ಬೆಂಗಳೂರು: ಇಂದು ನಡೆಯಲಿರುವ ಚಂದ್ರಗ್ರಹಣ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸಂಪೂರ್ಣ ಕಾಣಿಸಲಿದ್ದು, ಕರ್ನಾಟಕದಲ್ಲಿ ಸಂಜೆ ಭಾಗಶಃ ಗೋಚರವಾಗಲಿದೆ. ಇಂದು (ಮಾ.3) ಮಧ್ಯಾಹ್ನ 3.20ಕ್ಕೆ ಪ್ರಾರಂಭವಾಗಿ 6.47 ಕೊನೆಗೊಳ್ಳಲಿದೆಇದು 2026 ಏಕೈಕ ಚಂದ್ರಗಹಣ. ಹುಣ್ಣಿಮೆಯಂದು ನಡೆಯುವುದರಿಂದ ಭಾರತೀಯರಿಗೆ ಇದು ಗ್ರಹಣವೆಂದು ಅನಿಸದು.
ಕಾರಣ ಗ್ರಹಣ ಸಂಪೂರ್ಣ ಮುಗಿಯುವ ಹಂತದಲ್ಲಿ ಚಂದ್ರೋದಯವಾಗುವುದರಿಂದ ನಮಗೆ ಗ್ರಹಣದ ಚಂದ್ರ ಕಾಣುವುದೇ 9 ನಿಮಿಷ ಮಾತ್ರ. ಅದೂ ಪಾರ್ಶ್ವ ಚಂದ್ರಗ್ರಹಣ. ಬರೀ ಚಂದ್ರನ ಶೇ.8 ಭಾಗ ಮಾತ್ರ ಗ್ರಹಣ ಆವರಿಸಲಿದೆ.
ಸಂಜೆ 6.47ಕ್ಕೆ ಗ್ರಹಣ ಮುಗಿಯುವುದರಿಂದ ಗ್ರಹಣದ ಚಂದ್ರ ಕಾಣ ಸಿಗುವುದು ಕಷ್ಟ. ಈ ಗ್ರಹಣದ ಕಡೆಯ ಶೇ.8 ಅಂಶ ಅಂದರೆ ಬರೇ 9 ನಿಮಿಷ ಗ್ರಹಣ ಗೋಚರಿಸುವುದು ಹೌದಾದರೂ ನೋಡಲು ಕಷ್ಟ ಎಂದಿದ್ದಾರೆ ಡಾ.ಎ.ಪಿ.ಭಟ್ ಖಗೋಳತಜ್ಞ.
ಭೂಮಿಯ ನೆರಳು ಚಂದ್ರನ ಮೇಲೆ ಭಾಗಶಃ ಬೀಳುವುದರಿಂದ ನೆರಳಿನ ಸ್ವಲ್ಪ ಭಾಗವನ್ನು ನೋಡಬಹುದಾಗಿದೆ. ಇದಕ್ಕಾಗಿ ದೇವಸ್ಥಾನಗಳ ಬಾಗಿಲು ಹಾಕುವ ಅವಶ್ಯಕತೆಯೂ ಇಲ್ಲ. ಎಲ್ಲರೂ ಬರಿಗಣ್ಣಿನಿಂದಲೇ ಗ್ರಹಣ ವೀಕ್ಷಿಸಬಹುದು ಎನ್ನುತ್ತಾರೆ ಎಚ್.ಎಸ್.ಟಿ.ಸ್ವಾಮಿ ಹವ್ಯಾಸಿ ಖಗೋಳ ವೀಕ್ಷಕ.
ಗ್ರಹಣದ ವೇಳೆ ದೇವಾಲಯ ದರ್ಶನವಿಲ್ಲ!
ಗ್ರಸ್ತೋದಯ ಚಂದ್ರಗ್ರಹಣ, ಹುಬ್ಬಾ ನಕ್ಷತ್ರ, ಸಿಂಹ ರಾಶಿಯಲ್ಲಿ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸಲಿದೆ. ಇದು ಖಗ್ರಾಸವಾಗಿದ್ದರೂ ಗ್ರಸ್ತೋದಯವಾಗಿ ಕಾಣಿಸಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಪ್ರಮುಖ ದೇವಾಲಯಗಳ ಪೂಜಾ ಸಮಯದಲ್ಲಿ ಬದಲಾವಣೆಯಾಗಲಿದೆ.
