
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಮಾನವನ ಪ್ರಗತಿಗೆ ಸ್ವಲ್ಪ ಭಯ ಬೇಕು
‘ಭಯ’ ಎಂಬುದು ಮಾನವನ ಜನ್ಮಸಿದ್ಧ ಹಕ್ಕು ಇದ್ದಂತೆ. ಇದು ಹೊಡಿ ಅಥವಾ ಓಡು, ಇಲ್ಲವೇ ಮಾಡು ಅಥವಾ ಮಡಿ ಎನ್ನುವ ರೀತಿಯ ಬದುಕಿಗೆ ಬೇಕಾದಂತಹ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಯಾವುದೇ ವ್ಯಕ್ತಿಯಲ್ಲಿ ಈ ಭಯ ಎಂಬುದು ಇಲ್ಲದಿದ್ದಾಗ ಆತನ ಬದುಕು ಅತಂತ್ರ ಸ್ಥಿತಿಗೆ ತಲುಪುತ್ತದೆ.
ಆತಂಕವು ನಮ್ಮ ಪ್ರೇರಣೆ ಮತ್ತು ಕಾರ್ಯ ನಿರೂಪಣೆಗಳಿಗೆ ಶಕ್ತಿಯ ಇಂಧನವಿದ್ದಂತೆ. ಒಬ್ಬ ವ್ಯಕ್ತಿಯ ವೃತ್ತಿ/ಉದ್ಯೋಗದಲ್ಲಿ ಮತ್ತು ಪ್ರಗತಿಯಲ್ಲಿ ಸಾಮಾನ್ಯ ಕಿಚ್ಚು ಪೂರಕವಾಗಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಕಿಚ್ಚು ಅಂದರೆ ಭಯ ಮತ್ತು ಸಿಟ್ಟು ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೋಪವು ಅಲ್ಪ ಪ್ರಮಾಣವಾಗಿದ್ದು, ಭಯವು ಕಿರು ಗಾಬರಿಯಾಗಿದ್ದರೆ, ಜೀವನದಲ್ಲಿ ಸಕಾರಾತ್ಮಕವಾದ ವ್ಯಕ್ತಿತ್ವ ರೂಪುಗೊಳ್ಳುತ್ತದೆ.
ಅತಿಯಾದ ಕೋಪ ಮತ್ತು ತೀರಾ ಭಯ/ಆತಂಕಗಳೆರಡೂ ವ್ಯಕ್ತಿಯ ಪ್ರಗತಿಯಲ್ಲಿ ನಕಾರಾತ್ಮಕವಾದ ಪರಿಣಾಮ ಬೀರಿ ವೈಫಲ್ಯವನ್ನು ಕಾಣುತ್ತಾನೆ. ಹೀಗೆ ಅವರವರು ಪಾಲಿಸಿಕೊಂಡು ಬಂದ ಗುಣಗಳಿಗನುಸಾರವಾಗಿ ಪ್ರತಿಯೊಬ್ಬರಲ್ಲಿಯೂ ವಿಭಿನ್ನತೆಯನ್ನು ಕಾಣುತ್ತೇವೆ.

ಗಣಕ ಯಂತ್ರವು ಈಗ ಸರ್ವೇ ಸಾಮಾನ್ಯವಾದುದಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಮತ್ತು ಉದ್ಯೊಗಸ್ಥರಿಗೆ ಗಣಕ ಯಂತ್ರವು ಎರಡನೇ ಹೆಂಡತಿಯಿದ್ದಂತೆ. ಮಕ್ಕಳಿಂದ ವಯಸ್ಕರವರೆಗೂ ಈ ಯಂತ್ರದ ಮುಂದೆ ಕೂರುವ ಚಟವನ್ನು ಹೆಚ್ಚೆಚ್ಚು ಹೊಂದುತ್ತಿದ್ದಾರೆ. ಅದರ ಕಾರ್ಯ ಮತ್ತು ರಚನೆಗಳಿಂದ ಈ ಗಣಕ ಯಂತ್ರವು ವಿಭಿನ್ನವಾಗಿ ಕಾಣುತ್ತದೆ. ಹಾಗೆಯೇ ಮಾನವನ ನರ ರಚನೆಯ ಕಾರ್ಯವನ್ನೂ ಗಣಕ ಯಂತ್ರಕ್ಕೆ ಹೋಲಿಸಬಹುದಾಗಿದೆ.
ಗಣಕ ಯಂತ್ರವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು. ಅವುಗಳೆಂದರೆ:* Input. * Processing unit. * Output.
