ಮಂಗಳೂರು ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕರ್ನಾಟಕ ರಾಜ್ಯ ಪೊಲೀಸ್ ಇತಿಹಾಸದಲ್ಲೇ ಅತಿ ಹೆಚ್ಚು ಎಂಡಿಎಂಎ (ಮೆಥಿಲೀನ್ ಡಿಯಾಕ್ಸಿ ಮೆಥಾಂಫೆಟಮೈನ್) ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಂತಾರಾಷ್ಟ್ರೀಯ ಡ್ರಗ್ ಜಾಲದ ಇಬ್ಬರು ದಕ್ಷಿಣ ಆಫ್ರಿಕಾದ ಮಹಿಳಾ ಪ್ರಜೆಗಳನ್ನು ಬಂಧಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯು ಮಂಗಳೂರು, ಕರ್ನಾಟಕದ ಇತರ ಭಾಗಗಳು ಮತ್ತು ನೆರೆಯ ರಾಜ್ಯಗಳಿಗೆ ಎಂಡಿಎಂಎ ಪೂರೈಸುವ ಜಾಲವನ್ನು ಗುರಿಯಾಗಿಸಿಕೊಂಡಿತ್ತು. ಬಂಧಿತ ದಕ್ಷಿಣ ಆಫ್ರಿಕಾದ ಮಹಿಳೆಯರ ಬಳಿ ಅಂದಾಜು 75 ಕೋಟಿ ರೂಪಾಯಿ ಮೌಲ್ಯದ 37.87 ಕೆಜಿ ಎಂಡಿಎಂಎ ಪತ್ತೆಯಾಗಿದೆ.
2024 ರ ಜನವರಿಯಲ್ಲಿ ಪಂಪ್ವೆಲ್ ಬಳಿಯ ಲಾಡ್ಜ್ನಲ್ಲಿ 15 ಗ್ರಾಂ ಎಂಡಿಎಂಎ ಮಾರಾಟ ಮಾಡುತ್ತಿದ್ದ ಹೈದರ್ @ ಹೈದರ್ ಅಲಿ ಎಂಬಾತನನ್ನು ಬಂಧಿಸಿದಾಗ ತನಿಖೆ ಆರಂಭವಾಯಿತು. ಈ ಬಂಧನದ ನಂತರ, ಬೆಂಗಳೂರಿನಲ್ಲಿ ನೆಲೆಸಿದ್ದ ನೈಜೀರಿಯಾದ ಪ್ರಜೆ ಪೀಟರ್ ಇಕೆಡಿ ಬೆಲೋನ್ವು ಎಂಬಾತನು ಹೈದರ್ಗೆ ಡ್ರಗ್ಸ್ ಪೂರೈಸುತ್ತಿದ್ದಾನೆ ಎಂದು ತಿಳಿದುಬಂದಿತು. ನಂತರ ಬೆಲೋನ್ವುನನ್ನು ಬಂಧಿಸಲಾಯಿತು ಮತ್ತು ಆತನಿಂದ 6 ಕೋಟಿ ರೂಪಾಯಿ ಮೌಲ್ಯದ 6.248 ಕೆಜಿ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು
ಬೆಲೋನ್ವುಗೆ ಡ್ರಗ್ಸ್ ಪೂರೈಸುತ್ತಿದ್ದ ಕಿಂಗ್ ಪಿನ್ ಡ್ರಗ್ ಪೆಡ್ಲರ್ಗಳನ್ನು ಪತ್ತೆಹಚ್ಚಲು ನಾವು ಆರು ತಿಂಗಳ ಕಾಲ ತನಿಖೆ ನಡೆಸಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ವಿದೇಶಿ ಮಹಿಳೆಯರು ದೆಹಲಿಯಿಂದ ಬೆಂಗಳೂರು ಮತ್ತು ದೇಶದ ಇತರ ಭಾಗಗಳಿಗೆ ವಿಮಾನದ ಮೂಲಕ ಹೆಚ್ಚಿನ ಪ್ರಮಾಣದ ಎಂಡಿಎಂಎ ಸಾಗಿಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭ್ಯವಾಯಿತು.
ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಸಿಸಿಬಿ ತಂಡವು ಮಾರ್ಚ್ 14, 2024 ರಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಶಂಕಿತರನ್ನು ತಡೆದು ತಪಾಸಣೆ ನಡೆಸಿದ ವೇಳೆ. ಈ ಭಾರಿ ಪ್ರಮಾಣದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
