ಚೆನ್ನೈ: ವಿಶ್ವದ ಶ್ರೀಮಂತ ಫ್ರಾಂಚೈಸಿ ಟಿ20 ಲೀಗ್ನ ಬಹುನಿರೀಕ್ಷಿತ ಹಾಗೂ ದಕ್ಷಿಣ ಭಾರತದ ಡರ್ಬಿ ಎಂದೇ ಖ್ಯಾತಿ ಹೊಂದಿರುವ ಪಂದ್ಯಕ್ಕೆ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜುಗೊಂಡಿದೆ. ಆತಿಥೇಯ ಚೆನ್ನೈ ಸೂಪರ್ಕಿಂಗ್ಸ್ ಹಾಗೂ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್ 18ನೇ ಆವೃತ್ತಿಯ ಪ್ರತಿಷ್ಠೆಯ ಕದನದಲ್ಲಿ ಶುಕ್ರವಾರ (ರಾತ್ರಿ 7.30ಕ್ಕೆ) ಮುಖಾಮುಖಿ ಆಗಲಿವೆ.
18 ವರ್ಷಗಳ ಪ್ರಶಸ್ತಿ ಬರದ ಜತೆಗೆ ಚೆಪಾಕ್ ಅಂಗಣದಲ್ಲಿ 17 ವರ್ಷಗಳ ಗೆಲುವಿನ ಕೊರತೆಯನ್ನು ನೀಗಿಸುವ ಸವಾಲು ರಜತ್ ಪಾಟೀದಾರ್ ಬಳಗದ ಮುಂದಿದೆ.
ಹಾಲಿ ಚಾಂಪಿಯನ್ ಕೆಕೆಆರ್ ಎದುರು ಏಕಪಕ್ಷೀಯವಾಗಿ ಗೆಲುವು ಒಲಿಸಿಕೊಂಡು ಶುಭಾರಂಭ ಕಂಡಿರುವ ಆರ್ಸಿಬಿ ತನ್ನ ತವರು ಪಂದ್ಯಕ್ಕೂ ಮುನ್ನ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ನಿರೀಕ್ಷೆ ಇದೆ. ಕಳೆದ ಆವೃತ್ತಿಯಲ್ಲಿ ಪ್ಲೇಆ ರೇಸ್ನಿಂದ ಹೊರನೂಕಿದ ಸೇಡಿಗೆ ತವರಿನಲ್ಲಿ ಮುಯ್ಯಿ ತೀರಿಸುವ ಹಂಬಲ ಸಿಎಸ್ಕೆ ತಂಡದ್ದಾಗಿದೆ. ಋತುರಾಜ್ ಗಾಯಕ್ವಾಡ್ ಬಳಗ ತನ್ನ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿರುವ ಉತ್ಸಾಹದಲ್ಲಿದೆ.
ಸಾಮಾಜಿಕ ಜಾಲತಾಣದಲ್ಲಿ ಉಭಯ ತಂಡಗಳ ಕ್ರೀಡಾಭಿಮಾನಿಗಳ ಜತೆಗೆ ್ರಾಂಚೈಸಿಗಳು ಹಂಚಿಕೊಂಡಿರುವ ಪೋಸ್ಟ್ಗಳು ಬೇಸಿಗೆಯಲ್ಲಿ ಪಂದ್ಯದ ತಾಪಮಾನ ಮತ್ತಷ್ಟು ಏರಿಸಿದೆ. ಹೈವೋಲ್ಟೇಜ್ ಪಂದ್ಯದಲ್ಲಿ ನೂತನ ನಾಯಕ ರಜತ್ ಪಾಟೀದಾರ್-ಋತುರಾಜ್ ಗಾಯಕ್ವಾಡ್ ಕಾರ್ಯತಂತ್ರಗಳ ಜತೆಗೆ ತಂಡದ ಮಾಜಿ ನಾಯಕರಾದ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಡುವಿನ ಮುಖಾಮುಖಿ ಯಿಂದಾಗಿ ಪಂದ್ಯವೂ ಕುತೂಹಲ ಮೂಡಿಸಿದೆ. ಇದು ಆರ್ಸಿಬಿ ಬ್ಯಾಟರ್ಗಳು ಮತ್ತು ಸಿಎಸ್ಕೆ ಸ್ಪಿನ್ನರ್ಗಳ ನಡುವಿನ ಕಾದಾಟ ಎನಿಸಿದೆ.
17 ವರ್ಷಗಳ ಕಾಯುವಿಕೆ ಅಂತ್ಯ?
