
ನವದೆಹಲಿ: ಈ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 13 ಹಾಗೂ 14ಕ್ಕೆ ಘಟಿಸಲಿದೆ.
ಬ್ಲಡ್ ಮೂನ್ ಎಂದು ಕರೆಯಲ್ಪಡುವ ಈ ಚಂದ್ರಗ್ರಹಣ ಹಲವು ವಿಶೇಷತೆ ಹೊಂದಿದೆ. ಪೂರ್ಣ ಚಂದ್ರಗ್ರಹಣದ ವೇಳೆ ಚಂದ್ರ ಕೆಂಪಾಗಿ ಕಾಣುತ್ತಾನೆ. ಹೀಗಾಗಿ ಇದಕ್ಕೆ ಬ್ಲಡ್ ಮೂನ್ ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಆಕಾಶದಲ್ಲಿನ ಈ ವಿಶೇಷ ವಿದ್ಯಮಾನ ವೀಕ್ಷಿಸಲು ವಿಜ್ಞಾನಿಗಳು ಸೇರಿದಂತೆ ಹಲವು ಈಗಲೇ ತಯಾರಿ ಮಾಡಿಕೊಂಡಿದ್ದಾರೆ. ಮಾ.14ರಂದು ಹೋಳಿ ಹಬ್ಬ ನಡೆಯಲಿದೆ. ಇಡೀ ದೇಶ ಬಣ್ಣದ ಹಬ್ಬದಲ್ಲಿ ಮುಳುಗಿದರೆ, ಅದೇ ದಿನ ಚಂದ್ರ ಕೆಂಪಾಗಲಿದ್ದಾನೆ.
ಏನಿದು ಬ್ಲಡ್ ಮೂನ್: ಚಂದ್ರಗ್ರಹಣದ ವೇಳೆ ಚಂದ್ರ ಕೆಂಪಗೆ ಕಾಣುವ ವಿದ್ಯಮಾನವೇ ಬ್ಲಡ್ ಮೂನ್. ಗಾಢ ಕೆಂಪು ಬಣ್ಣದಿಂದ ಕೂಡಿರುವ ಕಾರಣ ಇದನ್ನು ಬ್ಲಡ್ ಮೂನ್ ಎನ್ನುತ್ತಾರೆ. ಸೂರ್ಯ , ಭೂಮಿ ಹಾಗೂ ಚಂದ್ರ ಭೂಮಿಯ ಮಧ್ಯರೇಖೆಯಲ್ಲಿ ಬಂದಾಗ ಸಂಭವಿಸುವುದೇ ಪೂರ್ಣ ಚಂದ್ರಗ್ರಹಣ. ಈ ವೇಳೆ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳಲು ತಡೆ ಎದುರಾಗುತ್ತದೆ. ಈ ವೇಳೆ ಚಂದ್ರ ಕೆಂಪು ಬಣ್ಣದಲ್ಲಿ ಗೋಚರಿಸುತ್ತಾನೆ. ಭೂಮಿಯ ವಾತಾವರಣದಲ್ಲಿ ಸೂರ್ಯನ ಬೆಳಕು ವಕ್ರೀಭವನ ಮತ್ತು ಪ್ರಸರಣ ಕ್ರಿಯೆಗಳಿಗೆ ಒಳಗಾಗುವುದರಿಂದ ರಕ್ತ ಚಂದ್ರನಂತೆ ಕಾಣುತ್ತದೆ. ವಾತಾವರಣದಲ್ಲಿರುವ ಧೂಳು, ಅನಿಲ ಮತ್ತು ಇತರ ಕಣಗಳಿಂದಾಗಿ ಕೆಂಪು ಕಿರಣಗಳಲ್ಲಿ ವ್ಯತ್ಯಾಸ ಉಂಟಾಗಬಹುದು.
