ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಉಡುಪಿಯ ನಿರ್ಗಂದಿಕ ತಂಡದ ಕಲಾವಿದರು, ಸ್ಥಳೀಯ ರಂಗಾಸಕ್ತರ ಸಹಕಾರದೊಂದಿಗೆ ಮೇ 30ರ ಸೋಮವಾರ ‘ರಾಮ ಕೃಷ್ಣ ಶಿವ’ ನಾಟಕವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ವೈಚಾರಿಕ ಚಿಂತನೆಗೆ ಹಚ್ಚಿದರು. ರಾಮ ಮನೋಹರ ಲೋಹಿಯಾ ಅವರ ಲೇಖನವನ್ನು ಆಧಾರವಾಗಿಸಿಕೊಂಡ ಈ ನಾಟಕ, ಪುರಾಣ, ಸಮಾಜ, ರಾಜಕೀಯ ಮತ್ತು ಆಧುನಿಕ ಭಾರತವನ್ನು ಒಂದೇ ವೇದಿಕೆಯಲ್ಲಿ ಚಿಂತನೆಗೆ ಒಡ್ಡುವ ವಿಶಿಷ್ಟ ರಂಗಪ್ರಯೋಗವಾಗಿ ಮೂಡಿಬಂದಿತು.
ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಚಿಂತಕ ಹಾಗೂ ರಾಜಕೀಯದಲ್ಲಿ ಸಕ್ರಿಯ ವ್ಯಕ್ತಿತ್ವವಾಗಿದ್ದ ಡಾ. ರಾಮ ಮನೋಹರ ಲೋಹಿಯಾ, ದೀನದಲಿತರ ಮೇಲಿನ ಅನ್ಯಾಯದ ವಿರುದ್ಧ ಹಾಗೂ ಶ್ರಮಜೀವಿಗಳ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದವರು. Mankind (ಇಂಗ್ಲಿಷ್) ಮತ್ತು Chaukhamba (ಹಿಂದಿ) ಪತ್ರಿಕೆಗಳ ಸಂಪಾದಕರಾಗಿದ್ದ ಅವರು, The Caste System, Marx, Gandhi and Socialism, Guilty Men of India’s Partition, Intervals During Politics ಮುಂತಾದ ಮಹತ್ವದ ಕೃತಿಗಳ ಮೂಲಕ ಭಾರತೀಯ ಸಮಾಜ-ರಾಜಕೀಯ ಚಿಂತನೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಈ ನಾಟಕದಲ್ಲಿ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಕಾವ್ಯದ ರಸದೌತಣದೊಂದಿಗೆ ಲೋಹಿಯಾ ನೋಟದ ಭಾರತವನ್ನು ತೆರೆದಿಡಲಾಗಿದೆ. ಅಲ್ಲಮಪ್ರಭುವಿನ “ವೇದವೆಂಬುದು ಓದಿನ ಮಾತು” ಎಂಬ ವಚನ ವಾಚನ ಹಾಗೂ ಕುವೆಂಪು ಅವರ “ಶತಮಾನಗಳು ಬರಿಯ ಜಡಶಿಲೆಯನ್ನು ಪೂಜಿಸಾಯ್ತು” ಎಂಬ ಕವಿತೆಯ ಗಾಯನದ ಮೂಲಕ ನಾಟಕ ಆರಂಭವಾಗುತ್ತದೆ.

ಲೋಹಿಯಾ ಕುರಿತು ಮೇಳ ಹೇಳುವಂತೆ, ಗಾಂಧೀಜಿಯ ಶಿಷ್ಯನಾಗಿದ್ದರೂ ಅವರ ನಡೆ-ನುಡಿಗಳನ್ನು ಟೀಕಿಸುತ್ತಲೇ ಪ್ರೀತಿಸಿದ ಸಮಾಜವಾದಿ ಚಿಂತಕನಾಗಿ ಲೋಹಿಯಾ ಇಲ್ಲಿ ಮೂಡಿಬರುತ್ತಾರೆ. ರಾಮ, ಕೃಷ್ಣ, ಶಿವ ಎಂಬ ಪೌರಾಣಿಕ ವ್ಯಕ್ತಿತ್ವಗಳನ್ನು ಲೋಹಿಯಾ ಚಿಂತನೆಗೂ, ಆ ಕಾಲದ ಗಾಂಧಿ, ಅಂಬೇಡ್ಕರ್, ಪೆರಿಯಾರ್ ಅವರ ನಿಲುವುಗಳ ವ್ಯತ್ಯಾಸಗಳಿಗೂ ಹೋಲಿಕೆ ಮಾಡುತ್ತಾ, ಆ ಪಾತ್ರಗಳ ವ್ಯಕ್ತಿತ್ವದ ದೌರ್ಬಲ್ಯಗಳ ಶೋಧನೆಗೆ ನಾಟಕ ತೊಡಗುತ್ತದೆ.