ಈ ಯಂತ್ರಗಳ ತಯಾರಿ ಮೊದಲೇ ಕ್ರೋಢೀಕರಿಸಿದ ಹಾಗೂ ನಿಪುಣತೆ ಹೊಂದಿದ chip ಅಳವಡಿಕೆ, ಅದರ ಸ್ಮರಣಶಕ್ತಿ ಅಥವಾ ಗಣಕ ವಿಭಜನೆಗಳನ್ನು ಶೇಖರಿಸಿ ಇಡುವಂತಹ ((memory card and hard disc) ) ಆ ಯಂತ್ರದ ವೇಗ, ಅದರ ಕಾರ್ಯ ನಿದರ್ಶನಗಳನ್ನು ತೋರಿಸುವಂತಹ ಪರದೆ ಇವೆಲ್ಲವೂ ಯಂತ್ರಗಳ ವಿಭಿನ್ನತೆಯನ್ನು ಹೇಳುವವು. ಇದರಂತೆಯೇ ಮನುಷ್ಯನು ಕೂಡ. ಒಬ್ಬರ ರಚನೆಯು ಮತ್ತೊಬ್ಬರಿಗೆ ಹೋಲಿಸಿದರೆ ವಿಭಿನ್ನವಾಗಿರುತ್ತದೆ.
ಮನುಷ್ಯನಿಗೆ input (ಗ್ರಹಿಕೆ) ಪಂಚೇಂದ್ರಿಯಗಳು, ನರಕ್ಷೇತ್ರ, ಮಂಡಳ ಮತ್ತು ನರವ್ಯೂಹ ಸಮ್ಮಿಲನದ ರಚನೆಯೇ processing unit ಮತ್ತು ವ್ಯಕ್ತಿಯ ನಡವಳಿಕೆ, ಯೋಚನೆ ಹಾಗೂ ಮಾತುಗಳೇ output.
ಯಾವುದೇ ವ್ಯಕ್ತಿಯ ಏಳಿಗೆಯ ಮಾನದಂಡ, ನಡವಳಿಕೆ, ಹೊಂದಾಣಿಕೆ, ಶ್ರದ್ಧೆ, ಸಂಯಮ, ಗಮನ, ಏಕಾಗ್ರತೆ, ಚಿಂತೆ, ಆಲೋಚನೆ, ಜ್ಞಾಪಕ, ಜ್ಞಾನ, ಅಚಾರ, ವಿಚಾರ ಎಲ್ಲವೂ ಈ ನರ ರಚನೆಯನ್ನವಲಂಬಿಸಿರುತ್ತದೆ.
ಕೇವಲ ನರ ರಚನೆ ಇದ್ದರೆ ಸಾಲದು. ಗಣಕ ಯಂತ್ರಕ್ಕೆ ಮುಖ್ಯವಾಗಿ ವಿದ್ಯುಚ್ಛಕ್ತಿ ಇಲ್ಲದಿದ್ದರೆ ಆ ಯಂತ್ರದ ಪ್ರಯೋಜನವೇ ಇಲ್ಲ. ಹಾಗೆಯೇ ನರ ರಚನೆಯಡಿ ಪ್ರವಹಿಸುವ ವಿದ್ಯುತ್ ಕಂಪನ ಅಥವಾ ಶಕ್ತಿ ಬಹುಮುಖ್ಯ.
ಈ ವಿದ್ಯುತ್ ಶಕ್ತಿ ಎಲ್ಲರಲ್ಲಿ ಇದ್ದರೂ, ಅದರ ಕಾರ್ಯ ಮತ್ತು ನಿರ್ವಹಣೆಗಳು ಅವರವರ ಅನುವಂಶೀಯತೆ, ಬೆಳೆದು ಬಂದ ರೀತಿ, ಪರಿಸರ, ಹೊಂದಾಣಿಕೆ ಸಮಾಜ ಮತ್ತು ಆರ್ಥಿಕ ವ್ಯವಸ್ಥೆ ಜೀವ ನಿರ್ವಹಣೆ, ಜೀವನ ಕಲೆ ಸಂಪತ್ತುಗಳೆಲ್ಲವನ್ನು ಅವಲಂಬಿಸಿರುತ್ತದೆ. ಭಯ, ಭಯಕ್ಕೆ ಹೊಂದಿಕೊಂಡಂತಹ ಗಮನ, ಏಕಾಗ್ರತೆಗಳು ಕೂಡ ನರ ರಚನೆ ಭೌತ ಮತ್ತು ರಾಸಾಯನಿಕ ಕ್ರಿಯೆ ಹಾಗೂ ನರವ್ಯೂಹಗಳ ಸಂಯೋಜನಾಶೀಲತೆಯ ಮೇಲೆ ಅವಲಂಬಿಸಿರುತ್ತದೆ. ಇದು ಹೇಗೆ ಸಾಧ್ಯವೆಂದರೇ?
