ಬೆಂಗಳೂರು, ಮೇ 26: ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಳ ನೌಕರರ ಸಂಬಳದಲ್ಲಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣವನ್ನು ಪಿಎಫ್ಗಾಗಿ ಕಡಿತ ಮಾಡಲಾಗುತ್ತದೆ. ಆ ಹಣವನ್ನು ಪಿಎಫ್ ಟ್ರಸ್ಟ್ಗೆ ಪಾವತಿ ಮಾಡಬೇಕು. ಆದರೆ ಕಳೆದ ಒಂದು ವರ್ಷದಿಂದ ಪಿಎಫ್ ಟ್ರಸ್ಟ್ಗೆ ಹಣ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಾರಿಗೆ ನೌಕರರು ಇದೀಗ ಕಷ್ಟದ ಸಮಯದಲ್ಲಿ ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸಿದರೂ ಹಣ ಸಿಗದಂತಾಗಿದೆ. ನೌಕರರ ಪಿಎಫ್ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆರೋಪಿಸಿದ್ದಾರೆ.
ಪಿಎಫ್ ಟ್ರಸ್ಟ್ ಗೆ ಪಾವತಿಸಬೇಕಿದ್ದ 3110 ಕೋಟಿ ರುಪಾಯಿ ಹಣವನ್ನು ನಾಲ್ಕು ಸಾರಿಗೆ ನಿಗಮಗಳು ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ, ನಾಲ್ಕು ಸಾರಿಗೆ ನಿಗಮಗಳ ಎಂಡಿಗಳಿಗೆ ಪಿಎಫ್ ಟ್ರಸ್ಟ್ಗೆ ಪಾವತಿ ಮಾಡಬೇಕಿರುವ ಸಾವಿರಾರು ಕೋಟಿ ರುಪಾಯಿ ಹಣವನ್ನು ಪಾವತಿ ಮಾಡಿ ಎಂದು ಸಾರಿಗೆ ನೌಕರರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಒಂದು ವರ್ಷದಿಂದ ಪಿಎಫ್ ಟ್ರಸ್ಟ್ ನೌಕರರ ಹಣವನ್ನು ಪಾವತಿ ಮಾಡಿಲ್ಲ. ಇದರಿಂದ ಪಿಎಫ್ ಟ್ರಸ್ಟ್ ನಾಲ್ಕು ನಿಗಮಗಳಿಗೆ ಪಾವತಿ ಮಾಡಬೇಕಿರುವ 3110 ಕೋಟಿ ರೂಪಾಯಿಗೆ ಶೇ 37 ರ ವರೆಗೆ ಬಡ್ಡಿ ವಿಧಿಸಲಿದೆ ಎನ್ನಲಾಗಿದೆ.
