
ಮನಸ್ಸು ಮಂದಾರ
(ಚಿಂತನ ಬರಹಗಳ ಸಂಕಲನ)
ಲೈಂಗಿಕ ಶಿಕ್ಷಣ
`ಮೈಸೂರು ಮಲ್ಲಿಗೆ’, `ಚಿಕ್ಕೋಡಿ ಚಿಟ್ಟೆ’, M.M.S. . ಗಳಂತಹ ಅಶ್ಲೀಲ ಚಿತ್ರಗಳನ್ನು ನೋಡಿ ಹಾಳಾಗುತ್ತಿರುವ ಹುಡುಗರನ್ನು ಗಮನಿಸಿದ ತಾಯಿ ಮತ್ತು ಸಹೋದರಿಯರು ಹೀಗಾದರಲ್ಲ ಎಂದು ಮರುಗುತ್ತಿದ್ದರೆ, ವೃದ್ಧರಿಗೆ ನೋಡುವ ಕಾತುರ ಮತ್ತು ಹಂಬಲವಿರುತ್ತದೆ. ಗೌರವಸ್ತರೆನಿಸಿಕೊಂಡವರಿಗೆ ‘ಛೇ, ಏನಿದು ಈ ಹುಡುಗರ ಹುಚ್ಚು !’ ಎಂದೆನಿಸುತ್ತದೆ. ಹಾಗಾಗಿ ನಿಂದಿಸುತ್ತಾರೆ. ಕದ್ದು ಮುಚ್ಚಿ ನೋಡಿ ಅಥವಾ ಕೇಳಿ ಓದಿ ಖುಷಿಪಡುವವರನ್ನು ಗಮನಿಸಿದ್ದ ನಾನು, ಬೇರೆ ಕಾರ್ಯಕ್ರಮಗಳು ಪ್ರಸಾರವಾಗುತ್ತಿರಲಿಲ್ಲವಾದ್ದರಿಂದ ಸುಮಾರು ಅರ್ಧ ತಾಸು ಟಿ.ವಿ. ಮುಂದೆ ಕುಳಿತೆ. ಪ್ರಕಟವಾಗುತ್ತಿದ್ದ ದೃಶ್ಯಗಳ ಕೆಳಗೆ ದಪ್ಪ ಅಕ್ಷರಗಳಲ್ಲಿ ‘ವೀಕ್ಷಿಸಿ ಚಿಕ್ಕೋಡಿ ಚಿಟ್ಟೆ’ ಎಂಬ ಜಾಹಿರಾತು ಎದ್ದು ಕಾಣುತ್ತಿತ್ತು. ಆಸಕ್ತರಿಗೆ ಮುದ ನೀಡುವಂತಹ ಲೈಂಗಿಕ ಸಾಹಿತ್ಯವನ್ನು ಬಳಸಿಕೊಳ್ಳಲಾಗಿತ್ತು. ರಾತ್ರಿ ಹತ್ತುವರೆವರೆಗೆ ಕಾದು ಕುಳಿತವರಿಗೆ ಆ ನೀಲಿ ಚಿತ್ರ ಭ್ರಮನಿರಸನ ಉಂಟು ಮಾಡಿತು.
ಇತ್ತೀಚೆಗಂತೂ ಮಾಧ್ಯಮಗಳ ಇಂತಹ ಭಿತ್ತರಿಕೆಯಿಂದ ಬೆಳಗಾಗುವುದರೊಳಗೆ ದಿಢೀರ್ ನಾಯಕ ನಾಯಕಿಯರಾಗುವುದನ್ನು ಗಮನಿಸಿದ್ದೇವೆ. ಸಾಮಾನ್ಯನು ಕೂಡ ಅಂತಹವುಗಳಿಗೆ ಬದಲಾಯಿಸಿಕೊಳ್ಳುತ್ತಿದ್ದಾನೆ. ಮನ ಮತ್ತು ಶರೀರದ ದಣಿವಾರಿಸಿಕೊಳ್ಳಲು, ಕೆಲ ಕ್ಷಣಗಳನ್ನು ಖುಷಿಯಿಂದ ಕಳೆಯಲು ರೆಸಾರ್ಟ್ಗೆ ಹೋದರೆ, ಮರೆ ಮಾಚಿದ ಕ್ಯಾಮರಾಗಳಿಂದ ಸೆರೆ ಹಿಡಿದು ನಾಯಕ, ನಾಯಕಿಯರನ್ನು ಮಾಡಿಬಿಡುವರು. ಇವನ್ನು ಗಮನಿಸಿದಾಗ ಕೊಂಚ ಮಂದಿ ಮನೋ ವಿಕೃತಿಗೆ ದಾಸರಾಗಿರುವುದು ಸ್ಪಷ್ಟವಾಗುತ್ತದೆ.
