
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಫುಟ್ಬಾಲ್ ಕ್ರೀಡೆಯಲ್ಲಿಯೂ ಭಾರತ ಕೀರ್ತಿ ಪತಾಕೆ ಹಾರಿಸಲಿ
ಸಚಿನ್ ಮಾರಾ ಸಿಕ್ಸರ್…’ ಎಂದು ಆಕಾಶವಾಣಿಯಲ್ಲಿ ವೀಕ್ಷಕ ವಿವರಣೆಗಾರ ಏರು ಧ್ವನಿಯಲ್ಲಿ ಕಿರುಚುತ್ತಿದ್ದ. ಇದನ್ನು ಆಲಿಸಿದ ಯುವ ಕ್ರಿಕೆಟ್ ಪ್ರೇಮಿಗಳ ಕರತಾಡನ, ಕೇಕೆ, ಬೊಬ್ಬೆ, ಕರ್ಕಶ ಶಿಳ್ಳೆಗಳನ್ನು ಗಮನಿಸಿದ ನಾಗರಿಕರಿಗೆ ಯುವಕರ ವರ್ತನೆಯಿಂದ ಹಿಂಸೆ ಮತ್ತು ಸಿಕ್ಸ್, ಫೋರ್ ಹೊಡೆದಿದ್ದಕ್ಕೆ ಖುಷಿ ಎರಡನ್ನೂ ಅನುಭವಿಸುವ ಸ್ಥಿತಿ. ಮೂಲತಃ ಕ್ರಿಕೆಟ್ ನಮ್ಮ ದೇಶದ್ದಲ್ಲ. ಆದರೆ ನಮ್ಮವರು ಹಿಡಿಸಿಕೊಂಡಿರುವಷ್ಟು ಹುಚ್ಚು ಇನ್ನಾರೂ ಕ್ರಿಕೆಟ್ ಬಗ್ಗೆ ಇಷ್ಟೊಂದು ಹಿಡಿಸಿಕೊಂಡಿಲ್ಲ ಎನ್ನಬಹುದು.
ಹೆಚ್ಚಿನ ಮಹತ್ವ ಕೊಡುತ್ತಿದ್ದರು :-
ಹಿಂದೆ ಬ್ರಿಟನ್ ರಾಜ-ಮಹಾರಾಜರು ಮತ್ತು ರಾಜ ಪ್ರತಿನಿಧಿಗಳು ಕಾಲ ಕಳೆಯುವುದಕ್ಕಾಗಿ ಮತ್ತು ಮೋಜಿಗೋಸ್ಕರ ದಿನಗಟ್ಟಲೇ ಕ್ರಿಕೆಟ್ ಆಟವಾಡುತ್ತಿದ್ದರು. ಅಂದು ಇದನ್ನು ‘ರಾಯಲ್ ಗೇಮ್’ ಎಂದು ಹೆಸರಿಸಲಾಗಿತ್ತು ಮತ್ತು ಆ ದೇಶದ ಆಟವೆಂದೇ ಪ್ರಸಿದ್ಧಿ ಆಗಿತ್ತು. ಆಟದ ವೈಭವ ಸಕಾರಾತ್ಮಕ ಮತ್ತು ಶಿಸ್ತು ಬದ್ಧತೆಯಿಂದ ಕೂಡಿದ್ದಾಗಿತ್ತು. ಅದರಲ್ಲೂ ವಸ್ತ್ರ , ಶುಚಿತ್ವ, ಉತ್ತಮ ನಡವಳಿಕೆಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು.
ಹಾಗಿದ್ದ ಆಟವು ಬರುಬರುತ್ತಾ ಅಶಿಸ್ತಿನ, ಮೋಜಿನ, ಜೂಜಿನ ಕ್ರೀಡೆಯಾಗಿ ಪರಿವರ್ತನೆಗೊಂಡಿದೆ. ಕೇವಲ ಪಡ್ಡೆ ಹುಡುಗರ ಆಟವಾಗಿ ಅದರ ಕಲಾತ್ಮಕತೆ ಕಳೆದುಕೊಂಡು ನಮ್ಮ ಗ್ರಾಮೀಣ ಪ್ರದೇಶದ ಗಿಲ್ಲಿ ದಾಂಡಿನಂತೆ ಗಲ್ಲಿಗಲ್ಲಿಗಳಲ್ಲಿನ ಆಟವಾಗಿದೆ. ವಿವಿಧ ದೇಶಗಳಿಗೆ ಹಬ್ಬಿ ವ್ಯವಹಾರದ ಮನೋಭಾವನೆ ಹೊಂದಿ ಅಲ್ಲಿನ ಸಂಸ್ಕೃತಿಯನ್ನು ಹಾಳು ಮಾಡುತ್ತಿದೆ. ಲೂಟಿಕೋರರ ಹಾಗೂ ಕೆಲವು ಬಂಡವಾಳಶಾಹಿಗಳ ಕೈ ಕೆಳಗೆ ಆಡುತ್ತಿರುವುದು ವಿಷಾದದ ಸಂಗತಿ.
