ಪ್ಯಾಲೆಸ್ಟೀನ್ನಲ್ಲಿ 1967ರಿಂದಲೂ ಆಕ್ರಮಣಕ್ಕೆ ಒಳಗಾಗಿರುವ ಪ್ರದೇಶಗಳ ಮಾನವ ಹಕ್ಕುಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ವಿಶ್ವಸಂಸ್ಥೆಯು ನೇಮಿಸಿದ್ದ ಫ್ರಾನ್ಸೆಸ್ಕಾ ಅಲ್ಬನೀಸ್ ಅವರು ನೀಡಿರುವ ವರದಿಯು ನಮ್ಮ ಕಾಲದ ಅತ್ಯಂತ ಅಮಾನುಷ ಮತ್ತು ಕ್ರೌರ್ಯದ ಕಥೆಯನ್ನು ಹೇಳುತ್ತದೆ.
ಇದು ಕಟ್ಟುಕಥೆ ಅಲ್ಲ, ವಾಸ್ತವ ಎನ್ನುವ ಕಾರಣಕ್ಕಾಗಿ ಜಗತ್ತು ನಾಚಿಕೆಪಡಬೇಕಿದೆ ಮತ್ತು ತನ್ನ ನಡುವೆಯೇ ಮಾನವೀಯತೆಯನ್ನು ‘ಮಣ್ಣು’ ಮಾಡುವ ಇಂತಹ ಕೃತ್ಯ ನಡೆದಿದ್ದಕ್ಕಾಗಿ ಅಪರಾಧಿ ಪ್ರಜ್ಞೆಯಿಂದಲೂ ಬಳಲಬೇಕಿದೆ.
ವ್ಯಕ್ತಿಗಳು ಅಥವಾ ಗುಂಪುಗಳು ಕ್ರೂರ ಕೃತ್ಯಗಳನ್ನು ಎಸಗುವುದು ಅಸಹಜವೇನಲ್ಲ. ದುಷ್ಟ ಸೇನೆಗಳು ಮತ್ತು ಕೂಟಗಳೂ ಅಂತಹ ಕೃತ್ಯಗಳಲ್ಲಿ ತೊಡಗುತ್ತವೆ. ಆದರೆ, ಆಕ್ರಮಿತ ಪ್ಯಾಲೆಸ್ಟೀನ್ನಲ್ಲಿ ಇಸ್ರೇಲ್ ಅತ್ಯಂತ ನಿರ್ಭೀತಿಯಿಂದ ನಡೆಸುತ್ತಿರುವಂಥ ಸಂಘಟಿತ ಮತ್ತು ವ್ಯವಸ್ಥಿತ ಹಿಂಸೆಯನ್ನು ಇತಿಹಾಸದಲ್ಲಿ ಯಾವುದೇ ರಾಷ್ಟ್ರ ನಡೆಸಿದ ಉದಾಹರಣೆ ಸಿಗುವುದು ಅಪರೂಪ. ಪ್ಯಾಲೆಸ್ಟೀನ್ನ ಜನರನ್ನು ದಮನ ಮಾಡಲು, ಕಿರುಕುಳ ನೀಡಲು ಮತ್ತು ಕೊಲ್ಲಲು ಇಸ್ರೇಲ್ (ಸೇನೆ ಮತ್ತು ಪೊಲೀಸ್ ಬಲ ಸೇರಿದಂತೆ) ಪ್ರಭುತ್ವವು ಅಳವಡಿಸಿಕೊಂಡಿದ್ದ ಅತ್ಯಂತ ಅಮಾನವೀಯ ತಂತ್ರಗಳನ್ನು ವಿಶ್ವಸಂಸ್ಥೆಯ ವರದಿ ವಿವರಿಸುತ್ತದೆ. ಇದು, ಇಸ್ರೇಲ್ ಆಡಳಿತ ಮತ್ತು ಪ್ಯಾಲೆಸ್ಟೀನ್ನ ಸಮಸ್ತ ಜನರನ್ನು ಗುರಿಯಾಗಿಸಿಕೊಂಡಿರುವ ಅದರ ನೀತಿಗಳು ಮತ್ತು ಕ್ರಿಯೆಗಳ ಕುರಿತ ಗಂಭೀರ ದೋಷಾರೋಪವಾಗಿದೆ.
