ಹಿಂದೂಗಳು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸುವ ಹಾಗೂ ಶಿವನನ್ನು ಆರಾಧಿಸುವ ಪ್ರಮುಖ ಹಬ್ಬಗಳಲ್ಲಿ ಮಹಾಶಿವರಾತ್ರಿಯು ಒಂದು. ಸೃಷ್ಟಿ ಸ್ಥಿತಿ ಹಾಗೂ ಲಯಕರ್ತೃಗಳಾದ ತ್ರಿಮೂರ್ತಿಗಳಲ್ಲಿ ಒಬ್ಬನಾದ ಕೈಲಾಸವಾಸಿ ಶಂಕರನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ ಎಂದೇ ಪ್ರತೀತಿ. ಶಿವಪುರಾಣದಲ್ಲಿ ಪಾರ್ವತೀ ಪರಮೇಶ್ವರರ ಸಂಭಾಷಣೆಯೊಂದನ್ನು ಉಲ್ಲೇಖಿಸಲಾಗಿದ್ದು ಅದರಲ್ಲಿ ಶಿವರಾತ್ರಿಯಂದು ಪೂಜಿಸುವ ಸಕಲ ಭಕ್ತರಿಗೆ ಶಿವನ ವಿಶೇಷವಾದ ಅನುಗ್ರಹ ಇರುವುದಾಗಿ ಹೇಳಲಾಗಿದೆ.
ಯಾವುದೇ ಮಹಾ ಯಾಗವನ್ನು ಮಾಡಿದರೆ ಅಥವಾ ಮಾಡಿಸಿದರೆ ಸಿಗುವಷ್ಟು ಪುಣ್ಯಫಲಗಳು ಶಿವರಾತ್ರಿಯಂದು ಕೇವಲ ಬಿಲ್ವಾರ್ಚನೆ ಮಾಡುವುದರಿಂದ ಸಿಗುತ್ತದೆ ಎಂದೂ ಬಲ್ಲವರು ಹೇಳುತ್ತಾರೆ. ಇಡೀ ದಿನ ನಿರಾಹಾರವಿದ್ದು, ರಾತ್ರಿ ಜಾಗರಣೆ ಹಾಗೂ ಶಿವಧ್ಯಾನ ಮಾಡಿದರೆ ಪಾಪಗಳೆಲ್ಲವೂ ಪರಿಹಾರವಾಗಿ, ಮೋಕ್ಷ ಪ್ರಾಪ್ತವಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆ. ಭಾರತೀಯರು ಆಚರಿಸುವ ಯಾವುದೇ ಹಬ್ಬಗಳು, ಅಥವಾ ಸಾಂಸ್ಕೃತಿಕ ಆಚರಣೆಗಳಿಗೆ ಏನಾದರೂ ಒಂದು ಹಿನ್ನಲೆ ಇದ್ದೇ ಇರುತ್ತದೆ. ಅದೇ ರೀತಿ ಮಹಾಶಿವರಾತ್ರಿ ಆಚರಣೆಗೆ ಸಂಬಂಧಿಸಿದಂತೆ ಹಲವಾರು ಘಟನೆಗಳನ್ನು ಬಲ್ಲವರು ವರ್ಣಿಸುತ್ತಾರೆ.

ಶಿವರಾತ್ರಿಯಂದೇ ಶಿವಪಾರ್ವತಿಯರ ವಿವಾಹ ಮಹೋತ್ಸವವು ನಡೆದಿರುವುದರಿಂದ ಶಿವಭಕ್ತರಿಗೆ ಈ ದಿನವು ಬಹಳ ವಿಶೇಷವೆಂದು ಹೇಳಲಾಗುತ್ತದೆ. ಶಿಶಿರ ಋತು ಮಾಘಮಾಸ ಕೃಷ್ಣಪಕ್ಷ ಚತುರ್ದಶಿಯ ರಾತ್ರಿ ಶಿವನು ಪಾರ್ವತಿಯನ್ನು ವರಿಸಿದ್ದನಂತೆ. ಅಂದು ದೇವಾನುದೇವತೆಗಳೂ ಶಿವನ ಅನುಚರರೂ ಜಾಗರಣೆ ಮಾಡಿ ಅವರ ಕಲ್ಯಾಣವನ್ನು ವೀಕ್ಷಿಸಿ, ಶಿವಪಾರ್ವತಿಯರಿಬ್ಬರನ್ನೂ ಪೂಜಿಸಿದರಂತೆ. ಅಲ್ಲದೇ, ಸಮುದ್ರ ಮಂಥನ ಕಾಲದಲ್ಲಿ ಉದ್ಭವವಾದ ವಿಷವನ್ನು ಶಿವನು ಕುಡಿದಾಗ ಅದು ಗಂಟಲಿನಿಂದ ಕೆಳಕ್ಕಿಳಿಯದಂತೆ ಪಾರ್ವತಿಯು ಇಡೀ ರಾತ್ರಿ ತಡೆದಳು. ಹಾಗಾಗಿ ಶಿವನು ನೀಲಕಂಠನಾದ ಆ ದಿನವನ್ನು ಪ್ರತಿವರ್ಷ ಶಿವಭಕ್ತರು ಜಾಗರಣೆ ಮಾಡಿ ಆಚರಿಸುತ್ತಾರೆ ಎನ್ನಲಾಗಿದೆ.