ಮೊದಲಿಗೆ ರಾಮನ ಕಥಾನಕದಲ್ಲಿ, “ರಾಮ ಯಾವ ಕಾರಣಕ್ಕೆ ಅತ್ತನೋ, ಅದೇ ಕಾರಣಕ್ಕೆ ಕಾಲಾಂತರದಲ್ಲಿ ಕೃಷ್ಣ ನಕ್ಕಿದ್ದನ್ನು ನೋಡಿರುವ ಚಂದ್ರ, ರಾಮ-ಕೃಷ್ಣರ ಈ ವ್ಯಕ್ತಿತ್ವಗಳ ಅಗಾಧ ವ್ಯತ್ಯಾಸವನ್ನು ಕಂಡಿರಬೇಕಷ್ಟೇ!” ಎಂಬ ಲೋಹಿಯಾ ನಿಲುವನ್ನು ದರ್ಶಿಸಲು, ಕುವೆಂಪು ಅವರ ‘ರಾಮಾಯಣ ದರ್ಶನಂ’ ಮಹಾಕಾವ್ಯದ ‘ರಾಮವಿಲಾಪ’ ಪ್ರಸಂಗವನ್ನು ಕಲಾವಿದರು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುತ್ತಾರೆ. ವಾಲಿ-ಸುಗ್ರೀವರ ಯುದ್ಧದಲ್ಲಿ ಸಾಮೂಹಿಕ ಕೊಲೆ, ಅತ್ಯಾಚಾರಗಳಂತಹ ಅನ್ಯಾಯಗಳನ್ನು ತಪ್ಪಿಸಲು ವಾಲಿಯಂಥವನನ್ನು ಕೊಂದೆ ಎಂಬ ರಾಮನ ಸಮರ್ಥನೆಗೆ, ಲೋಹಿಯಾ ವಾಕ್ಯವನ್ನು ಉಲ್ಲೇಖಿಸಿ, “ರಾಮನಂಥವನಿಗೆ ಇಂತಹ ಸಮರ್ಥನೆ ತಕ್ಕುದಲ್ಲ” ಎಂಬ ತೀಕ್ಷ್ಣ ವಿಮರ್ಶೆಯನ್ನು ಮೇಳ ಹೇಳುತ್ತದೆ.
ಮುಂದೆ ಕೃಷ್ಣ-ಸುದಾಮರ ಸಂವಾದದಲ್ಲಿ ತೆರೆದುಕೊಳ್ಳುವ ಕೃಷ್ಣಾವತಾರದಲ್ಲಿ, ಕುಂತಿಯ ದುಃಖವು ಕರ್ಣನ ಸಾವಿಗೆ ಕೃಷ್ಣನೇ ಕಾರಣವೆಂದು ದೂಷಿಸುತ್ತದೆ. ರಾಧೆಯ ನೋವು, ಗೆಳತಿಯ ಪತ್ರದ ಓದಿನ ಮೂಲಕ ಮನಮುಟ್ಟುವಂತೆ ವ್ಯಕ್ತವಾಗುತ್ತದೆ. ರಾಮ ಮತ್ತು ಕೃಷ್ಣರ ನಡೆಗಳು, ಪ್ರಚಲಿತ ರಾಜಕೀಯ ಸನ್ನಿವೇಶಗಳ ಪರಾಮರ್ಶೆಯಾಗಿ ಮೂಡುತ್ತವೆ. ಅಂಶಾವತಾರಿ ರಾಮ, ದೇಶದಾಚೆಗೂ ಸದ್ದಿಲ್ಲದೆ ಪ್ರಭುತ್ವ ವಿಸ್ತರಿಸಿ ರಾಜಕಾರಣದಲ್ಲಿ ಪವಾಡ ಸಾಧಿಸಿದರೆ, ಪೂರ್ಣಾವತಾರಿಯಾದ ಕೃಷ್ಣನ ರಾಜಕೀಯ ಸಾಧನೆ ನೀರಿಗಿಂತ ಹೆಚ್ಚು ನೊರೆಯಾಗಿಬಿಟ್ಟಿತು ಎಂದು ಲೋಹಿಯಾ ವಿಮರ್ಶಿಸುತ್ತಾರೆ. ಹೀಗಾಗಿ, ನಾಟಕವು ವಿಮರ್ಶೆಯ ವಿಮರ್ಶೆಯಾಗಿ ರೂಪುಗೊಂಡಿರುವುದು ವಿಶೇಷ.

