
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಧರ್ಮ-ಅಂದು- ಇಂದು
ಭಾರತದ ಶ್ರೇಷ್ಠ ರಾಜ ಮನೆತನವೊಂದರಲ್ಲಿ ಜನಿಸಿ, ಸುಖವಾಗಿ ಬೆಳೆದು, ಅರಸನಾಗಿ ಆಳಿ ಹೊರ ಪ್ರಪಂಚವನ್ನು ವೀಕ್ಷಿಸಿದ ಮೇಲೆ ಜನಸಾಮಾನ್ಯನ ದುಃಖ ದುಮ್ಮಾನಗಳನ್ನು ಕಂಡು, ನೋವು-ನಲಿವುಗಳನ್ನು ಗಮನಿಸಿ, ನಂತರ ವೈರಾಗ್ಯ ತಾಳಿದವನು, ಜೀವಿ-ಜೀವನದ ಕುರಿತು ಚಿಂತನಾ ಮಗ್ನನಾಗಿ ಜ್ಞಾನೋದಯವಾದ ಮೇಲೆ ಸ್ವಯಂ ತತ್ವಗಳನ್ನು ಕಂಡುಕೊಂಡು, ದೇಶ-ವಿದೇಶಗಳಲ್ಲಿ ಅವನ್ನು ಭಿತ್ತಿ ಕಣ್ಮರೆಯಾದವನು ಸಿದ್ಧಾರ್ಥ. ಇಂತಹ ಮಹಾನ್ ವ್ಯಕ್ತಿ ಇಲ್ಲಿ ಅನೌಪಚಾರಿಕ ಮಾತ್ರ. ಇಡೀ ಮನುಕುಲಕ್ಕೆ ಅತ್ಯವಶ್ಯಕವಾದ ಈ ಬುದ್ಧನ ತತ್ವಗಳನ್ನು ಕೆಲವೇ ಸೀಮಿತ ವರ್ಗದ ಅಲ್ಪಸಂಖ್ಯೆಯ ಜನ ಅನುಸರಿಸುತ್ತಿರುವುದು ಖೇದದ ಸಂಗತಿ ಎನ್ನಬಹುದು. ಬುದ್ಧನ ತತ್ವಗಳನ್ನು ಅನುಸರಿಸುತ್ತಿರುವವರನ್ನು ಸಹ ಕೆಲ ತಾರತಮ್ಯ ಮನೋಭಾವದವರು ಕೆಲವರನ್ನು ಅಸ್ಪೃಶ್ಯರು ಎಂದು ವಿಂಗಡಿಸುವುದು ಖಂಡನಾರ್ಹವಾಗಿದೆ.
ಬುದ್ಧನು ಸರಿಯಾದ ಧರ್ಮವೊಂದು ಬೇಕೆಂದು ಅರಸುತ್ತಿದ್ದಾಗ, ಗುರುಗಳನ್ನು ಕಾಣುವ ಹಂಬಲದಲ್ಲಿದ್ದಾಗ ಕೂಡ ಯಾವುದೇ ಸಂದೇಶಗಳು ಮತ್ತು ವಿಚಾರಗಳು ಸರಿಯಾದ ಪರಿಣಾಮ ಬೀರಲಿಲ್ಲ. ಹಾಗಾಗಿ ಸ್ವಯಂ ಜ್ಞಾನೋದಯವಾಗಿ ಪ್ರಕಾಶಿಸಿದರು. ಮಹಾನ್ ಗ್ರಂಥಗಳನ್ನು ಬರೆದರು. ಇವರ ಕೃತಿಗಳಲ್ಲಿ ಪ್ರಪಂಚ ಮತ್ತು ಜೀವಿಗಳ ಪ್ರಸ್ತಾವನೆಗಳು ಕಂಡು ಬಂದಿಲ್ಲದ್ದರಿಂದ ಬೇರೆ ಬೇರೆ ಧರ್ಮಗಳು ವಿಭಿನ್ನವೆನಿಸುತ್ತದೆ. ದೀಪದ ಕೆಳಗೆ ಕತ್ತಲು ಎಂಬಂತೆ ನಮ್ಮ ದೇಶದಲ್ಲಿ ಬುದ್ಧನ ವಿಚಾರಧಾರೆಗಳ ಅಸ್ತಿತ್ವ ಕಡಿಮೆ ಇರುವುದನ್ನು ಗಮನಿಸಬಹುದು.