ವರದಿ ಬಹಿರಂಗಪಡಿಸಿರುವ ಅಂಶಗಳು ಅತ್ಯಂತ ಗಂಭೀರವಾದುದಾಗಿವೆ. ಪ್ಯಾಲೆಸ್ಟೀನ್ನ ನಾಗರಿಕರ ಮೇಲೆ -ಬಂಧಿತರನ್ನಷ್ಟೇ ಅಲ್ಲದೆ ಹೊರಗಡೆ ಇದ್ದವರ ಮೇಲೂ- ಇಸ್ರೇಲ್ ಕಿರುಕುಳದ ತಂತ್ರಗಳನ್ನು ವ್ಯವಸ್ಥಿತವಾಗಿ ಪ್ರಯೋಗಿಸಿದೆ. ತನ್ನ ಮೇಲಿನ ದಾಳಿ ತಡೆಗಟ್ಟುವುದು ಮತ್ತು ಅದಕ್ಕೆ ಶಿಕ್ಷೆ ನೀಡುವ ನೆಪದಲ್ಲಿ ಅದು ಪ್ಯಾಲೆಸ್ಟೀನ್ನಲ್ಲಿ ಜನಾಂಗೀಯ ಹತ್ಯೆಯ ಅಪರಾಧ ಎಸಗಿದೆ.
ಪ್ಯಾಲೆಸ್ಟೀನ್ ಜನರ ಮೇಲೆ ಹಿಡಿತ ಸಾಧಿಸಲು ಇಸ್ರೇಲ್ ತನ್ನ ನೀತಿ ಮತ್ತು ಕ್ರಿಯೆಗಳಲ್ಲಿ ಸಂಘಟಿತ ಹಿಂಸೆಯನ್ನೂ ಒಂದು ಭಾಗವಾಗಿಸಿಕೊಂಡಿದೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಬಂಧಿಸಿ ಕಿರುಕುಳ ನೀಡುವುದು ಮತ್ತು ಜನರನ್ನು ಬಲವಂತವಾಗಿ ಸ್ಥಳಾಂತರಗೊಳಿಸುವುದು, ಸಾಮೂಹಿಕ ಹತ್ಯೆಗೈಯುವುದು, ಬದುಕಿನ ಅತ್ಯವಶ್ಯಕ ವಸ್ತುಗಳ ಅಭಾವ ಉಂಟುಮಾಡುವುದು, ವಿನಾಶ ಸೃಷ್ಟಿಸಿ ದೀರ್ಘಕಾಲದ ನೋವು ಮತ್ತು ನರಳಿಕೆಗೆ ಕಾರಣವಾಗುವ ಮೂಲಕ ತನ್ನ ನೀತಿಗಳನ್ನು ಜಾರಿ ಮಾಡುತ್ತಿದೆ. ಪ್ಯಾಲೆಸ್ಟೀನ್ ಪ್ರದೇಶದ ಜನರನ್ನು ನಾಶಮಾಡಲು, ಅವರ ಘನತೆಯನ್ನು ಕಸಿಯಲು ಮತ್ತು ಅವರನ್ನು ಅವರ ನೆಲದಿಂದ ಹೊರಹಾಕಲು ನಿರಂತರವಾದ, ವ್ಯಾಪಕವಾದ, ಭಯಾನಕವಾದ ಆಡಳಿತವನ್ನು ರೂಪಿಸಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.
ಈ ಹಿಂಸಾಚಾರ ಕೇವಲ ಸಾಂದರ್ಭಿಕವಾದುದಲ್ಲ; ವಲಸಿಗ ವಸಾಹತುಶಾಹಿ (ಸೆಟ್ಲರ್ ಕಲೋನಿಯಲಿಸಂ) ನೀತಿ ಹೊಂದಿರುವ ಇಸ್ರೇಲ್, ಅಮಾನವೀಯತೆ, ಕ್ರೌರ್ಯ ಹಾಗೂ ಸಾಮೂಹಿಕ ಕಿರುಕುಳದ ಮೂಲಕ ಪ್ಯಾಲೆಸ್ಟೀನ್ನಲ್ಲಿ ಹಿಂಸೆ ತಾಂಡವವಾಡುವಂತೆ ಮಾಡುತ್ತಿದೆ. ಅಲ್ಲಿನವರಿಗೆ ಘನತೆಯ ಬದುಕು ನಿರಾಕರಿಸಲಾಗಿದ್ದು, ಅವರನ್ನು ಹಕ್ಕುಗಳಿಲ್ಲದ ಮತ್ತು ನಿರ್ಲಕ್ಷಿತ ಜನಸಮುದಾಯವಾಗಿ, ನಿಯಂತ್ರಿಸಬಹುದಾದ ಅಥವಾ ನಾಶಪಡಿಸಬಹುದಾದ ವಸ್ತುಗಳಾಗಿ ಕಾಣಲಾಗುತ್ತಿದೆ ಎಂದು ವರದಿ ಹೇಳುತ್ತಿದೆ.