ದರ್ಶನ ಅವಕಾಶ ಇರುವ ದೇಗುಲಗಳು
ಕೊಲ್ಲೂರು ಮೂಕಾಂಬಿಕೆ, ಮಲೆ ಮಹದೇಶ್ವರ, ಬಸವನಗುಡಿ ದೊಡ್ಡಗಣಪತಿ ದೇವಾಲಯ, ನಿಡಗುಂದಿ ಯಲಗೂರು ಆಂಜನೇಯ ದೇವಸ್ಥಾನ, ಬಳ್ಳಾರಿ ಕನಕ ದುರ್ಗಮ್ಮ, ಮಂತ್ರಾಲಯ, ರಾಯಚೂರು ಕಲ್ಲೂರು ಮಹಾಲಕ್ಷ್ಮಿ, ಕುರುಗೋಡು ದೊಡ್ಡಬಸವೇಶ್ವರ, ಚಿಂಚಲಿ ಮಾಯಕ್ಕಾ ದೇವಿ, ಗೋಕರ್ಣ ಮಹಾಬಲೇಶ್ವರ, ಹುಬ್ಬಳ್ಳಿ ಸಿದ್ದಾರೂಢಮಠ, ನಂಜನಗೂಡು ಶ್ರೀಕಂಠೇಶ್ವರ ದೇಗುಲ
ಖಗೋಳ ವೀಕ್ಷಣೆಗೆ ಗ್ರಹಣವೇ ಹಬ್ಬ
ವರ್ಷಕ್ಕೊಮ್ಮೆ ಬರುವ ಹಬ್ಬ, ಜಾತ್ರೆ, ಉತ್ಸವ ಎಂದರೆ ಸಡಗರ ಸಂಭ್ರಮ. ಅದೇ ರೀತಿಯಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು, ಖಗೋಳ ವೀಕ್ಷಕರಿಗೆ ಗ್ರಹಣವೇ ದೊಡ್ಡ ಹಬ್ಬ. ಸೂರ್ಯ, ಭೂಮಿ ಮತ್ತು ಚಂದ್ರನ ನಡುವಿನ ನೆರಳು ಬೆಳಕಿನ ಆಟವನ್ನು ಅವರು ನೋಡಿ ಕಣ್ತುಂಬಿಕೊಳ್ಳುವುದರ ಜತೆಗೆ ಅಲ್ಲಿನ ಕೌತುಕಗಳ ಬಗ್ಗೆ ದೃಷ್ಟಿ ಇಡುತ್ತಾರೆ. ಹೊಸ ಅಧ್ಯಯನಕ್ಕೂ ಗ್ರಹಣ ದಾರಿ ಮಾಡಿಕೊಡುತ್ತದೆ. ಮಾ.3ರಂದು ಸಂಭವಿಸುವ ಚಂದ್ರಗ್ರಹಣ ಸಹ ಬಾಹ್ಯಾಕಾಶ ವಿಜ್ಞಾನಿಗಳಿಗೆ ಕೌತುಕದ ಕೇಂದ್ರವಾಗಿದೆ.
ಗ್ರಹಣ ಎಂದರೇನು?
ಸೂರ್ಯನ ಸುತ್ತ ಭೂಮಿ ಸುತ್ತುವಂತೆ, ಭೂಮಿಯ ಸುತ್ತ ಚಂದ್ರ ಸುತ್ತುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗೆ ಸುತ್ತುವಾಗ ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ಸರಳರೇಖೆಯಲ್ಲಿ ಬಂದಾಗ ಗ್ರಹಣ ಉಂಟಾಗುತ್ತದೆ. ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ ಚಂದ್ರ ಗ್ರಹಣವಾಗುತ್ತದೆ. ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯ ಗ್ರಹಣವಾಗುತ್ತದೆ. ಸಾಮಾನ್ಯವಾಗಿ ಹುಣ್ಣಿಮೆಯಲ್ಲಿ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಗ್ರಹಣದಲ್ಲಿ ಮೂರು ವಿಧಗಳಿವೆ. ಸಂಪೂರ್ಣ ಚಂದ್ರ ಗ್ರಹಣ, ಪಾಶ್ರ್ವ ಚಂದ್ರಗ್ರಹಣ ಮತ್ತು ಕಂಕಣ ಚಂದ್ರ ಗ್ರಹಣ.
