ಚಾಮರಾಜನಗರ:- ಕೆ ಶ್ರೀಧರ್ ವೃತ್ತಿಯಲ್ಲಿ ವಿಲೇಜ್ ಅಕೌಂಟೆಂಟ್ ಆಗಿದ್ದರೂ ಪ್ರೌವೃತ್ತಿಯಲ್ಲಿ ಸಾಹಿತಿಯಾಗಿರುವುದು ಬಹಳ ಸಂತೋಷದ ವಿಚಾರ. ಕಂದಾಯ ಇಲಾಖೆಯಲ್ಲಿ ಬಹಳಷ್ಟು ಒತ್ತಡವಿದ್ದರೂ ಈ ನಡುವೆ ಕೃತಿ ರಚಿನೆ ಮಾಡುವುದು ಸಲಭದ ಮಾತಲ್ಲ. ಬೇರೆ ಜಿಲ್ಲೆಯಿಂದ ಬಂದು ಚಾಮರಾಜನಗರದ ಮಣ್ಣಿನ ಸೋಗಡನ್ನ ಅರ್ಥಮಾಡಿಕೊಂಡು, ಇಲ್ಲಿಯ ಜನರ ಭಾಷೆಯ ವೈಭವವನ್ನ ಪ್ರಸ್ತುತ ಪಡಿಸುವುದಕ್ಕೆ ಬಹಳ ಸಮಯ ಬೇಕಾಗುತ್ತದೆ. ಎರಡು ಮಹಾಕಾವ್ಯಗಳನ್ನು ಕೊಟ್ಟಿರುವ ಜಿಲ್ಲೆಯ ಜನರ ಮನದಾಳ ಅರಿತು ಮನಸೋತಿರುವ ಶ್ರೀಧರ್ ಇನ್ನೂ ಹೆಚ್ಚಿನ ಸಾಹಿತ್ಯ ಕೃಷಿ ಮಾಡಲಿ ಎಂದು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಆಶಿಸಿದರು.
ನಗರದ ಡಾ.ರಾಜಕುಮಾರ್ ಕಲಾಮಂದಿರದಲ್ಲಿ ಈಶ್ವರಿ ಸೋಶಿಯಲ್ ಟ್ರಸ್ಟ್ (ರಿ) ಹಾಗೂ ಬೆಂಗಳೂರಿನ ಕಾವ್ಯಸ್ಪಂದನ ಪಬ್ಲಿಕೇಷನ್ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಡೆದ ದಿ ಬಿಗ್ ಚಂಪಕ ಇಂಗ್ಲಿಷ್ ಸಂಕಲನ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಇವರು ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಸಂಸ್ಕೃತಿ ಚಿಂತಕ ಮಹದೇವ ಶಂಕನಪುರ ಮಾತನಾಡಿ, ಒಬ್ಬ ಕವಿ, ಸಾಹಿತಿ,ಲೇಖಕರಿಗೆ ಸಾಹಿತ್ಯ ಕೃಷಿಮಾಡುವಾಗ ಗಡಿ ಸೀಮಿತದ ಅಡಚಣೆ ಇರಬಾರದು, ಇದನ್ನೆಲ್ಲ ಮೀರಿದರೆ ಮಾತ್ರ ಉತ್ತಮ ಸಾಹಿತ್ಯ ಕೃತಿ ಸೃಷ್ಠಿಗೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕವಿ, ಸಾಹಿತಿಗಳು ವರ್ತಮಾನಕ್ಕೆ ತಕ್ಕಹಾಗೆ ಅಪ್ಡೇಟ್ ಆಗಿ ಪರಿಸ್ಥಿತಿಗೆ ಹೊಂದಿಕೊಳ್ಳಬೇಕು. ಸ್ಥಳೀಯ, ಪ್ರಾದೇಶಿಕ ಅನ್ನುವ ಸಂಕುಚಿತತೆ ಬಿಟ್ಟು, ಭಾಷೆ, ರಾಜ್ಯ, ದೇಶದ ಗಡಿಯನ್ನು ದಾಟಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡ ತಮಿಳು ಭಾಷಾ ವಿಚಾರ ಮಾತನಾಡುತ್ತ ಸಮಾಜದಲ್ಲಿ ಹಲವಾರು ವ್ಯಸನಗಳಿಗೆ ಅಂಟಿಕೊಂಡಿದ್ದೇವೆ ಅದರಿಂದ ಮುಕ್ತಿಹೊಂದಬೇಕು, ಭಾಷೆ ಎಷ್ಟರ ಮಟ್ಟಿಗೆ ಬೆಳೆದಿದೆ ಎಂಬುದಷ್ಟೇ ಮುಖ್ಯ. ಮೊದಲು ನಂತರ ಯಾವುದು ಅನ್ನೋದು ಬರುವುದಿಲ್ಲ. ಕನ್ನಡಕ್ಕೆ ಎಂಟು ಜ್ಞಾನಪೀಠ, ಒಂದು ಬೂಕರ್ ಪ್ರಶಸ್ತಿ ಬಂದಿರೋದು ನಮ್ಮ ಸಾಂಗಿಕ ಗಟ್ಟಿತನಕ್ಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಮರ್ಶಕ ಹಾಗೂ ಸಾಹಿತಿ ಮಹೇಶ್ ಹರವೆ ಪುಸ್ತಕಗಳನ್ನ ಲೋಕಾರ್ಪಣೆ ಮಾಡಿ ಕೃತಿಯ ಬಗ್ಗೆ ಮಾತನಾಡಿದರು, ಅನುವಾದಕರು ಹಾಗೂ ಕವಯತ್ರಿ ಪದ್ಮಜಾ ಜೋಯ್ಸ್, ಸಾಹಿತಿ ಅನಿಲ್ ಕುಮಾರ್ ಹೋಸೂರು, ಪರಿಸರ ಪ್ರೇಮಿ ಸಿಎಂ ವೆಂಕಟೇಶ್ ಉಪಸ್ಥಿತರಿದ್ದರು.

ಜನಪದ ಗಾಯಕ ಪಿ ಮಹೇಶ್ ರಾಮಸಮುದ್ರ ಹಾಡಿದ ಮಂಟೇಸ್ವಾಮಿ ಜನಪದ ಗೀತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಜನಗಳ ಮನಸೆಳೆಯಿತು.
((ಕವಿಯ ಮಾತು))
ಚಾಮರಾಜನಗರ ಜಿಲ್ಲೆಗೆ ಕಾಲಿಟ್ಟಿದ್ದು ನನ್ನ ಪಣ್ಯ, ಇಲ್ಲಿನ ಮಹದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯ ಪರಂಪರೆಗೆ ಮನಸೋತಿದ್ದೇನೆ.. ಜಿಲ್ಲೆಯಲ್ಲಿ ಆದಿಜ್ಯೋತಿ, ಬೀದಿಜೋತಿ, ಪರಂಜ್ಯೋತಿ ಇದೆ, ಅಲ್ಲದೆ ಮಹದೇಶ್ವರರು ಸಂಚರಿಸಿದ ಹಲವಾರು ಸ್ಥಳಗಳಿದೆ ಆದ್ರೂ ಯಾಕೆ ಇದನ್ನ ಕತ್ತಲರಾಜ್ಯ ಎಂದು ಕರೆಯುತ್ತಾರೆ ಗೊತ್ತಾಗುತ್ತಿಲ್ಲ, ಆದರೆ ನನ್ನ ಪಾಲಿಗೆ ದಿವ್ಯಸ್ಥಳ. ಜಿಲ್ಲೆ ಯಾವತ್ತೂ ಹಿಂದುಳಿದಿಲ್ಲ, ಕಲೆ, ಸಾಹಿತ್ಯ,ಜನಪದ, ಅರಣ್ಯ ಸಂಪತ್ತು ಸೇರಿದಂತೆ ಪ್ರವಾಸೋಧ್ಯಮದಲ್ಲಿ ಬಹಳ ಶ್ರೀಮಂತ ಜಿಲ್ಲೆಯಾಗಿದೆ. ಇಲ್ಲಿನ ಜನರ ಹೃದಯ ಶ್ರೀಮಂತಿಕೆಗೆ ನಾನು ಸದಾ ಋಣಿ.
- ಕೆ ಶ್ರೀಧರ್ (ಸಿರಿ), ಸಾಹಿತಿ
-ಶ್ರೀ ಸಾಯಿ ಎಸ್ ಮಂಜು