ಪ್ರೇಮದಿಂದ ಕಾಣು
ಬುದ್ಧನ ಮನೋವಿಚಾರಗಳು ಮತ್ತು ತತ್ವಗಳು ದೈನಂದಿನ ಜೀವನದ ಚಟುವಟಿಕೆ, ನಡವಳಿಕೆ, ವ್ಯಕ್ತಿ ವಿಕಾಸನ, ಧರ್ಮ ಪರಿಪಾಲನೆ, ಪರಿವರ್ತನೆ, ಸೃಜನಶೀಲ ಚಿಂತನಾ ಕೌಶಲ್ಯ, ಪ್ರಗತಿಪರ ಆಲೋಚನೆ, ಅಹಿಂಸಾ ತತ್ವ ಮುಂತಾದವುಗಳಿಂದ ಕೂಡಿರುತ್ತವೆ.
ಬುದ್ಧನ ತತ್ವದ ವಿಶೇಷವೆಂದರೆ, ವರ್ತಮಾನ ಕಾಲದಲ್ಲಿ ಪುರುಷನ ಬಾಳ್ವಿಕೆ ಚಿಂತನ-ಮಂಥನಗಳಿಗೆ ಸಹಕಾರಿಯಾಗುತ್ತವೆ. ಇವರ ತತ್ವಗಳು ಕೇವಲ ವರ್ತಮಾನಕ್ಕೆ ಸೀಮಿತವಾಗದೆ ಬೌದ್ಧ ತತ್ವದ ಸಾರಾಂಶವೆಂದರೆ ‘ವಿಶ್ವವನ್ನು ಪ್ರೇಮದಿಂದ ಕಾಣು’ ಎಂಬುದು.
ಸುಮಾರು 25೦೦ ವರ್ಷಗಳ ಹಿಂದೆಯೇ ಜ್ಞಾನಿಯಾಗಿ ಬರೆದ ಗ್ರಂಥಗಳೆಂದರೆ ‘ಹೀನಯಾನ ಮತ್ತು ಮಹಾಯಾನ’ಗಳು.
ಹೀನಯಾನವು ಪಾಲಿ ಭಾಷೆಯಲ್ಲಿ ಹಾಗೂ ಮಹಾಯಾನವು ಸಂಸ್ಕೃತ ಶ್ಲೋಕಗಳು ಮೂಲಕ ಬರೆಯಲ್ಪಟ್ಟಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಸ್ತೂಪವೊಂದರಲ್ಲಿ ಹೀನಯಾನ ಗ್ರಂಥ ಸಮೂಹವನ್ನು ಶೀತಲವಾಗದ ಮರದಲ್ಲಿ ಕೆತ್ತಿ ಸಂಗ್ರಹಿಸಿಟ್ಟಿದ್ದನ್ನು ಜಗತ್ತಿಗೆ ಪರಿಚಯಿಸಲಾಯಿತು. ಎರಡೂ ಗ್ರಂಥಗಳ ಸಂದೇಶವೆಂದರೆ, ಪುರುಷನ ಹೃದಯವು ಕಮಲದಂತೆ ಅರಳಬೇಕೆಂಬುದೇ ಆಗಿದೆ. ಆದ್ದರಿಂದಲೇ ಬುದ್ಧನಿಗೆ ತಾವರೆ ಹೂ ಇಟ್ಟು ಪೂಜಿಸುತ್ತಾರೆ.