ಇಲ್ಲಿ ಚೆಂಡನ್ನು ಬಿಸಾಡಿದ್ದಕ್ಕೆ, ಹೊಡೆದಿದ್ದಕ್ಕೆ, ಹಿಡಿದದ್ದಕ್ಕೆಲ್ಲಾ ಆಡುವವರಿಗೆ ಮತ್ತು ಜೂಜುಕೋರರಿಗೆ ದುಡ್ಡು. ಇಂತಹವುಗಳನ್ನು ನಾವು ಹಿಮ್ಮೆಟ್ಟಬೇಕಾದರೆ ರೋಚಕತೆಯ ಮತ್ತು ಆರೋಗ್ಯಕರವಾದ ಕಾಲ್ಚೆಂಡಿನಂತಹ ಕ್ರೀಡೆಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಈ ಕಾಲ್ಚೆಂಡು ಆಟದ ಇತಿಹಾಸವನ್ನೊಮ್ಮೆ ಇಣುಕಿ ನೋಡಿ.

ನ್ಯಾಷನಲ್ ಜಿಯಾಗ್ರಫಿಯ ಲೇಖನವೊಂದರ ಪ್ರಕಾರ ಪ್ರಾಚೀನ ಘೋರ ಅಡವಿಯಲ್ಲಿ ವಾಸಿಸುತ್ತಿದ್ದ ದಕ್ಷಿಣ ಅಮೆರಿಕಾ ಪ್ರಾಂತ್ಯದ ನರ ಭಕ್ಷಕರು ಕಾಡಿನಲ್ಲಿ ಕಂಡ ವ್ಯಕ್ತಿಗಳ ರುಂಡ ಮುಂಡಗಲನ್ನು ಬೇರ್ಪಡಿಸಿ ದೇಹವನ್ನು ತಿಂದು, ಮೋಜಿಗೋಸ್ಕರ ರುಂಡವನ್ನು ಕಾಲಿನಿಂದ ಒದೆಯುತ್ತಿದ್ದರಂತೆ. ಇದನ್ನು ಕೇಳಿದರೆ ರೋಮಾಂಚನವೆನಿಸುತ್ತದೆ.
ಕಾಲಕ್ರಮೇಣ ಮಾನವೀಯತೆಯುಳ್ಳವರಾಗಿ ಸಾಮಾಜಿಕ ಒಲುಮೆ ಪಡೆದ ನಂತರ ಪ್ರಾಚೀನ ಜನರು ಕಾಲ್ಚೆಂಡು ಕ್ರೀಡೆಯನ್ನು ಸೋಲು-ಗೆಲುವಿಗಾಗಿ ರಾಜ್ಯ ಮತ್ತು ರಾಣಿಯರನ್ನು ಪಣಕ್ಕಿಟ್ಟು ಆಡುತ್ತಿದ್ದರಂತೆ. ಹೀಗೆ ಪ್ರಾರಂಭವಾದ ಈ ಕಾಲ್ಚೆಂಡು ಇಂದಿನವರೆಗೂ ಸಾವು-ನೋವು ಇಲ್ಲದೆ ಶೌರ್ಯವನ್ನು ಪ್ರದರ್ಶಿಸಿ, ಆ ರೋಚಕತೆಯನ್ನು ಇಂದೂ ಸಹ ಮುಂದುವರೆಸಿಕೊಂಡು ಬಂದಿರುವುದನ್ನು ಗಮನಿಸುತ್ತಿದ್ದೇವೆ. ಝಲ್ ಎನಿಸುತ್ತದೆ.
ಗೋಲ್ ಮಾಡುವುದನ್ನೇ ಗುರಿಯಾಗಿರಿಸಿಕೊಂಡು ಚಾಕಚಕ್ಯತೆಯಿಂದ ಚೆಂಡನ್ನು ನಿಯಂತ್ರಿಸಿ, ಏಕಾಗ್ರತೆಯಿಂದ ತನ್ನವರಿಗೆ ಬದಲಾಯಿಸುವ ರೀತಿ ಮತ್ತು ಶರೀರದ ಎಲ್ಲಾ ಅಂಗಾಂಗಗಳ ಹೊಂದಾಣಿಕೆ ರೋಮಾಂಚನವಾದುದು. ಪ್ರಪಂಚದ ಬಹುತೇಕ ರಾಷ್ಟ್ರ ಗಳಲ್ಲಿ ಈ ಫುಟ್ಬಾಲ್ ಆಡುತ್ತಾರೆ. ಆದ್ದರಿಂದಲೇ ‘King of Games’ ’ ಅನ್ನುವರು. ಯುವಕರೇ ಹೆಚ್ಚು ಈ ಕ್ರೀಡೆಯಲ್ಲಿ ಭಾಗವಹಿಸುವರು ಮತ್ತು ಪ್ರೋತ್ಸಾಹಿಸುವರು. ಇದು ಒರಟುತನದಿಂದ ಕೂಡಿದ ಆಟವಾಗಿದೆ. ಆಟದ ಕೆಲವು ತಿರುವುಗಳು ಅಭಿಮಾನಿಗಳ ಎದೆಯನ್ನು ಝಲ್ ಎನಿಸುತ್ತವೆ. ಅರಿವಿಲ್ಲದೆ ಕೇಕೆ ಹಾಕಿಸುತ್ತವೆ, ಚಪ್ಪಾಳೆ ಗಿಟ್ಟಿಸುತ್ತವೆ.
