
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಹೋಮ ಹವನಗಳೆಂದರೆ…???
ನಮ್ಮ ಪರಂಪರೆಯ ಆಚಾರ ವಿಚಾರಗಳು ದೈನಂದಿನ ಚಟುವಟಿಕೆಗಳಲ್ಲಿ ದಿಢೀರ್ ಕಾಣಿಸಿಕೊಂಡಾಗ ಅಥವಾ ಬಂತೆಂದರೆ ಅದರ ಹಿಂದೆಯೇ ತರ್ಕ, ವಿಮರ್ಶೆ, ಸಿದ್ಧಾಂತಗಳು ಚರ್ಚೆಗಳಿಗೆ ಗ್ರಾಸವಾಗಿ ಬಿಡುತ್ತವೆ. ಇವುಗಳನ್ನು ಮುಂದಿಟ್ಟುಕೊಂಡು ಪತ್ರಿಕೆಗಳಲ್ಲಿ ಮತ್ತು ದೂರದರ್ಶನಗಳಲ್ಲಿ ವಿಡಂಬನೆ, ನಿರೂಪಣೆ, ವೈಜ್ಞಾನಿಕತೆ, ಸತ್ಯಾಂಶ, ಸಮಾಜವಾದ, ಆಧ್ಯಾತ್ಮ ಹೀಗೆ ಅನೇಕ ತರಹದ ವಿವೇಚನೆಗಳು, ತಗಾದೆಗಳು ಬರುತ್ತವೆ. ಅದರಲ್ಲಿಯೂ ಈ ಆಚಾರ ಮತ್ತು ವಿಚಾರಗಳು ಯಾರಲ್ಲಿ ಚರ್ಚೆಗೆ ಕಾಣಬಹುದೆಂದರೆ, ಜ್ಯೋತಿಷಿಗಳು, ಸ್ವಾಮೀಜಿಗಳು, ಸಮಾಜ ಕಾರ್ಯಕರ್ತರು, ಪಂಡಿತರು, ವಿಜ್ಞಾನಿಗಳು ಇತ್ಯಾದಿ. ಇವರ ವಿಚಾರ ವಿನಿಮಯಗಳಿಂದ ಅವರವರ ಬಣ್ಣಗಳು ಬಯಲಾಗುತ್ತಾ ಹೋಗುತ್ತವೆ.
ಇದೇನೇ ಇರಲಿ, ನನಗೆ ಇತ್ತೀಚೆಗೆ ಸದಾ ಕಾಡುತ್ತಿರುವ ವಿಷಯ ‘ಹೋಮ’. ಕಂಡೂ ಕಾಣದ, ಅರಿವಿಗೆ ಬಾರದ ಅನೇಕ ಹೆಸರುಳ್ಳ ಹೋಮಗಳು ನಮ್ಮ ಮುಂದೆ ಹಾದು ಹೋಗುತ್ತವೆ. ಹೋಮ ಮಾಡಿಸುವ ವ್ಯಕ್ತಿಗಳ ಅಭಿಪ್ರಾಯಗಳು ಎಷ್ಟೋ ಸಲ ನಗೆಪಾಟಲಿಗೆ ಈಡಾಗುತ್ತವೆ. ಮತ್ತು ಅವರ ನಿಜ ಸ್ವರೂಪ ಇದರಿಂದ ಅನಾವರಣಗೊಳ್ಳುತ್ತದೆ. ಹೋಮವನ್ನು ಮಾಡಿಸುವ ಕಾರಣಗಳನ್ನು ತಿಳಿದರೆ ನಾಚಿಕೊಳ್ಳಬೇಕಾಗುತ್ತದೆ ಮತ್ತು ಇದು ಮೂಢತನವನ್ನು ತೋರಿಸುತ್ತದೆ. ಅಂತಹವುಗಳೆಂದರೆ, ವ್ಯಕ್ತಿಯ ಪ್ರಾಬಲ್ಯ, ಸಿರಿವಂತಿಕೆ, ಶತ್ರುಗಳ ನಾಶ, ನಿಂದನೆ ಮತ್ತು ಶಾಪಗಳು ತಟ್ಟದೇ ಇರಲಿ ಎಂಬುವುದಕ್ಕೆ ಶುದ್ಧಿ ಮತ್ತು ವಾಸ್ತು ಕಾರಣಗಳಿಗೆ, ವಾಮಾಚಾರಗಳಿಗೆ ಹಾಗೂ ಸಮಸ್ತ ಲೋಕ ಕಲ್ಯಾಣವಾಗಲಿ ಅನ್ನುವ ಕಾರಣಕ್ಕೂ ಸಹ ಹೋಮಗಳನ್ನು ನಡೆಸುತ್ತಾರೆ.
