
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಲೈಂಗಿಕ ಶಿಕ್ಷಣ ಏನು? ಎತ್ತ…?
ಗೌಪ್ಯತೆ ಎಂಬುದು ನಿಗೂಢವಾದುದು. ಈ ನಿಗೂಢತೆ ಸಾಮಾನ್ಯವಾಗಿ ಕತ್ತಲಲ್ಲಿರುತ್ತದೆ. ಈ ಕತ್ತಲನ್ನು ಭೇದಿಸಿ ಬೆಳಕಿನೆಡೆಗೆ ತರುವುದೆಂದರೆ ಒಂದು ರೀತಿಯ ತವಕ. ಜ್ಞಾನವುಳ್ಳವನು ಈ ನಿಗೂಢತೆಯನ್ನು ಪರಿಶೀಲಿಸಿ ವಿಜ್ಞಾನಿಯಾಗಿ ಆನಂದ ಕಾಣುವನು. ಇದನ್ನೇ ಒಬ್ಬ ಆಧ್ಯಾತ್ಮವುಳ್ಳವನ ಜ್ಞಾನದಡಿ ಕಂಡು ((Spiritual) ಯೋಗಿ ಆಗುವನು.
ಒಬ್ಬ ವ್ಯಕ್ತಿಯ ಅಂಗಾಂಗಗಳ ಗೌಪ್ಯತೆ ಅವನ ವಸ್ತ್ರಗಳ ಹಿಂದೆ ಇರುವಂತೆಯೇ ಆತನ ವ್ಯಕ್ತಿತ್ವ ಅನೇಕ ಮುಖವಾಡಗಳ ಹಿಂದಿರುತ್ತದೆ. ಇಲ್ಲಿ ಗೌಪ್ಯತೆ ಎಂಬುದು ನಗ್ನತೆ ಅನ್ನುವ ಸತ್ಯ ಎಲ್ಲರಿಗೂ ತಿಳಿದ ವಿಷಯ. ಬಣ್ಣ ಬಣ್ಣದ ವಸ್ತçಗಳಿಂದ ಈ ಪವಿತ್ರದ ಸತ್ಯವನ್ನು ಮುಚ್ಚಿ ಆಡಂಬರದ ಮೆರುಗನ್ನು ಕೊಡುವೆವು. ಈ ಕಾರಣದಿಂದ ನಗ್ನತೆಯ ದೇವತಾ ಆತ್ಮ ತಿರುಳಿನಿಂದ ಕೂಡಿದ ಸತ್ಯ ಮಾಯದ ಕಡೆ ವಾಲಿಸಿ, ಮನುಷ್ಯನನ್ನು ಅಪವಿತ್ರಗೊಳಿಸಿಬಿಡುವುದು.
ಸಾಮಾನ್ಯವಾಗಿ ಮನುಷ್ಯನು ಕಾಮದಿಂದ ಉದ್ರಿಕ್ತಗೊಂಡು ಈ ಸತ್ಯವನ್ನು ಭೇದಿಸುವ ಬಯಕೆಗೆ ಪರಿತಪ್ತನಾಗುವನು. ಇದರಿಂದ ಉದ್ರಿಕ್ತಗೊಂಡ ಮನುಷ್ಯನು ವಿಕೃತ ಮನೋಭಾವ ಹೊಂದಿ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಹಾಗೂ ಲೈಂಗಿಕ ಮನೋ ನ್ಯೂನತೆ ಮತ್ತು ವಿಕೃತಗಳನ್ನು ಹೊಂದಿ ತನ್ನ ಮನಸ್ಸು ಮತ್ತು ಶರೀರವನ್ನು ಹಾಳು ಮಾಡಿಕೊಳ್ಳುವನು. ಇದನ್ನು ತಡೆಯಲು ‘ಲೈಂಗಿಕ ಶಿಕ್ಷಣ’ದಡಿ ಇದರ ತಿಳುವಳಿಕೆ ಹಾಗೂ ಸಾಧಕ ಬಾಧಕಗಳನ್ನು ತಿಳಿಸಬೇಕೆಂಬುದು ಸರ್ಕಾರದ ಚಿಂತನೆಯಾಗಿದೆ. ಆದರೆ, ಈ ಶಿಕ್ಷಣವನ್ನು ಹದಿಹರೆಯದ ಯುವಕರಿಗೆ ಹೇಳಿಕೊಡಬೇಕಾದ ಅಗತ್ಯವಿದೆಯೇ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.