ವಿವಿಧ ಮಾಧ್ಯಮ ವರದಿಗಳು ಮತ್ತು ಅಲ್ಲಿನ ಪರಿಸ್ಥಿತಿಯನ್ನು ಅರಿತವರ ಮಾತುಗಳು ಅಲ್ಬನೀಸ್ ಅವರ ವರದಿಗೆ ಪೂರಕವಾಗಿವೆ. ಇಸ್ರೇಲ್ ಅಧಿಕಾರಿಗಳು ಅವರಿಗೆ ಅಡ್ಡಿಯುಂಟುಮಾಡಿದರೂ, 300 ದಾಖಲೆಗಳಿಂದ, ದೂರದ ಪ್ರದೇಶಗಳ ಸಂತ್ರಸ್ತರಿಂದ, ಇಸ್ರೇಲ್ನ ಹೋರಾಟಗಾರರು ಸೇರಿದಂತೆ ಹಲವರಿಂದ ಅವರು ಮಾಹಿತಿ ಸಂಗ್ರಹಿಸಿದ್ದಾರೆ. ಹಲವು ಉಲ್ಲೇಖಗಳು, ಮಾಧ್ಯಮ ವರದಿಗಳು, ಚಿತ್ರಗಳು, ದಾಖಲೆಗಳು ಮತ್ತು ಇತರ ಸಾಕ್ಷ್ಯಗಳನ್ನು ಒಳಗೊಂಡಿರುವ ವರದಿಯು ಸಮಗ್ರವಾಗಿದೆ ಮತ್ತು ವಿಸ್ತೃತವಾಗಿದೆ.
2023ರ ಅಕ್ಟೋಬರ್ಗೂ ಮೊದಲು ಎಂದೂ ಕಾಣದಿದ್ದ ಸ್ವರೂಪದಲ್ಲಿ ಸಾಮೂಹಿಕ ಪ್ರತೀಕಾರ ಮತ್ತು ವಿನಾಶಕಾರಿ ಉದ್ದೇಶದ ಕಿರುಕುಳವನ್ನು ವ್ಯಾಪಕವಾಗಿ ಬಳಸಲಾಗಿದೆ. ಇಸ್ರೇಲ್ ಭದ್ರತೆ ಕಾಪಾಡುವ ದಿಸೆಯಲ್ಲಿ ಅನುಷ್ಠಾನಗೊಳಿಸಿದ ನಿಯಮಗಳು ಕ್ರೌರ್ಯವನ್ನು ಸಹಜ ವಿದ್ಯಮಾನವನ್ನಾಗಿಸಿವೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ಅವರು ಪ್ಯಾಲೆಸ್ಟೀನಿಯರನ್ನು ಗುರಿಯಾಗಿಸಿಕೊಳ್ಳುವ ಬಗ್ಗೆ ಮಾತನಾಡಿದ್ದು, ‘ದೇಶದ ಎಲ್ಲರೂ ಬಾಧ್ಯಸ್ಥರು’ ಎಂದಿದ್ದಾರೆ. ಪ್ಯಾಲೆಸ್ಟೀನ್ನ ಬಂದಿಗಳಿಗೆ ‘ಭಯೋತ್ಪಾದಕರು’ ಎನ್ನುವ ಹಣೆಪಟ್ಟಿ ಹಚ್ಚಲಾಗಿದ್ದು, ಅವರಿಗೆ ಕೈಕೋಳ ಹಾಕಿ, ಕಬ್ಬಿಣದ ಹಾಸಿಗೆ, ತೆರೆದ ಶೌಚದ ಕತ್ತಲ ಕೋಣೆಗಳಲ್ಲಿ ಇರಿಸಲಾಗಿತ್ತು.