ಬುದ್ಧ ಹುಟ್ಟಿದ ನಮ್ಮ ದೇಶದಲ್ಲಿ ಮತ್ತು ಥೈಲಾಂಡ್ನಲ್ಲಿ ಬೌದ್ಧ ಅನುಯಾಯಿಗಳು ಹೀನಯಾನ ಗ್ರಂಥದಿಂದ ಪ್ರಭಾವಿತರಾಗಿದ್ದಾರೆ. ಮಹಾಯಾನ ಗ್ರಂಥದ ತತ್ವ, ಚಿಂತನೆಗಳು ಶ್ರೀಲಂಕಾ, ಚೀನಾ, ಟಿಬೆಟ್ಗಳಿಂದ ಪೂರ್ವ ರಾಷ್ಟ್ರಗಳ ಪ್ರಾಂತ್ಯದವರೆಗೂ ವಿಸ್ತಾರಗೊಂಡಿರುವುದು ಆಶ್ಚರ್ಯ ಮತ್ತು ಹೆಮ್ಮೆಪಡುವ ವಿಚಾರ. ಬುದ್ಧನ ಮೂಲತತ್ವ ಪ್ರೇಮವೇ ಆಗಿದ್ದರೂ, ಹಲವು ದೇಶಗಳಲ್ಲಿ ಬದಲಾಯಿಸಿಕೊಂಡಿರುವುದನ್ನು ಗಮನಿಸಬಹುದು. ಹಲವು ರಾಷ್ಟçಗಳಲ್ಲಿ ಬೌದ್ಧ ವಿಗಂಡಣೆಗಳನ್ನು ಅಳವಡಿಸಿಕೊಂಡಿರುವುದನ್ನು ನೋಡಬಹುದಾಗಿದೆ.
ಆಶ್ಚರ್ಯವಾಗಬಹುದು
ಇತ್ತೀಚೆಗಷ್ಟೇ ದಲಾಯಿ ಲಾಮ ಅವರು ಬುದ್ಧ ಗಯಾದಲ್ಲಿ ಚಕ್ರದೀಪ ಮಹೋತ್ಸವವನ್ನು ನೆರವೇರಿಸಿದರು. ಸುಮಾರು ಎರಡು ಲಕ್ಷಕ್ಕೂ ಹೆಚ್ಚು ದೇಶ-ವಿದೇಶಗಳ ಬೌದ್ಧ ಧರ್ಮ ಅನುಯಾಯಿಗಳು ಪಾಲ್ಗೊಂಡಿದ್ದರು. ಹಾಗೆ ಬಂದ ಭಕ್ತಾದಿಗಳಿಗೆ ಒಂದೂವರೆ ಸಾವಿರ ಕಾಂಡೋಮ್ ಯಂತ್ರಗಳನ್ನು ವ್ಯವಸ್ಥೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಇದು ಸುಸಂಸ್ಕೃತರಿಗೆ ವಿಚಿತ್ರವೆನಿಸಬಹುದು. ಅನುಯಾಯಿಗಳಿಗೂ ಕಾಂಡೋಮ್ಗಳಿಗೂ ಏನು ಸಂಬಂಧವೆಂದು ಆಶ್ಚರ್ಯವಾಗಬಹುದು.
ಆದರೆ ಈ ಆಚರಣೆಯನ್ನು ಟಿಬೆಟಿಯನ್ ಲಾಮಾಗಳು “Tantric Budhism”ನಡಿ ಬಹು ಗೌಪ್ಯವಾಗಿ ಮುಕ್ತ ಪ್ರೇಮವನ್ನು ಪೂಜೋಪಾದಿಯಲ್ಲಿ ಕಂಡುಕೊಳ್ಳುವರು. ಆದರೆ ಅಲ್ಲಿ ನಡೆಯುವುದೇನೆಂದರೆ ಕಾಮಕೇಳಿ, ತಂತ್ರಾಧಾರಿ ಕಾಮಕ್ರಿಯೆ, ಮೋಹದ ಗೀಳು ಮತ್ತು ಮಾದಕ ದ್ರವ್ಯಗಳ ಸೇವನೆ.