ಈಗಲೂ ವಿಷದ ಬಾಧೆಯಿಂದ ಪೀಡಿತರಾದವರು ರಾತ್ರೆ ಮಲಗಿದರೆ ವಿಷವು ದೇಹಕ್ಕೆ ಹರಡುವುದಾಗಿಯೂ ಜಾಗರಣೆ ಮಾಡಿದರೆ ವಿಷವು ಪಸರಿಸದೆ ವ್ಯಕ್ತಿಯು ಬದುಕಿ ಉಳಿಯುತ್ತಾನೆ ಎಂಬ ನಂಬಿಕೆ ಜನರಲ್ಲಿ ಇದೆ. ಇನ್ನೊಂದು ಉಲ್ಲೇಖದ ಪ್ರಕಾರ ತನ್ನ ಜಟೆಯಲ್ಲಿ ಬಂಧಿಸಿದ್ದ ಗಂಗೆಯನ್ನು ಮಹಾದೇವನು ಭಗೀರಥನ ತಪಸ್ಸಿಗೆ ಮೆಚ್ಚಿ ಭೂಮಿಗೆ ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ.
ಮಹಾಭಾರತದಲ್ಲಿ ಬರುವ ಕಥೆಯೊಂದರ ಪ್ರಕಾರ ಬೇಡನೊಬ್ಬನಿಗೆ ಕಾಡಿನಲ್ಲಿ ಯಾವುದೇ ಬೇಟೆ ಸಿಗದೆ ದಾರಿ ತಪ್ಪಿ ಅಲೆಯುವಂತಾಯಿತು. ಕ್ರೂರ ಪ್ರಾಣಿಗಳ ಭಯದಿಂದ ಮರವೇರಿದ ಬೇಡ, ಶಿವನನ್ನು ಧ್ಯಾನಿಸುತ್ತಾ ಮರದ ಎಲೆಗಳನ್ನು ಕಿತ್ತು ಕೆಳಗಡೆ ಹಾಕತೊಡಗಿದ. ತನಗರಿವಿಲ್ಲದೇ ಶಿವರಾತ್ರಿಯ ಆ ಶುಭದಿನದಂದು ಮರದ ಕೆಳಗಿದ್ದ ಶಿವಲಿಂಗದ ಮೇಲೆ ಹಾಕುತ್ತಾ ಪೂರ್ತಿ ಜಾಗರಣೆಯಿದ್ದು, ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸಿದ ಬೇಡನ ಪುಣ್ಯವಿಶೇಷದ ಫಲವಾಗಿ ಬೇಡ ಮುಂದಿನ ಜನ್ಮದಲ್ಲಿ ಪ್ರಸಿದ್ಧನಾದ ರಾಜನಾದ ಎಂದು ಹೇಳಲಾಗಿದೆ.

ಇನ್ನೂ ಕೆಲವು ಕಥೆಗಳ ಪ್ರಕಾರ, ಬ್ರಹ್ಮ ಹಾಗೂ ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದಗಳು ನಡೆಯುತ್ತಿದ್ದವು. ಆಗ ಮಹಾಮಹಿಮನಾದ ಶಂಕರನು, ಅಗ್ನಿಕಂಭದ ರೂಪದಲ್ಲಿ ಬಂದು ನಿಂತು ತನ್ನ ಮೂಲವನ್ನು ಯಾರು ಕಂಡುಹಿಡಿಯುತ್ತಾರೋ ಅವರೇ ಶ್ರೇಷ್ಠರು ಎಂದು ಪರಿಗಣಿಸುವುದಾಗಿ ಸೂಚಿಸುತ್ತಾನೆ. ಆಗ ಹಂಸದ ರೂಪ ತಾಳಿದ ಬ್ರಹ್ಮನು ಶಿರವನ್ನು ಹುಡುಕಲು ಮೇಲ್ಮುಖವಾಗಿಯೂ ವರಾಹವತಾರ ತಾಳಿದ ವಿಷ್ಣುವು ತಳವನ್ನು ನೋಡುವುದಕ್ಕಾಗಿ ಕೆಳಕ್ಕೂ ಸಂಚರಿಸುತ್ತಾರೆ.
