
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಮತ ಬೋಧಕನು ಬುದ್ಧನಂತಿರಬೇಕು
ಶಾಲಾ ಕಾಲೇಜಿನ ಗುರುಗಳ, ಹಿರಿಯ ಆಪ್ತರ ಬೋಧನೆಗೆ ಮಾತ್ರ ಕಿವಿಗೊಡುವ, ಸರಿಯೆನಿಸಿದರೆ ಅದನ್ನು ಪಾಲಿಸುವ, ಅನುಸರಿಸುವವ ನಾನು. ಒಂದು ವರ್ಗಕ್ಕೆ ಸೀಮಿತವಾದ ಧರ್ಮದ ಬೊಧನೆ ಎಂದರೆ ನನಗೆ ಹಿಡಿಸದು. ಇದು ನನ್ನ ವೈಯಕ್ತಿಕ ವಿಷಯ.
ಹಿಂದಿನಿಂದಲೂ ಬೋಧನೆ ಎಂಬುದು ಎಲ್ಲಾ ಧರ್ಮಗಳಲ್ಲೂ ನಡೆದುಕೊಂಡು ಬರುತ್ತಿದೆ. ಈ ಬೋಧನೆಯ ಪರಮ ಅಂಶವೆAದರೆ, ಬೋಧನೆಗೆ ಒಳಗಾದವನನ್ನು ಒಳ್ಳೆಯವನನ್ನಾಗಿಸುವುದು. ಇದನ್ನು ಸಹಜವಾಗಿ ನಾವು ಎಲ್ಲರಲ್ಲೂ ಕಾಣುವೆವು. ಉದಾಹರಣೆಗೆ : ಕಳ್ಳನಾದ ಅಪ್ಪನು ಮಗನಿಗೆ ‘ಮಗನೇ, ಒಳ್ಳೆಯ ಕಳ್ಳನಾಗು, ಅಂದರೆ ಕಳ್ಳತನ ಮಾತ್ರ ಮಾಡು, ಕೊಲೆಗಡುಕನಾಗಬೇಡ’ ಎಂದು ಬೋಧಿಸುತ್ತಾನೆ. ಇಲ್ಲಿ ಗಮನಿಸಬೇಕಾದ ವಿಷಯ ‘ಒಳ್ಳೆಯವನಾಗು’ ಎಂಬುದೇ ಆಗಿದೆ.
ಆದರೆ ನಮ್ಮ ದೇಶದ ಧರ್ಮ ಬೋಧಕರನ್ನು ಗಮನಿಸಿ. ಈ ಮಹಾನ್ ಗುರುಗಳೆಲ್ಲ ಆರ್ಥಿಕವಾಗಿ ಶ್ರೀಮಂತರಾಗಿದ್ದಾರೆ. ಹಣದ ಹೊಳೆ ಎಲ್ಲಿಂದ ಹರಿದು ಬರುತ್ತಿದೆ ಎಂಬುದು ಬೇರೆ ವಿಚಾರವಾದರೂ ಇವರಿಗೆ ಬೋಧಿ ತತ್ವದಲ್ಲಿ ಕೊರತೆ ಇದೆಯಲ್ಲ ಎಂಬುದು ಖೇದದ ಸಂಗತಿ.
ಇಲ್ಲಿ ಧರ್ಮ ಪ್ರಚಾರಕನು ಹೇರುವ ವಿಚಾರ ನಂಬಿಸುವುದು ಬಿಟ್ಟರೆ ಆಚಾರದ ಸೊಲ್ಲಿಲ್ಲ. ಈ ನಿಟ್ಟಿನಿಂದ ನಂಬಿಕೆಯು ಒಬ್ಬರಿಂದ ಒಬ್ಬರಿಗೆ ಹರಡಿ ಲಕ್ಷಾಂತರ ಜನರು ಅಂತಹವರಲ್ಲಿ ನಂಬಿಕೆಯಿಟ್ಟು ಅನುಯಾಯಿಗಳಾಗುತ್ತಾರೆ. ನಂತರ ಅವರು ಆಡಿಸಿದಂತೆ ಆಡಿ ಕುಣಿಯುವ, ಕೆಲಸ ಕಾರ್ಯಗಳನ್ನು ಬಿಟ್ಟು ಅವರ ಮುಂದೆ ಅಂಡಲೆಯುವ ಹಿಂಡನ್ನು ನಾವು ದಿನನಿತ್ಯ ನೋಡುತ್ತಿದ್ದೇವೆ.

