
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಸತ್ಯ ಕಹಿ ಮತ್ತು ಸತ್ಯಕ್ಕೆ ನಿಧಾನವಾಗಿ ಜಯ
ಸತ್ಯ ಯಾವಾಗಲೂ ಕಹಿಯಾದುದು. ಬಹುತೇಕ ಜನ ತಮ್ಮ ತಪ್ಪನ್ನು ಒಪ್ಪಿಕೊಳ್ಳುವುದಿಲ್ಲ. ಅವರವರ ಮೂಗಿನ ನೇರಕ್ಕೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಾವೇನಾದರೂ ಪರರಲ್ಲಿ ತಪ್ಪನ್ನು ತೋರಿಸಿದರೆ, ಸಿಟ್ಟು ನೆತ್ತಿಗೇರಿಸಿಕೊಂಡು ಕಾಲು ಕೆರೆದು ಜಗಳಕ್ಕೆ ಬಂದು ದೊಡ್ಡ ಗಲಾಟೆ ಮಾಡುವ ಸಾಧ್ಯತೆಯೇ ಹೆಚ್ಚು. ಈ ತಪ್ಪುಗಳು ನೋಟ, ಭಾವ, ಸನ್ನೆ, ಕೃತ್ಯಗಳಾಗಿರಬಹುದು. ತಪ್ಪುಗಳು ಆ ಸಮಯಕ್ಕೆ ನಿಲುಕುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸತ್ಯಾನ್ವೇಷಣೆಗೆ ಕಿಂಚಿತ್ತೂ ಅವಕಾಶವಿರುವುದಿಲ್ಲ. ಸಹನೆ ಮತ್ತು ಸಂಯಮದ ಕೊರತೆ ಆಲಿಸದಂತಹ ಶಕ್ತಿ ಅಹಂಭಾವಗಳೇ ಇವಕ್ಕೆ ಕಾರಣ…!
ಸತ್ಯ ಯಾವಾಗಲೂ ನಗ್ನತೆಯ ಅವತಾರ. ನಗ್ನತೆಯನ್ನು ಮುಚ್ಚಿದೊಡನೆ ಮನುಷ್ಯನು ಸುಂದರವಾಗಿ ಕಾಣುವನು. ಆದ್ದರಿಂದ ಮನುಷ್ಯನನ್ನು ‘ಬಹು ಬಣ್ಣಗಳ ರೂಪಿ’ ಎನ್ನುವುದು. ಇದನ್ನೇ ರೂಮನ್ ಭಾಷೆಯಲ್ಲಿ `Persona’’ (ಮುಖವಾಡ) ಎನ್ನುವರು. ಅನೇಕ ಮುಖವಾಡವುಳ್ಳ ವ್ಯಕ್ತಿಗೆ ‘ವ್ಯಕ್ತಿತ್ವದ ಸ್ವರೂಪಿ’ ಎನ್ನುವರು. ಮೌನ ಮುನಿಗಳ ಪ್ರಕಾರ ‘ನಗ್ನತೆಯೇ ಸಮ ಭಾವನೆಯ ಆಗರ, ಸಹ ಬಾಳ್ವೆಯ ಅವತಾರ’ ಈ ಹೇಳಿಕೆಯನ್ನು ಅರ್ಥೈಸಿ ನೋಡಿದರೆ ನಿಜವಾದ ಪ್ರೀತಿ, ಕಳಂಕರಹಿತ ಪ್ರೇಮ ಕಾಣುವುದು. ಇದನ್ನು ಇಂದಿನ ಢೋಂಗಿ ವೃತ್ತಿಯಲ್ಲಿ ತೊಡಗಿರುವ ಸ್ವಾಮಿಗಳು ಲೈಂಗಿಕವಾಗಿ ತೋರಿ ಋಷಿ ಮುನಿಗಳಿಗೆ ಇದ್ದ ಮರ್ಯಾದೆಯನ್ನು ಹಾಳು ಮಾಡಿರುವರು.
ಅನೇಕ ಗೌರವಾನ್ವಿತ ಮಠಗಳಿಗೆ ಮಸಿ ಬಳಿಯುವ ಕೆಲಸವನ್ನು ಮಾಡಿದ್ದಾರೆ. ತಂತ್ರ ವಿದ್ಯೆಯನ್ನು ಕಾಮಾಟಿಪುರವೆಂಬಂತೆ ಚಿತ್ರಿಸಿರುವರು (ಸಮಯ ಬಂದಾಗ ಮುಂದೊಂದು ದಿನ ಈ ತಂತ್ರವೆಂದರೇನು ಎಂಬುದನ್ನು ತಿಳಿಸುವೆನು).
