
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಯುವಶಕ್ತಿ ಸದ್ಬಳಕೆಯಾದರೆ ಸುಧಾರಣೆ
ಇಂದಿನ ಚುನಾವಣಾ ವ್ಯವಸ್ಥೆ ಸಮಸ್ಯೆಗಳ ಆಗರವಾಗಿದೆ. ರಾಜಕೀಯವೆಂಬುದು ಕೆಲವರ ವೃತ್ತಿಯಾಗಿ ಪರಿಣಮಿಸಿರುವುದು ದುರಾದೃಷ್ಟವೇ ಸರಿ. ಪ್ರಜಾಪ್ರಭುತ್ವ ಕೇವಲ ಹೆಸರಿಗೆ ಮಾತ್ರ ಇದೆ. ಈ ಗೊಡ್ಡು ಪ್ರಜಾಪ್ರಭುತ್ವದಲ್ಲಿ ಜ್ಞಾನವನ್ನು ಸಮಾಧಿ ಮಾಡುತ್ತಿರುವುದು ವಿಪರ್ಯಾಸ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಬುದ್ದತೆ, ಪ್ರಜಾ ಸುವ್ಯವಸ್ಥೆ, ಪ್ರಜಾ ಶಾಂತಿ, ಪ್ರಜಾ ಹಕ್ಕು ಬೇಕೆಂಬ ಕೂಗು ಜನಸಾಮಾನ್ಯರಿಂದ ಹೊರ ಹೊಮ್ಮಬೇಕಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು, ಲೇಖಕರು, ಬುದ್ಧಿಜೀವಿಗಳು ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ.
ಕುರ್ಚಿ ಆಸೆ, ಆಮಿಷ, ಬಲ, ದಬ್ಬಾಳಿಕೆ ಇಂದು ಎಗ್ಗಿಲ್ಲದೆ ನಡೆಯುತ್ತಿವೆ. ರಾಜಕಾರಣಿಗಳು ಮನೋವ್ಯಸನಿಗಳಾಗಿದ್ದಾರೆ. ಹೊರ ಜಗತ್ತಿಗೆ ನಾನೇ ಸರ್ವಸ್ವ ಎಂದುಕೊಂಡರೂ ಅಂತರಾಳದಲ್ಲಿ ಸದಾ ಅವರನ್ನು ನನಗೆ ಭವಿಷ್ಯವಿದೆಯೇ ಎಂಬ ಅಳುಕು ಕಾಡುತ್ತಿರುವುದನ್ನು ಮನಗಂಡಿದ್ದೇವೆ. ಇದನ್ನು ನಾನು ‘ರಸ್ಪೂತಿನ್ ಸೂತ್ರ’ ಎನ್ನುತ್ತೇನೆ.
ಅಂದು ರಸ್ಪೂತಿನ್ರ ದೇಹದೊಳಗೆ ಐವತ್ತಾರು ಭರ್ಜಿಗಳನ್ನು ತಿವಿದರು. ರುಂಡ ಮುಂಡ ಬೇರ್ಪಟ್ಟು ಸತ್ತ ನಂತರ ನಾಯಿ ನರಿಗೆ ಮಾಂಸವಾದ. ಇದು ಕಥೆಯಷ್ಟೇ. ಭಾರತದ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ರಸ್ಪೂತಿನ್ಗೆ ಆದ ಸ್ಥಿತಿ ನಮ್ಮ ರಾಜಕಾರಣಿಗಳಿಗೆ ಆದರೆ ಆಶ್ಚರ್ಯಪಡಬೇಕಿಲ್ಲ.ಅಂತಹ ಪರಿಸ್ಥಿತಿ ಬರುವುದು ಬೇಡ ಎಂದು ಅಶಿಸೋಣ.
ಓದಿ ತಿಳಿದವರು, ಬುದ್ಧಿವಂತರು ತಾವು ತಿಳಿದ ವಿಷಯಗಳನ್ನು ತಮ್ಮಲ್ಲೇ ಅಡಗಿಸಿಟ್ಟುಕೊಳ್ಳುವ ಬದಲು ಬರಹದ ಮೂಲಕ, ಭಾಷಣದ ಮೂಲಕ ಜನಸಾಮಾನ್ಯರಿಗೆ ತಿಳುವಳಿಕೆ ಮೂಡಿಸಬೇಕು.
ಇಂದು ಬಹುತೇಕ ಮಂದಿ ಕಾಡು ಹರಟೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ದೇಶದ ಸಮಸ್ಯೆಗಳ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ. ದೇಶದ ಮುಂದಿರುವ ಸವಾಲುಗಳನ್ನು ಎದುರಿಸುವ ನಾಯಕತ್ವ ಗುಣ ಹೊಂದಿರುವವರು ಒಬ್ಬರೂ ಕಾಣಸಿಗುತ್ತಿಲ್ಲ. ಆದರೆ ಯುವ ಶಕ್ತಿ ಮಾತ್ರ ದೇಶವನ್ನು, ಹದಗೆಟ್ಟಿರುವ ವ್ಯವಸ್ಥೆಯನ್ನು ಸರಿಯಾದ ಪಥದಲ್ಲಿ ಕೊಂಡೊಯ್ಯಬಲ್ಲರು ಎಂಬ ನಂಬಿಕೆ ನನ್ನದು.
ಸ್ವಾಮಿ ವಿವೇಕಾನಂದರು ಕೇವಲ ನೂರು ಜನ ಯುವಕರಿಂದ ಈ ದೇಶದ ಚಿತ್ರಣವನ್ನೇ ಬದಲಿಸಿಬಿಡುತ್ತೇನೆ ಎಂಬ ಆಶಾವಾದ ಹೊಂದಿದ್ದರು. ಅಂತಹ ಯುವ ಶಕ್ತಿ ಸದ್ಬಳಕೆಯಾದಾಗ ಚುನಾವಣೆ ಸೇರಿದಂತೆ ಎಲ್ಲಾ ರಂಗಗಳಲ್ಲೂ ಸುಧಾರಣೆಯನ್ನು ಕಾಣಬಹುದು.
ಇಂದಿನ ಯುವ ಶಕ್ತಿ ವಿದೇಶಿ ಸಂಸ್ಕೃತಿ, ಮೋಜಿನ ಜೀವನ, ದುಶ್ಚಟಗಳಿಗೆ ತುತ್ತಾಗದೆ ಇದು ನನ್ನ ದೇಶ, ಇಲ್ಲಿರುವವರು ನನ್ನವರು ಎಂಬ ವಿಶಾಲ ಭಾವನೆಯನ್ನು ಬೆಳೆಸಿಕೊಂಡರೆ, ರಾಷ್ಟçಪ್ರೇಮ ಬೆಳೆಸಿಕೊಂಡರೆ, ದೇಶದ ಇತಿಹಾಸವೇ ಬದಲಾಗುವುದು ಕಷ್ಟಸಾಧ್ಯವೇನಲ್ಲ.
ಜಾತಿ, ಹೆಂಡ, ಹಣ, ಸ್ವಜನ ಪಕ್ಷಪಾತ, ದರಿದ್ರ ರಾಜಕೀಯದಿಂದ ಕುಲಗೆಟ್ಟಿರುವ ಈ ದೇಶ ಚುನಾವಣಾ ವ್ಯವಸ್ಥೆ ಸುಧಾರಣೆ ಯುವ ಶಕ್ತಿಯ ಸದ್ಬಳಕೆಯಿಂದ ಮಾತ್ರ ಸಾಧ್ಯ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