ಕೆ.ಆರ್.ಪೇಟೆ: ಇದೇ ಸೆ.28ರಂದು ನಡೆಯುವ ಕೆ.ಆರ್.ಪೇಟೆ ತಾಲ್ಲೂಕು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬಿ.ವರ್ಗದಿಂದ 8, ಎ.ವರ್ಗದಿಂದ 6ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಟಿಎಪಿಸಿಎಂಎಸ್ ಸಂಸ್ಥೆಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಆಡಳಿತ ನೀಡಲು ಅವಕಾಶ ನೀಡಬೇಕು ಎಂದು ಟಿಎಪಿಸಿಎಂಎಸ್ ಹಾಲಿ ಅಧ್ಯಕ್ಷ ಬಿ.ಎಲ್.ದೇವರಾಜು ಮತದಾರರಲ್ಲಿ ಮನವಿ ಮಾಡಿದರು.
ಅವರು ತಾಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬಿಲ್ಲೇನಹಳ್ಳೀ ಶ್ರೀ ಗವಿರಂಗನಾಥ ದೇವಾಲಯದ ಸಮುದಾಯ ಭವನದಲ್ಲಿ ಟಿಎಪಿಸಿಎಂಎಸ್ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾವು ಒಮ್ಮೆ 3ವರ್ಷಗಳ ಕಾಲ, ಮತ್ತೊಮ್ಮೆ ಐದು ವರ್ಷಗಳ ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷನಾಗಿ ಒಟ್ಟು 8 ವರ್ಷಗಳ ಕಾಲ ಸಂಸ್ಥೆಯ ಸರ್ವತೋಮುಖ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಒಂದೊಂದು ರೂಪಾಯಿಯನ್ನು ಉಳಿಸಿ ಸಂಸ್ಥೆಯ ಅಭಿವೃದ್ದಿಗೆ ಕಾಯಾ-ವಾಚಾ-ಮನಸಾ ಕೆಲಸ ಮಾಡಿದ್ದೇನೆ. ಪೆಟ್ರೋಲ್ ಬಂಕ್ ಸ್ಥಾಪನೆ, ಮಾಜಿ ಶಾಸಕ ಎಂ.ಕೆ.ಬೊಮ್ಮೇಗೌಡರ ಹೆಸರಿನಲ್ಲಿ ಪ್ರತ್ಯೇಕ ಕಲ್ಯಾಣ ಮಂಟಪ ಸ್ಥಾಪಿಸಿದ್ದೇನೆ. 10ವಾಣಿಜ್ಯ ಮಳಿಗೆಗಳನ್ನು ಕಟ್ಟಿ ಲಕ್ಷಾಂತರ ರೂ ಬಾಡಿಗೆ ಬರುವಂತೆ ಮಾಡಲಾಗಿದೆ. 50ಲಕ್ಷ ರೂ ವೆಚ್ಚದಲ್ಲಿ ಎರಡು ಉಗ್ರಾಣ ನಿರ್ಮಿಸಲಾಗಿದೆ. ಎಪಿಎಂಸಿ ಆವರಣದಲ್ಲಿ ಸಂಘಕ್ಕೆ ಲಕ್ಷಾಂತರ ರೂ ಬೆಲೆ ಬಾಳುವ ನಿವೇಶನ ಮಂಜೂರಾತಿ ಮಾಡಿಸಿದ್ದೇನೆ. ವಿವಿಧ ಬ್ಯಾಂಕುಗಳಲ್ಲಿ ಸಂಸ್ಥೆಯ ಹೆಸರಿನಲ್ಲಿ ಸುಮಾರು 5ಕೋಟಿ ಠೇವಣಿ ಇಡಲಾಗಿದೆ. ಜೊತೆಗೆ ಡಿಸಿಸಿ ಬ್ಯಾಂಕಿನಲ್ಲಿ ಆಪದ್ಬನವಾಗಿ 75ಲಕ್ಷ ರೂ ಠೇವಣಿ ಇಡಲಾಗಿದೆ. ಪಟ್ಟಣದ ಜನತೆಗೆ ಹೊಸ ಶುದ್ದ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ. ಹೀಗೆ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಸಂಸ್ಥೆಯ ಆಧಾಯವನ್ನು ದ್ವಿಗುಣಗೊಳಿಸುವ ಕೆಲಸವನ್ನು ನನ್ನ ಅಧಿಕಾರದ ಅವಧಿಯಲ್ಲಿ ಮಾಡಲಾಗಿದೆ. ಇದಕ್ಕೆ ಎಲ್ಲಾ ನಿರ್ದೇಶಕರು ಮತ್ತು ನೌಕರ ವೃಂದದವರ ಸಹಕಾರ ಪಡೆದು ಈ ಸಾಧನೆ ಮಾಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.