ಇಸ್ರೇಲಿ ಸೈನಿಕರು ಇಡೀ ಜನಸಮುದಾಯದ ಮೇಲೆ ಹೇಗೆ ಹತೋಟಿ ಸಾಧಿಸಿದರು; ಹಿರಿಯರು, ಅಂಗವಿಕಲರು, ಗರ್ಭಿಣಿಯರು ಮತ್ತು ಮಕ್ಕಳನ್ನೂ ಬಿಡದಂತೆ ವಶಕ್ಕೆ ಪಡೆದರು ಎಂಬುದನ್ನು ವರದಿ ವಿವರಿಸುತ್ತದೆ. ಸಾಮಾಜಿಕ ಕಾರ್ಯಕರ್ತರು, ವೈದ್ಯರು, ರಾಜಕಾರಣಿಗಳು, ಮಾನವ ಹಕ್ಕು ಹೋರಾಟಗಾರರು ಮತ್ತು ಪತ್ರಕರ್ತರು- ಹೀಗೆ ನಿರ್ದಿಷ್ಟ ಗುಂಪುಗಳನ್ನು ಗುರಿಯಾಗಿಸಿಕೊಂಡು ವಶಕ್ಕೆ ಪಡೆಯಲಾಯಿತು ಮತ್ತು ಅವರಿಗೆ ತೀವ್ರ ಹಿಂಸೆ ನೀಡಲಾಯಿತು ಎಂಬ ವಿವರಗಳೂ ಇವೆ. ಲೈಂಗಿಕ ಕಿರುಕುಳವು ನಿಯಮದ ಅವಿಭಾಜ್ಯ ಅಂಗವಾಗಿತ್ತು. ಮಹಿಳೆಯರು, ಮಕ್ಕಳು ಮತ್ತು ಪುರುಷರು-ಎಲ್ಲರನ್ನೂ ಇದಕ್ಕೆ ಒಳಪಡಿಸಲಾಯಿತು. ಇದರ ಬಗೆಗಿನ ಕೆಲವು ವಿವರಗಳು ಬೀಭತ್ಸವಾಗಿವೆ.
ಸಾಮೂಹಿಕ ಸ್ಥಳಾಂತರ, ಸೆರೆ, ನೆರವು ಮತ್ತು ಆಹಾರದ ನಿರಾಕರಣೆ, ಸೇನಾ ಮತ್ತು ವಸಾಹತುಶಾಹಿ ಹಿಂಸಾಚಾರ ಹಾಗೂ ವ್ಯಾಪಕ ಕಣ್ಗಾವಲು ಮತ್ತು ಭಯೋತ್ಪಾದನೆಯ ಮೂಲಕ ಆಕ್ರಮಿತ ಪ್ಯಾಲೆಸ್ಟೀನ್ ಸಾಮೂಹಿಕ ಶಿಕ್ಷೆಗೆ ಗುರಿಯಾದ ತಾಣವಾಯಿತು. ಆಹಾರ, ನೀರು, ವೈದ್ಯಕೀಯ ಸೇವೆ ಮುಂತಾದ ಜೀವನಾವಶ್ಯಕ ವಸ್ತು/ಸೇವೆಗಳನ್ನು ನಿರಾಕರಿಸುವ ಮೂಲಕ ನರಮೇಧದ ಹಿಂಸೆಯನ್ನು ಸಾಮೂಹಿಕ ಚಿತ್ರಹಿಂಸೆಯ ಸಾಧನವಾಗಿ ಪರಿವರ್ತಿಸಲಾಗಿದೆ. ಇದು ದೀರ್ಘಕಾಲೀನ ಮಾನಸಿಕ ಮತ್ತು ದೈಹಿಕ ಪರಿಣಾಮಗಳನ್ನು ಬೀರುತ್ತದೆ.
