ಎಚ್.ಡಿ.ಕೋಟೆ: ನಾಗಮೋಹನ್ ದಾಸ್ ಆಯೋಗದ ವರದಿಯಂತೆ ಸಂಪೂರ್ಣ ಒಳ ಮೀಸಲಾತಿ ಜಾರಿ ಮಾಡದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಸಿ.ಮಹದೇವಪ್ಪ ಮಾದಿಗ ಜನಾಂಗಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಡಾ.ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ, ಮಾತಂಗ ಜನ ಜಾಗೃತಿ ವೇದಿಕೆ ಸಂಘಟನೆಗಳು ಅರೆಬೆತ್ತಲೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಡಾ.ಬಿಆರ್.ಅಂಬೇಡ್ಕರ್ ಭವನದಿಂದ ಪ್ರತಿಭಟನೆ ಘೋಷಣೆ ಕೂಗಿ ತಹಸಿಲ್ದಾರ್ ಕಚೇರಿ ವರೆಗೆ ಮೆರವಣಿಗೆಯಲ್ಲಿ ಸಾಗಿ ಉಪ ತಹಸಿಲ್ದಾರ್ ಮೂಲಕ ಮನವಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ರಸ್ತೆ ತಡೆ ನಡಸಲು ಮುಂದಾದಾಗ ಕೆಲ ಕಾಲ ಸರ್ಕಲ್ ಇನ್ಸ್ ಪೆಕ್ಟರ್ ಗಂಗಾಧರ್ ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಡಾ.ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಅಧ್ಯಕ್ಷ ಸಿ.ತಿಮ್ಮಯ್ಯ ಮಾತನಾಡಿ, ಮಾದಿಗ ಸಮುದಾಯ ಸುಮಾರು 35 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡುತ್ತಿದೆ. ನಾಗಮೋಹನ್ ದಾಸ್ ಆಯೋಗದಂತೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಒಳ ಮೀಸಲಾತಿ ಜಾರಿ ಮಾಡಬೇಕಿತ್ತು. ಆದರೆ, ಅರೆಬರೆ ಮೀಸಲಾತಿ ಜಾರಿ ಮಾಡಿ ಸಿಎಂ ಹಾಗೂ ಉಸ್ತುವಾರಿ ಸಚಿವರು ಅನ್ಯಾಯ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸದ್ಯದಲ್ಲಿಯೇ ಸಂಪೂರ್ಣವಾಗಿ ಒಳ ಮೀಸಲಾತಿಯನ್ನು ಜಾರಿ ಮಾಡದಿದ್ದಲ್ಲಿ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಕೆಲಸವನ್ನು ಮಾದಿಗ ಸಮುದಾಯ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಅಧ್ಯಕ್ಷ ಪಿ.ನಾಗರಾಜು ಮಾತನಾಡಿ, ಮಾದಿಗ ಸಮುದಾಯ ಇಡೀ ರಾಜ್ಯಾದ್ಯಂತ ರಾಜಕೀಯವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿರುವ ಸಮುದಾಯ. ಈ ಸಮುದಾಯಕ್ಕೆ ನ್ಯಾಯವನ್ನು ದೊರಕಿಸಬೇಕಾದರೆ ಸಂಪೂರ್ಣವಾಗಿ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು. ಬಡ್ತಿ, ನೇರ ನೇಮಕಾತಿ, ಉದ್ಯೋಗಕ್ಕೆ ಸಂಬಂಧಿಸಿದಂತೆ ಆದಿ ಕರ್ನಾಟಕ ಆದಿ ದ್ರಾವಿಡ ಆದಿ ಆಂಧ್ರದಲ್ಲಿ ಆಗಿರುವ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆ ಹರಿಸಬೇಕು ಎಂದು ಹೇಳಿದರು.

ಗೌರವಾಧ್ಯಕ್ಷ ಪರಶಿವಮೂರ್ತಿ, ಉಪಾಧ್ಯಕ್ಷ ಉಡ ನಾಗರಾಜ್, ಮಾಜಿ ಅಧ್ಯಕ್ಷ ಪಿ.ನಾಗರಾಜು, ಸುಭಾಷ್, ಮಾತಂಗ ಜನಜಾಗೃತಿ ವೇದಿಕೆಯ ಅಧ್ಯಕ್ಷ ಬೂದನೂರು ರವೀಶ್, ವೆಂಕಟೇಶ್, ಡಿ.ನಾಗರಾಜ್, ಬೆಟ್ಟಸ್ವಾಮಿ, ಬಸವರಾಜು, ಶಿವಯ್ಯ, ಶಿವರಾಜ್, ಮಹೇಶ್, ಪ್ರಕಾಶ್, ದೇವನಾಥ, ಚೆಲುವರಾಜು, ಶಿವರಾಜ್, ಸೋಮು ಪಟೇಲ್, ಕಾಳಪ್ಪಾಜಿ ಸಿ, ಹಂಚೀಪುರ ನಾಗರಾಜ್, ಮಹದೇವ, ನಾಗೇಂದ್ರ, ಶಿವಾಜಿ, ಶಿವರಾಜ್, ಮಂಜು, ಚೇತನ್, ಸೇರಿದಂತೆ ಡಾ.ಬಾಬು ಜಗಜೀವನ್ ರಾಮ್ ವಿಚಾರ ವೇದಿಕೆ ಮತ್ತು ಮಾತಂಗ ಜನ ಜಾಗೃತಿ ವೇದಿಕೆ ಪದಾಧಿಕಾರಿಗಳು ಅಕ್ಕಪಕ್ಕ ಗ್ರಾಮದ ಯಜಮಾನರು ಮುಖಂಡರು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
– ಶಿವಕುಮಾರ್ ಕೋಟೆ