ಮತ್ತೊಮ್ಮೆ ನಮ್ಮ ತಂಡಕ್ಕೆ ಮತದಾರರು ಅಶೀರ್ವಾದ ಮಾಡಿದರೆ ಟಿಎಪಿಸಿಎಂಎಸ್ ಸಂಸ್ಥೆಯನ್ನು ಎಸ್.ಎಂ.ಲಿಂಗಪ್ಪ ಅವರ ಕಾಲಾವಧಿಯಲ್ಲಿ ನಂ.1ಸ್ಥಾನಕ್ಕೆ ಏರಿತ್ತು. ಮತ್ತೊಮ್ಮೆ ರಾಜ್ಯಕ್ಕೆ ಪ್ರಥಮ ಸ್ಥಾನಕ್ಕೆ ತೆಗೆದುಕೊಂಡು ಹೋಗುವುದೇ ನನ್ನ ಗುರಿಯಾಗಿದೆ ಹಾಗಾಗಿ ನನ್ನೊಂದಿಗೆ ಸ್ಪರ್ಧೆ ಮಾಡಿರುವ ಬಿ.ವರ್ಗದಿಂದ ಬಿ.ಎಲ್.ದೇವರಾಜು, ಕೆ.ಟಿ.ಗಂಗಾಧರ್, ಹೊನ್ನೇನಹಳ್ಳಿ ಕೃಷ್ಣೇಗೌಡ, ಶಶಿಧರ್ ಸಂಗಾಪುರ, ಅಕ್ಕಿಹೆಬ್ಬಾಳು ಜಯರಾಂನಾಯಕ್, ಕೆ.ಆರ್.ಪೇಟೆ ಟಿಎಪಿಸಿಎಂಎಸ್ ಚೆಲುವಯ್ಯ, ಸುಕನ್ಯ ಲಕ್ಷ್ಷಣ್, ಕೋಮಲಚಿಕ್ಕಲಿಂಗೇಗೌಡ ಅದೇ ರೀತಿ ಎ.ವರ್ಗದಿಂದ ಬಲ್ಲೇನಹಳ್ಳಿ ರಮೇಶ್, ಅಘಲಯ ಎ.ವೈ.ವಿಜಯಕುಮಾರ್, ಸಾರಂಗಿ ವಿಶ್ವನಾಥ್, ಮಡುವಿನಕೋಡಿ ಎಂ.ಪಿ.ಲೋಕೇಶ್, ಕೋಡಿಮಾರನಹಳ್ಳಿ ಎಸ್.ಟಿ.ಡಿ. ಮಂಜೇಗೌಡ, ಕಿಕ್ಕೇರಿ ಸುರೇಶ್, ಅವರುಗಳಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ಜಯಶೀಲರನ್ನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಅವರ ಕೈ ಬಲ ಪಡಿಸುವ ಮೂಲಕ ತಮ್ಮಗಳ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಸೊಸೈಟಿಗಳ ಪ್ರತಿನಿಧಿಗಳು ಹಾಗೂ ಕೃಷಿ ಶೇರುದಾರ ಬಂಧುಗಳಲ್ಲಿ ಬಿ.ಎಲ್.ದೇವರಾಜು ಮನವಿ ಮಾಡಿದ್ದಾರೆ.

ಸಭೆಯಲ್ಲಿ ಮನ್ಮುಲ್ ನಿರ್ದೇಶಕರಾದ ಡಾಲು ರವಿ, ಎಂ.ಬಿ.ಹರೀಶ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಕೆಯುಐಡಿಎಫ್ ನಿಗಮದ ಮಾಜಿ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ತಾಲ್ಲೂಕು ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಕಬ್ಬಲಗೆರೆಪುರ ಪುಟ್ಟಸ್ವಾಮೀಗೌಡ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿ.ಎನ್.ದಿವಾಕರ್, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ.ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
