
ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ಮುಕ್ತಾಯಗೊಂಡ ಮಹಾಕುಂಭಕ್ಕೆ ಬರೋಬ್ಬರಿ 66 ಕೋಟಿ ಜನರು ಭೇಟಿ ನೀಡಿದ್ದು ಅಂತಿಂಥ ಸಂಗತಿಯಲ್ಲ. ಯಾವುದೇ ಮಾನದಂಡದಲ್ಲೂ ಇದು ವಿಶ್ವದಾಖಲೆಯ ಕಾರ್ಯಕ್ರಮ. ಉತ್ತರಪ್ರದೇಶ ಸರ್ಕಾರ ಮಹಾಕುಂಭದ ವ್ಯವಸ್ಥೆಗೆ 7,500 ಕೋಟಿ ರೂ ಬಜೆಟ್ ಹಾಕಿದಾಗ ಬಹಳಷ್ಟು ಜನರು ಲೇವಡಿ ಮಾಡಿದ್ದುಂಟು.
ಅಭಿವೃದ್ಧಿಗೆ ಒತ್ತು ಕೊಡುತ್ತೇವೆನ್ನುವ ಮುಖ್ಯಮಂತ್ರಿ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಸಾವಿರಾರು ಕೋಟಿ ರೂ ವ್ಯಯಿಸುತ್ತಿದ್ದಾರೆ ಎಂದು ವಿರೋಧಿಗಳು ಹೇಳಿದ್ದುಂಟು. ಆದರೆ, ನಂತರ ಆಗಿದ್ದೇ ಬೇರೆ… 144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಕ್ಕೆ (Mahakumbh) ನಿರೀಕ್ಷೆ ಮೀರಿದ ಸಂಖ್ಯೆಯಲ್ಲಿ ಹರಿದುಬಂದ ಜನಪ್ರವಾಹ ಹಲವರ ಲೆಕ್ಕಾಚಾರವನ್ನೇ ಬದಲಿಸುವಂತೆ ಮಾಡಿತ್ತು.
46 ದಿನಗಳ ಕಾಲ ನಡೆದ ಮಹಾಕುಂಭಕ್ಕೆ 66 ಕೋಟಿ ಜನರು ಭೇಟಿ ನೀಡಿದ್ದಾರೆ. ಇದರಿಂದ ಆರ್ಥಿಕ ಚಟುವಟಿಕೆಯಾಗಿದ್ದು ಬರೋಬ್ಬರಿ 3 ಲಕ್ಷ ಕೋಟಿ ರೂನಷ್ಟು. 66 ಕೋಟಿ ಜನರು ಒಂದು ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದು ಇತಿಹಾಸದಲ್ಲೇ ಅಪೂರ್ವವಾದ ಸಂಗತಿ. ಹಜ್ ಯಾತ್ರೆಗೆ 25 ಲಕ್ಷ, ರಯೋ ಕಾರ್ನಿವಲ್ಗೆ (Rio carnival) 70 ಲಕ್ಷ, ಅಕ್ಟೋಬರ್ಫೆಸ್ಟ್ಗೆ 72 ಲಕ್ಷ ಜನರು ಸರಾಸರಿಯಾಗಿ ಪಾಲ್ಗೊಳ್ಳುತ್ತಾರೆ ಎನ್ನುವ ಅಂಕಿ ಅಂಶ ಇಟ್ಟು ನೋಡಿದಾಗ ಮಹಾಕುಂಭದ್ದು ಅಕ್ಷರಶಃ ದೈತ್ಯ ದರ್ಶನ. ಈ ಹಿಂದೆ ನಡೆದ ಕುಂಭಮೇಳಗಳಲ್ಲಿ 5ರಿಂದ 25 ಕೋಟಿ ಜನರು ಭೇಟಿ ನೀಡಿರುವುದುಂಟು. ಹೀಗಾಗಿ, ಯಾವುದೇ ಕೋನದಲ್ಲೂ 2025ರ ಮಹಾಕುಂಭವು ಮಹತ್ತರದ್ದೆನಿಸುತ್ತದೆ