ಮಂಗಳವಾರ ಸಂಭವಿಸುತ್ತಿರುವುದು ಸಂಪೂರ್ಣ ಚಂದ್ರಗ್ರಹಣ. ಭಾರತೀಯ ಕಾಲಮಾನ ಮಧ್ಯಾಹ್ನ 3.20ಗಂಟೆಗೆ ಆರಂಭವಾಗಿ ಸಂಜೆ 6.48ಕ್ಕೆ ಕೊನೆಗೊಳ್ಳುತ್ತದೆ. ಸಂಜೆ 4.34ಗಂಟೆಗೆ ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣ ಆವರಿಸಿಕೊಳ್ಳುತ್ತದೆ. ಸಂಜೆ 5.33ರ ನಂತರ ಬಿಡುಗಡೆಗೊಳ್ಳುತ್ತಾ ಸಾಗಿ 6.48ಕ್ಕೆ ಪೂರ್ಣಗೊಳ್ಳುತ್ತದೆ. ಸುದೀರ್ಘ ಅವಧಿಯ ಚಂದ್ರಗ್ರಹಣ ಪೂರ್ವ ಏಷ್ಯಾ, ಆಸ್ಪ್ರೇಲಿಯಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಗೋಚರವಾಗುತ್ತದೆ. ಭಾರತದಲ್ಲೂ ಗ್ರಹಣ ಸಂಭವಿಸುತ್ತದೆಯಾದರೂ ಕೇವಲ 10ರಿಂದ 20 ನಿಮಿಷ ಮಾತ್ರ ಇರುತ್ತದೆ.
ಚಂದ್ರ ಕೆಂಪಾಗುವುದೇಕೆ?
ಸೂರ್ಯನ ಬೆಳಕು ಭೂಮಿಯ ವಾತಾವರಣವನ್ನು ಹಾದು ಭೂಮಿಗೆ ತಲುಪುವಾಗ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಭೂಮಿ ಮೇಲಿನ ಧೂಳು ಹೆಚ್ಚಾದಷ್ಟು ಕೆಂಪು ಬಣ್ಣ ವೃದ್ಧಿಯಾಗುತ್ತದೆ. ಭೂಮಿ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರ ಸಹ ಕೆಂಪಾಗಿ ಗೋಚರಿಸುತ್ತಾನೆ. ಹೀಗಾಗಿ ಅದನ್ನು ಬ್ಲಡ್ ಮೂನ್ ಎಂದು ಕರೆಯುತ್ತಾರೆ. ವಾಸ್ತವದಲ್ಲಿ ಚಂದ್ರನಿಗೆ ಬಣ್ಣವಿಲ್ಲ. ಭೂಮಿಯ ನೆರಳಿನಿಂದಾಗಿ ಹಾಗೆ ಗೋಚರವಾಗುತ್ತದೆ. ಯಾವುದೇ ರೀತಿಯ ಚಂದ್ರಗ್ರಹಣವನ್ನು ಯಾವುದೇ ಉಪಕರಣಗಳಿಲ್ಲದೆ ಬರಿಗಣ್ಣಿನಲ್ಲೇ ನೋಡಬಹುದಾಗಿದೆ. ಅಲ್ಲದೆ ಬೈನಾಕುಲರ್ ಮತ್ತು ಟೆಲಿಸ್ಕೋಪ್ಗಳ ಮೂಲಕವೂ ವೀಕ್ಷಿಸಬಹುದು. ನೆರಳು ಬೆಳಕಿನ ಆಟದ ವೀಕ್ಷಣೆಯಿಂದ ಯಾವುದೇ ಸಮಸ್ಯೆ ಇರದ ಕಾರಣ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ವಿಶ್ವದ ಹಲವು ದೇಶಗಳ ಕೋಟ್ಯಂತರ ಜನ ಕಾತರದಿಂದ ಕಾಯುತ್ತಿದ್ದಾರೆ.
ಮಂಗಳವಾರ ಈ ವರ್ಷದ ಮೊದಲ ಚಂದ್ರ ಗ್ರಹಣವಾಗಿದೆ. ಮತ್ತೊಂದು ಚಂದ್ರಗ್ರಹಣ ವೀಕ್ಷಣೆಗೆ ಎರಡೂವರೆ ವರ್ಷ ಕಾಯಬೇಕಾಗುತ್ತದೆ. 2028ನೇ ಜುಲೈ 6 ಮತ್ತು 7ರಂದು ಪಾಶ್ರ್ವ ಚಂದ್ರಗ್ರಹಣ ಮತ್ತು 2028ನೇ ಡಿಸೆಂಬರ್ 31ರಂದು ಸಂಪೂರ್ಣ ಚಂದ್ರ ಗ್ರಹಣ ಸಂಭವಿಸಲಿದ್ದು ಭಾರತದೆಲ್ಲೆಡೆ ನೋಡಬಹುದಾಗಿದೆ.