ಹತ್ತು ಲಕ್ಷಕ್ಕೂ ಹೆಚ್ಚು ಮಂದಿಯ ಮನೆಗಳನ್ನು ನೆಲಸಮ ಮಾಡಲಾಗಿದೆ. ಸಾವಿರಾರು ಮಂದಿ ಹತ್ಯೆಗೀಡಾಗಿದ್ದಾರೆ. ಕಿರುಕುಳ ಮತ್ತು ಎಲ್ಲ ರೀತಿಯ ಸಂಕಟಗಳಿಗೆ ಈಡು ಮಾಡಲಾದವರ ಸಂಖ್ಯೆಯೂ ದೊಡ್ಡದು. ಅನೇಕರನ್ನು ಶಾಶ್ವತವಾಗಿ ಗಾಯಾಳುಗಳನ್ನಾಗಿ ಮಾಡಿ, ಅವರ ಬದುಕು ದಿಕ್ಕುಗೆಡುವಂತೆ ಮಾಡಲಾಗಿದೆ. ಪ್ಯಾಲೆಸ್ಟೀನ್ನ ಜನರನ್ನು ಒಂದು ಗುಂಪನ್ನಾಗಿ ಸಾಮೂಹಿಕ ಕಿರುಕುಳಕ್ಕೆ ಈಡು ಮಾಡಿ, ಅವರ ಆತ್ಮಸ್ಥೈರ್ಯ ಕುಸಿಯುವಂತೆ ಮಾಡಿ, ಅವರ ಸ್ವಾಯತ್ತೆಯನ್ನು ಕಸಿದು, ಕೊನೆಗೆ ಅವರು ತಮ್ಮ ನೆಲ ತೊರೆದು ಪಲಾಯನಗೈಯುವಂತೆ ಕ್ರೌರ್ಯ ಮೆರೆಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ದಮನವನ್ನು ಊರ್ಜಿತಗೊಳಿಸಲು ಕಾನೂನನ್ನು ಬದಲಾಯಿಸಲಾಗಿದೆ. ನರಮೇಧದ ಈ ನೀತಿ ಮತ್ತು ಕ್ರಿಯೆಗಳನ್ನು ರೂಪಿಸುವ ಹಿಂದೆ ಇಸ್ರೇಲ್ ಸರ್ಕಾರವು ಪ್ರಮುಖ ಪಾತ್ರ ವಹಿಸಿದೆ. ಗಾಜಾದ ಆಚೆಗೂ ಹಿಂಸಾಚಾರ ಹರಡಿದ್ದು, ಶಸ್ತ್ರಸಜ್ಜಿತ ಸೈನಿಕರು ಮತ್ತು ಹಿಂಸಾಚಾರ ಮಾಡುವ ವಲಸಿಗರು ಪೂರ್ವ ಜೆರುಸಲೇಂ ಒಳಗೊಂಡಂತೆ ವೆಸ್ಟ್ ಬ್ಯಾಂಕ್ನಲ್ಲಿ ಜನಾಂಗೀಯ ನಿರ್ಮೂಲನೆ ಮತ್ತು ವರ್ಣಭೇದದಲ್ಲಿ ತೊಡಗಿದ್ದಾರೆ. ಇಸ್ರೇಲ್ ಹೊಸ ನಕ್ಬಾ (ಬಲವಂತದ ಸ್ಥಳಾಂತರ) ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಅಲ್ಬನೀಸ್ ಅವರು ಎಚ್ಚರಿಸಿದ್ದಾರೆ.
ಈ ವರದಿಯನ್ನು ಓದುವಾಗ ಮನಸ್ಸು ಕದಡುತ್ತದೆ. ಇಸ್ರೇಲ್ ಅನ್ನು ಮಾತೃಭೂಮಿಯಾಗಿಸಿಕೊಂಡಿರುವ ಯಹೂದಿಗಳು ಸ್ವತಃ ಹಿಟ್ಲರ್ ಆಡಳಿತದ ಜರ್ಮನಿ ನಡೆಸಿದ್ದ ಇತಿಹಾಸದ ಅತ್ಯಂತ ಕ್ರೂರ ನರಮೇಧದ ಸಂತ್ರಸ್ತರು. ಆ ಘೋರ ಕೃತ್ಯದಿಂದ ಅವರಿಗಾದ ಕೆಟ್ಟ ಅನುಭವವು ಇಂತಹ ಅಪರಾಧ ಕೃತ್ಯಗಳ ಕುರಿತಾಗಿ ಅವರಲ್ಲಿ ನೈತಿಕವಾದ ಜುಗುಪ್ಸೆಯನ್ನು ಹುಟ್ಟುಹಾಕಬೇಕಿತ್ತು. ಇಡೀ ಜಗತ್ತಿನಲ್ಲಿ ಜನಾಂಗೀಯ ಹತ್ಯೆಯಂತಹ ಪೈಶಾಚಿಕ ಕೃತ್ಯಗಳನ್ನು ತಿರಸ್ಕರಿಸುವ ಮತ್ತು ಅವುಗಳ ಬಗ್ಗೆ ಸಂವೇದನೆ ಹೊಂದಿರುವವರಲ್ಲಿ ಇಸ್ರೇಲಿಗರು ಮುಂಚೂಣಿಯಲ್ಲಿರಬೇಕು. ಆದರೆ, ಇಂತಹ ಹಿಂಸಾಚಾರವೇ ಇಸ್ರೇಲ್ ದೇಶದ ನೀತಿಯಾಗಿರುವುದು ಕಳವಳದ ಸಂಗತಿ. ಇಲ್ಲಿ ಮನಃಶಾಸ್ತ್ರದ ಪಾಠ ಇದೆಯೇ? ಸಂತ್ರಸ್ತರು ಪೀಡಕ ಮನಃಸ್ಥಿತಿಯನ್ನು ಬೆಳೆಸಿಕೊಳ್ಳುತ್ತಾರೆಯೇ?