ಸ್ನೇಹಿತರೇ, ಇಲ್ಲಿ ನಾವು ಚಿಂತಿಸಬೇಕಾದ ವಿಷಯವೆಂದರೆ, ಜ್ಞಾನ ವೃದ್ಧಿಗೆ ಬಿಟ್ಟು ಎಲ್ಲದಕ್ಕೂ ಹೋಮವನ್ನು ಮಾಡುತ್ತಾರೆ. ಹೋಮವನ್ನು ಜ್ಞಾನಕ್ಕೆ ಸೀಮಿತಗೊಳಿಸಿ ಮಾಡುವುದು ತುಂಬಾ ವಿರಳ. ವೇದಗಳ, ಉಪನಿಷತ್ತುಗಳ, ಯೋಗ ದರ್ಶನಗಳ ಮತ್ತು ಆಧ್ಯಾತ್ಮಗಳ ರುಚಿ ಕಂಡ ನನಗೆ ಹೋಮದ ಸಿಹಿಯನ್ನು ಸವಿಯಬೇಕೆನಿಸಿತು. ಅದನ್ನು ಹುಡುಕಲು ಅನೇಕ ವರ್ಷಗಳೇ ಬೇಕಾಯಿತು. ಮೊದಮೊದಲು ಹೋಮದ ಬಗ್ಗೆ ತಿಳಿಯುವ ಪ್ರಯತ್ನದಲ್ಲಿದ್ದಾಗ ಇದೆಂತಹ ಸಿಹಿಯಪ್ಪಾ ಎಂದನಿಸುತ್ತಿತ್ತು. ಉರಿ ಹಚ್ಚಿ, ಹೊಗೆ ತರಿಸಿ, ಕಣ್ಣಿಗೆ ಉರಿ ಮಾಡೋ ಈ ಹೋಮ ಹೋಮವೇ ಎಂದು ಪ್ರಶ್ನಿಸಿ ವಾಯುಮಾಲಿನ್ಯ ಮಾಡುವ ಅವಿವೇಕಿತನ ಎಂದೆನಿಸುತ್ತಿತ್ತು. ಕಾಲ ಕ್ರಮೇಣ ಅದರ ಕಡೆ ಒಲವು ತೋರಿದ ನನಗೆ ಹೋಮದ ರೂಪು ರೇಷೆಗಳು ಕಾಣತೊಡಗಿದವು. ಜೊತೆಗೆ ನನ್ನನ್ನು ಕಾಡುತ್ತಿದ್ದ ಪ್ರಶ್ನೆ ಹೋಮ ಎಂದರೇನು?
ಕೆಲವು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ ‘ಸುದರ್ಶನ ಹೋಮ’ವನ್ನು ಇರಿಸಿದ್ದೆವು. ವೇದ ಸ್ನಾತಕೋತ್ತರದಲ್ಲಿ ವ್ಯಾಸಂಗ ಮಾಡುತ್ತಿದ್ದ ಒಬ್ಬ ಯುವ ಪಂಡಿತರು ಆಗಮಿಸಿದ್ದರು. ಅವರು ನನ್ನ ಈ ಮೇಲಿನ ಸಂದೇಹಕ್ಕೆ ಉತ್ತರಿಸುತ್ತ, ‘ಹೋಮ’ ಎಂಬುವುದು ಅಂಚೆ ಕಛೇರಿ ಇದ್ದಂತೆ. ನಾವು ಯಾರಿಗೋ ಕಳುಹಿಸಿದ MO (Money order) ನಿರ್ದಿಷ್ಟವಾಗಿ ತಲುಪಿದಂತೆ ಅಗ್ನಿದೇವನ ಮೂಲಕ ಕಾಣದೇ ಇರುವ ಭಗವಂತನಿಗೆ ಕಳುಹಿಸಿಕೊಡುವ ಒಂದು ಸಂವಹನ ಕ್ರಿಯೆ (ಅಂಚೆಯಾಳು ಇದ್ದಂತೆ) ಈ ‘ಹೋಮ’ ಎಂದು ಹೇಳಿದರು. ನಾನು ಸೇರಿದಂತೆ ಎಲ್ಲರೂ ಚಪ್ಪಾಳೆ ತಟ್ಟಿದೆವು. ಎಲ್ಲವೂ ಸುಸೂತ್ರವಾಗಿ ನಡೆಯಿತು.