ಮೊದಲನೆಯದಾಗಿ, ನಡವಳಿಕೆ, ಕಲಿಕೆಯಲ್ಲಿ ಅಸಹಜ ಗ್ರಹಿಕೆಯಿಂದ ಒದಗಿ ಬರುವ ತೀರಾ ಭಯಕ್ಕೆ ಶ್ರೇಷ್ಠ ಉದಾಹರಣೆಯೆಂದರೆ, ಯಾವುದೋ ಸಂದರ್ಭದಲ್ಲಿ ತಿಂದ ಆಹಾರದಿಂದ ಅಲರ್ಜಿ ಆದೊಡನೆ ತಿನ್ನುವ ಇನ್ನೂ ಕೆಲವು ತಿನಿಸುಗಳಿಂದ ಅಲರ್ಜಿ ಬರುವುದೆಂಬ ಹುರುಳಿಲ್ಲದೆ ಊಹೆಯ ತೀರ್ಮಾನಕ್ಕೆ ಬರುವುದು. ಇಂತಹ ತಪ್ಪು ಕಲ್ಪನೆಗಳು, ಸಮಾಜದಲ್ಲಿ ಮತ್ತು ಜೀವನದಲ್ಲಿ ಒದಗಿ ಬರುವಂತಹ ಸನ್ನಿವೇಶಗಳನ್ನು (social learning theory model) ಕಾಣಬಹುದು.
ಎರಡನೆಯದಾಗಿ, ಸ್ವಯಂಚಾಲಿತ ನರ ನಿರ್ವಹಣೆಗಳಲ್ಲಿ (Autonomic nervous system) ಏರುಪೇರಾದಾಗ ಇದರ ಸಿಂಪಥಿಟಿಕ್ ನರವ್ಯೂಹ ಸಮೂಹದಲ್ಲಿ (sympethetic nerviou system) ಒತ್ತಡಕ್ಕೆ ಹೊರ ಸೂಸುವ adrenaline ಎಂಬ ನರ ರಸದಿಂದ ಉಂಟಾಗುವ ಭೌತ ಲಕ್ಷಣಗಳ ವ್ಯತ್ಯಾಸಗಳು ಮನಸ್ಸಿಗೆ ಕ್ಲೇಶ ಅಥವಾ ಖೇದವನ್ನುಂಟು ಮಾಡುತ್ತವೆ. ಇದರಿಂದ ಎದೆ ಬಡಿತ, ಕೈಕಾಲು ನಡುಕ, ಕುಸಿದು ಬೀಳುವಂತೆ ಭಾಸವಾಗುವುದು, ಬೆವರು, ಶರೀರ ತಣ್ಣಗಾದಂತಾಗುವ ಅನುಭವ, ಇತ್ಯಾದಿ.
ಮೂರನೆಯದಾಗಿ, ಮೆದುಳಿನ ನರಕ್ಷೇತ್ರ ಮಂಡಲಗಳಲ್ಲಿ ಪ್ರಮಾಣ (quantitative) ಮತ್ತು ಗುಣ ((qualitative) ) ಸಂಬಂಧಿ ನರರಸ ಉತ್ಪತ್ತಿ ಮತ್ತು ಕಾರ್ಯ ನಿರ್ವಹಣೆಯ ತೊಡಕುಗಳು ಆದಾಗ ಖಿನ್ನತೆ ಒಳಗೊಂಡಂತೆ ಆತಂಕಗಳನ್ನು ನೋಡಬಹುದು.
ಅಂತಹ ನರ ರಸಗಳೆಂದರೆ ಓoಟಿ Non Adrenaline ಮತ್ತು Serotinin ಇವುಗಳು ನರ ವಿದ್ಯುತ್ ಪ್ರವಾಹಗಳನ್ನು ನಿಯಂತ್ರಿಸುತ್ತವೆ. ನಾವು ಕೊಡುವಂತಹ ಅನೇಕ ಔಷಧಿಗಳು ಈ ತೊಂದರೆಗಳನ್ನು ಸರಿಪಡಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ಗಮನ ಮತ್ತು ಏಕಾಗ್ರತೆಯ ತೊಂದರೆಗಳು ಆತಂಕದಲ್ಲಿ ಯಾಕೆ ಕಂಡು ಬರುತ್ತವೆ ಎಂಬುದರ ಬಗ್ಗೆ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಗಮನಿಸಬೇಕಾದ ವಿಷಯವೆಂದರೆ, ವಿದ್ಯಾರ್ಥಿಗೆ ಗ್ರಹಿಕೆಯ ((Input) ) ವಸ್ತುಗಳಾದ ಓದುವುದು ಮತ್ತು ಕೇಳುವುದು, ಕಣ್ಣು ಮತ್ತು ಕಿವಿಗಳ ಸಹಾಯದಿಂದ ಗ್ರಹಣ ಶಕ್ತಿಯನ್ನು ನರಕ್ಷೇತ್ರ ಮಂಡಲಕ್ಕೆ ರವಾನಿಸುತ್ತದೆ. ಇಲ್ಲಿ ಗ್ರಹಿಕೆಯನ್ನು ಅರೆದು, ಸಂಯೋಜನೆಗೊಂಡು ವಿಂಗಡಣೆ ಮಾಡಿ ಮತ್ತು ತಪ್ಪುಗಳನ್ನು ನಿರ್ಧರಿಸಿ, ತತ್ವ ಮತ್ತು ತರ್ಕಗಳಿಗೆ ಒಳಪಡಿಸಿ ಸ್ಮರಣಾ ಕೇಂದ್ರಕ್ಕೆ ಬೇಕಾದ ವಿಷಯಗಳನ್ನು ಕಳಿಸಿ ಕೇಂದ್ರೀಕರಿಸುತ್ತದೆ.
