ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಮನಸ್ಸು
ಒಬ್ಬ ಮನೋ ವೈದ್ಯನಾಗಿರುವುದರಿಂದ ವಯಸ್ಸಿಗೆ ಅರಳು ಮರಳು ಎಂಬಂತೆ ಮನಸ್ಸಿನಲ್ಲಿ ಅರಳು, ದೇಹವು ಮರಳು ಎಂಬುದ ಅರಿತು 29 ವರ್ಷಗಳ ಮನೋ ವೈದ್ಯ ವೃತ್ತಿಯನ್ನು ಮೆಲುಕು ಹಾಕಿದ ನನಗೆ, ಸಮಯ ಸಿಕ್ಕ ಹೊತ್ತಿಗೆ ಚಿಂತಾ ಪರಿ ಹೊತ್ತ ನನ್ನ ಚಿತ್ತ ಬೆಟ್ಟದಷ್ಟು ಅಥವಾ ಅಗಾಧವಾದ ಮನೋ ಲೋಕದ ಒಳಗೆ ಪಯಣಿಸಿದಾಗ, ನನಗೆ ಗೋಚರವಾದಂತಹ ವಿವಿಧ ಮನೋ ಚಿತ್ತಾರಗಳನ್ನು ಸಾಧ್ಯವಾದಷ್ಟು ಎಳೆಎಳೆಯಾಗಿ ಕಂಡು ಅರಿತುಕೊಂಡ ನಾನು, ಆ ಮನೋ ಆನಂದವನ್ನು ನಿಮ್ಮ ಜೊತೆ ಹಂಚಿಕೊಳ್ಳಬೇಕೆನಿಸಿತು.
ಆ ಕಾರಣದಿಂದಾಗಿ ಈ ಅಂಕಣವನ್ನು ಮನೋ ವಿಜ್ಞಾನ ಮನೋಜೀವನ, ಮನೋಕಾಮನ, ಮನೋ ಸಾಹಿತ್ಯ, ಮನೋ ವಿಶ್ಲೇಷಣೆ ಮತ್ತು ಮನೋ ಆತ್ಮಗಳ ಪರಿಚಯ, ಕಥಾನಕ ಮತ್ತು ಸಮಸ್ಯೆಗಳ ಉಗಮ, ಲಕ್ಷಣ, ಪರಿಹಾರ ಕುರಿತಂತೆ ಅನುಭವದಿಂದ ಕಂಡಂತಹ ಮನೋ ಉಲ್ಲಾಸ ಆನಂದಗಳನ್ನು ತಿಳಿಸಬೇಕು ಅನಿಸಿದೆ. ಇದೇ ಮೊದಲ ಅಂಕಣ ಹಾಗೂ ಪರಿಚಯ ಮತ್ತು ವಸ್ತು ಆಗಿರುವುದರಿಂದ ನಾನು ಸಂಕ್ಷಿಪ್ತವಾಗಿ ‘ಮನಸ್ಸು’ ಎಂಬುದನ್ನು ನಿಮ್ಮ ಮುಂದೆ ತಿಳಿಯಪಡಿಸುತ್ತೇನೆ.
ಓದುಗರೇ, ಅಂದಿನ ದಿನಗಳು ಇದ್ದ ಹಾಗೆ ಇಂದಿನ ದಿನಗಳು ಇಲ್ಲ ಎಂಬುದು ಎಲ್ಲರ ಕೊರಗು. ಈ ಕೊರಗು ಯಾವತ್ತೂ ಇರುವುದೇ ಹಿಂದೆಯೂ ಇತ್ತು. ಇವತ್ತೂ ಇದೆ ಮತ್ತು ಮುಂದೆಯೂ ಇರುತ್ತದೆ. ಈ ಪ್ರಶ್ನೆಗೆ ನನ್ನ ಉತ್ತರ ಏನೆಂದರೆ, ‘ಹೇಗೆ ಆ ದಿನಗಳು ಒಂದೇ ತರಹ ಇರಲು ಸಾಧ್ಯ’ ಎನ್ನುವುದು. ಹಾಗೇನಾದರೂ ಇದ್ದ ಪಕ್ಷದಲ್ಲಿ ಈ ದಿನ ಬರಡು. ಈ ದಿವಸದ ಸೌಂದರ್ಯವೂ ಮುಂದೊಂದಿನ ಅದೇ ತರಹ ಇರುವುದಿಲ್ಲ. ನಾವೆಲ್ಲರೂ ಕ್ರಿಯಾಶೀಲತೆಯಿಂದ ಇರುತ್ತೇವೆ. ಎಲ್ಲರೂ ರೂಪದಲ್ಲಿ ಮತ್ತು ಕಾರ್ಯದಲ್ಲಿ ಒಂದೇ ತರಹ ಇರುವುದಿಲ್ಲ.