ನಾನು ನೋಡಿದ ತ್ರಿಕೋನ ಪ್ರೇಮ ಘಟನೆಯನ್ನು ಉದಾಹರಿಸಿ, ಸತ್ಯ ಎಷ್ಟು ಕಠೋರವಾದುದು ಎಂಬುದನ್ನು ತಿಳಿಸುವ ಪ್ರಯತ್ನ ಮಾಡುವೆ. ಸುಮಾರು ಮೂವತ್ತೆರಡು ವರ್ಷ ವಯಸ್ಸಿನ ಒಂದು ಮಗುವಿನ ತಾಯಿ, ಬ್ಯಾಂಕ್ ನೌಕರನ ಹೆಂಡತಿ, ಮಧ್ಯಮ ದರ್ಜೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದು, ಆಕೆಯ ಪೋಷಕರಿಗೆ ಮೂರನೇ ಮಗಳು. ಆಡಂಬರದ ಮಾತು, ವೈಯ್ಯಾರದ, ತೋರಿಕೆಯ ನಡವಳಿಕೆ, ಶರೀರ ದಪ್ಪಗಿದ್ದರೂ ಮಾದಕ ಮೈಕಟ್ಟು. ಕಾಮುಕರು ಜೊಲ್ಲು ಸುರಿಸುವಂತಹ ಉಡುಗೆ ತೊಡುವುದು, ನೆರೆ ಹೊರೆಯವರೊಡನೆ ಹೊಂದಾಣಿಕೆ ಇಲ್ಲ, ಸ್ನೇಹಿತರು ತುಂಬಾ ಕಡಿಮೆ. ಇಂತಹ ಗುಣವುಳ್ಳವಳನ್ನು ಆಗಾಗ ಜ್ಞಾನ ತಪ್ಪುವಳು ಎಂಬ ಕಾರಣದಿಂದ ನನ್ನಲ್ಲಿಗೆ ಸಲಹೆಗಾಗಿ ಆಕೆಯ ಗಂಡ ಮತ್ತು ಇನ್ನೊಬ್ಬರು ಕರೆತಂದರು.

ಆಕೆಯನ್ನು ಪರೀಕ್ಷಿಸಿದ ನಾನು Conversion disorder ಎಂಬ ಬಾಧೆಗೆ ಒಳಗಾಗಿದ್ದಾಳೆ ಎನ್ನುವ ನಿರ್ಧಾರಕ್ಕೆ ಬಂದು ಅವಳ ಮನೋ ಚಿತ್ರಣವನ್ನು ತಿಳಿಯಲು ಮುಂದಾದೆ. ಅವರಲ್ಲಿ ಕ್ಷಮೆ ಯಾಚಿಸಿ ಒಂದಿಷ್ಟು ಗೌಪ್ಯದ ವಿಷಯಗಳನ್ನು ಬಿಚ್ಚಿಡಲು ಪ್ರಯತ್ನಿಸಿದೆನು.
ಈಕೆಯ ಈ ಜ್ಞಾನ ತಪ್ಪುವಿಕೆಯು ಗಮನ ಸೆಳೆಯುವ ತಂತ್ರವಾಗಿ ಮಾರ್ಪಾಟುಗೊಂಡಿದೆ. ಮೊದಲೇ ಆಕೆಯ ವ್ಯಕ್ತಿತ್ವವನ್ನು ವಿವರಿಸಿದ್ದೇನೆ. ಅವಳ ಅಂತರAಗದಲ್ಲಿ ಮಾದಕಾವಸ್ಥೆ ತುಂಬಿರುವವಳಾಗಿದ್ದಾಳೆ. ಬಹಿರಂಗವಾಗಿ ಈ ಮಾದಕತೆಯ ತೋರುವಿಕೆಯನ್ನು ನಿತ್ಯ ಜೀವನದ ಸಮಾಜದ ದೃಷ್ಟಿಯಲ್ಲಿ ನಿಷೇಧಿಸಿದೆ. ಇಲ್ಲಿಯೇ ಈ ಮೂರನೇ ವ್ಯಕ್ತಿಯ ಪಾತ್ರ ಬರುವುದು. ಕಟ್ಟುಮಸ್ತಾದ ಇಪ್ಪತ್ತೈದರ ವಯಸ್ಸಿನ, ಸುಂದರವಾದ, ವಿದ್ಯಾವಂತ, ಉದ್ಯೋಗವಿಲ್ಲದ ಹುಡುಗನೊಬ್ಬ ಪಕ್ಕದ ಮನೆಯಲ್ಲಿದ್ದ. ಇವರು ನಗರದಲ್ಲಿದ್ದಾಗ ಆತನ ಪರಿಚಯ ಇವರಿಗಾಗಿತ್ತು. ಈಕೆಯ ಸುಪ್ತ ಮನಸ್ಸಿನಲ್ಲಿ ಅವನ ರೂಪವನ್ನು ಹೀರಿದ್ದಳು.