2025ರಲ್ಲಿ ಬ್ಲಡ್ ಮೂನ್ ಯಾವಾಗ ಕಾಣಿಸುತ್ತದೆ: ಈ ವರ್ಷ ಮಾರ್ಚ್ 14ರಂದು ರಕ್ತ ಚಂದ್ರ 65 ನಿಮಿಷಗಳ ಕಾಲ ಗೋಚರಿಸುತ್ತಾನೆ. ಮಾರ್ಚ್ 14ರಂದು ಬೆಳಗ್ಗೆ 09:29ಕ್ಕೆ ಚಂದ್ರಗ್ರಹಣ ಆರಂಭವಾಗಿ ಸಂಜೆ 3:29ಕ್ಕೆ ಮುಕ್ತಾಯವಾಗುತ್ತದೆ. ಮಾರ್ಚ್ 14ರಂದು ಬೆಳಗ್ಗೆ 11:29ರಿಂದ ಮಧ್ಯಾಹ್ನ 1:01ರವರೆಗೆ ‘ರಕ್ತ ಚಂದ್ರ’ ಕಾಣಸಿಗುತ್ತಾನೆ. ಈ ಸಮಯದಲ್ಲಿ ಚಂದ್ರ 65 ನಿಮಿಷಗಳ ಕಾಲ ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಸಮಯ ವಲಯದ ಪ್ರಕಾರ, ಮಾರ್ಚ್ 13ರ ರಾತ್ರಿ ಅಥವಾ ಮಾರ್ಚ್ 14ರ ಮುಂಜಾನೆ ಚಂದ್ರ ಭೂಮಿಯ ನೆರಳಿನೊಳಗೆ ಪ್ರವೇಶಿಸಿ ಕೆಂಪಾಗುತ್ತಾನೆ ಎಂದು ನಾಸಾ ಹೇಳಿದೆ.
2025ರಲ್ಲಿ ಬ್ಲಡ್ ಮೂನ್ ಎಲ್ಲಿ ಕಾಣಿಸುತ್ತದೆ: ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಜನರಿಗೆ ಈ ವಿದ್ಯಮಾನದ ಅತ್ಯುತ್ತಮ ನೋಟ ಸಿಗಲಿದೆ. ನಾಸಾ ಪ್ರಕಾರ, ಪಶ್ಚಿಮ ಗೋಳಾರ್ಧದ ಕೆಲವು ಪ್ರದೇಶಗಳಲ್ಲಿ ಮತ್ತು ಸ್ಪಷ್ಟ ಆಕಾಶದಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ. 2022ರ ನವೆಂಬರ್ ನಂತರದ ಮೊದಲ ಬ್ಲಡ್ ಮೂನ್ ಇದಾಗಿದೆ. ಆದರೂ, ಜಾಗತಿಕ ಜನಸಂಖ್ಯೆಯ 13 ಪ್ರತಿಶತದಷ್ಟು ಜನರಿಗೆ ಮಾತ್ರ ಈ ಗ್ರಹಣವನ್ನು ನೋಡಲು ಸಾಧ್ಯವಾಗುತ್ತದೆ. ಆಸ್ಟ್ರೇಲಿಯಾ, ಯುರೋಪ್, ಆಫ್ರಿಕಾದ ಬಹುತೇಕ ಭಾಗ, ಉತ್ತರ ಮತ್ತು ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್ ಆರ್ಕ್ಟಿಕ್ ಸಾಗರ, ಪೂರ್ವ ಏಷ್ಯಾದ ನಗರಗಳಲ್ಲಿ ಇದು ಗೋಚರಿಸುತ್ತದೆ.
2025ರಲ್ಲಿ ರಕ್ತ ಚಂದ್ರ ಭಾರತದಲ್ಲಿ ಕಾಣಿಸುತ್ತಾನೆಯೇ?: ಭಾರತದಲ್ಲಿ ಚಂದ್ರಗ್ರಹಣದ ಸಮಯದಲ್ಲಿ ಹಗಲು ಇರುತ್ತದೆ. ಆದ್ದರಿಂದ ರಕ್ತ ಚಂದ್ರನ ನೋಟ ಭಾರತದಲ್ಲಿ ಗೋಚರಿಸುವುದಿಲ್ಲ. ಆದರೂ, ಹಲವು ಯೂಟ್ಯೂಬ್ ಚಾನೆಲ್ಗಳು ಸೇರಿದಂತೆ ಹಲವು ಚಾನೆಲ್ಗಳು ಈ ಆಕಾಶ ವಿದ್ಯಮಾನವನ್ನು ನೇರ ಪ್ರಸಾರ ಮಾಡುತ್ತವೆ. ಅದರ ಮೂಲಕ ನೀವು ಈ ಸುಂದರವಾದ ಬ್ಲಡ್ ಮೂನ್ ನೋಡಬಹುದು.