ಕಾಲ್ನಡಿಗೆಗೆ ಒತ್ತು :-
ನಾವೆಲ್ಲಾ ಯೂರೋ ಕಪ್ ಫುಟ್ಬಾಲ್ ಪಂದ್ಯಾವಳಿಯನ್ನು ದೂರದರ್ಶನದಲ್ಲಿ ನೇರ ಪ್ರಸಾರವಾದ ಆಟವನ್ನು ವೀಕ್ಷಿಸಿದ್ದೇವೆ. ಹದಿನಾರು ರಾಷ್ಟ್ರಗಳು ಯೂರೋ ಕಪ್ಗಾಗಿ ಸೆಣಸಾಟ ನಡೆಸಿವೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಇದು ಪ್ರತಿಷ್ಠಿತ ಪಂದ್ಯಾವಳಿ ಅನ್ನಬಹುದು. Copa, Olympics, Asian Tournament, Foot Ball World Cup ಹೆಚ್ಚು ಪ್ರತಿಷ್ಠಿತ. ಕಾರಣ ಆ ದೇಶಗಳ ಕಲಾತ್ಮಕ ಪ್ರದರ್ಶನ ಮತ್ತು ಆಟದ ಶೈಲಿ. ಯೂರೋಪಿಯನ್ ದೇಶಗಳು ದೂರದ ಪಾಸು ಮತ್ತು ತಲೆಯ ಮೇಲಿನ ಆಟಕ್ಕೆ ಒತ್ತು ಕೊಡುವರು. ಆದರೆ ದಕ್ಷಿಣ ಅಮೆರಿಕಾ ರಾಷ್ಟ್ರದವರು ಶಾರ್ಟ್ ಪಾಸಸ್ ಮತ್ತು ಕಾಲ್ನಡಿಗೆಗೆ ಒತ್ತು ಕೊಡುವರು.
ತೊಂಬತ್ತು ನಿಮಿಷದ ಆಟದ ಪ್ರತಿಯೊಬ್ಬ ಆಟಗಾರನೂ ಸರಾಸರಿ 8-12 ಕಿಲೋ ಮೀಟರ್ ಓಡುತ್ತಾರೆ ಮತ್ತು ಚೆಂಡಿನ ಜೊತೆ ನೂರು ಮೀಟರನ್ನು ಹದಿನಾಲ್ಕು ಸೆಕೆಂಡುಗಳಲ್ಲಿ ಕ್ರಮಿಸುವರು. ಆಟಗಾರರ ಮೈಕಟ್ಟು, ಸ್ನಾಯುಗಳ ಸಾಮರ್ಥ್ಯ, ಶ್ರದ್ಧೆ, ಚಾಣಾಕ್ಷತನ, ಅಭ್ಯಾಸ ಮತ್ತು ತಮ್ಮ ದೇಶಕ್ಕಾಗಿ ಆಡುತ್ತಿರುವೆನೆಂಬ ದೇಶಪ್ರೇಮದ ಆತ್ಮ ತೃಪ್ತಿ ಈ ವಿಸ್ಮಯಕಾರಿ ಆಟಕ್ಕೆ ಸ್ಫೂರ್ತಿ ಮತ್ತು ಪೂರಕ.
ನಮ್ಮ ದೇಶದ ಫುಟ್ಬಾಲ್ ತಂಡವು ಸಹ ಶೀಘ್ರದಲ್ಲಿ ವರ್ಲ್ಡ್ ಕಪ್ಗೆ ಆಯ್ಕೆಯಾಗಲಿ. ಇತರೆ ಕ್ಷೇತ್ರದಂತೆ ಕಾಲ್ಚೆಂಡು ಕ್ರೀಡೆಯಲ್ಲೂ ಕೀರ್ತಿ ಪತಾಕೆ ಹಾರಿಸಲಿ ಎಂಬುದೇ ನಮ್ಮೆಲ್ಲರ ಹಾರೈಕೆ, ಅಭಿಲಾಷೆ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