ಸಾಮಾನ್ಯವಾಗಿ ಎಲ್ಲರಲ್ಲೂ ಇಂತಹ ಮನೋ ಕಾಮಕೇಳಿ ಸಹಜ. ಪ್ರತಿ ಮನುಷ್ಯನ ವ್ಯಕ್ತಿತ್ವದಲ್ಲಿ ಇದು ಒಂದು. ಈ ಕಾಮವೆಂಬುದು ಎಲ್ಲರ ಸೊತ್ತು. ನಮಗೆ ಒಡವೆ ಎಷ್ಟು ಮುಖ್ಯವೋ ಕಾಮವೂ ಸಹ ಅಷ್ಟೇ. ನಾವು ಒಡವೆಗಳನ್ನು ಜೋಪಾನ ಮಾಡಿದಂತೆ ಕಾಮವನ್ನು ಜೋಪಾನವಾಗಿ ಬಳಸಿಕೊಂಡರೆ ಅದು ಸಹಜ ಕಾಮವಾಗಿರುತ್ತದೆ.

ಈ ಸಹಜತೆಯ ಕಾಮದಲ್ಲಿ ಪ್ರೀತಿ ಮತ್ತು ಪ್ರೇಮ ಅಡಗಿರುತ್ತದೆ. ಅದೇ ಕಾಮ ಅಸಹಜತೆಯ ಕಡೆಗೆ ವಾಲಿದಾಗ ಅದು ಮನೋ ವಿಕೃತಿ ಆಗುತ್ತದೆ. ಈ ವಿಕೃತತೆಯ ಮನೋಭಾವನೆಯನ್ನು ಅರಿಯುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ. ಇದನ್ನು ಜೋಪಾನವಾಗಿಸಲು ಹಿರಿಯರು, ಪೋಷಕರು ಮತ್ತು ಶಿಕ್ಷಕ ವೃಂದದವರು ಶ್ರಮಿಸಬೇಕಾಗಿದೆ. ಮನೋ ಕಾಮ ವಿಕೃತಿಗಳನ್ನು ಸಾಕ್ಷಿ ಸಮೇತ ಸೃಷ್ಟೀಕರಿಸಿದರೆ ಅಂತಹವರು ಕಾನೂನುನಡಿಯಲ್ಲಿ ಶಿಕ್ಷಾರ್ಹರಾಗುತ್ತಾರೆ. ಸರ್ಕಾರ ಮತ್ತು ಆರಕ್ಷಕರ ಜವಾಬ್ದಾರಿ ಕೂಡ ಅದಾಗಿರುತ್ತದೆ.
