್ರತೇಜಸ್ವಿ ಮನವಿ ಮಾಡಿದ್ದಾರೆ.ಗೌರವಾನ್ವಿತ ಸುಪ್ರೀಂ ಕೋರ್ಟಿನ ತೀರ್ಪಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸೂಕ್ತ ಕಾನೂನು ತಿದ್ದುಪಡಿಯನ್ನು ತಂದು ಸೇವಾನಿರತ ಶಿಕ್ಷಕರಿಗೆ ನ್ಯಾಯ ಒದಗಿಸಬೇಕೆಂದು ಕೇಂದ್ರ ಸರ್ಕಾರದ ಗಮನವನ್ನು ಸೆಳೆಯಲು ಮತ್ತು ಕೇಂದ್ರ ಸಮಾನ ವೇತನವನ್ನು ರಾಜ್ಯದ ಶಿಕ್ಷಕರಿಗೂ ನೀಡುವಂತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಹಾಗೂ ಇನ್ನು ಕೆಲವು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಅವಶ್ಯಕತೆ ಇರುತ್ತದೆ.
ಇದನ್ನು ಓದಿ: ಕೆ.ಆರ್.ಪೇಟೆ : ಸಿದ್ದರಾಮಯ್ಯ ಅಧಿಕೃತ 7 ವರ್ಷ 240 ದಿನ ಮುಖ್ಯಮಂತ್ರಿ ಸೇವೆ ದಾಖಲೆ ವಿಜಯೋತ್ಸವದಲ್ಲಿ ಆಚರಣೆ
ಈ ಸಂಬಂಧ ಅಖಿಲ ಭಾರತ ಶಿಕ್ಷಕರ ಫೆಡರೇಶನ್ ನವದೆಹಲಿ ಯವರ ನಿರ್ದೇಶನದಂತೆ ನಮ್ಮ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು.. ಇವರ ಕರೆಯ ಮೇರೆಗೆ ಜ.08 ರಂದು ರಾಜ್ಯದ ಸಮಸ್ತ ಪ್ರಾಥಮಿಕ ಶಾಲಾ ಶಿಕ್ಷಕರು ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವಂತೆ ತಿಳಿಸಿರುತ್ತಾರೆ.
ಆದಕಾರಣ ತಾವುಗಳು ಈ ಸಂಬಂಧ ಅಗತ್ಯ ಸಿದ್ಧತೆ ಮಾಡಿಕೊಂಡು ಸದರಿ ದಿನದಂದು ತಮ್ಮ ತಮ್ಮ ಶಾಲೆಗಳಲ್ಲಿ ಎಲ್ಲಾ ಶಿಕ್ಷಕರು ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವಂತೆ ಅಗತ್ಯ ಕ್ರಮವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.
“ನಮಗೆ ನೀಡಬೇಕಾದ ಸೌಲಭ್ಯವನ್ನು ಪಡೆಯಲು ಇಡೀ ದೇಶಾದ್ಯಂತ ಈ ಅಭಿಯಾನ ನಡೆಯುತ್ತಿದೆ ನಾವು ಕೂಡ ಈ ಅಭಿಯಾನದಲ್ಲಿ ಭಾಗವಹಿಸಿ ರಾಜ್ಯ ಮತ್ತು ಕೇಂದ್ರ ಸರಕಾರದ ಗಮನ ಸೆಳೆಯೋಣ”
ಈಗಾಗಲೇ 15ರಿಂದ 30 ವರ್ಷಗಳಿಗೂ ಹೆಚ್ಚು ವರ್ಷಗಳ ಸೇವೆ ಸಲ್ಲಿಸಿದ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಿಕೊಡಬೇಕಾದ ಅಗತ್ಯವಿದೆ ಹಾಗಾಗಿ ತಾಲ್ಲೂಕಿನ ಎಲ್ಲಾ ಶಿಕ್ಷಕರು ಜ.8ರಂದು ತಾವು ಸೇವೆ ಸಲ್ಲಿಸುವ ಶಾಲೆಯಲ್ಲಿಯೇ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ದೇಶಾದ್ಯಂತ ನಡೆಯುತ್ತಿರುವ ಈ ಚಳುವಳಿಯನ್ನು ಯಶಸ್ವಿಗೊಳಿಸಬೇಕು ಎಂದು ಪೂರ್ಣಚಂದ್ರತೇಜಸ್ವಿ ಸಮಸ್ತ ಶಿಕ್ಷಕರಲ್ಲಿ ಮನವಿ ಮಾಡಿದ್ದಾರೆ.
– ಶ್ರೀನಿವಾಸ್ ಆರ್.