ಇದೊಂದು ವಿವಾದಾತ್ಮಕ ವಿಷಯ. ಇದನ್ನು ಚರ್ಚಿಸುವುದಕ್ಕಿಂತ ಮುಂಚೆ ಒಂದು ವಿಷಯ ಗಮನಿಸೋಣ. ಕೇಂದ್ರ ಸರ್ಕಾರವು ‘‘Right to Educate’ ಅನುಷ್ಠಾನದಡಿ ಈ ದೇಶದ ಎಲ್ಲಾ ಹದಿನೈದು ವರ್ಷಗಳೊಳಗಿರುವ ಮಕ್ಕಳಿಗೆ ಪುಕ್ಕಟೆಯಾಗಿ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಬೇಕೆಂದಿದ್ದರೂ ಕೆಲವು ರಾಜ್ಯಗಳು ಒಪ್ಪುತ್ತಿಲ್ಲ. ಶಿಕ್ಷಣ ಅಭಿಯಾನದಡಿ ವಿದ್ಯೆಗೆ ಆದ್ಯತೆ ದೊರೆಯುತ್ತಿದ್ದರೂ, ಅದನ್ನು ಉಚಿತ ಶಿಕ್ಷಣ ಎನ್ನಲಾಗುವುದಿಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರ ಸೂಕ್ತವಾದ ಶಿಸ್ತಿನ ಕ್ರಮ ಕೈಗೊಂಡಿಲ್ಲ. ಮೊದಲು ಸರ್ವರಿಗೂ ಕಡ್ಡಾಯವಾಗಿ ಕನಿಷ್ಠ ಶಿಕ್ಷಣವನ್ನು ಕೇಂದ್ರ ಸರ್ಕಾರ ನೀಡಿ, ನಂತರ ‘ಲೈಂಗಿಕ ಶಿಕ್ಷಣ’ದ ಕಡೆ ಗಮನ ಹರಿಸಿದರೆ ಒಳಿತಲ್ಲವೇ?
ಇಂತಹ ಶಿಕ್ಷಣದ ಕಡೆ ದೃಷ್ಟಿ ಹಾಯಿಸಿದಾಗ, ಈ ಶಿಕ್ಷಣವನ್ನು ಯಾರಿಂದ? ಯಾರಿಗೆ? ಎಲ್ಲಿಂದ? ಹೇಗೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡುತ್ತವೆ. ಭಾರತ ಮಡಿವಂತಿಕೆಗೆ, ಸುಸಂಸ್ಕೃತತೆಗೆ, ಧಾರ್ಮಿಕತೆಗೆ ಹೆಸರಾದ ದೇಶ. ಹೀಗಿರುವಾಗ ಇಂತಹ ಶಿಕ್ಷಣ ಕ್ರಮವನ್ನು ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದೆಡೆ ಪಾಶ್ಚಾತ್ಯ ಸಂಸ್ಕೃತಿಯ ದಾಳಿಯಿಂದ ನಮ್ಮ ಶ್ರೀಮಂತ ಸಂಸ್ಕೃತಿ ನಲಗುತ್ತಿರುವುದು ನೋವಿನ ಸಂಗತಿಯಾಗಿದೆ ಮತ್ತು ಯುವಕರ ಮನೊಭಾವನೆಗಳು, ಮನೋಲಹರಿಗಳು ಗೊಂದಲಕ್ಕೀಡಾಗುತ್ತಿರುವುದು ಆತಂಕದ ವಿಷಯವಾಗಿದೆ.

ಈ ಶಿಕ್ಷಣದ ಶೈಕ್ಷಣಿಕ ಮಾಪನಗಳ ತಯಾರು, ಗುಣಮಟ್ಟ, ಶಿಕ್ಷಕರ ತರಬೇತಿ ಹಾಗೂ ಅವರ ಲೈಂಗಿಕ ತಜ್ಞತೆ (ಲೈಂಗಿಕತೆ ಅಲ್ಲ) ಈ ಶಿಕ್ಷಣದ ಪರ-ವಿರೋಧಗಳಿಂದ ಬಂದಂತಹ ಮನೋ ತೊಂದರೆಯ ಹೊಣೆಗಾರಿಕೆಗಳನ್ನು ನಿಯಂತ್ರಿಸುವ ಸಾಧನಗಳು, ಸಂಶೋಧನಾ ಪದ್ಧತಿಗಳ ಅಳವಡಿಕೆ (ಉದಾ: Helmet ಧಾರಣೆಯು Head injury ಸಂಶೋಧನೆಯಿಂದ ಆಗಿರುವಂತಹದ್ದು) ಎಲ್ಲವನ್ನೂ ಪರಿಶೀಲಿಸಿ, ವೃದ್ಧಿಗೊಳಿಸಿ, ಲೈಂಗಿಕ ಶಿಕ್ಷಣ ಪೂರ್ಣವಾಗಿ ಸಿದ್ಧಗೊಳಿಸಿ ಅನುಷ್ಠಾನಕ್ಕೆ ತರಬೇಕು.