ಇಂದಿನ ಶಿಕ್ಷಣ ತಜ್ಞರಿಗೆ, ಕಾನೂನು ತಜ್ಞರಿಗೆ ಹಾಗೂ ಮನೋ ಸಮಾಜ ತಜ್ಞರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿರುವ ವಿಷಯವೆಂದರೆ ಲೈಂಗಿಕ ಶಿಕ್ಷಣ. ಇದು ಬೇಕೇ ಬೇಡವೇ ಎಂಬ ಚರ್ಚೆಗಳು ಎಲ್ಲೆಡೆ ನಡೆಯುತ್ತಿವೆ. ನಾನೊಬ್ಬ ಮನೋ ವೈದ್ಯನಾಗಿ ಕೇಳುವ ಪ್ರಶ್ನೆಯೆಂದರೆ, ಇಂತಹ ಶಿಕ್ಷಣಕ್ಕೆ ಯುವ ಜನತೆಯ ಮೆದುಳು ಪರಿಪಕ್ವತೆ ಹೊಂದಿರುವುದೇ? ಕಾಮದ ಸಿಹಿ ತೆರೆಮರೆಯಿಂದ, ಅರೆಬರೆಯಿಂದ ಕೂಡಿದ್ದರೆ ಮಾತ್ರ ರುಚಿಯಾಗಿರುತ್ತದೆ. ನಗ್ನತೆಯಲ್ಲಿ ರುಚಿಯೂ ಇರುವುದಿಲ್ಲ ಮತ್ತು ಅದು ಹೇಸಿಗೆ ತರಿಸುವಂತಿರುತ್ತದೆ.
ಕಾಮ ಮತ್ತು ಧರ್ಮ ಇವು ನಾಲ್ಕು ಗೋಡೆಯ ಮಧ್ಯದಲ್ಲಿ ಇದ್ದರೆ ಚೆನ್ನ. ನಮ್ಮ ದೇಶ ಸುಸಂಸ್ಕೃತ ನಾಡು, ಸಾಂಸ್ಕೃತಿಕ ಪರಂಪರೆಯ ಬೀಡು. ಋಷಿ ಮುನಿಗಳಿದ್ದ ಆಗರ. ಗುರು ಹಿರಿಯರ ಸಾಗರ. ಹಾಗಾಗಿ ನಮಗೆ ನಮ್ಮದೇ ಆದ ಒಂದು ಚೌಕಟ್ಟಿದೆ. ಆ ಚೌಕಟ್ಟಿನೊಳಗೆ ನಡೆದರೆ ಮತ್ರ ಈ ಕಾಮ ಎಂಬುದು ಸಹಜವಾಗಿರುತ್ತದೆ.
ಈ ವಿಷಯದಲ್ಲಿ ಪಾಶ್ಚಾತ್ಯರನ್ನು ಮಾದರಿಯಾಗಿ, ಆದರ್ಶವಾಗಿ ಇಟ್ಟುಕೊಳ್ಳಬಾರದು ಮತ್ತು ಅವರ ಮೋಹಕ್ಕೆ ಒಳಗಾಗಬಾರದು. ವಿಚಾರದಂತಹ ವಿವೇಕ ಹದ್ದುಬಸ್ತಿನಲ್ಲಿರಬೇಕು. ಸರ್ಕಾರ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಯುವ ಸಮೂಹ ಒಳ್ಳೆಯದಕ್ಕೆ ಸ್ಪಂದಿಸಬೇಕು. ಸಮಾಜ ದುರ್ನಡತೆಗೆ ಮತ್ತು ಅಂತಹವುಗಳಿಗೆ ಪ್ರಚೋದನೆ ಕೊಡಬಾರದು. ಎಲ್ಲಕ್ಕಿಂತ ಮುಖ್ಯವಾಗಿ ಯುವ ಜನತೆಯನ್ನು ಸೆಳೆದಿರುವ ದೃಶ್ಯ ಮಾಧ್ಯಮಗಳು ಅಶ್ಲೀಲ ಹಾಗೂ ಕಾಮಕೇಳಿ ಸಂಗತಿಗಳನ್ನು ಬಿತ್ತರಿಸುವಾಗ ವಿವೇಕತೆಯನ್ನು ಕಾಪಾಡಿ, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಸಾರ ಮಾಡಿದರೆ ಎಲ್ಲರಿಗೂ ಒಳಿತು.
ಹಣ್ಣು ಮತ್ತು ಹೆಣ್ಣನ್ನು ಕದ್ದು ಅನುಭವಿಸಿದರೆ ರುಚಿ ಹೆಚ್ಚು ಎಂದು ಬಲ್ಲವರು ಹೇಳಿದ್ದಾರಲ್ಲವೇ?
- ಮುಂದುವರೆಯುವುದು
– ಡಾ|| ಎ.ಎಂ. ನಾಗೇಶ್