ಇಂತಹ ಸೋಮಾರಿಗಳನ್ನು ಬಂಡವಾಳವನ್ನಾಗಿಸಿಕೊಂಡು ದೊಡ್ಡ ದೊಡ್ಡ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು, ಕೋಟ್ಯಾಂತರ ರೂ. ಗಳ ಆಸ್ತಿಗೆ ಒಡೆಯರಾಗಿರುವ ಢೋಂಗಿ ಸ್ವಾಮಿಗಳು ಭಾರತದ ದೇಶದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿದ್ದಾರೆ. ಈಗಲೂ ಏಳುತ್ತಿದ್ದಾರೆ. ಇವರಿಗೆಲ್ಲಾ ಸಂಪತ್ತು ಎಲ್ಲಿಂದ ಬರುತ್ತದೆ? ದೇಣಿಗೆ ರೂಪದಲ್ಲಿ ಇಷ್ಟೊಂದು ಬರಲು ಸಾಧ್ಯವೇ? ಬಂದರೂ ಪಾರದರ್ಶಕ ವ್ಯವಹಾರವನ್ನು ಇಟ್ಟುಕೊಂಡು ಜನಸಾಮಾನ್ಯರಿಗೆ ತೋರಿಸುತ್ತಿದ್ದಾರೆಯೇ? ಕೇಳುವರ್ಯಾರು?
ಈ ಢೋಂಗಿಗಳಿಂದ ಉಪಕಾರಕ್ಕಿಂತ ಅಪಾಯವೇ ಹೆಚ್ಚು. ದೇಹಕ್ಕೆ ಮಾರಕವಾದ, ಸಂಶೋಧನೆಗೊಳಪಡಿಸಿದ ಅವೈಜ್ಞಾನಿಕ ವಸ್ತುಗಳಿಂದ ತಯಾರಿಸಿದ ಔಷಧಿಗಳನ್ನು ನೀಡುತ್ತಾ ಬಂದಿದ್ದಾರೆ. ಇದು ಗೊತ್ತಿದ್ದೂ ಯಾವ ಸರ್ಕಾರ, ಯಾವ ಕಾನೂನು ಏನೂ ಮಾಡಿಲ್ಲ. ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿದೆ.
ತಮ್ಮ ಮಾತನ್ನೇ ಬಂಡವಾಳವಾಗಿಸಿಕೊಂಡ ಇವರು ಮುಗ್ಧರನ್ನು ಮೋಸಗೊಳಿಸಿ, ರಾಜ-ಮಹಾರಾಜರಂತೆ ಮೆರೆಯುತ್ತಿದ್ದಾರೆ. ನಮ್ಮ ರಾಜಕೀಯದವರಂತೆ ಅವರದೂ ಒಂದು ಬೇರೆ ದಾರಿ ಅಷ್ಟೇ.