ಸ್ವಯಂರಕ್ಷಣೆ ಅಥವಾ ರಾಷ್ಟ್ರೀಯ ಭದ್ರತೆಗೆ ಇದು ಅಗತ್ಯವಾದ ಕ್ರಮ ಎಂದು ಹೇಳುತ್ತಾ ನರಮೇಧದ ಸ್ವರೂಪವನ್ನು ಬದಲಾಯಿಸಲು ಸಾಧ್ಯವಿಲ್ಲ. ಕಾನೂನು ಕಟ್ಟಳೆಗಳು ಜಾರಿಯಲ್ಲಿರುವ ಸಮಾಜದಲ್ಲಿ ಒಬ್ಬನನ್ನು ಹತ್ಯೆ ಮಾಡುವುದೂ ತಪ್ಪಾಗುತ್ತದೆ. ಕ್ರೂರ ಮತ್ತು ಅಮಾನವೀಯವಾದ ರೀತಿಗಳಲ್ಲಿ ಒಂದು ದೇಶವು ಜನರನ್ನು ಕೊಲ್ಲುವುದು ದೇಶ, ಅಂತರರಾಷ್ಟ್ರೀಯ ಕಾನೂನು ಮತ್ತು ನಿಯಮಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ, ಜಗತ್ತಿನ ಅಂತಃಸಾಕ್ಷಿಯನ್ನೂ ಛಿದ್ರಗೊಳಿಸುತ್ತದೆ.
ಆಕ್ರಮಿತ ಪ್ಯಾಲೆಸ್ಟೀನ್ನ ಜನರಿಗೆ ನೀಡುತ್ತಿರುವ ಎಲ್ಲ ರೀತಿಯ ಹಿಂಸೆ ಮತ್ತು ಅವರೊಂದಿಗಿನ ಅಮಾನವೀಯ ವರ್ತನೆಯನ್ನು ತಕ್ಷಣವೇ ನಿಲ್ಲಿಸಬೇಕು, ಆ ಪ್ರದೇಶದಲ್ಲಿ ತಾರತಮ್ಯ ಎಸಗುತ್ತಿರುವ ಆಡಳಿತವನ್ನು ವಜಾಗೊಳಿಸಬೇಕು. ಅಲ್ಲಿನ ಜನರಿಗೆ ಪರಿಹಾರ ನೀಡಬೇಕು ಹಾಗೂ ಇಂತಹ ಕೃತ್ಯಗಳನ್ನು ಪುನರಾವರ್ತಿಸಬಾರದು ಎಂದು ವರದಿಯು ಇಸ್ರೇಲ್ಗೆ ಶಿಫಾರಸು ಮಾಡಿದೆ. ಅಲ್ಲದೇ, ನರಮೇಧ, ಹಿಂಸಾಕೃತ್ಯಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯಕ್ಕೆ ಶಿಫಾರಸು ಮಾಡಿದೆ. ಇಸ್ರೇಲ್ ಸೇನೆಯ ಮುಖ್ಯಸ್ಥ ಹಾಗೂ ಇತರ ಅಧಿಕಾರಿಗಳನ್ನು ಬಂಧಿಸಬೇಕು ಎಂದೂ ಅದು ಹೇಳಿದೆ. ವರದಿಯಲ್ಲಿ ಕೆಲವರ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ.
