ತುಮಕೂರು: ನಗರದ ಹಿರೇಮಠಾಧ್ಯಕ್ಷರಾದಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ 65ನೇ ಜನ್ಮವರ್ಧಂತಿಕಾರ್ಯಕ್ರಮವನ್ನು ಈ ತಿಂಗಳ 29ರಂದು ಶ್ರೀಮಠದಲ್ಲಿ ಭಕ್ತರು ವಿವಿಧ ಕಾರ್ಯಕ್ರಮಗಳೊಂದಿಗೆ ಭಕ್ತಿ, ಸಡಗರದಿಂದ ಆಚರಿಸುತ್ತಿದ್ದಾರೆ.
ಇದರ ಅಂಗವಾಗಿ ಬುಧವಾರ ಹಿರೇಮಠದಲ್ಲಿ ಬೆಳಿಗ್ಗೆ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಶ್ರೀಕ್ಷೇತ್ರದ ಮಲ್ಲಿಕಾರ್ಜುನ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ನಂತರ ಶ್ರೀಗಳ ನೇತೃತ್ವದಲ್ಲಿ ಲಿಂಗಧಾರಣ ಮಹೋತ್ಸವ ಹಾಗೂ ಲಿಂಗದೀಕ್ಷಾ ಕಾರ್ಯಕ್ರಮ ನೆರವೇರಿತು.
ಸ್ವಾಮೀಜಿಗಳ 65ನೇ ಜನ್ಮವರ್ಧಂತಿ ಪ್ರಯುಕ್ತ ಹಿರೇಮಠ ಹಾಗೂ ತಪೋವನದಲ್ಲಿ ಬುಧವಾರದಿಂದ ಸಜ್ಜನಗೋಷ್ಠಿ, ಸದ್ಭಾವನಾಗೋಷ್ಠಿ, ಸತ್ಸಂಗಗೋಷ್ಠಿ, ಸತ್ಕಥಾಗೋಷ್ಠಿ, ಸಂಜೀವಿನಿಗೋಷ್ಠಿ, ಸಾಧುವಾದಗೋಷ್ಠಿ, ಶಿವಸಹಸ್ರನಾಮಗೋಷ್ಠಿ, ಸತ್ಕಾವಿತಾವಾಚನಾಗೋಷ್ಠಿ, ಸದಾಶಯಗೋಷ್ಠಿ ಮತ್ತು ಗೀತಗೋಷ್ಠಿಗಳನ್ನು ಏರ್ಪಡಿಸಲಾಗಿದೆ.
ಸ್ವಾಮೀಜಿಗಳ 65ನೇ ಜನ್ಮವರ್ಧಂತಿಯ ದಿನವಾದ ಭಾನುವಾರ ಹಿರೇಮಠದಲ್ಲಿ ಬೆಳಿಗ್ಗೆ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಶ್ರೀಮಠದ ಮಲ್ಲಿಕಾರ್ಜುನ ಸ್ವಾಮಿಗೆ ರುದ್ರಾಭಿಷೇಕ ನೆರವೇರಿಸುವರು.ನಂತರ ಗುರುಗಳಿಗೆ ಗೌರವ, ಪ್ರಸಾದ ವಿನಿಯೋಗಕಾರ್ಯಕ್ರಮವಿದೆ.ಸಂಜೆ ನಿವೃತ್ತ ಪ್ರಾಧ್ಯಾಪಕ ಡಾ.ಎಂ.ಪಿ.ಶಂಕರಪ್ಪನವರು ರಚಿಸಿರುವ ‘ತುಮಕೂರಿನ ಆನಂದ ಶ್ರೀ ಶಿವಾಚಾರ್ಯ ಗುರುಗಳು’ ಎಂಬ ಗೀತೆಯ ಧ್ವನಿಮುದ್ರಿಕೆ ಬಿಡುಗಡೆ ಹಾಗೂ ಸ್ವಾಮೀಜಿಗಳಿಗೆ ಸಮರ್ಪಣೆ ಮಾಡಲಾಗುವುದು.ಈ ಗೀತೆಗೆ ಸಿದ್ಧೇಂದ್ರಕುಮಾರ್ ಧ್ವನಿ ನೀಡಿದ್ದಾರೆ, ದೇವೇಂದ್ರಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಪ್ರಸ್ತುತ ಸಂದರ್ಭದ ಯುದ್ಧದ ದುಷ್ಪರಿಣಾಮಗಳನ್ನು ಕುರಿತು ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಬರೆದಿರುವ ಲೇಖನ ಹಾಗೂ ತಮ್ಮ 65 ವರ್ಷಗಳ ಪೂರ್ವಭಾವಿ ಲೇಖನವನ್ನು ಇದೇ ವೇಳೆ ಓದುಗರಿಗೆ ಅರ್ಪಣೆ ಮಾಡಲಾಗುತ್ತದೆ.
ಸ್ವಾಮೀಜಿಗಳ ಜನ್ಮವರ್ಧಂತಿ ಪ್ರಯುಕ್ತ ಅಂದು ವಿವಿಧಗಣ್ಯರು, ಭಕ್ತರು ಶ್ರೀಮಠಕ್ಕೆ ಆಗಮಿಸಿ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ.
– ಕೆ.ಬಿ.ಚಂದ್ರಚೂಡ.