ಮತ ಬೋಧಕನು ಬುದ್ಧನಂತೆ ವರ್ತಿಸಬೇಕು, ಇರಬೇಕು. ಆದರೆ ಪ್ರತಿನಿಧಿಯ ಬುದ್ಧಿ ನಯವಂಚಕತನ ಮತ್ತು ಕಪಟ ತಂತ್ರದಿAದ ಕೂಡಿದ್ದು, ಸಹಸ್ರಾರು ಕೋಟಿಗೆ ವಾರಸುದಾರರಿದ್ದಾರೆ. ಇವರ ಸಾಮ್ರಾಜ್ಯದಲ್ಲಿ ಮಾತ್ರ ನಾಜೂಕು, ಸ್ವಚ್ಛತೆ ತೋರಿದರೆ ಸಾಲದು. ಗ್ರಾಮೀಣ ಪ್ರದೇಶವು ಸೇರಿದಂತೆ ಇಡೀ ದೇಶಕ್ಕೆ ವ್ಯಾಪಿಸಬೇಕು. ಇವರ ಅನುಯಾಯಿಗಳು ಆಗುವವರೂ ಕೂಡಾ ಸಾಮಾನ್ಯವಾಗಿ ಮೋಸದಿಂದ ದುಡ್ಡು ಮಾಡಿ ಶ್ರೀಮಂತರಾದವರೇ ಆಗಿರುತ್ತಾರೆ. ಬೋಧಿಗಳು ತಮ್ಮ ಬಳಿ ಸೇರಿಸಿಕೊಳ್ಳುವುದು ಕೂಡ ಹಣವುಳ್ಳವರನ್ನೇ ಅನ್ನುವುದು ಸತ್ಯ.
ಸಂಸಾರದಿಂದ ದೂರ ಉಳಿದವನು ಹೇಗೆ ಸಾಂತ್ವನ ಹೇಳಲು ಅನರ್ಹನೋ ಹಾಗೆಯೇ ಅನುಭವವಿಲ್ಲದ್ದನ್ನು ಬೋಧಿಸುವ ಬೋಧಿತತ್ವ ಒಬ್ಬ ಅನುಭವವಿರುವ ಒಳ್ಳೆಯ ರೈತ ನಿಸ್ವಾರ್ಥ ಭಾವನೆಯಲ್ಲಿ ನವ ಪೀಳಿಗೆಗೆ ಹಂಚುವ ಬೋಧನೆಗಿಂತ ಉತ್ತಮವಿರಲು ಸಾಧ್ಯವೇ ಇಲ್ಲ.
ವೃತ್ತಿಯಲ್ಲಿ ನಾನೊಬ್ಬ ಮನೋ ವೈದ್ಯನಾಗಿರುವುದರಿಂದಲೋ ಏನೋ, ಧರ್ಮಕ್ಕೆ ಸಂಬಂಧಿಸಿದ ಬೋಧನೆಯಲ್ಲಿ ನನಗೆ ಆಸಕ್ತಿಯಿಲ್ಲ. ಆದರೆ ಧರ್ಮದ ಬಗ್ಗೆ ಕೊಂಚ ಅರಿತಿರುವೆನು. ಇದನ್ನು ಮನೋವ್ಯಾಧಿಗೆ ಒಳಗಾದವರಿಗೆ ಸಂದರ್ಭಾನುಸಾರ ಅಗತ್ಯವಿರುವಷ್ಟನ್ನು ಬಳಸಿ ರೋಗಿಗಳಿಗೆ ಸಹಾಯಕವಾಗಲು ಪ್ರಯತ್ನಿಸುತ್ತಿದ್ದೇನೆ. ಯಾವುದೇ ವೃತ್ತಿಯವರಾದರೂ ಅವರಲ್ಲಿ ಬರುವ ಗ್ರಾಹಕರಿಗೆ ನಿಷ್ಠೆಯಿಂದ, ಜವಾಬ್ದಾರಿಯುತವಾಗಿ, ಸಕಾರಾತ್ಮಕವಾಗಿ, ಆತ್ಮೀಯವಾದ ಸಲಹೆಯನ್ನು ನೀಡಿದರೆ ಅದಕ್ಕಿಂತ ಬೇರೆ ಬೋಧನೆ ಅನಾವಶ್ಯಕ.
ಕೇವಲ ಸಮ್ಮೋಹನ ಶಕ್ತಿ, ಪವಾಡ ಹಾಗೂ ಆಕರ್ಷಣೀಯವಾದ ವಾಕ್ ಶಕ್ತಿಯಿಂದ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಜನರಿಗೆ ಮಂಕು ಬೂದಿ ಎರಚುತ್ತಿರುವ ಢೋಂಗಿ ಗುರುಗಳು ಸಮಾಜದ ಒಳಿತಿನ ಬಗ್ಗೆ, ಪ್ರಗತಿಯ ಬಗ್ಗೆ ಗಮನ ಹರಿಸದಿರುವುದು ದುರಂತದ ವಿಷಯ.
