ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಸಮಗ್ರ ವೈದ್ಯಕೀಯ ಶಿಕ್ಷಣ ಚಿಂತನೆ
ಇನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಪದವಿ ಪ್ರಮಾಣಪತ್ರವು ಕೈ ಸೇರಬೇಕಾದರೆ ಆರೂವರೆ ವರ್ಷಗಳು ಬೇಕಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಗ್ರ ವೈದ್ಯಕೀಯ ಶಿಕ್ಷಣವನ್ನು ತರಬೇಕು ಎನ್ನುವುದು ಸ್ವಾಗತಾರ್ಹ.
ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬೇಕೆಂಬುದು ಸರ್ಕಾರದ ಅಭಿಲಾಷೆ. ಈಗ ಇರುವ ಪಠ್ಯಪುಸ್ತಕಗಳು, ಶಿಕ್ಷಣ ಪದ್ಧತಿ ಮತ್ತು ವೈದ್ಯ ಕರ್ತವ್ಯ ಪಾಲನೆಗಳನ್ನು ಉನ್ನತ ದರ್ಜೆಗೇರಿಸಬೇಕೆಂಬುದು ಸರಕಾರದ ಮಹತ್ವಾಕಾಂಕ್ಷೆ. ಇವೆಲ್ಲವು ಸರಿ. ಆದರೆ ‘ಸಮಗ್ರ’ ಪದದ ಪರಾಮರ್ಶೆಯನ್ನು ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಿಳಿಸುವ ಪ್ರಯತ್ನದಲ್ಲಿ ಸರ್ಕಾರ ವಿಫಲವಾಗಿದೆ ಎನ್ನುವುದು ಎಲ್ಲರ ಅಭಿಪ್ರಾಯ ಮತ್ತು ಚರ್ಚೆ ಹಾಗೂ ಚಿಂತನಾ ವಿಷಯ.
1973 ರಲ್ಲಿ ವೈದ್ಯಕೀಯ ಶಿಕ್ಷಣದ ಪಠ್ಯ ಪುಸ್ತಕಗಳು ಸೀಮಿತವಾಗಿ, ವಿವರವಾಗಿ ಉಪಯುಕ್ತವಾಗಿ ತಿಳಿಯುವ ರೀತಿ ಇದ್ದು, ಶಿಕ್ಷಕರ ಜ್ಞಾನಾರ್ಜನೆ, ನಿಷ್ಠೆಗಳಿಂದ ವೈದ್ಯ ವೃತ್ತಿ ಆಹ್ಲಾದಕರವಾಗಿಸಿ ರೋಗಿಗಳ ಆರೈಕೆಯಲ್ಲಿ ಮಹತ್ವದ ಪಾತ್ರ ವಹಿಸಿದೆ. ಆಗಿನ ವಿದ್ಯಾರ್ಥಿಗಳಿಗೆ ಓದುವ ಸಮಯ ಜಾಸ್ತಿಯಿದ್ದು, ಹಾಗೆಯೇ ಪರೀಕ್ಷೆಯ ಒತ್ತಡ ಕಡಿಮೆ ಇದ್ದರೂ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕಷ್ಟಪಡಬೇಕಾಗಿತ್ತು. ಅಂತಹ ಗುಣಮಟ್ಟ ಅಂದಿನದಾಗಿತ್ತು. ಆಗಲೂ ತೊಂದರೆಗಳು ಇಲ್ಲದೆ ಇರಲಿಲ್ಲ (ಹಣದ ಆಮಿಷ, ದೇಹ ದುರ್ಬಳಕೆ ಇತ್ಯಾದಿ). ಕಾಲಕ್ರಮೇಣ ವೈದ್ಯಕೀಯ ವೈಜ್ಞಾನಿಕ ಕ್ಷೇತ್ರದಲ್ಲಿ ಬದಲಾವಣೆ ಹಾಗೂ ವಿಚಾರಗಳಿಂದ ಮಿತಿಯಾದ ಪುಸ್ತಕಗಳ ನಡುವೆಯೇ ಸಮಗ್ರವಾಗಿ ವಿಷಯ ಮಂಥನ ನಡೆಸಿ ಆಳವಾದ ಅಧ್ಯಯನ ನಡೆಸಲು ಸಹಕಾರಿಯಾಗಿತ್ತು.