ಪ್ರೇಮ ಮತ್ತು ಮೋಹ ಬೇರೆ
ಸ್ನೇಹಿತರೇ, ಪ್ರೇಮ ಮತ್ತು ಮೋಹ ಎರಡೂ ಬೇರೆ ಬೇರೆ. ಮೊದಲನೆಯದರಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇರುವುದಿಲ್ಲ. ಒಳ್ಳೆಯ ದೃಷ್ಟಿ ಮತ್ತು ನಿಷ್ಕಲ್ಮಶ ಮನೋಭಾವವಿರುತ್ತದೆ. ಆದ್ದರಿಂದ ಪ್ರೇಮವು ಪ್ರಜಾ ತತ್ವಗಳಲ್ಲಿ ಒಂದಾಗಿದೆ. ಎರಡನೆಯದು ಅಸಹ್ಯ. ತ್ವರಿತ ಆಸೆ ಈಡೇರಿಸಿಕೊಳ್ಳುವ ಮನೋಭಾವನೆ ಇರುವುದರಿಂದ ಕೇವಲ ಚರ್ಮದ ವಾಸನೆಯಲ್ಲಿ ಒಂದಾಗಿಸುತ್ತದೆ. ನಂತರ ಬೇರ್ಪಡಿಸುತ್ತದೆ. ಇಂದಿನ ಜನಾಂಗ ಇಂತಹ ಹೀನ ಸಮ್ಮೋಹನದಂತಹ ಸಂಸ್ಥೆಗಳಿಗೆ ಅರಿತೋ ಅರಿಯದೆಯೋ ಮಾರುಹೋಗಿ ಅವರ ಅಸ್ತಿತ್ವವನ್ನು ಕಳೆದುಕೊಳ್ಳುತ್ತಾರೆ. ಸಮಾಜ ಕಾಳಜಿ ವಹಿಸಿ ಇಂತಹವುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.
ಯುವತಿಯೊಬ್ಬಳು ಸಮ್ಮೋಹನಕ್ಕೆ ಒಳಗಾಗಿ ಅರಿವಿಲ್ಲದೆ ಗರ್ಭವತಿಯಾಗಿ ಎಲ್ಲಾ ತಿಳಿದ ನಂತರ ಒತ್ತಾಯಕ್ಕೆ ಗರ್ಭಪಾತ ಮಾಡಿಸಿಕೊಂಡು ದೈವಾನುಗ್ರಹ ಕುಡಿಯನ್ನು ಹಂಬಲಿಸಿ ಶೀಲ ಕಳೆದುಕೊಂಡು ಅಪವಿತ್ರವಾದೆ ಎಂದು ಸಂದೇಹಾತೀತ ಮನೋವಿಕೃತ ಸ್ವಾಮೀಜಿಯೊಬ್ಬನ ಬಗ್ಗೆ ರಾಜಾರೋಷವಾಗಿ ಆರೋಪಿಸಿರುವುದನ್ನು ಇಡೀ ಪ್ರಪಂಚವೇ ನೋಡಿದೆ. ದೂರದರ್ಶನದಲ್ಲಿ ಏಕಾಗ್ರತೆಯಿಂದ ವೀಕ್ಷಿಸಿದ ನನಗೆ ತೀರಾ ಶೋಚನೀಯವೆನಿಸಿತು.
ಇಂತಹ ಸ್ವಾಮೀಜಿಗಳಿಗೆ ಎಂತಹ ಶಿಕ್ಷೆ ಅರ್ಹ ಎಂಬ ಪ್ರಶ್ನೆ ಕಾಡಿತು. ನಾನೊಬ್ಬ ಮನೋ ವೈದ್ಯನಾಗಿ ಶಿಕ್ಷೆ ನಿಗದಿಪಡಿಸಲು ಆಗುವುದಿಲ್ಲ. ಅದಕ್ಕೆ ಕಾನೂನಿದೆ, ಅದಕ್ಕೆಂದೇ ವಿಶೇಷ ಇಲಾಖೆಯಿದೆ. ಅವೆಲ್ಲ ಎಷ್ಟರ ಮಟ್ಟಿಗೆ ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ಸ್ಥಿತಿಯೇನು ಎಂಬುದು ಕೇವಲ ಪ್ರಶ್ನೆಯಾಗಿ ಉಳಿಯುತ್ತದೆ.