ನಾ ಕಂಡಂತಹ ನಿಜವಾದ ಬೋಧಿಗಳೆಂದರೆ ಅಹಿಂಸಾ ಮಾರ್ಗದಿಂದಲೇ ತಮ್ಮ ಸಾಧನೆಯನ್ನು ತೋರಿದ ಮಹಾತ್ಮ ಗಾಂಧಿ, ನಿಸ್ವಾರ್ಥದಿಂದ ಅಮಾಯಕರನ್ನು, ಅಸಹಾಯಕರನ್ನು ಪ್ರೀತಿಸಿದ ಮದರ್ ತೆರೇಸಾ ಹೀಗೆ ಹಲವು ಬೋಧಿಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಾಮಾಜಿಕ, ಮಾನಸಿಕ, ಆರ್ಥಿಕ ಸುಧಾರಣೆಯನ್ನು ತರಲು ಶ್ರಮಿಸಿದ್ದಾರೆ. ಅವರಿಗೆಲ್ಲಾ ನಮಸ್ಕಾರ.
ಧರ್ಮ ಮತ್ತು ಭಯೋತ್ಪಾದನೆ ಬಿತ್ತುವ ಬೋಧಿಗಳಲ್ಲಿ ಅವರವರ ನಂಬಿಕೆಯೇ ಪ್ರಧಾನವಾಗಿರುತ್ತದೆ. ಮದ್ಯ ವ್ಯಸನಿ ಹಾಗೂ ಆತ್ಮಹತ್ಯೆಗೆ ಪ್ರಯತ್ನಿಸುವವನು ಇಬ್ಬರ ಉದ್ದೇಶ ಒಂದೇ. ಆದರೆ ಮಾರ್ಗ ಬೇರೆ ಬೇರೆ ಅಷ್ಟೆ.
ಧರ್ಮವನ್ನು ಪ್ರತಿಪಾದಿಸಿ, ಮನುಕುಲವನ್ನು ಒಡೆದು, ದ್ವೇಷವನ್ನು ಬಿತ್ತುವ ಬೋಧನೆಯು ನಿಧಾನವಾಗಿ ಪರೋಕ್ಷವಾಗಿ ಪ್ರಪಂಚವನ್ನು ನಾಶ ಮಾಡುವುದು. ಆದರೆ ಭಯೋತ್ಪಾದನೆಯು ಪ್ರಪಂಚವನ್ನು ಕಣ್ಣು ಮುಚ್ಚಿ ಬಿಡುವುದರೊಳಗೆ ನಾಶ ಮಾಡುವುದು.
ಒಟ್ಟಾರೆ ಹೇಳುವುದಾದರೆ, ಬೋಧನೆ ಎಂಬುದು ಸ್ವಾರ್ಥಕ್ಕೆ ಮೀಸಲಾಗದೆ, ಊರ್ಧ್ವ ಮುಖಿ ಬೆಳವಣಿಗೆ, ಸಕಾರಾತ್ಮಕ ಚಿಂತನೆ, ಕಲಾತ್ಮಕ ಮೆರುಗು, ಕ್ರಿಯಾ ಸಂಚಲನಾಶೀಲತೆ ಒಳಗೊಂಡಿರಬೇಕು. ನಂಬಿಕೆಯೆಂಬುದು ಅನುಷ್ಠಾನಕ್ಕೆ ಪರಿವರ್ತನೆಯಾದ ಪಕ್ಷದಲ್ಲಿ ಅದು ಬೋಧನೆ ಎನಿಸಿಕೊಳ್ಳುತ್ತದೆ. ಬೋಧಿಸುವವನು ಬೋಧಿ ಅನಿಸಿಕೊಳ್ಳುತ್ತಾನೆ. ನಶಿಸುತ್ತಿರುವ ಪ್ರಪಂಚಕ್ಕೆ ಬೇಕಾಗಿರುವುದು ಇದೇ ಅಲ್ಲವೇ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