ಉದಾಹರಣೆಗೆ- ಇವತ್ತು ನಮ್ಮೆಲ್ಲರ ರೂಪ ಒಂದೇ ತರ ಇತ್ತು ಅಂದುಕೊಳ್ಳಿ. ಆವಾಗ ಯಾರು, ಯಾರು ಯಾವ ಮನೆಗೆ ಹೋಗುತ್ತಿದ್ದರು? ಯಾರ ಯಾರ ಸನಿಹ ಇರುತ್ತಿದ್ದರು? ಯಾರು ಯಾರು ಏನು ಮಾಡುತ್ತಿದ್ದರು? ನೀವೇ ಊಹಿಸಿಕೊಳ್ಳಿ. ಇವತ್ತಿನ ಬದುಕು ಪ್ರಕೃತಿಯ ಸೌಂದರ್ಯ, ಪುರುಷರ ಜೀವನ ಒಡನಾಟ ಎಲ್ಲವೂ ವಿಭಿನ್ನವಾಗಿರುವುದರಿಂದ ಪ್ರಕೃತಿ ಮಿಥುನ ವಿಸ್ಮಯವೇ ಸರಿ ಅಲ್ಲವೇ?
ಪ್ರಕೃತಿ ಯಾವತ್ತೂ ಮಹಾ ತಾಯಿಯೇ. ಹಾಗಾಗಿ ಪ್ರಕೃತಿಗೆ ಸಾವಿಲ್ಲ. ಸಾವು ಬರಬಹುದೇನೋ ಗೊತ್ತಿಲ್ಲ. ಬಂದರೂ ಸಹಸ್ರಾರು ವರ್ಷಗಳನ್ನು ತೆಗೆದುಕೊಳ್ಳುವುದೇನೋ. ಆ ಸಮಯಕ್ಕೆ ನಾವು ಯಾರೂ ಇರುವುದಿಲ್ಲ. ಆದರೆ ಇಲ್ಲಿ ನಾವು ಚರ್ಚಿಸಬೇಕಾದ ಮತ್ತು ಚಿಂತಿಸುವ ವಿಷಯವೇನೆಂದರೆ ಪುರುಷನಿಗೆ ಸಂಬಂಧಪಟ್ಟಿದ್ದು. ಅದರಲ್ಲೂ ಮನಸ್ಸು ಎಂಬ ಕಾಣದಂತಹ ವಿಷಯಕ್ಕೆ ಸಂಬಂಧಪಟ್ಟದ್ದು. ಶರೀರ ಬಿಡಿ, ಅದು ನಶ್ವರ, ಅದು ನಮಗೆ ಬೇಕಿಲ್ಲ. ಏಕೆಂದರೆ ಸಾವು ಈ ಶರೀರಕ್ಕೆ ಖಚಿತ. ಹಾಗಿದ್ದರೆ ಮನಸ್ಸಿಗೆ ಸಾವು ಇಲ್ಲವೆ? ನನ್ನ ಉತ್ತರ ಇಲ್ಲ ಎಂಬುದು. ಇದೆ ಅಥವಾ ಇಲ್ಲ ಅನ್ನುವುದಾದರೆ ಮುಂದಿನ ಅಂಕಣವನ್ನು ಕಾಯಬೇಕಾಗುವುದು.