66 ಕೋಟಿ ಜನರು ಹಾಗೆ ಬಂದು ಹೀಗೆ ಹೋಗುವುದಿಲ್ಲ. ಇವರಿಂದ ಅದೆಷ್ಟು ಬಿಸಿನೆಸ್ ಸೃಷ್ಟಿಯಾಗಬಹುದು ಎಂದು ಯಾರು ಬೇಕಾದರೂ ಊಹಿಸಬಹುದು. ಪ್ರಯಾಣ ವೆಚ್ಚ, ಹೋಟೆಲ್, ಗೆಸ್ಟ್ ಹೌಸ್, ಕ್ಯಾಂಪ್ ವಸತಿ, ಆಹಾರ, ಧಾರ್ಮಿಕ ವಸ್ತುಗಳು, ಕ್ಯಾಬ್, ಬೋಟ್, ಆಸ್ಪತ್ರೆ ಮತ್ತಿತರ ಹಲವು ವಸ್ತು ಮತ್ತು ಸೇವೆಗಳಿಗೆ ಭಕ್ತರು ಹಣ ವ್ಯಯಿಸುತ್ತಾರೆ. ಬೋಟ್ ಚಾಲಕರು, ಬೈಕ್ ರೈಡರ್ಗಳು, ಕ್ಯಾಬ್ ಡ್ರೈವರ್ಗಳಿಗೆ ಸಖತ್ ಆದಾಯವೇ ಸಿಕ್ಕಿದೆ. ಮಹಾಕುಂಭಕ್ಕೆ ಸರ್ಕಾರ ಅಪ್ರತಿಮ ಎನಿಸಬಹುದಾದಂತಹ ವ್ಯವಸ್ಥೆ ಮಾಡಿತ್ತು. ಅದರ ಕೆಲ ಮುಖ್ಯಾಂಶಗಳನ್ನು ನೋಡುವುದಾದರೆ….
ಟೆಂಟ್ಗಳ ನಿರ್ಮಾಣದ ಅಂಕಿ ಅಂಶಗಳು…
ಪ್ರಯಾಗ್ರಾಜ್ನಲ್ಲಿ ಟೆಂಟ್ ವಸತಿಗಳೇ ಇರುವ ಬೃಹತ್ ತಾತ್ಕಾಲಿಕ ನಗರವನ್ನೇ ನಿರ್ಮಿಸಲಾಗಿತ್ತು. 48 ಲಕ್ಷ ಮರದ ಕೋಲುಗಳನ್ನು ಇದಕ್ಕೆ ಬಳಸಲಾಗಿದೆ. ಒಂದೊಂದೂ ಕೂಡ ಸರಾಸರಿಯಾಗಿ 10 ಅಡಿ ಎಂದಿಟ್ಟುಕೊಂಡರೂ, ಅವುಗಳೆಲ್ಲವನ್ನೂ ಜೋಡಿಸುತ್ತಾ ಹೋದರೆ ಅದೇ 20,726 ಕಿಮೀಯಷ್ಟಾಗುತ್ತದೆ
ಟೆಂಟ್ ನಿರ್ಮಾಣಕ್ಕೆ ಬಳಸಲಾದ ಬಟ್ಟೆಯ ಉದ್ದ 100 ಕಿಮೀ ಆಗುತ್ತದೆ. ಹಾಗೆಯೇ, 250 ಟನ್ ಸಿಜಿಐ ಶೀಟ್ಗಳನ್ನು ಬಳಸಾಗಿದೆ. ಈ ಟೆಂಟ್ ಸಿಟಿ ನಿರ್ಮಿಸಲು 3,000 ಕಾರ್ಮಿಕರು 6 ತಿಂಗಳು ಕೆಲಸ ಮಾಡಿದ್ದಾರೆ.
ನೀರೊಳಗೆ ಡ್ರೋನ್ಗಳು, ಎಐ ಕ್ಯಾಮರಾಗಳು….