ಇಸ್ರೇಲ್ ಒಂದು ಜನಾಂಗೀಯ ತಾರತಮ್ಯ ಎಸಗುವ ರಾಷ್ಟ್ರ ಎಂದು ಪರಿಗಣಿಸುವಂತೆ ವಿವಿಧ ದೇಶಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಿಗೂ ಅದು ಕರೆ ನೀಡಿದೆ. ಇಸ್ರೇಲ್ ವಿರುದ್ಧ ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಹೇರಬೇಕು. ಜೊತೆಗೆ, ಇಸ್ರೇಲ್ನಿಂದ ಸೇನಾ ಸಲಕರಣೆಗಳ ಖರೀದಿ ಮತ್ತು ಅದು ನಡೆಸುವ ಮಾರಾಟದ ಮೇಲೂ ನಿಷೇಧ ಹೇರಬೇಕು ಎಂದೂ ವರದಿ ಸಲಹೆ ನೀಡಿದೆ. ಈ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕು. ವಿಳಂಬವಾದರೆ, ಇಂತಹ ಕೃತ್ಯಗಳನ್ನು ತಡೆಯಲು, ನಿಲ್ಲಿಸಲು ಮತ್ತು ಅಪರಾಧಿಗಳನ್ನು ಶಿಕ್ಷಿಸಲು ರೂಪಿಸಿರುವ ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯೇ ಕ್ರೌರ್ಯದ ವ್ಯವಸ್ಥೆಯೊಂದಕ್ಕೆ ತಳವೂರಲು ಅವಕಾಶ ನೀಡಿದಂತಾಗುತ್ತದೆ ಎಂದೂ ವರದಿ ಹೇಳಿದೆ. ಆದರೆ, ಇಸ್ರೇಲ್ ಇದಕ್ಕೆಲ್ಲ ಗಮನಕೊಡುವುದಿಲ್ಲ ಮತ್ತು ಜಗತ್ತಿಗೆ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳುವುದೂ ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿದೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದಿದ್ದ ಇಸ್ರೇಲ್ನ ಬ್ರಿಟಿಷ್ ವಸಾಹತುಶಾಹಿ ನೀತಿ ಮತ್ತು ವಲಸಿಗ ವಸಾಹತುಶಾಹಿ ನೀತಿಗಳು ಪ್ಯಾಲೆಸ್ಟೀನಿಯರನ್ನು ಅವರ ನೆಲದಿಂದ ಹೊರಗೆ ಕಳುಹಿಸುವ ಉದ್ದೇಶವನ್ನು ಹೊಂದಿದ್ದವು. ಇತಿಹಾಸದಲ್ಲಿ, ಇತರೆ ದಾಖಲೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಇಂತಹ ಹಿಂಸಾಚಾರಗಳು ನಡೆದಿರುವ ಬಗ್ಗೆ ಉಲ್ಲೇಖಗಳಿವೆ. ಯಹೂದಿಗಳ ಬಗ್ಗೆ ಸಹಾನುಭೂತಿ ತೋರುವ ಅಂಶಗಳಿರುವ ಲಿಯೋನ್ ಉರಿಸ್ ಅವರ ‘ಎಕ್ಸೋಡಸ್’ ಎಂಬ ಕಾಲ್ಪನಿಕ ಕೃತಿಯಲ್ಲೂ ಇಂತಹ ಹಿಂಸಾಚಾರ ಕಣ್ಣಿಗೆ ರಾಚುವಂತಿದೆ. ಜನರನ್ನು ಕೊಲ್ಲಲು, ದುರ್ಬಲಗೊಳಿಸಲು, ಪ್ಯಾಲೆಸ್ಟೀನಿಯನ್ನರನ್ನು ಅವರ ನೆಲದಿಂದಲೇ ಹೊರಗಟ್ಟಲು ಹಾಗೂ ದೊಡ್ಡದಾದ ಇಸ್ರೇಲ್ ರಾಷ್ಟ್ರವನ್ನು ಸೃಷ್ಟಿಸಲು ಈ ನೀತಿಗಳು ಈಗಲೂ ಜಾರಿಯಲ್ಲಿವೆ. ಈಗ ನಡೆಯುತ್ತಿರುವ ನರಮೇಧ ಕೂಡ ಪ್ಯಾಲೆಸ್ಟೀನ್ ಜನರನ್ನು ಹೊರಗಟ್ಟುವ ಇಸ್ರೇಲ್ನ ಶತಮಾನದಷ್ಟು ಹಳೆಯ ವಲಸಿಗ ವಸಾಹತು ಯೋಜನೆಯ ಭಾಗ ಎಂದು ವರದಿ ಹೇಳಿದೆ. ಗೋಲನ್ ಹೈಟ್ಸ್ ಮತ್ತು ಸಿರಿಯಾದಲ್ಲಿನ ಬಫರ್ ವಲಯವು ವಿಶ್ವಸಂಸ್ಥೆಯು 1974ರಲ್ಲಿ ಗುರುತಿಸಿರುವ ವಲಯವನ್ನು ಮೀರಿ ನಿಂತಿದೆ. ದಕ್ಷಿಣ ಲೆಬನಾನ್ನಲ್ಲಿ ಗುರುತಿಸಿರುವ ಬಫರ್ ವಲಯವನ್ನು ಸ್ವಾಧೀನ ಪಡಿಸಿಕೊಳ್ಳಲು ಬಯಸುವುದಾಗಿ ಇಸ್ರೇಲ್ ಈಗ ಘೋಷಿಸಿದೆ. ಈಗಿನ ನರಮೇಧಕ್ಕೂ ಒಂದು ಉದ್ದೇಶ ಇದೆ; ಅದು ಗ್ರೇಟರ್ ಇಸ್ರೇಲ್ ಅನ್ನು ಸ್ಥಾಪಿಸುವುದು.