ಮನಸ್ಸಿಗೆ ಸಾವು ಇಲ್ಲ ಎಂಬ ಪಕ್ಷದಲ್ಲಿ ಇದಕ್ಕೆ ಎಲ್ಲರೂ ಹೆದರಬೇಕಾದ ವಿಷಯವೇ ಸರಿ. ಒಬ್ಬ ವ್ಯಕ್ತಿ ನನ್ನ ಎದುರು ಬರುವನೆಂದರೆ ಅವನ ಶರೀರಕ್ಕೆ ನಾನು ಎಂದೂ ಹೆದರುವವನಲ್ಲ. ಆದರೆ ಅವನ ಮನಸ್ಸಿಗೆ ನಾವು ಹೆದರಿಕೊಳ್ಳಲೇಬೇಕು. ಕಾರಣ, ಶರೀರ ಗುಲಾಮ ಆದರೆ, ಅವನ ಮನಸ್ಸು ಇದರ ಮಾಸ್ಟರ್. ಗುಲಾಮ ಮಾಸ್ಟರ್ ಮಾತು ಕೇಳಲೇಬೇಕಾಗುತ್ತದೆ. ಮಾಸ್ಟರ್ ನನ್ನ ಹೊಡಿ ಎಂದು ಪ್ರೇರೇಪಿಸಿದರೆ ಅವನು ಕೈ ಮಾಡಿಯೇ ತೀರುತ್ತಾನೆ. ಹಾಗಾಗಿ ಮನಸ್ಸು ಎಂಬುದು ಒಂದು ಮಾರ್ಜಾಲ. ಆ ಮಾರ್ಜಾಲ ಮನಸ್ಸಿನ ನಿಯಂತ್ರಣವೇ ಈ ಅಂಕಣದ ಮುಖ್ಯ ಉದ್ದೇಶ.
ಇವತ್ತು ನಾವು ಮಾದ್ಯಮಗಳ ಮುಖೇನ ಮನಸ್ಸಿಗೆ ಸಂಬಂಧಪಟ್ಟಂತಹ ಸಂದರ್ಶನಗಳನ್ನು ಕೇಳುವ, ನೋಡುವ ಮತ್ತು ಓದುವ ಕಡೆ ಕರೆದೊಯ್ಯಬೇಕು ಎಂಬುದು ‘ರಾಷ್ಟ್ರೀಯ ಮಾನಸಿಕ ನಿಗಮದ’ ಮೂಲ ಉದ್ದೇಶವನ್ನು ನಾನು ಮನಸ್ಸಿನಲ್ಲಿಟ್ಟುಕೊಂಡು ಈ ಅಂಕಣವನ್ನು ಬರೆಯುತ್ತಿರುವೆನು. ಮನಸ್ಸಿನ ವಿಜ್ಞಾನ ಸಾಹಿತ್ಯ ಮತ್ತು ಆತ್ಮಾನುಭವ, ಒಂದೊಂದೂ ಸಹ ಅಗಾಧವಾದ ಮತ್ತು ನಿಲುಕದಂತಹ ಭಂಡಾರವೇ ಹೌದು.
ಈ ಬೃಹತ್ ಭಂಡಾರ – ದೀವಿಗೆಗೆ ಕೊನೆ ಎನ್ನುವುದೇ ಇಲ್ಲ. ಆ ಕಾರಣದಿಂದಾಗಿ ನನ್ನ ಒಂದಷ್ಟು ತಿಳುವಳಿಕೆ, ವೃತ್ತಿಯಲ್ಲಿ ಕಂಡಂತಹ, ನನಗೆ ಪಾಠ ಕಲಿಸಿಕೊಟ್ಟಂತಹ ಅನೇಕಾನೇಕ ವಿಚಾರಗಳನ್ನು ತಿಳಿಸಬೇಕು ಎಂಬ ಬಯಕೆಯಿಂದ ಈ ಅಂಕಣವನ್ನು ಬರೆದಿರುವೆನು.
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್

