
ಉತ್ತರಖಂಡದಲ್ಲಿ ಎಲ್ಲಾ ಧರ್ಮೀಯರಿಗೂ ಒಂದೇ ಕಾನೂನು ಅನ್ವಯವಾಗಲಿ
ಉತ್ತರಾಖಂಡದಲ್ಲಿ ಇಂದು ‘ಏಕರೂಪ ನಾಗರಿಕ ಸಂಹಿತೆ’ ಜಾರಿಯಾಗಲಿದ್ದು, ಎಲ್ಲಾ ಧರ್ಮೀಯರಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಇಂದು ಪಾತ್ರವಾಗಿದೆ.
ಯುಸಿಸಿಯನ್ನು ಉತ್ತರಾಖಂಡದಾದ್ಯಂತ ಜಾರಿಗೆ ತರಲಾಗುವುದು ಮತ್ತು ಹೊರಗೆ ವಾಸಿಸುವ ರಾಜ್ಯದ ನಿವಾಸಿಗಳಿಗೂ ಅನ್ವಯಿಸುತ್ತದೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಯುಸಿಸಿ ಪೋರ್ಟಲ್ ಅನ್ನು ರಾಜ್ಯ ಸಚಿವಾಲಯದಲ್ಲಿ ಅನಾವರಣಗೊಳಿಸುವ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಧರ್ಮ, ಲಿಂಗ, ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ತಾರತಮ್ಯದಿಂದ ಮುಕ್ತವಾದ ಸಾಮರಸ್ಯದ ಸಮಾಜದ ಅಡಿಪಾಯವನ್ನು ಯುಸಿಸಿ ಸ್ಥಾಪಿಸುತ್ತದೆ ಎಂದು ಧಾಮಿ ಹೇಳಿದ್ದಾರೆ.
ನಾವು ನಮ್ಮ ಬದ್ಧತೆಗಳನ್ನು ಪೂರೈಸುತ್ತಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದ್ದು ಇದಕ್ಕೆ ಒಂದು ಉದಾಹರಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತೀಯ ಗಣರಾಜ್ಯ ಇಂದು ದೃಢವಾಗಿ ನಿಂತಿದೆ” ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ತನ್ನ “ಮನೆಕೆಲಸ” ವನ್ನು ಪೂರ್ಣಗೊಳಿಸಿದೆ ಮತ್ತು ಜನವರಿ 2025 ರಿಂದ ರಾಜ್ಯಾದ್ಯಂತ ಯುಸಿಸಿ ಅನುಷ್ಠಾನಕ್ಕೆ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಧಾಮಿ ತಿಳಿಸಿದ್ದಾರೆ.