ಇದನ್ನು ನಾವು Processing ಮತ್ತು Memory storing ಎಂದು ಕರೆಯುವೆವು. ನಮಗೆ ಬೇಕಾದ ಸಮಯದಲ್ಲಿ ಹೊರಗಿನ ಸೂಚನೆ(Clues) ಗೆ ಅನುಗುಣವಾಗಿ ಸ್ಮರಣಾ ಕೇಂದ್ರದಿಂದ ವಿವೇಕ ಸಹಿತ ಹಾಗೂ ಕ್ರಿಯಾಶೀಲತೆಯಡಿ ಹೊರ ಬರುವ ಮಾಹಿತಿಯನ್ನು ನಾವು output ಎನ್ನುತ್ತೇವೆ.
ಇದು ವಿದ್ಯಾರ್ಥಿಗೆ ಬರಹ ಮತ್ತು ಮಾತುಗಳಿಂದ ಹೊರ ಬರುತ್ತವೆ. ಇದಕ್ಕೆ ಪೂರಕವಾಗಿ ಅವರವರ ಯೋಚನಾ ಲಹರಿ ಇರುತ್ತದೆ. ಒಬ್ಬ ವಿದ್ಯಾರ್ಥಿಗೆ ಅನೇಕ ಕಾರಣಗಳಿಂದ ಉಂಟಾಗುವ ಮನಸ್ಸಿನ ಖೇದ ಅಥವಾ ಆತಂಕದಿಂದ ಈ ಮೇಲೆ ಹೇಳಿದ ಕಾರ್ಯಗಳಲ್ಲಿ ನ್ಯೂನತೆ ಹೊಂದಿ ಗಮನ, ಏಕಾಗ್ರತೆ ಮತ್ತು ಗ್ರಹಿಕೆಯಲ್ಲಿ ಲೋಪಗಳು ಕಂಡು ಬರುತ್ತವೆ.
ಹೇಗೆಂದರೆ, ಮನಸ್ಸಿನ ಸಮತೋಲನದಲ್ಲಿ ವ್ಯತ್ಯಾಸ ಕಂಡು ಬಂದಾಗ ರಾಸಾಯನಿಕ ಮತ್ತು ಭೌತಿಕ ಅಸಮತೋಲನದಿಂದ ಉಂಟಾಗುವ ಬದಲಾವಣೆಗಳಿಂದ ಮನೋ ನಿಗ್ರಹಣೆಯಲ್ಲಿ ಕುಂದು ಬರುತ್ತದೆ. ಪಂಚೇಂದ್ರಿಯಗಳು, ಸಂಯೋಜನೆ ಸ್ಥಳಗಳು ಮತ್ತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಂತಹ ವಿಷಯಗಳಲ್ಲಿ ತೊಂದರೆಗೊಂಡು ಗಮನ ಮತ್ತು ಏಕಾಗ್ರತೆಗಳನ್ನು ಕಂಡುಕೊಳ್ಳುವುದರಲ್ಲಿ ವಿಫಲವಾಗಬಹುದು.
ಇದರಿಂದ ಆತಂಕ ಉಂಟಾಗುವುದು. ಆತುರದಿಂದ ಅಚಾತುರ್ಯವಾಗುತ್ತದೆ. ಇದರಿಂದ ವಿದ್ಯಾರ್ಥಿಯ ಭವಿಷ್ಯ ಹಾಳಾಗಬಹುದು. ಆದ್ದರಿಂದ ವಿದ್ಯಾರ್ಥಿಯಾದವ ಮತ್ತು ಸಾಮಾನ್ಯ ಮನುಜ ಸಹ ಸದಾ ಸಮಾಧಾನವಾಗಿರುವುದು ಎಲ್ಲಾ ರೀತಿಯಿಂದಲೂ ಒಳಿತಲ್ಲವೇ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