ಕಾಲಕ್ರಮೇಣ ಈ ಪ್ರಶ್ನೆ ನನ್ನ ಯೋಚನೆಯನ್ನು ಗೀಳಾಗಿ ಪರಿವರ್ತಿಸಿತು. ಮೊನ್ನೆಯಷ್ಟೇ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಂಡೆ. ನಮ್ಮ ಜನರು ಎಷ್ಟು ಬುದ್ಧಿವಂತರಿದ್ದಾರೆಂದರೆ, ಈ ಹೋಮವು ಅಂಚೆ ಕಛೇರಿ ಆದ ಪಕ್ಷದಲ್ಲಿ ಇವತ್ತಿನ ದಿನ ಬಹುತೇಕ ಗಂಡಸರು ತಮ್ಮ ಹೆಂಡತಿಯನ್ನು ಭಗವಂತನಿಗೆ ರವಾನೆ ಮಾಡುತ್ತಿದ್ದರು. ಬಹುತೇಕರಿಗೆ ಹೆಂಡತಿಯೇ ಅಡ್ಡಲಾಗಿದ್ದಾಳೆ. ಹಾಗೆಯೇ ಹೆಚ್ಚಿನ ಹೆಂಗಸರಿಗೆ ಗಂಡನು ತೊಡಕಾಗಿದ್ದಾನೆ. ಇಂತಹ ರವಾನೆ ಮಾಡುವ ಅಂಚೆ ಕಛೇರಿಗಳಿದ್ದರೆ ಒಳಿತಲ್ಲವೆ.

ಹಾಗಿದ್ದಿದ್ದರೆ ಸಮಾಜದಲ್ಲಿ ಗಲಾಟೆಯು ಕಡಿಮೆ ಇರುತ್ತಿತ್ತು. ಇಂದು ಹಾಗೆ ಮಾಡಿದ ಪಕ್ಷದಲ್ಲಿ ಏನು ಆಗುವುದು ಎಂಬ ಅರಿವು ಇರುವುದರಿಂದ ಯಾರೂ ಹಾಗೆ ಮಾಡುವ ಗೋಜಿಗೆ ಹೋಗುವುದಿಲ್ಲ. ಇದರಿಂದ ನನಗೆ ತಿಳಿಯುವುದೇನೆಂದರೆ, ನಾವು ಲೋಭಿಗಳಲ್ಲವೆ? ನಮಗೂ ಮತ್ತು ಮೂಢರಿಗೂ ವ್ಯತ್ಯಾಸವಿದೆಯೇ? ಅನ್ನುವುದು. ನನಗೆ ಈ ಹೋಮದಲ್ಲಿ ಕಾಣುವುದೇ ಬೇರೆ. ಹೊ-ಹೊಗೆ, ಮ-ಮನಸ್ಸು.
‘ಹೊಗೆ, ಮನಸ್ಸು’ . ನಾನೊಬ್ಬ ಮನೋ ವೈದ್ಯನಾಗಿರುವುದರಿಂದ ‘ಹೊಗೆ ಮನಸ್ಸು’ ‘ಮಂಥನ’ ಎನ್ನುವೆನು.ಅಂಗ್ರೇಜಿಯಲ್ಲಿ Thawing ಎಂಬುದಾಗಿ ಕರೆಯುವರು.
ಮನಸ್ಸಿನ ಹೊಗೆ ಎಂದರೆ ಮನೋ ಮಂಥನ. ಹೊಗೆ ಕಿರು ಕಿಚ್ಚಿಗೆ ಸಮಾನ. ಈ ಕಿಚ್ಚಿನ ಕಾರಣದಿಂದ ಒಬ್ಬ ವ್ಯಕ್ತಿ ಸದಾ ಅರಿವುಳ್ಳವನಾಗಿರುತ್ತಾನೆ. ಈ ಅರಿವಿಲ್ಲದವನು ಜಡತ್ವವನ್ನು ಹೊಂದಿರುವನು. ಮನುಷ್ಯನು ಯಾವಾಗಲೂ ಮಂಥನದಲ್ಲಿ ತೊಡಗಿರಬೇಕು. ಇಂತಹ ಮಂಥನವು ಪ್ರಚೋದನೆಯಿಂದ ಮಾತ್ರ ಸಾಧ್ಯ.