ಅತಿಯಾದ ದಪ್ಪ ಮತ್ತು ತೂಕಗಳಿಂದ ಕೂಡಿದ ಪುಸ್ತಕಗಳು ವಿದ್ಯಾರ್ಥಿಯ ಆತ್ಮಸ್ಥೈರ್ಯವನ್ನು ಕುಂದಿಸುವಂತೆ ಮಾಡಿತು. ಉದಾಹರಣೆಗೆ Grey’s Anatomy. ಇದಕ್ಕೆ ತಕ್ಕಂತೆ ಬೋಧನೆಯಲ್ಲಿ ಪರಿವರ್ತನೆ ಆಗದೆ, ಶಿಕ್ಷಣ ಮಟ್ಟ ಕುಸಿಯುವಂತೆ ಮತ್ತು ತ್ವರಿತ ಪಠ್ಯಪುಸ್ತಕಗಳಿಗೆ ಮಾರು ಹೋಗಬೇಕಾಯಿತು. ವಿದ್ಯಾರ್ಥಿಗಳ ವಿವರವಾದ ಕಲಿಕೆ ನುಚ್ಚುನೂರಾಗಿ ಸರಿ ಅಥವಾ ಇಲ್ಲ ಅನ್ನುವ ಮಟ್ಟಕ್ಕೆ ತಲುಪಿತು. ಉಪನ್ಯಾಸಕರ ಅಭಾವ ಮತ್ತು ತಿಳುವಳಿಕೆಯ ಸಾಮರ್ಥ್ಯ ಕುಂದಿದ್ದರಿಂದ ವಿದ್ಯಾರ್ಥಿಗಳ ಕಲಿಕೆ ಗೊಂದಲದ ಗೂಡಾಯಿತು.
ಇಂದಿನ ವಿದ್ಯಾರ್ಥಿಗಳು ಸಮಯ ಮತ್ತು Cadaver (ಕಲಿಕೆಗಾಗಿ ಸಂರಕ್ಷಿಸಿಟ್ಟ ಸತ್ತ ಮನುಷ್ಯನ ದೇಹ) ಅಭಾವದಿಂದ ನರ ಮತ್ತು ಶರೀರ ರಚನೆಗಳನ್ನು ಮರೆತಂತೆ ಆಯಿತು. ಸರಿ ಇದ್ದ ಪಠ್ಯಪುಸ್ತಕಗಳನ್ನು ಕತ್ತರಿಸಿ, ಪಠ್ಯಕ್ರಮವನ್ನು ತುಂಡರಿಸಿದ್ದರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಒತ್ತಡಗಳು ಇಮ್ಮಡಿಯಾಯಿತು. ಈ ಸಮಯದಲ್ಲಿ ವಿದ್ಯಾರ್ಥಿ ಅರ್ಥೈಸುವುದಕ್ಕೆ ಒತ್ತು ಕೊಡದೆ ಬಾಯಿಪಾಠ ಹೆಚ್ಚಾಯಿತು. ಇದನ್ನು ಅರಿತ ಉಪನ್ಯಾಸಕರು ವಿದ್ಯಾರ್ಥಿಗಳ ಮನಸ್ಸನ್ನು, ಖಿನ್ನತೆಯನ್ನು ಅರಿತು ಉತ್ತೀರ್ಣಗೊಳಿಸುತ್ತಾ ಹೋದರು. ಇದರಿಂದ ವಿದ್ಯಾರ್ಥಿಯ ಗುಣಮಟ್ಟ ಹಾಗೂ ಅರಿಯುವಿಕೆಯ ಜ್ಞಾನತಂತ್ರ ಪಾತಾಳದ ಹಾದಿ ಹಿಡಿದಂತಾಯಿತು.

ಇಂದು ಶೈಕ್ಷಣಿಕ ಪದ್ಧತಿಗಿಂತ ಮಿಗಿಲಾಗಿ ರೋಗಿಯ ಜೊತೆಯಲ್ಲಿ ಇದ್ದು ಕಲಿತರೆ ವೈದ್ಯಜ್ಞಾನ ದ್ವಿಗುಣಗೊಳ್ಳುವುದರಲ್ಲಿ ಎರಡು ಮಾತಿಲ್ಲ. ಈ ಕಾರಣಕ್ಕಾಗಿಯೇ ಸರಕಾರ ಎರಡು ವರ್ಷಗಳ ಕಾಲ ವೈದ್ಯ ಪದವೀಧರರನ್ನು ಅಭ್ಯಾಸ ನಿರತರನ್ನಾಗಿ ಮಾಡುವ ಬಯಕೆಯು ಹೌದು. ಇಂದು ಸರಕಾರ ಒಬ್ಬ ವೈದ್ಯ ಪದವೀಧರನಿಗೆ ಕೋಟಿ ಕೋಟಿ ಹಣ ಖರ್ಚು ಮಾಡುತ್ತದೆ. ಗ್ರಾಮೀಣ ಸೇವೆ ಕಡ್ಡಾಯ ಮಾಡುವುದು ತಪ್ಪೇನಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಆಗುವಂತಹ ತೊಂದರೆಗಳನ್ನು ಅರಿತು ಸಮಗ್ರ ಮೂಲ ಸೌಕರ್ಯಗಳನ್ನು ನೀಡಿದರೆ ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಸೇವೆಯನ್ನು ಮಾಡುವರು. ಸಂಪರ್ಕ, ವಸತಿ ವ್ಯವಸ್ಥೆ, ಭದ್ರತೆ, ಇಮ್ಮಡಿ ಸಂಬಳ ಸೇರಿದಂತೆ ವಿವಿಧ ಅಗತ್ಯ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕು.