ಈ ಲೈಂಗಿಕ ಶಿಕ್ಷಣದ ರೂಪು-ರೇಷೆಗಳನ್ನು ತಯಾರಿಸುವವರು ಯಾರು? ರಾಜಕಾರಣಿಗಳೇ, ಕಾನೂನು ತಜ್ಞರೇ, ವಿಶ್ವವಿದ್ಯಾನಿಲಯದ ಶಿಕ್ಷಣ ತಜ್ಞರೇ? ಹೀಗೆ ತಯಾರಿಸಬೇಕಾದವರು ತಮ್ಮ ತಮ್ಮ ಕ್ಷೇತ್ರದಲ್ಲಿ ಜಗ ಜಾಹೀರಾತು ಆಗುವ ಹಾಗೆ ತಮ್ಮ ಲೈಂಗಿಕತೆ, ಅನೈತಿಕತೆ, ಕಿರುಕುಳ, ವೀಕ್ಷಣೆ, ಲೈಂಗಿಕ ಆಮಿಷ ನೀಡಿ ಕಟಕಟೆ ಏರಿದ್ದಾರೆ. ಇಂತಹವರನ್ನು ನಾವು ಸದಾ ಮಾಧ್ಯಮಗಳಲ್ಲಿ ವೀಕ್ಷಿಸುತ್ತಿದ್ದೇವೆ. ಇಂತಹವರಿಂದ ಎಂತಹ ನೀತಿ ನಿರೀಕ್ಷಿಸಲು ಸಾಧ್ಯ?
ನೊಂದು ಹೋದವರಿಗೆ ಸಾಂತ್ವನ ಹೇಳಿ ನ್ಯಾಯ ಒದಗಿಸಬೇಕಾದ ಆರಕ್ಷಕರು ಕೂಡ ಮಾನವೀಯತೆ ಕಳೆದುಕೊಂಡು ತಮ್ಮ ಅಸಭ್ಯ ಬೈಗುಳಗಳಿಂದ ತಮ್ಮನ್ನು ಸಿಂಗರಿಸಿಕೊಂಡು ಅವರ ಹೆಸರು ಕೇಳಿದರೇ ಸಾಮಾನ್ಯರು ಹೆದರುವಂತೆ ವಾತಾವರಣ ಸೃಷ್ಟಿಸಿಕೊಂಡಿದ್ದಾರೆ. ಅಲ್ಲದೆ ಠಾಣೆಗಳಲ್ಲಿ ಸಹ ಲೈಂಗಿಕ ಕಿರುಕುಳ ಹೊಸತೇನಲ್ಲ. ಹೀಗೆಲ್ಲಾ ಇರುವಾಗ ಲೈಂಗಿಕ ಶಿಕ್ಷಣದ ರೂಪುರೇಷೆಗಳನ್ನು ತಯಾರಿಸುವಾಗ ಹೆಚ್ಚು ಯೋಚಿಸಬೇಕಾಗುತ್ತದೆ.
ಈ ಮೇಲಿನ ಮುಖ್ಯ ಇಲಾಖೆಗಳಲ್ಲಿರುವವರೆಲ್ಲ ಕೆಟ್ಟವರಲ್ಲ, ಅಲ್ಲಿಯೂ ಒಳ್ಳೆಯವರಿದ್ದಾರೆ. ಅವರು ಬೆಳಕಿಗೆ ಬರುವುದಿಲ್ಲ. ನನ್ನ ಅಹವಾಲೆಂದರೆ ಈ ಶಿಕ್ಷಣ ಜಾರಿಗೆ ಬರುವ ಮುನ್ನ ಇವೆಲ್ಲವನ್ನೂ ಮಂಥನ ಮಾಡಬೇಕು ಎನ್ನುವುದೇ ಹೊರತು ಬೇರೇನಿಲ್ಲ. ಮನಸ್ಸು ಅಸ್ಥಿರವಾಗಿರುವಾಗ, ಸಮಾಜ ಚೂರುಚೂರಾಗುತ್ತಿರುವಾಗ ಮನೋ ತಜ್ಞರು ಯಾರಿಗೆ ಕಾಣುತ್ತಾರೆ? ಅವರ ಸಲಹೆಯನ್ನು ಪಡೆಯುವವರಾರು? ಅವರ ಚಿಂತನೆಗಳಿಗೆ ಬೆಲೆ ಇದೆಯೇ ಎಂಬುದೇ ನನ್ನ ಆಂತಕ ಮತ್ತು ಪ್ರಶ್ನೆ.