ಗಾಂಧಾರಿಯ ಶಾಪ, ಶ್ರೀಕೃಷ್ಣನ ಮಕ್ಕಳು ಪರಸ್ಪರ ಬಡಿದಾಡಿ ಸಾಯುವ ಸಂಕಟ, ಕೃಷ್ಣನ ಸಾವು ಬೇಡನ ಬಾಣದಿಂದ ಸಂಭವಿಸುವುದು—ಇವೆಲ್ಲವನ್ನೂ ನಾಟಕದಲ್ಲಿ ಗಾಂಧೀಜಿಯನ್ನು ಗುಂಡಿಕ್ಕಿ ಕೊಂದ ಘಟನೆಯೊಂದಿಗೆ ತಳುಕು ಹಾಕಲಾಗಿದೆ. ಗಾಂಧೀಜಿ ಸಾಯುವಾಗ ಉಚ್ಚರಿಸಿದ “ಹೇ ರಾಮ್…” ಎಂಬ ನುಡಿ ಇಲ್ಲಿ ಹೊಸ ಅರ್ಥಸಂದರ್ಭ ಪಡೆದುಕೊಳ್ಳುತ್ತದೆ.
ಮೂರನೇ ಹಂತದಲ್ಲಿ ಶಿವ ಪ್ರತ್ಯಕ್ಷನಾಗುತ್ತಾನೆ. ಲೋಹಿಯಾ, ಶಿವನನ್ನು ದೇವರೆಂದು ಮಾತ್ರವಲ್ಲ, “ಗಾತ್ರಾತೀತ” ಎನ್ನುವ ಅಸ್ತಿತ್ವವಾಗಿ ಕಾಣುತ್ತಾರೆ. *“ಏಳುಕೊಳ್ಳದ ಎಲ್ಲಮ್ಮ”*ನ ಹಾಡು, ಶಿವ-ರಾವಣರ ಭೇಟಿ, ಗಣೇಶನ ತಲೆ ಕತ್ತರಿಸಿ ಆನೆಯ ತಲೆ ಜೋಡಿಸುವ ದೃಶ್ಯ, ಋಷಿಗಳು ಶಿವನನ್ನು ಪ್ರಶ್ನಿಸುವ ಸಂದರ್ಭ—ಇವೆಲ್ಲವೂ ಸೇರಿ ನಾಟಕದ ತಾತ್ವಿಕ ಹಂತವನ್ನು ಗಟ್ಟಿಗೊಳಿಸುತ್ತವೆ.