ಎಷ್ಟೇ ಮುಂದೆ ಸಾಗಿದರೂ ಬ್ರಹ್ಮ ಹಾಗೂ ವಿಷ್ಣು ಇವರಿಬ್ಬರಿಗೂ ಕಂಭದ ಅಂತ್ಯವೇ ಕಾಣುವುದಿಲ್ಲ. ಅನಾದಿ ಹಾಗೂ ಅನಂತವಾಗಿರುವ ಶಿವನ ಈ ಶಕ್ತಿಯನ್ನು ನೋಡಿ ಪರವಶರಾದ ವಿಷ್ಣು ಹಾಗೂ ಬ್ರಹ್ಮರಿಗೆ ಶಿವನು ಲಿಂಗರೂಪಿಯಾಗಿ ದರ್ಶನ ನೀಡಿದ ದಿನವೇ ಶಿವರಾತ್ರಿ ಎಂದು ಹೇಳಲಾಗಿದೆ.
ಮಹಾ ಶಿವರಾತ್ರಿಯಂದು ಸಾಮಾನ್ಯವಾಗಿ ಎಲ್ಲಾ ಶಿವ ದೇವಾಲಯಗಳಲ್ಲಿ ರುದ್ರಾಭಿಷೇಕಗಳು ಹಾಗೂ ಪಂಚಾಮೃತ ಅಭಿಷೇಕ ನಡೆಯುತ್ತದೆ. ಪುಷ್ಪಗಳಿಂದ, ಬಿಲ್ವಪತ್ರೆಯಿಂದ, ರುದ್ರಾಕ್ಷಿ ಮಾಲೆಗಳಿಂದ ವಿಶೇಷ ಅಲಂಕಾರದೊಂದಿಗೆ, ಪೂಜಾ ಕೈಂಕರ್ಯಗಳು ನಡೆಯುತ್ತವೆ. ಉಪವಾಸ ಎಂದರೆ, ದೇವರ ಬಗ್ಗೆ ಸದಾ ಚಿಂತಿಸುತ್ತಿರುವುದು ಎಂದು ಅರ್ಥ. ಆತನ ಧ್ಯಾನದಲ್ಲಿ ತಲ್ಲೀನರಾದರೆ ಭೋಜನದ ಕಡೆ ಗಮನ ಇರುವುದಿಲ್ಲವಲ್ಲ!! ಜಾಗರಣೆ ಎಂದರೆ, ತಮೋಗುಣ ಪ್ರಧಾನವಾದ ಆಲಸ್ಯ, ನಿದ್ರೆ, ಅಹಂಕಾರ, ಅಜ್ಞಾನಗಳಿಂದ ಜಾಗೃತರಾಗುವುದು ಎಂದರ್ಥ. ಈ ಅರ್ಥದಲ್ಲೇ ಉಪವಾಸ ಹಾಗೂ ಜಾಗರಣೆಯನ್ನು ಮಾಡಿದರದುವೇ ನಿಜವಾದ ಶಿವಪೂಜೆ.
ರುದ್ರಾಭಿಷೇಕದ ಸಂದರ್ಭದಲ್ಲಿ ಸಾಧಾರಣವಾಗಿ ಕೃಷ್ಣ ಯಜುರ್ವೇದದ ಪ್ರಕಾರವಾದ ರುದ್ರ ನಮಕ ಮತ್ತು ಚಮಕಗಳನ್ನು ಪಠಿಸುತ್ತಾರೆ. ಹನ್ನೊಂದು ಜನ ಋತ್ವಿಕರು ಹನ್ನೊಂದು ಬಾರಿ ಇವುಗಳನ್ನು ಪಠಣ ಮಾಡುವುದಕ್ಕೆ ಏಕಾದಶವಾರ ರುದ್ರಾಭಿಷೇಕ ಎಂದು ಕರೆಯುವರು.
ರುದ್ರ ನಮಕ ಚಮಕಗಳನ್ನು ಉಚ್ಚರಿಸುವುದರಿಂದ ಉಸಿರಾಟದ ಮೇಲೆ ಉತ್ತಮ ಪರಿಣಾಮಗಳಾಗಿ ಶ್ವಾಸಕೋಶಗಳಿಗೆ ಶಕ್ತಿ ಬರುತ್ತದೆ. ಮಾತ್ರವಲ್ಲದೆ ಇದನ್ನು ಕ್ರಮಬದ್ಧವಾದ ಪಠಿಸುವುದರಿಂದ ಉಂಟಾಗುವ ಉದಾತ್ತ ಅನುದಾತ್ತ ಹಾಗೂ ಸ್ವರಿತಗಳೆಂಬ ಸ್ವರಗಳ ಏರಿಳಿತಗಳಿಂದ ಹೊರ ಹೊಮ್ಮುವ ತರಂಗಗಳಿಂದ ಸುತ್ತ ಮುತ್ತಲಿನ ಪರಿಸರ ಶಕ್ತಿಯುತವಾಗುವುದು. ಶಿವನು ರುದ್ರಸ್ವರೂಪಿಯಾಗಿರುವುದರಿಂದ ಅವನನ್ನು ತಂಪಾಗಿಡಬೇಕು ಎಂಬ ಕಾರಣಕ್ಕೆ ಅಭಿಷೇಕಪ್ರಿಯ ಎಂದೇ ಹೆಸರಿಸಲಾಗಿದೆ.