ಇಂದಿನ ವಿದ್ಯಾರ್ಥಿಗಳು ವೈದ್ಯಕೀಯ ವೃತ್ತಿಯನ್ನು ಅಯ್ಕೆ ಮಾಡಿಕೊಳ್ಳಬೇಕಾದರೆ ಅವರಲ್ಲಿ ಸೇವಾ ಮನೋಭಾವ ಅತ್ಯಗತ್ಯ. ಸೇವಾ ಮನೋಭಾವ ಹಾಗೂ ಮಾನವೀಯತೆ ಗುಣಗಳಿದ್ದರೆ ಮಾತ್ರ ವೈದ್ಯಕೀಯ ಕೋರ್ಸ್ಗೆ ಸೇರಬೇಕು. ಈ ಪದವಿ ಗಳಿಸಲು ಸಾಕಷ್ಟು ಸಮಯ ಬೇಕಾಗಿರುವುದರಿಂದ ಹೆಣ್ಣು ಮಕ್ಕಳು ಈ ಕೋರ್ಸ್ ಅಭ್ಯಸಿಸಲು ದೂರ ಸರಿಯಬಹುದೇನೋ. ಸಮಗ್ರ ಶಿಕ್ಷಣದಡಿ ವೈಜ್ಞಾನಿಕವಾಗಿ ಗತ ಕಾಲದಿಂದ ಬಂದ ಈ ವೈದ್ಯ ವೃತ್ತಿಯ (ಅಲೋಪತಿ) ಜೊತೆಯಲ್ಲಿ ದೇಸೀಯ ಪದ್ಧತಿಗಳನ್ನು ಅಳವಡಿಸುವುದರಿಂದ ವಿಜ್ಞಾನ ನಿಪುಣತೆಯನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗೆ ಖಿನ್ನತೆಯು ಆವರಿಸಿ ಮನಸ್ಸಿಗೆ ವೇದನೆಯಾಗಬಹುದು. ಹಾಗೂ ದೇಸಿ ವೈದ್ಯ ಪದ್ಧತಿ ಕಲಾತ್ಮಕತೆಯನ್ನು ಹೆಚ್ಚಿಸಿಕೊಳ್ಳುವ ತವಕದಿಂದ ಕಲಾತ್ಮಕತೆಯನ್ನು ಹುಡುಕಲೆತ್ನಿಸಿ ವಿಜ್ಞಾನ ಮರೆಯಬಹುದು.
ಸಮಗ್ರತೆಯ ಶಿಕ್ಷಣವನ್ನು ಆರೋಗ್ಯವನ್ನು ಅಳವಡಿಸಿದಾಗ ಮುಗ್ಧ ರೋಗಿಗೆ ಸಮಗ್ರ ಮಾಹಿತಿ, ಪಾರದರ್ಶಕತೆ ಮತ್ತು ಅನ್ವಯ ಆರೋಗ್ಯ ಘಟಕಗಳಲ್ಲಿಗೆ ರವಾನಿಸುವುದು ಬಹು ಉಪಕಾರಿ. ಇಲ್ಲವಾದಲ್ಲಿ ರೋಗಿಗೆ ಸರಿಯಾದ ಚಿಕಿತ್ಸೆ ಸಿಗದೆ ಪ್ರಾಣಾಪಾಯವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಈ ನಿಟ್ಟಿನಲ್ಲಿ ದೂರದೃಷ್ಟಿಕೋನಗಳನ್ನು ಇಟ್ಟು ಚಿಂತಿಸಿ ಸಮಗ್ರ ಆರೋಗ್ಯ ರೂಪರೇಷೆಗಳನ್ನು ಸಿದ್ಧಪಡಿಸಿ ಸರಕಾರ ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್
ಖ್ಯಾತ ಮನೋವೈದ್ಯ