“ರಾಮ, ಕೃಷ್ಣ, ಶಿವರನ್ನು ಪೂಜಿಸಿಯೂ ನೀವಿನ್ನೂ ಶ್ರೇಷ್ಠತೆಯ ವ್ಯಸನಗಳಲ್ಲಿ ಕೊಳೆಯುತ್ತಿದ್ದೀರಿ ಎಂದಾದರೆ, ಅಂಥ ಪೂಜೆಗಳಿಂದೇನು ಪ್ರಯೋಜನ?” ಎಂದು ಋಷಿಗಳಿಗೆ ಪ್ರಶ್ನಿಸುವ ಶಿವ, ಲಿಂಗಭಾವವನ್ನೊಡೆದು ನಿಮ್ಮೊಳಗಿನ ನಿಜವನ್ನು ಹುಡುಕಿ ಎಂದು ಹೇಳುತ್ತಾನೆ. ಈ ಹಂತದಲ್ಲಿ ಶಿಶುನಾಳ ಶರೀಫರ ತತ್ವಪದ—
“ಕೇಳ ಜಾಣ, ಶಿವ ಧ್ಯಾನವ ಮಾಡಣ್ಣ…
ನಿನ್ನೊಳಗ ನೀನು ತಿರುಗಿ ನೋಡಣ್ಣ…”
ಎಂಬ ಮೇಳದ ಹಾಡಿನೊಂದಿಗೆ ನಾಟಕ ಅರ್ಥಪೂರ್ಣವಾಗಿ ಮುಕ್ತಾಯಗೊಳ್ಳುತ್ತದೆ.

ಐದು ಮಂದಿ ಪಾತ್ರಧಾರಿಗಳೇ—ಮಂಜು ಕಾಸರಗೋಡು, ಅಜಿತ್ ಸಿಂಹ, ನಯನ ಸಿ., ರಾಧಾ ರಾಮಚಂದ್ರನ್, ಮಾಧವ ಜೋಗಿ—ರಂಗದ ಮೇಲೆ ಹಲವು ಪಾತ್ರಗಳಲ್ಲಿ ಪರಕಾಯ ಪ್ರವೇಶಿಸಿ, ಹಾಡು, ಅಭಿನಯ, ಮಾತು, ನೃತ್ಯ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿರುವುದು ನಿಜಕ್ಕೂ ಅಪರೂಪದ ಸಾಧನೆ. ಇದನ್ನು “ದಿ ಬೆಸ್ಟ್ ಅಂಡ್ ಗ್ರೇಟ್” ಎನ್ನದೇ ಇರಲು ಸಾಧ್ಯವಿಲ್ಲ.
ಶುಭಕರ ಪುತ್ತೂರು ಮತ್ತು ಕೃಷ್ಣ ಅಟ್ಟದಮನಿ ಮಳ್ಳಿ ಅವರ ಸಂಗೀತ ಸಾಂಗತ್ಯ, ಪೃಥ್ವಿನ್ ಉಡುಪಿ ಅವರ ಬೆಳಕು ವಿನ್ಯಾಸ, ರಂಗ ಪರಿಕರದಲ್ಲಿ ಗೋಪಿನಾಥ ಸಾಗರ ಮತ್ತು ನಾಗರಾಜ ಶಿವಶಿಂಪಿ ಅವರ ಕೊಡುಗೆ ನಾಟಕದ ಪರಿಣಾಮವನ್ನು ಹೆಚ್ಚಿಸಿವೆ.
ಭಾರತದ ಪುರಾಣ, ಸಮಕಾಲೀನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಗಳಿಗೆ ಲೋಹಿಯರ ಲೇಖನವನ್ನು ಕನ್ನಡಿಯಾಗಿ ಹಿಡಿದು, ಅದನ್ನು ರಂಗರೂಪಾಂತರ ಮಾಡಿ ಎರಡು ಗಂಟೆಗಳಲ್ಲಿ ಗಟ್ಟಿಯಾಗಿ ಕಟ್ಟಿಕೊಟ್ಟ ನಿರ್ದೇಶಕ ಗಣೇಶ್ ಮಂದಾರ್ತಿ ಪ್ರೇಕ್ಷಕರಿಗೆ ಆಪ್ತರಾಗುತ್ತಾರೆ.
ಈ ನಾಟಕ ಹಾಸನದಲ್ಲಿ ಪ್ರದರ್ಶನಗೊಳ್ಳಲು ಸಹಕಾರಿಯಾದ ಪತ್ರಕರ್ತರಾದ ವೆಂಕಟೇಶ್ ಮೂರ್ತಿ, ಚಲಂ ಹಾಡ್ಲಹಳ್ಳಿ ಹಾಗೂ ಅವರ ತಂಡ ಅಭಿನಂದನಾರ್ಹರು.
ಗೊರೂರು ಅನಂತರಾಜು, ಹಾಸನ
ಮೊ.: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್,
3ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ – 573201.
