ಕೊರಟಗೆರೆ: ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಇತಿಹಾಸ ಪ್ರಸಿದ್ಧ ಮಹಾಶಕ್ತಿ ಮಾರಮ್ಮ ದೇವಸ್ಥಾನದಲ್ಲಿ ಕೇತಗ್ರಸ್ತ ಚಂದ್ರಗ್ರಹಣ ಮುಗಿದ ಬಳಿಕ ಶುದ್ಧೀಕರಣ ವಿಧಿ ನೆರವೇರಿಸಿ, ಹುಣ್ಣಿಮೆಯ ಅಂಗವಾಗಿ ಭವ್ಯ ಮಹಾಪೂಜೆ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕ ರಾಜುಸ್ವಾಮಿ ಅವರ ನೇತೃತ್ವದಲ್ಲಿ ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾಶಕ್ತಿ ಮಾರಮ್ಮ ತಾಯಿಗೆ ಪೂಜೆ ಸಲ್ಲಿಸಲಾಯಿತು. ಪೂಜೆಯಲ್ಲಿ ಕನ್ನಡ ಚಲನಚಿತ್ರ ನಟ ಉಗ್ರಂ ಮಂಜು ಹಾಗೂ ಅವರ ಕುಟುಂಬದವರು ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.

ಬೈಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮದ ಹೊರವಲಯದಲ್ಲಿ ನೆಲೆಸಿರುವ ಈ ಪುಣ್ಯಕ್ಷೇತ್ರದಲ್ಲಿ ಮಹಾಶಕ್ತಿ ಮಾರಮ್ಮ, ಆದಿಶಕ್ತಿ ಚೌಡೇಶ್ವರಿ, ಕಾಟೇರಿಯಮ್ಮ ಹಾಗೂ ಅಗೋರ ರಣಭದ್ರಕಾಳಿ ದೇವತೆಗಳು ನೆಲೆಸಿವೆ. ಪ್ರತಿ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ಇಲ್ಲಿ ವಿಶೇಷ ಪೂಜೆ ನಡೆಯುವುದು ವಿಶೇಷ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಮಹಾಪೂಜೆಯಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುವಂತೆ ಭಕ್ತಿ ಪೂರ್ವಕವಾಗಿ ಬೇಡಿಕೊಂಡರು. ಕ್ಷೇತ್ರದ ವಿಶೇಷತೆಯೇನಂದರೆ, ಸಂಕಷ್ಟಗಳಿಂದ ಬಳಲುತ್ತಿರುವ ಭಕ್ತರು ತಾಯಿಯ ಕೃಪೆಯಿಂದ ಒಳಿತು ಕಂಡು ತಿಂಗಳಿಗೆ ಕನಿಷ್ಠ ಒಮ್ಮೆ ಈ ಕ್ಷೇತ್ರಕ್ಕೆ ಆಗಮಿಸುತ್ತಾರೆ ಎಂದು ಪ್ರಧಾನ ಅರ್ಚಕ ರಾಜುಸ್ವಾಮಿ ತಿಳಿಸಿದ್ದಾರೆ.

ಚಿತ್ರರಂಗ ಹಾಗೂ ಕಿರುತೆರೆಯ ಹಲವಾರು ಕಲಾವಿದರು ಕೂಡ ತಾಯಿಯ ಸನ್ನಿಧಾನಕ್ಕೆ ಬಂದು ಕೃಪೆಗೆ ಪಾತ್ರರಾಗುತ್ತಿದ್ದಾರೆ ಎಂಬುದು ಕ್ಷೇತ್ರದ ಮಹಿಮೆ ಎಂದು ಹೇನರಸಿಂಹಯ್ಯ ಹೇಳಿದರು.
ವರದಿ: ನರಸಿಂಹಯ್ಯ ಹೊಸಕೋಟೆ.