ಕಾಮೋದ್ರೇಕ ಬಂದೊಡನೆ ಜ್ಞಾನವು ಇಲ್ಲವಾದಂತಾಗುತ್ತಿತ್ತು. ಇದನ್ನು ಕಂಡ ಆ ಯುವಕ ಆಸ್ಪತ್ರೆಗೆ ಸಾಗಿಸುತ್ತಿದ್ದ. ಆ ಸಮಯದಲ್ಲಿ ಅವನ ತೊಡೆಯ ಮೇಲೆ ನಿದ್ರಿಸುತ್ತಿದ್ದಳು. ಆ ಸುಖವು ಇವಳಿಗೆ ಕಾಮ ಕ್ಲೀಷೆಯನ್ನು ನೀಗಿಸುತ್ತಿತ್ತು. ಬೇಕೆಂದಾಗ ಆಕೆಯು ಕಾಯಿಲೆಯನ್ನು ಮನಸ್ಸಿನ ಸುಪ್ತದಡಿಯಲ್ಲಿ ತರಿಸಿಕೊಳ್ಳುತ್ತಿದ್ದಳು.
ಯುವಕ ಅರಿವಿಲ್ಲದೆ ನಗರದಿಂದ ಬಂದು ಇವಳ ಆರೈಕೆಯನ್ನು ಯಾವುದೇ ಕಾಮಾಪೇಕ್ಷೆ ಇಲ್ಲದೆ, ಸಹಾಯ ಮನೋಭಾವದಿಂದ ಬಂದು ನೆರವಾಗುತ್ತಿದ್ದ. ಬರುಬರುತ್ತಾ ಅವನಿಗೆ ಇವಳು ಬಿಸಿ ತುಪ್ಪವಾದಳು. ಕೊನೆ ಕೊನೆಗೆ ಎಲ್ಲರೂ ಸಹಾಯಕರಾಗಿ ಸ್ವಾಮಿಗಳು, ದರ್ಗಾಗಳು ದೇವಸ್ಥಾನಗಳನ್ನೆಲ್ಲಾ ಪರ್ಯಟನೆ ಮಾಡಿ ನನ್ನಲ್ಲಿಗೆ ಕರೆ ತಂದಿದ್ದರು. ನಾನು ಒಬ್ಬೊಬ್ಬರನ್ನೇ ನನ್ನ ಸಲಹಾ ಕೊಠಡಿಗೆ ಕರೆತಂದು ಆಪ್ತ ಸಮಾಲೋಚನೆ, ವಿಶ್ಲೇಷಣೆ ನೀಡುವ ಸಂದರ್ಭದಲ್ಲಿ ಇದ್ದ ಸತ್ಯ ಸಂಗತಿಯನ್ನು ಆಕೆಗೆ ಹೇಳಿದ್ದಕ್ಕೆ ಕಠೋರವಾಗಿ ಕಂಡು ನನ್ನನ್ನುದ್ದೇಶಿಸಿ ಕೋಪದಿಂದ ‘ಏನ್ ಡಾಕ್ಟ್ರೇ , ಏನ್ ತಿಳಿದುಕೊಂಡಿದ್ದೀರಿ? ನಾನು ಮರ್ಯಾದಸ್ಥ ಹೆಣ್ಣು. ಹೀಗೆ ಮಾತು ಮುಂದುವರೆಸಿದರೆ ಇಲ್ಲೇ ಬೊಬ್ಬೆ ಹಾಕುವೆ, ಆರಕ್ಷಕರಿಗೆ ದೂರು ಕೊಡುವೆ’ ಎಂದೆಲ್ಲಾ ಹಿಗ್ಗಾಮುಗ್ಗಾ ಮಾತನಾಡಿದಳು.
ನೋಡಿ ಸ್ನೇಹಿತರೇ, ಸತ್ಯ ಎಷ್ಟು ಕಹಿ ಅಲ್ವಾ? ಗಂಡ ಒಳ ಬಂದು ಅವಳನ್ನು ಸಮಾಧಾನಿಸಿ ಕರೆದುಕೊಂಡು ಹೋದನು. ಆ ಯುವಕ ನನ್ನ ಸಲಹೆ ಮೇರೆಗೆ ಆಕೆಯ ಕಾಯಿಲೆಯನ್ನು ಮನಗಂಡು ಸುಳಿಯದಿದ್ದರಿಂದ ಅವಳ ಕಾಯಿಲೆ (Persona) ಮಂಗಮಾಯವಾಯಿತು.
‘ಸತ್ಯ ಕಹಿ ಮತ್ತು ಸತ್ಯಕ್ಕೆ ನಿಧಾನವಾಗಿ ಜಯ ಸಿಗುತ್ತದೆ’ ಎನ್ನುವುದು ಇದನ್ನೇ ಅಲ್ಲವೇ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