ಜಗತ್ತಿನ ಇತಿಹಾಸವು ಓಟ್ಟೋಮನ್ ಸಾಮ್ರಾಜ್ಯದಲ್ಲಿ 1914-1915ರಲ್ಲಿ ನಡೆದ ಅಮೆರಿಕದ ನರಮೇಧ, 1994ರ ರ್ವಾಂಡನ್ ನರಮೇಧದಂತಹ ಹಲವು ಕೃತ್ಯಗಳಿಗೆ ಸಾಕ್ಷಿಯಾಗಿದೆ. ಇವುಗಳೊಂದಿಗೆ 1937ರ ನಾಂಜಿಂಗ್ ಹತ್ಯಾಕಾಂಡದಂತಹ ಸಾಮೂಹಿಕ ದೌರ್ಜನ್ಯಗಳೂ ನಡೆದಿವೆ. ಯುರೋಪ್ನ ವಲಸಿಗ ವಸಾಹತುಶಾಹಿಯು ಅಮೆರಿಕದ ಮೂಲನಿವಾಸಿಗಳನ್ನು ಬೃಹತ್ ಪ್ರಮಾಣದಲ್ಲಿ ಹತ್ಯೆ ಮಾಡಿದ್ದು, ಈಗ ಪ್ಯಾಲೆಸ್ಟೀನ್ನಲ್ಲಿ ಇಸ್ರೇಲ್ ನಡೆಸುತ್ತಿರುವ ಕ್ರೂರ ಕೃತ್ಯಗಳಿಗೆ ಸಮನಾದುದು. ಇವುಗಳನ್ನು ಇತಿಹಾಸದಲ್ಲಿ ದಾಖಲಿಸಲಾಗಿದೆ. ವಿಶ್ವಸಂಸ್ಥೆಯ ಈಗಿನ ವರದಿಯು ಹತ್ಯೆಗಳ, ಹಿಂಸೆಯ ಮತ್ತು ನರಮೇಧಕ್ಕೆ ಕಾರಣವಾಗಿರುವ ಮನುಷ್ಯರ ಅಮಾನವೀಯತೆಯ ಮತ್ತೊಂದು ಹೇಯ ಅಧ್ಯಾಯವನ್ನು ದಾಖಲಿಸಿದೆ. ಈ ವರದಿಯಲ್ಲಿರುವುದು ಆತ್ಮಸಾಕ್ಷಿಯ ಧ್ವನಿ. ಜಗತ್ತಿನ ಕಣ್ಣ ಮುಂದೆಯೇ ಇಂತಹ ದುರಂತಗಳು ನಡೆಯುತ್ತಿದ್ದರೂ, ಅದನ್ನು ಗಮನಿಸದಿರುವುದು ರಾಜಕಾರಣದ ವೈಫಲ್ಯ ಮಾತ್ರವಲ್ಲ, ಅಂತಃಸಾಕ್ಷಿಯ ಅಧಃಪತನವೂ ಹೌದು.
ಅಲ್ಬನೀಸ್ ಅವರ ವರದಿಯು ಒಂದು ಭಯಾನಕ ಕ್ರೌರ್ಯದ ಕಥೆಗೆ ಸಾಕ್ಷಿಯಾಗಿದೆ. ಬೈಬಲ್ನ ಕರುಣೆ ಮತ್ತು ತ್ಯಾಗದ ಬೋಧನೆಗಳಿಂದ ಪವಿತ್ರವಾಗಿರುವ ನೆಲದಲ್ಲಿ ಕೂಡ ಈಗಿನ ನಾಯಕರ ಅಧಿಕಾರದ ಭಾಷೆಯು ಇತಿಹಾಸದ ನೈತಿಕ ಧ್ವನಿ ಉಡುಗುವಂತೆ ಮಾಡಿದೆ ಎಂಬ ಕಹಿ ಸತ್ಯಕ್ಕೆ ಜಗತ್ತನ್ನು ಈ ವರದಿ ಮುಖಾಮುಖಿಯಾಗಿಸುತ್ತದೆ.