ಹದಿಹರೆಯದ ಎಡವಟ್ಟು
ಈ ಸ್ವಾಮೀಜಿಯ ಹಾವಭಾವ, ನಡವಳಿಕೆ, ಆಡಂಬರತನ, ವರ್ಚಸ್ಸು, ಮೋಹಕತನ, ಜಾಣತನ, ವಿಕೃತತನ, ಸಮ್ಮೋಹನ ಮಾಪನಗಳನ್ನು ಗಮನಿಸಿ. ಆತನ ಹದಿಹರೆಯದಲ್ಲಿ ಎಡವಟ್ಟವನ್ನು ಕಾಣಬಹುದಾಗಿದೆ.
ಉದಾಹರಣೆಗೆ, ಈತನನ್ನು ಯುವ ಉನ್ಮಾದದ ಸಂದರ್ಭದಲ್ಲಿ ಯುವತಿಯೊಬ್ಬಳು ಅವನ ಲೈಂಗಿಕ ತಾಕತ್ತನ್ನು ಪ್ರಶ್ನಿಸಿರಬಹುದು. ಆ ನೋವು ಸುಪ್ತ ಮನಸ್ಸಿನಲ್ಲಿ ಸೇರಿ ಕಲಿತ ವಿದ್ಯೆ ಮತ್ತು ಗ್ರಂಥಗಳನ್ನು ಅನುಸರಿಸಿ ಮನೋಧರ್ಮ ನಿಷ್ಠೆಯನ್ನು ಮರೆತು, ಲೈಂಗಿಕ ಕೊರತೆಯನ್ನು ನೀಗಿಸಬೇಕು ಮತ್ತು ವಿವಿಧ ರೀತಿಯಲ್ಲಿ ವಿವಿಧ ಹೆಂಗಳೆಯರನ್ನು ಭೋಗಿಸಬೇಕು, ಅನುಭವಿಸಬೇಕು ಎಂಬ ವಿಕೃತ ಮನೋಭಾವನೆಗೆ ಪರಿವರ್ತಿತನಾಗಿರಬಹುದೋ ಎಂಬ ಅನುಮಾನ ನನಗಿದೆ.

ಹೀಗಿರುವಾಗ ಇವರನ್ನು ಮನೋ ವಿಶ್ಲೇಷಣೆ, ಮನೋ ಚಂಚಲಶೀಲತನ ಪರೀಕ್ಷೆಗಳಿಗೆ ಒಳಪಡಿಸಿದಲ್ಲಿ ಇವರ ಮನಸ್ಸಿನಲ್ಲಿ ಪೂರ್ವಾಗ್ರಹಪೀಡಿತರಾಗಿದ್ದರೆ ಪೂರ್ವ ಯೋಜನೆಗಳು ಏನಾದರೂ ಇದ್ದು, ಇಂತಹ ಹೀನ ಕ್ರಿಯೆಯನ್ನು ಮಾಡಿದ್ದರೇ ಭಾರತೀಯ ದಂಡಸಂಹಿತೆಯ ಪ್ರಕಾರ ಯಾವ ಶಿಕ್ಷೆ ವಿಧಿಸಬಹುದೋ ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಹೇರಿ ಶಿಕ್ಷೆಗೆ ಗುರಿಪಡಿಸಬಹುದು.
ಧರ್ಮ, ಗ್ರಂಥ, ಬೋಧನೆಗಳು ಗೊತ್ತಿದ್ದರೂ, ಪ್ರಸ್ತುತದಲ್ಲಿ ಈ ವಿದ್ಯಮಾನಗಳು ಅಪ್ರಸ್ತುತವಾದ್ದರಿಂದ ಪರಿವರ್ತನಾ ಸಾಧನೆಯಾಗಿ ವೃತ್ತಿಪರರು ನೊಂದವರಿಗೆ ಅಳವಡಿಸಿದರೆ ಒಳಿತು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