ಮಹಾಕುಂಭಕ್ಕೆ ಭದ್ರತಾ ವ್ಯವಸ್ಥೆ ಸಮರ್ಪಕವಾಗಿತ್ತು. 50,000 ಪೊಲೀಸರನ್ನು ನಿಯೋಜಿಸಲಾಗಿತ್ತು. ವಿವಿಧೆಡೆ 2,700 ಎಐ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಪ್ರಯಾಗ್ರಾಜ್ ಜಿಲ್ಲೆಗೆ ಸಂಪರ್ಕಿಸುವ ಏಳು ಮಾರ್ಗಗಳಲ್ಲಿ ಅಗತ್ಯ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆಯಾಗಿತ್ತು. ನದಿಯ ಜಲಮಾರ್ಗದಲ್ಲಿ 113 ಅಂಡರ್ವಾಟರ್ ಡ್ರೋನ್ಗಳನ್ನು ಇಡಲಾಗಿತ್ತು. ಈ ಡ್ರೋನ್ಗಳು ನೀರೊಳಗೆ 100 ಮೀಟರ್ ಆಳದವರೆಗೂ ಹೋಗಿ ದೃಶ್ಯಗಳನ್ನು ಸೆರೆಹಿಡಿಯಬಲ್ಲುವಾಗಿವೆ.
ಸುರಕ್ಷತೆ ಮತ್ತು ಸ್ವಚ್ಛತೆ……
ಕೋಟ್ಯಂತರ ಜನರು ಬಂದು ಹೋಗುತ್ತಾರೆ ಎಂದರೆ ಅಲ್ಲಿ ಸ್ವಚ್ಛತೆ ಪಾಲನೆ ಬಹಳ ಕಷ್ಟವಾಗುತ್ತದೆ. ಆದರೆ, ಮಹಾಕುಂಭದಲ್ಲಿ ಎಲ್ಲಿಯೂ ಗಲೀಜು ಆಗದಂತೆ ಎಚ್ಚರ ವಹಿಸಲಾಗಿತ್ತು. ಸಾಕಷ್ಟು ಸ್ವಚ್ಛ ಕಾರ್ಮಿಕರನ್ನು ವಿವಿಧೆಡೆ ನಿಯೋಜಿಸಲಾಗಿದ್ದು, ರಿಯಲ್ ಟೈಮ್ನಲ್ಲಿ ಅವರು ಕಸ ಕಡ್ಡಿಗಳನ್ನು ಹೆಕ್ಕುವ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಅಂಗಡಿ ಮುಂಗಟ್ಟುಗಳ ಮಾಲೀಕರಿಗೂ ಕೂಡ ಸ್ವಚ್ಛತೆ ಪಾಲನೆ ಬಗ್ಗೆ ತಿಳಿಹೇಳಲಾಗಿತ್ತು. ಹೀಗಾಗಿ, ಮಹಾಕುಂಭವು ಕೋಟ್ಯಂತರ ಜನರ ಆಗಮನವಾದರೂ ಕೊಂಪೆ ಎನಿಸಲಿಲ್ಲ
ವಿಪತ್ತು ನಿರ್ವಹಣೆಗೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದ ಉತ್ತರಪ್ರದೇಶ ಪೊಲೀಸರು, ಅಗ್ನಿಅವಘಡ ಇತ್ಯಾದಿ ವಿಪತ್ತುಗಳನ್ನು ಎದುರಿಸಲು ಅಗತ್ಯ ಉಪಕರಣಗಳ ಖರೀದಿಗೆ 200 ಕೋಟಿ ರೂ ವ್ಯಯಿಸಿದ್ದರು.
ಒಟ್ಟಿನಲ್ಲಿ 144 ವರ್ಷಗಳ ನಂತರ ನಡೆದ ಮಹಾಕುಂಭಮೇಳ ಐತಿಹಾಸಿಕವಾಗಿ ದೇಶ-ವಿದೇಶದಲ್ಲೂ ಪ್ರಸಿದ್ದಿಯನ್ನು ಪಡೆಯುತು ಎನ್ನುವುದು ಅತಿಶಯೋಕ್ತಿಯೇನಲ್ಲ .