ಮಧ್ಯಪ್ರದೇಶದ ರಜತ್ ಪಾಟೀದಾರ್ ಸಾರಥ್ಯದಲ್ಲಿ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿರುವ ಆರ್ಸಿಬಿ 18 ವರ್ಷಗಳ ಪ್ರಶಸ್ತಿ ಬರ ನೀಗಿಸುವಲ್ಲಿ ದಿಟ್ಟ ಆರಂಭ ಕಂಡಿದೆ. ಆದರೆ ಚೆಪಾಕ್ ಅಂಗಣದಲ್ಲಿ ಆರ್ಸಿಬಿ ದಾಖಲೆ ಮಾನಸಿಕವಾಗಿ ಕೊಂಚ ಹಿನ್ನಡೆ ಎನಿಸಿದೆ. ಆರ್ಸಿಬಿ 2008ರ ಉದ್ಘಾಟನಾ ಆವೃತ್ತಿಯ ಬಳಿಕ ಸಿಎಸ್ಕೆ ಎದುರು ಚೆನ್ನೈನಲ್ಲಿ ಗೆಲುವು ಒಲಿಸಿಕೊಂಡಿಲ್ಲ. ಆದರೆ ಆಗಿನ ಆರ್ಸಿಬಿ ತಂಡದಲ್ಲಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಈಗಿನ ತಂಡದಲ್ಲೂ ಇದ್ದು, ಸಿಎಸ್ಕೆಗೆ ಧೋನಿ, ಆರ್.ಅಶ್ವಿನ್ ಬಲವಿದೆ. ಇದುವರೆಗೆ ಚೆಪಾಕ್ನಲ್ಲಿ ಆಡಿರುವ 9 ಪಂದ್ಯಗಳಲ್ಲಿ ಐದು ಬಾರಿಯ ಚಾಂಪಿಯನ್ ಸಿಎಸ್ಕೆ 8ರಲ್ಲಿ ಗೆಲುವು ಸಾಧಿಸಿದ್ದು, ಆರ್ಸಿಬಿ ಒಂದರಲ್ಲಿ ಮಾತ್ರ ಜಯ ಕಂಡಿದೆ. ಸಿಎಸ್ಕೆ ತಂಡವನ್ನು ಅದರ ಭದ್ರಕೋಟೆ ಎನಿಸಿರುವ ಚೆಪಾಕ್ನಲ್ಲಿ ಪರಾಭವಗೊಳಿಸುವ ಮೂಲಕ 17 ವರ್ಷಗಳ ಸುದೀರ್ಘ ಕಾಯುವಿಕೆ ಕೊನೆಗೊಳಿಸುವ ಸವಾಲು ರಜತ್ ಪಡೆಯ ಮುಂದಿದೆ.
ಸ್ಪಿನ್ ವರ್ಸಸ್ ಬ್ಯಾಟಿಂಗ್
ಆರ್ಸಿಬಿ ಬಲಿಷ್ಠ ಬ್ಯಾಟಿಂಗ್ ವಿಭಾಗ ಹಾಗೂ ಸಿಎಸ್ಕೆ ಸ್ಪಿನ್ನರ್ಗಳ ನಡುವಿನ ಪೈಪೋಟಿಯಿಂದ ಈ ಪಂದ್ಯ ಇನ್ನಷ್ಟು ಮಹತ್ವ ಪಡೆದುಕೊಂಡಿದೆ. ಚೆಪಾಕ್ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ಅನುಕೂಲತೆ ಒದಗಿಸಲಿದೆ. ಸಿಎಸ್ಕೆ ಅನುಭವಿ ಹಾಗೂ ಯುವ ಸ್ಪಿನ್ನರ್ಗಳಿಂದ ಕೂಡಿದ್ದು, ಆಲ್ರೌಂಡರ್ ರವೀಂದ್ರ ಜಡೇಜಾ, ಆ ಸ್ಪಿನ್ನರ್ ಆರ್.ಅಶ್ವಿನ್, ಮಣಿಕಟ್ಟಿನ ಸ್ಪಿನ್ನರ್ ನೂರ್ ಅಹ್ಮದ್ ಪ್ರಬಲ ಅಸ. ಜತೆಗೆ ಬೆಂಗಳೂರು ಮೂಲದ ರಚಿನ್ ರವೀಂದ್ರ ಹೆಚ್ಚುವರಿ ಆಯ್ಕೆ ಒದಗಿಸಲಿದ್ದಾರೆ. ಅಂದರೆ ಆರ್ಸಿಬಿ ಬ್ಯಾಟರ್ಗಳು ಕನಿಷ್ಠ 12 ಅಥವಾ ಅದಕ್ಕಿಂತ ಹೆಚ್ಚು ಓವರ್ ಸ್ಪಿನ್ ಎದುರಿಸಲಿದ್ದಾರೆ. ಆರ್ಸಿಬಿಯಲ್ಲಿ ಅನುಭವಿ ಸ್ಪಿನ್ನರ್ಗಳ ಕೊರತೆಯೂ ನಡುವೆ ಕೃನಾಲ್ ಪಾಂಡ್ಯ, ಸುಯಶ್ ಶರ್ಮ ಸ್ಪೆಲ್ ನಿರ್ಣಾಯಕ ಪಾತ್ರವಹಿಸಲಿದೆ.