ನಮ್ಮ ಪಂಚೇಂದ್ರಿಯಗಳು ಸದಾ ಕಾರ್ಯ ಪ್ರವೃತ್ತಿಯಾಗಿರಲು ಈ ಸಕಾರಾತ್ಮಕ ಚಿಂತನೆಯಿಂದ ಮಾತ್ರ ಸಾಧ್ಯ. ಮಂಥನವು ಪುರುಷನಲ್ಲದೆ ಧರ್ಮದಲ್ಲಿ ಅಡಗಿರುವ ಜ್ಞಾನ ಭಂಡಾರದಲ್ಲಿ ಅಡಗಿರುವ ಜ್ಞಾನವನ್ನು ತಿಳಿಯಲು ಬಹು ದೊಡ್ಡ ಪಾತ್ರ ವಹಿಸುತ್ತದೆ. ಪಂಚೇಂದ್ರಿಯದ ಪ್ರಚೋದನೆ ಕತ್ತಲಲ್ಲಿ ನಡೆಯುವುದಿಲ್ಲ. ಕತ್ತಲೆ ಕೋಣೆಯಲ್ಲಿ ಮನುಷ್ಯನನ್ನು ಬಿಟ್ಟರೆ ಹುಚ್ಚನಾಗುವನು. ಹೋಮದ ಬೆಳಕಿನಲ್ಲಿ ಜ್ಞಾನವನ್ನು ನೋಡಿದರೆ ಜ್ಞಾನಿಯಾಗುವನು. ಅದೇ ಇದರ ಮೂಲ ಸಂದೇಶ. ಜ್ಞಾನಾರ್ಜನೆ ಕಷ್ಟದ ಕೆಲಸ. ಅದು ಹೇಗೆ ಸಿಗುವುದೆಂದರೆ ನಮ್ಮ ಷಡ್-ಐಶ್ವರ್ಯಗಳನ್ನು ಹೋಮದ ಕುಂಡದಲ್ಲಿ ಅಥವಾ ಬೆಳಕಿಗೆ ಸಮರ್ಪಿಸಿದರೆ ಯೋಗಿ ಆಗುವನು.
ಹೋಮವನ್ನು ಕುರಿತು ಹೀಗೆ ಹೇಳಬಹುದು.
‘ಎಲೇ ಮಾನವನೇ,
ದೇವರ
ದಯೆದಿ ಜನಿಸಿರುವನೇ
ಭಗವಂತನ ಮರೆತಿರುವನೆ,
ಶಿವನ ಕಣ್ಣು ತೆರೆಯುವ ಮುನ್ನ
ಮಾರ್ಕಂಡೇಯನೇ… ಶ್ರೀಹರಿಯೇ…
ಓ ಅಗ್ನಿದೇವನೇ, ಇಳಿದು ಬಾ, ನೀ ಇಳಿದು ಬಾ…
ತೆಗೆದುಕೋ ಅಹಂಕಾರವ ತುಪ್ಪದ ಮೂಲಕ, ಸ್ವಾಹಾ
ತೆಗೆದುಕೋ, ಮೂಳೆಯ ಸಮಿತ್ತುಗಳ ಮೂಲಕ, ಸ್ವಾಹಾ
ತೆಗೆದುಕೋ ರಕ್ತ ಮಾಂಸವ ಧಾನ್ಯಗಳ ಮೂಲಕ, ಸ್ವಾಹಾ
ತೆಗೆದುಕೋ ಸಿರಿ ಸಂಪತ್ತನ್ನು ವಸ್ತçಗಳ ಮೂಲಕ, ಸ್ವಾಹಾ
ತ್ರಿಲೋಕನೇ, ಗಂಗೆಯ
ಹೊತ್ತಿರುವನೇ, ಬಸವಾರೂಢನೇ,
ಕೈಲಾಸ ಪತಿಯೇ
ಶಾಂತನಾಗು… ಸಂತೃಪ್ತನಾಗು…
ಕರುಣಿಸು ಜ್ಞಾನವಾ, ಕರುಣಿಸು
ವಿವೇಕವಾ, ಕರುಣಿಸು ಮನವಾ
ಓಂ ಶಾಂತಿ… ಓಂ ಶಾಂತಿ… ಓಂ ಶಾಂತಿ…!
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