ಇಂದಿನ ಯುವ ಜನತೆಯ ಮಾನಸಿಕ ಮತ್ತು ದೈಹಿಕ ಬದಲಾವಣೆ ಗಮನಿಸಿದರೆ ತೀರಾ ವಿಭಿನ್ನವಾಗಿ ತೊರುತ್ತದೆ. ಸಾಮಾನ್ಯವಾಗಿ ಹದಿನೈದು, ಹದಿನಾರನೇ ವಯಸ್ಸಿಗೆ ಋತುಮತಿಯಾಗುತ್ತಾಳೆ. ಇದು ರಾಸಾಯನಿಕ ವಸ್ತುಗಳಿಗೆ ಕಾರಣವಾದರೆ, ಅಂತರ್ಜಾಲ ಮತ್ತು ಮಾಧ್ಯಮಗಳ ಮೂಲಕ ಲೈಂಗಿಕವಾಗಿ ಮನಸ್ಸಿಗೆ ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿನಿ ಮತ್ತು ಶಿಕ್ಷಕರಲ್ಲಿ ‘ಗುರು ಶಿಷ್ಯ’ರ ಬಾಂಧವ್ಯವಿರದೆ, ಇರಬೇಕಾದ ರೀತಿ ಇಲ್ಲದಿರುವುದು, ಮಾದಕ ವಸ್ತುಗಳ ಸೇವನೆ, ಆಧುನಿಕವಾದ ಜಂಕ್ (Junk)ಗಳಂಥ ಆಹಾರದ ಅವಲಂಬನೆ, ಯಥೇಚ್ಛವಾದ ಹಣದ ((Pocket Money) ದೊರೆಯುವಿಕೆಯಿಂದ ಆಗುವ ಅನಾಹುತಗಳು, ಅಂಗಾಂಗಗಳು ಕಾಣುವ ಹಾಗೆ ಹುಡುಗಿಯರು ತೊಡುವ ತುಂಡುಡುಗೆಗಳು, ಸುಲಭವಾಗಿ ಸಿಗುವ ಮಾಹಿತಿಗಳು ಮುಂತಾದ ವಿಚಾರಗಳನ್ನು ಮನಗಂಡು ಲೈಂಗಿಕ ಶಿಕ್ಷಣದ ಪಠ್ಯಗಳು ರಚನೆಯಾಗಬೇಕು.
ನಾನೊಬ್ಬ ಮನೋ ವೈದ್ಯನಾಗಿ ಕೇಳುವುದೆಂದರೆ, ಈ ಶಿಕ್ಷಣವನ್ನು ತರುವ ಮುನ್ನ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರ ಸ್ಥಾಪಿಸಬೇಕು ಮತ್ತು ಸಂದರ್ಭಾನುಸಾರ ಮನೋವೈದ್ಯರ ಸಲಹೆ, ಸೂಚನೆಗಳನ್ನು ಪಾಲಿಸಬೇಕು.
ಈ ಸಮಯದಲ್ಲಿ ನನಗೆ ನೆನಪಿಗೆ ಬರುವ ಮುಖ್ಯ ವಿಷಯ ‘ಪೋಷಕರ ಜವಾಬ್ದಾರಿ’. ಹೆತ್ತವರು ಲೈಂಗಿಕ ಜ್ಞಾನ ಹೊಂದಿರಬೇಕು. ಮಕ್ಕಳ ಮತ್ತು ಸ್ನೇಹಿತರ ಲೈಂಗಿಕ ಪ್ರಶ್ನೆಗಳಿಗೆ ಮುಕ್ತವಾಗಿ ಲಜ್ಜೆ ಇಲ್ಲದೆ, ಗೊಂದಲವಿಲ್ಲದೆ ಆತ್ಮೀಯತೆಯಿಂದ, ವಿವೇಕಯುತವಾಗಿ ಉತ್ತರಿಸಬೇಕು ಮತ್ತು ಅವರ ಅನುಮಾನ ಪರಿಹರಿಸಬೇಕು. ಹೀಗೆ ಎಲ್ಲರೂ ಕೈ ಜೋಡಿಸಿದರೆ ಈ ಲೈಂಗಿಕ ಶಿಕ್ಷಣ ಸಕಾರಾತ್ಮಕವಾಗುವುದು ಮತ್ತು ಅನುಕೂಲವಾಗುವುದು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