ಸೂಪರ್ಕಿಂಗ್ಸ್ ಎದುರು ಕೊಹ್ಲಿ ಪ್ರಾಬಲ್ಯ!
ಸಿಎಸ್ಕೆ ಎದುರು ಭರ್ಜರಿ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ, ಹಾಲಿ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಉತ್ತಮ ಲಯದಲ್ಲಿದ್ದಾರೆ. ಹೀಗಾಗಿ ಸಿಎಸ್ಕೆ ಸ್ಪಿನ್ನರ್ಗಳ ಎದುರು ಆರ್ಸಿಬಿ ತಂಡವನ್ನು ಸಮರ್ಥವಾಗಿ ಮುನ್ನಡೆಸುವುದರ ಜತೆಗೆ ದೊಡ್ಡ ಇನಿಂಗ್ಸ್ ಆಡುವ ನಿರೀಕ್ಷೆ ಇದೆ. ಸಿಎಸ್ಕೆ ಎದುರು ಆಡಿರುವ 32 ಇನಿಂಗ್ಸ್ಗಳಲ್ಲಿ ಕೊಹ್ಲಿ 1,053 ರನ್ ಕಲೆಹಾಕಿದ್ದು, 9 ಅರ್ಧಶತಕ ಸಿಡಿಸಿದ್ದಾರೆ.
ಹಿಂದಿನ ಪಂದ್ಯದಲ್ಲಿ ಕೆಕೆಆರ್ ತಂಡದ ಸುನೀಲ್ ನಾರಾಯಣ್ ಹಾಗೂ ವರುಣ್ ಚಕ್ರವರ್ತಿ ಎದುರು ಕೊಹ್ಲಿ-ಸಾಲ್ಟ್ ಅಬ್ಬರದ ಬ್ಯಾಟಿಂಗ್ ಆರ್ಸಿಬಿ ತಂಡದ ಬಲ ಹೆಚ್ಚಿಸಿದೆ. ರಜತ್ ಪಾಟೀದಾರ್ ಹಾಗೂ ಇಂಗ್ಲೆಂಡ್ ಜೇಕಬ್ ಬೆಥೆಲ್ ಸಹ ಸ್ಪಿನ್ನರ್ಗಳ ಎದುರು ಉತ್ತಮ ದಾಖಲೆ ಹೊಂದಿದ್ದು, ಸಿಎಸ್ಕೆ ಬೌಲರ್ಗಳ ನಡುವಿನ ಮುಖಾಮುಖಿ ಕುತೂಹಲ ಎನಿಸಿದೆ.
ಕಳೆದ ಆವೃತ್ತಿಯಲ್ಲಿ ಆರ್ಸಿಬಿ ಪರಾಕ್ರಮ
ಸತತ ಆರು ಸೋಲಿನ ಬಳಿಕ ಅಮೋಘ ರೀತಿಯಲ್ಲಿ ಪುಟಿದೆದ್ದ ಆರ್ಸಿಬಿ ಸತತ ಆರು ಗೆಲುವು ದಾಖಲಿಸುವುದರೊಂದಿಗೆ ಐಪಿಎಲ್-17ರಲ್ಲಿ ಪ್ಲೇಆ ಹಂತಕ್ಕೇರಿತ್ತು. ಕಡೇ ಲೀಗ್ ಪಂದ್ಯದಲ್ಲಿ ಸಿಎಸ್ಕೆ ಎದುರು 27 ರನ್ಗಳ ಗೆಲುವು ದಾಖಲಿಸಿ, ರನ್ರೇಟ್ನಲ್ಲಿ ಹಾಲಿ ಚಾಂಪಿಯನ್ ಸಿಎಸ್ಕೆಯನ್ನು ಟೂರ್ನಿಯಿಂದ ಹೊರದಬ್ಬಿತು. ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 5 ವಿಕೆಟ್ಗೆ 218 ರನ್ ದಾಖಲಿಸಿದರೆ, ಇದಕ್ಕೆ ಪ್ರತಿಯಾಗಿ ಸಿಎಸ್ಕೆ ತಂಡ ಪ್ಲೇಆ ಹಂತಕ್ಕೇರಲು ಕನಿಷ್ಠ 201 ರನ್ ಗಳಿಸಬೇಕಾಗಿತ್ತು. ಆದರೆ ಸಿಎಸ್ಕೆ 7 ವಿಕೆಟ್ಗೆ 191 ರನ್ಗಳಿಸಲಷ್ಟೇ ಶಕ್ತಗೊಂಡಿತು.