ಹಾಗಾಗಿ ತಂಪಾದ ವಸ್ತುಗಳಾದ ಹಾಲು, ತುಪ್ಪ, ಎಳನೀರು, ಕಬ್ಬಿನಹಾಲು ಇತ್ಯಾದಿ ಸುವಸ್ತುಗಳಿಂದ ಪ್ರತಿ 3 ಗಂಟೆಗೊಮ್ಮೆ ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ. ಇದನ್ನು ಯಾಮದ (ಜಾವ) ಅಭಿಷೇಕ ಎನ್ನುತ್ತಾರೆ. ಹಾಗಾಗಿ ದೇವಾಲಯಗಳಲ್ಲಿ ಶಿವರಾತ್ರಿಯಂದು ವಿಶೇಷವಾಗಿ ಪ್ರತಿ 3 ಗಂಟೆಗೊಮ್ಮೆ ಅಭಿಷೇಕ ಹಾಗೂ ಮಂಗಳಾರತಿ ಮಾಡಲಾಗುತ್ತದೆ.
ಸಾಧಾರಣವಾಗಿ ಶಿವರಾತ್ರಿಯನ್ನು ಚಳಿಗಾಲದ ಅಂತ್ಯವೆಂದೂ ಬೇಸಿಗೆಯ ಪ್ರಾರಂಭವೆಂದೂ ತಿಳಿಯಲಾಗುತ್ತದೆ. ಹಾಗಾಗಿ ನಿರಾಹಾರ ಹಾಗೂ ಜಾಗರಣೆಗಳನ್ನು ಕಾಲಬದಲಾವಣೆಯ ಸಂಧಿಕಾಲದಲ್ಲಿ ಮಾಡುವುದನ್ನು ಆರೋಗ್ಯಕರ ಚಟುವಟಿಕೆಯಾಗಿ ಗುರುತಿಸಲಾಗುತ್ತದೆ. ಶಿವರಾತ್ರಿಯಂದು ವಿಶೇಷವಾಗಿ ಮಾಡುವ ಬಿಲ್ವಾರ್ಚನೆ ಹಾಗೂ ಮಂತ್ರ ಪಾರಾಯಣ ಭಜನೆ ಇತ್ಯಾದಿಗಳನ್ನು ಶ್ವಾಸಕೋಶಗಳ ಆರೋಗ್ಯಕ್ಕೆ ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಒಟ್ಟಿನಲ್ಲಿ ಈ ಶಿವರಾತ್ರಿಯಂದು ಎಲ್ಲರೂ ಶಿವಾಲಯಗಳಿಗೆ ಹೋಗಿ ಅಥವಾ ತಮ್ಮ ಮನೆಯಲ್ಲಿಯೇ ಶಿವನನ್ನು ಬಿಲ್ವಾರ್ಚನೆಯೊಂದಿಗೆ ಆರಾಧಿಸೋಣ. ನಿರಾಹಾರ ಹಾಗೂ ಜಾಗರಣೆಗಳ ಮೂಲಕ ನಮ್ಮ ಶಕ್ತಿಯನ್ನು ಧ್ಯಾನದೆಡೆಗೆ ತಿರುಗಿಸೋಣ. ದಯಾಮಯನಾದ ಮಂಗಳಕರನಾದ ಮಹಾದೇವನು ಎಲ್ಲರಿಗೂ ಆರೋಗ್ಯ ಸುಖವನ್ನು ದಯಪಾಲಿಸಲಿ.
|| ಓಂ ನಮಃ ಶಿವಾಯ ||

ಡಾ. ಗೋವಿಂದ ಶರ್ಮಾ ಕೆ.
ಪ್ರಾಧ್ಯಾಪಕರು,
ರಸಶಾಸ್ತ್ರ ಮತ್ತು ಭೈಷಜ್ಯಕಲ್ಪನಾ ವಿಭಾಗ
ಎಸ್. ಡಿ.ಎಂ ಆಯುರ್ವೇದ ಕಾಲೇಜ್ ಮತ್ತು ಆಸ್ಪತ್ರೆ ಹಾಸನ
ದೂರವಾಣಿ: 9448315270.
